ಕೃಷ್ಣ ಗಾವಡೆ ಬಹಳ ಬೇಗನೆ ಮನೆಯ ಜವಬ್ದಾರಿಗಳಿಗೆ ತನ್ನ ಹೆಗಲು ಕೊಡಬೇಕಾಯಿತು. ತನ್ನ ಹಳ್ಳಿಯ ಮಕ್ಕಳು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕೃಷ್ಣ 200 ರೂಪಾಯಿಗಳ ದಿನಗೂಲಿಗೆ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ. ಅವನ ಸ್ನೇಹಿತರು ಊರಿನ ಮೈದಾನಗಳಲ್ಲಿ ಕ್ರಿಕೆಟ್ ಆಡುತ್ತಿದ್ದರೆ ಕೃಷ್ಣ ತಾನು ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಸೈಟುಗಳಲ್ಲಿ ಕೆಲಸಕ್ಕಾಗಿ ಕಾಯುತ್ತಾ ನಿಲ್ಲುತ್ತಿದ್ದ. ತನ್ನ 13ನೇ ವಯಸ್ಸಿನಲ್ಲಿ ಕೃಷ್ಣ ತನ್ನ ಅಣ್ಣ ಮಹೇಶನೊಡನೆ ಸೇರಿ ಆರು ಜನರ ಕುಟುಂಬದ ಜವಬ್ದಾರಿ ಹೊತ್ತಿದ್ದ. ಆತನ ಅಣ್ಣ ಅವನಿಗಿಂತ ಹೆಚ್ಚೆಂದರೆ ಮೂರು ವರ್ಷ ದೊಡ್ಡವ.
ಕೃಷ್ಣನ ತಂದೆ ಪ್ರಭಾಕರ್ ಅವರಿಗೆ ಮಾನಸಿಕ ಅಂಗವೈಕಲ್ಯ ಇರುವುದರಿಂದ ಕೆಲಸ ಮಾಡಲು ಸಾಧ್ಯವಿಲ್ಲ, ಮತ್ತು ಅವರ ತಾಯಿ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನವಗನ್ ರಾಜೂರಿ ಗ್ರಾಮದ ತಮ್ಮ ಮನೆಯ ಹೊರಗೆ ಕಲ್ಲಿನ ಹಲಗೆಯ ಮೇಲೆ ಕುಳಿತಿದ್ದ ಕೃಷ್ಣನ 80 ವರ್ಷದ ಅಜ್ಜ ರಘುನಾಥ್ ಗಾವಡೆ ಹೇಳುತ್ತಾರೆ. "ನಾನು ಮತ್ತು ನನ್ನ ಹೆಂಡತಿಗೆ ವಯಸ್ಸಿನಕಾರಣದಿಂದಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ನನ್ನ ಮೊಮ್ಮಕ್ಕಳು ಬೇಗನೆ ಕುಟುಂಬದ ಜವಬ್ದಾರಿ ಹೊರಬೇಕಾಯಿತು. ಕಳೆದ 4-5 ವರ್ಷಗಳಿಂದ ಅವರ ಸಂಪಾದನೆಯಿಂದಲೇ ಮನೆ ನಡೆಯುತ್ತಿದೆ,” ಎಂದು ಅವರು ಮುಂದುವರೆದು ಹೇಳುತ್ತಾರೆ.
ಗಾವಡೆ ಕುಟುಂಬವು ಧಂಗರ್ ಸಮುದಾಯಕ್ಕೆ ಸೇರಿದ್ದು, ಅವರು ಸಾಂಪ್ರದಾಯಿಕವಾಗಿ ಪಶುಪಾಲಕರು ಮತ್ತು ಮಹಾರಾಷ್ಟ್ರದಲ್ಲಿ ವಿಮುಕ್ತ್ ಜಾತಿಗಳು ಮತ್ತು ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದ್ದಾರೆ. ಈ ಕುಟುಂಬವು ನವಗನ್ ರಾಜೂರಿನಲ್ಲಿ ಒಂದು ತುಂಡು ಭೂಮಿಯನ್ನು ಹೊಂದಿದೆ (ಒಂದು ಎಕರೆಗಿಂತ ಕಡಿಮೆ), ಅದರಲ್ಲಿ ಜೋಳ ಮತ್ತು ಬಜ್ರಾ ಬೆಳೆಗಳನ್ನು ಬೆಳೆಯಲಾಗುತ್ತದೆಯಾದರೂ ಇದು ಅವರ ಮನೆಬಳಕೆಗಷ್ಟೇ ಸಾಲುತ್ತದೆ.
