"ಕಿತ್ಕಿತ್ [ಕಂಟುಬಿಲ್ಲೆ], ಲಟ್ಟು [ಬುಗುರಿ] ಮತ್ತು ತಾಸ್ ಖೇಲಾ [ಕಾರ್ಡುಗಳ ಆಟ]" ಎಂದು ಅಹ್ಮದ್ ಹೇಳುತ್ತಾನೆ. ಸುಮಾರು 10 ವರ್ಷದ ಹುಡುಗ ತನ್ನನ್ನು ತಾನೇ ತಿದ್ದಿಕೊಳ್ಳುತ್ತಾ, "ನಾನು ಕಂಟಾಬಿಲ್ಲೇ ಆಡಲ್ಲ, ಅಲ್ಲಾರಖಾ ಆಡ್ತಾನೆ," ಎಂದು ಸ್ಪಷ್ಟಪಡಿಸುತ್ತಾನೆ.
ತನ್ನ ಒಂದು ವರ್ಷದ ಹಿರಿಯತನವನ್ನು ಸ್ಥಾಪಿಸಲು ಮತ್ತು ತನ್ನ ಆಟವಾಡುವ ಉತ್ತಮ ಸಾಮರ್ಥ್ಯವನ್ನು ಸಾಬೀತುಪಡಿಸಲು, ಅಹಮದ್ ಮುಂದುವರೆದು, “ನನಗೆ ಈ ಹೆಣ್ಣುಮಕ್ಕಳ ಆಟ ಇಷ್ಟ ಆಗೋಲ್ಲ. ನಾನು ಸ್ಕೂಲ್ ಗ್ರೌಂಡಲ್ಲಿ ಬ್ಯಾಟ್ ಬಾಲ್ [ಕ್ರಿಕೆಟ್] ಆಟ ಆಡ್ತೀನಿ. ಈಗ ಶಾಲೆ ಮುಚ್ಚಿವೆ, ಆದ್ರೆ ನಾವು ಗೋಡೆ ಹಾರಿ ಹೋಗಿ ಆಡ್ತೀವಿ!”
ಈ ಸೋದರಸಂಬಂಧಿಗಳು ಆಶ್ರಮಪಾಡಾ ಪ್ರದೇಶದ ಬಾಣಿಪೀಠ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಅಲ್ಲಾರಖಾ 3 ನೇ ತರಗತಿಯಲ್ಲಿ ಓದುತ್ತಿದ್ದರೆ, ಅಹ್ಮದ್ 4ನೇ ತರಗತಿಯಲ್ಲಿದ್ದಾನೆ.
ಅದು 2021ರ ಡಿಸೆಂಬರ್ ತಿಂಗಳ ಆರಂಭಿಕ ದಿನಗಳು. ನಾವು ಪಶ್ಚಿಮ ಬಂಗಾಳದ ಬೆಲ್ಡಂಗಾದಲ್ಲಿ ಇದ್ದೆವು. ಅಲ್ಲಿ ಜೀವನೋಪಾಯಕ್ಕಾಗಿ ಬೀಡಿ ಕಟ್ಟುವ ಮಹಿಳೆಯರನ್ನು ಮಾತನಾಡಿಸುವುದು ನಮ್ಮ ಉದ್ದೇಶವಾಗಿತ್ತು.
ನಾವೊಂದು ಒಂಟಿ ಮಾವಿನ ಮರದ ಬಳಿ ನಿಂತಿದ್ದೆವು. ಅದೊಂದು ಸ್ಮಶಾನದ ನಡುವೆ ಹಾದು ಹೋಗುವ ಹಳೆಯ ರಸ್ತೆಯಾಗಿತ್ತು. ಅದರ ಪಕ್ಕದಲ್ಲೇ ಆ ಮರವಿತ್ತು. ದೂರದಲ್ಲಿ ಹಳದಿ ಬಣ್ಣದ ಸಾಸಿವೆ ಹೊಲಗಳು ಕಾಣುತ್ತಿದ್ದವು. ಇದು ಪೂರ್ಣ ಮೌನ ಮತ್ತು ಶಾಂತಿಯಿಂದ ಕೂಡಿದ ಸ್ಥಳವಾಗಿತ್ತು. ಅದು ಮನುಷ್ಯ ದೇಹಗಳು ಬದುಕಿನ ಗದ್ದಲ ಮುಗಿಸಿ ಶಾಶ್ವತ ನಿದ್ರೆಯಲ್ಲಿ ತೊಡಗಿದ ಸ್ಥಳವಾಗಿತ್ತು. ಇಂತಹದ್ದೊಂದು ಪ್ರಶಾಂತ ಸ್ಥಳದಲ್ಲಿ ನಿಂತಿದ್ದ ಮರವೂ ಸಂತನಂತೆ ಸುಮ್ಮನೆ ನಿಂತಿತ್ತು. ವಸಂತ ಕಾಲವಲ್ಲದ ಕಾರಣ ಹಣ್ಣು ತಿನ್ನಲು ಬರುವ ಹಕ್ಕಿಗಳೂ ಅಲ್ಲಿ ಇರಲಿಲ್ಲ.
ಈ ಮೌನದ ವಾತಾವರಣವನ್ನು ಕಲಕುವಂತೆ ಅಲ್ಲೊಂದು ಓಡುವ ಸದ್ದು ಕೇಳಿಬಂದಿತು. ಅಹ್ಮದ್ ಮತ್ತು ಅಲ್ಲಾರಖಾ ಅಲ್ಲಿ ಕಾಣಿಸಿಕೊಂಡರು. ಹಾರುತ್ತಾ, ನೆಗಯುತ್ತಾ, ಜಿಗಿಯುತ್ತಾ ಬರುತ್ತಿದ್ದ ಅವರಿಗೆ ನಮ್ಮ ಉಪಸ್ಥಿತಿಯ ಕುರಿತು ಅರಿವಿರಲಿಲ್ಲ.







