ಸೈಯದ್ ಖುರ್ಷಿದ್ ಈ ಬಾರಿಯ ಬಜೆಟ್ ಕಡೆ ಹೆಚ್ಚುಗಮನ ನೀಡಲಿಲ್ಲ. "ನಾನು ಸುದ್ದಿ ವಾಹಿನಿಯನ್ನು ನೋಡಲು ಸಹ ಪ್ರಯತ್ನಿಸಲಿಲ್ಲ" ಎಂದು 72 ವರ್ಷದ ಅವರು ಹೇಳುತ್ತಾರೆ. "ಅದರಲ್ಲಿ ಸತ್ಯ ಎಷ್ಟು ಮತ್ತು ಪ್ರಚಾರ ಎಷ್ಟು ಎನ್ನುವುದು ಯಾರಿಗೂತಿಳಿದಿಲ್ಲ."
ಪ್ರಸ್ತುತ ಬಜೆಟ್ ಮಂಡನೆಯಲ್ಲಿ ತೆರಿಗೆ ಸ್ಲ್ಯಾಬ್ ಗಳಲ್ಲಿನ ಬದಲಾವಣೆಗಳ ಬಗ್ಗೆ ಅವರು ಕೇಳಿದ್ದಾರೆ ಏಕೆಂದರೆ ಈ ಕುರಿತುಅವರಿಗೆ ಯಾರೋ ಹೇಳಿದ್ದರು . "ಆದರೆ ನನ್ನ ಮೊಹಲ್ಲಾದಲ್ಲಿ ಅದರಿಂದ ಪ್ರಯೋಜನ ಪಡೆಯಲಿರುವ ಒಬ್ಬನೇ ಒಬ್ಬ ವ್ಯಕ್ತಿಯ ಬಗ್ಗೆ ನನಗೆ ತಿಳಿದಿಲ್ಲ" ಎಂದು ಅವರು ನಗುತ್ತಾ ಹೇಳುತ್ತಾರೆ. "ಹಮ್ ಅಪ್ನಾ ಕಮಾತೇ ̧ಹೈ ಔರ್ ಖಾತೇ ಹೈ [ನಾನು ನನ್ನ ಅನ್ನವನ್ನು ನಾನೇ ದುಡಿದು ತಿನ್ನುತ್ತೇನೆ]."
ಸೈಯದ್ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ಪಟ್ಟಣದಲ್ಲಿ 60 ವರ್ಷಗಳಿಂದ ಟೈಲರ್ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆಯಿಂದ ಈ ಕೆಲಸವನ್ನು ಕಲಿತಾಗ ಅವರಿಗೆ ಕೇವಲ ಎಂಟು ವರ್ಷ. ಆದರೆ, ಅವರ ವ್ಯವಹಾರವು ಮೊದಲಿನಷ್ಟು ಲಾಭದಾಯಕವಾಗಿಲ್ಲ. "ಯುವ ಪೀಳಿಗೆಯು ರೆಡಿಮೇಡ್ ಬಟ್ಟೆಗಳನ್ನು ಖರೀದಿಸುತ್ತದೆ" ಎಂದು ಅವರು ವಿವರಿಸುತ್ತಾರೆ.




