ಸೂರಜ್ ಜಟ್ಟಿ ಹದಿಹರೆಯಕ್ಕೆ ಕಾಲಿಡುವ ಮೊದಲೇ ತಾನು ಸೈನ್ಯಕ್ಕೆ ಸೇರಲು ಬಯಸುವುದಾಗಿ ತನ್ನ ತಂದೆಯ ಬಳಿ ಹೇಳಿದ್ದರು. ಸ್ವತಃ ನಿವೃತ್ತ ಸೈನಿಕರಾದ ಅವರ ತಂದೆ ತನ್ನ ಮಗನಿಗೆ ತಾನೇ ಸ್ಫೂರ್ತಿಯಾಗಿದ್ದನ್ನು ಕಂಡು ಹೆಮ್ಮೆಯಿಂದ ಬೀಗಿದ್ದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ ನಗರದ ಅಕಾಡೆಮಿಯಲ್ಲಿ ತರಬೇತಿ ಅವಧಿಯ ನಡುವೆ 19 ವರ್ಷದ ಸೂರಜ್, "ನನ್ನ ಮನೆಯ ವಾತಾವರಣವೇ ನನಗೆ ಇದನ್ನು ಸ್ಪಷ್ಟ ಆಯ್ಕೆಯಾಗಿ ಕಾಣಿಸಿತ್ತು" ಎಂದು ಹೇಳುತ್ತಾರೆ. "ನನಗೆ ನೆನಪಿರುವಾಗಿನಿಂದ, ನಾನು ಇದನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಯೋಚಿಸಿಲ್ಲ." ಮಗನ ನಿರ್ಧಾರದಿಂದ ಶಂಕರ್ ಕೂಡಾ ಸಂತೋಷಪಟ್ಟಿದ್ದರು. ಯಾವ ತಂದೆಯೂ ಒಪ್ಪಿಗೆ ನೀಡಬಹುದಾದ ಬೇಡಿಕೆಯಾಗಿತ್ತದು.
ಇದಾಗಿ ಇನ್ನೂ ಒಂದು ದಶಕ ಕಳೆದಿಲ್ಲ, ಪ್ರಸ್ತುತ ಶಂಕರ್ ತಮ್ಮ ಮಗನ ಆಯ್ಕೆಯ ಕುರಿತು ಭರವಸೆ ಹೊಂದುವ ಪರಿಸ್ಥಿತಿಯಲ್ಲಿ ಇಲ್ಲ. ತನ್ನ ಮಗನ ನಿರ್ಧಾರದ ಕುರಿತು ಭಾವುಕರಾಗುವುದರ ಜೊತೆಗೆ ಹೆಮ್ಮೆಯನ್ನೂ ಹೊಂದಿದ್ದ ಅವರಲ್ಲಿ ದಿನ ಕಳೆದಂತೆ ಅನುಮಾನಗಳು ಮೂಡಲಾರಂಭಿಸಿದವು. ನಿಖರವಾಗಿ ಹೇಳಬೇಕೆಂದರೆ ಜೂನ್ 14, 2022ರಿಂದ ಅವರಲ್ಲಿ ಮಗನ ನಿರ್ಧಾರದ ಬಗ್ಗೆ ಗಲಿಬಿಲಿ ಆರಂಭವಾಯಿತು.
ಇದೇ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿ, "ಅಗ್ನಿಪಥ್ ಯೋಜನೆಯಡಿ, ಭಾರತದ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು" ಎಂದು ಹೇಳಿದರು.
ಈ ಯೋಜನೆಯನ್ನು ಪರಿಚಯಿಸುವ ಮೊದಲು, 2015-2020ರ ನಡುವೆ ಸಶಸ್ತ್ರ ಪಡೆಗಳ ನೇಮಕಾತಿಯ ಐದು ವರ್ಷಗಳ ಸರಾಸರಿ 61,000 ದಷ್ಟಿತ್ತು. 2020ರಲ್ಲಿ ಸಾಂಕ್ರಾಮಿಕ ಪಿಡುಗು ಅಪ್ಪಳಿಸಿದ ನಂತರ ನೇಮಕಾತಿಯನ್ನು ನಿಲ್ಲಿಸಲಾಯಿತು.
ಅಗ್ನಿಪಥ್ ಯೋಜನೆಯಡಿ ಸುಮಾರು 46,000 ಯುವಕರನ್ನು ಅಥವಾ ಅಗ್ನಿವೀರರನ್ನು ಭಾರತೀಯ ಸೇನೆಗೆ "ಯುವ, ಸದೃಢ ಮತ್ತು ವೈವಿಧ್ಯಮಯ" ಪಡೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ನೋಂದಣಿಗೆ ಅರ್ಹ ವಯಸ್ಸನ್ನು 17.5 ರಿಂದ 21 ವರ್ಷಗಳ ನಡುವೆ ನಿರ್ಧರಿಸಲಾಯಿತು, ಇದು ಪಡೆಗಳ ಸರಾಸರಿ ವಯಸ್ಸನ್ನು 4-5 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ಯೋಜನೆಯಡಿ ಆಜೀವ ಸೇನಾ ವೃತ್ತಿಜೀವನಕ್ಕೆ ಬದಲಾಗಿ ನಾಲ್ಕು ವರ್ಷಗಳ ಸೈನ್ಯದಲ್ಲಿ ಇರಿಸಿಕೊಳ್ಳಲಾಗುತ್ತದೆ, ನಾಲ್ಕನೇ ವರ್ಷದ ಕೊನೆಯಲ್ಲಿ ಪ್ರತಿ ಬ್ಯಾಚಿನ 25 ಪ್ರತಿಶತದಷ್ಟು ಜನರು ಸಶಸ್ತ್ರ ಪಡೆಗಳ ಸಾಮಾನ್ಯ ಕೇಡರುಗಳಲ್ಲಿ ಉದ್ಯೋಗವನ್ನು ಪಡೆಯುತ್ತಾರೆ.