ಕೃಷ್ಣ ಮತ್ತು ಮಹೇಶ್ ಇಬ್ಬರೂ ಸೇರಿ ತಿಂಗಳಿಗೆ ಸುಮಾರು 6,000-8,000 ರೂ. ಗಳಿಸುತ್ತಿದ್ದರು. ಇದು ಕುಟುಂಬದ ಜೀವನ ವೆಚ್ಚಕ್ಕೆ ಸಾಕಾಗುತ್ತಿತ್ತು. ಆದಾಗ್ಯೂ, ಕೋವಿಡ್-19ರ ಉಲ್ಬಣವು ಕುಟುಂಬದ ಹಣಕಾಸಿನ ಸೂಕ್ಷ್ಮ ಸಮತೋಲನವನ್ನು ಹದಗೆಡಿಸಿತು. ಮಾರ್ಚ್ 2020ರಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಸಹೋದರರು ಕೆಲಸ ಮತ್ತು ಆದಾಯವನ್ನು ಕಳೆದುಕೊಂಡರು.
"ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರ ನೀಡಿದ ಉಚಿತ ಪಡಿತರ ಕಿಟ್‌ಗಳಿಂದ ದಿನ ಕಳೆದೆವು" ಎಂದು ಕೃಷ್ಣ ಮತ್ತು ಮಹೇಶನ ಅಜ್ಜಿ 65 ವರ್ಷದ ಸುಂದರ್ ಬಾಯಿ ಹೇಳುತ್ತಾರೆ. "ಆದರೆ ಮನೆಯಲ್ಲಿ ಹಣವಿರಲಿಲ್ಲ. ನಮಗೆ ಎಣ್ಣೆ ಅಥವಾ ತರಕಾರಿಗಳನ್ನು ಖರೀದಿಸಲು ಸಹ ಸಾಧ್ಯವಾಗಲಿಲ್ಲ. ಲಾಕ್ ಡೌನ್ ನಂತರದ ಮೊದಲ ಮೂರು ತಿಂಗಳುಗಳು ನಮ್ಮ ಪಾಲಿಗೆ ವಿನಾಶಕಾರಿಯಾಗಿದ್ದವು."
ಜೂನ್ 2020ರಲ್ಲಿ ಲಾಕ್ ಡೌನ್ ಅನ್ನು ಸಡಿಲಗೊಳಿಸಲಾಯಿತು ಮತ್ತು ಇದರೊಂದಿಗೆ ಆರ್ಥಿಕ ಚಟುವಟಿಕೆ ಕ್ರಮೇಣ ಗರಗೆದರತೊಡಗಿತಾದರೂ, ಬೀಡ್‌ನಲ್ಲಿ ದಿನಗೂಲಿ ಕೆಲಸ ಸಿಗುವುದು ದುಸ್ತರವಾಗಿತ್ತು. “ಹಾಗಾಗಿ ಮಹೇಶ್ ಪುಣೆಗೆ ವಲಸೆ ಹೋಗಲು ನಿರ್ಧರಿಸಿದ” ಎನ್ನುತ್ತಾರೆ ರಘುನಾಥ್. ಆದರೆ ಮನೆಗೆ ಹಣ ಕಳುಹಿಸಲು ಬೇಕಾಗುವಷ್ಟು ಕೆಲಸ ಸಿಗಲಿಲ್ಲ. "ಕುಟುಂಬವನ್ನು ನೋಡಿಕೊಳ್ಳಲೆಂದು ಕೃಷ್ಣ ಕೆಲಸ ಹುಡುಕುತ್ತಾ ಬೀಡ್‌ನಲ್ಲೇ ಉಳಿದುಕೊಂಡನು."
ಈ ನಿರ್ಧಾರವು ಆತನ ಪಾಲಿಗೆ ಮಾರಕವಾಗಿ ಪರಿಣಮಿಸಿತು.








