“ಬಜೆಟ್ಟಿನಲ್ಲಿ ದೊಡ್ಡ ದೊಡ್ಡ ಮೊತ್ತದ ಕುರಿತು ಮಾತನಾಡಲಾಗುತ್ತದೆ. ಆದರೆ ಸರ್ಕಾರದ ಪ್ರಕಾರ ಒಬ್ಬ ನಾಗರಿಕನಾಗಿ ನನ್ನ ಮೌಲ್ಯ ಶೂನ್ಯ!”
ಚಾಂದ್ರತನ್ ಹಲ್ದಾರ್ ಅವರ ಬಳಿ 'ಸರ್ಕಾರದ ಬಜೆಟ್' ಕುರಿತುಪ್ರಶ್ನೆಯನ್ನು ಕೇಳಿದಾಗ, ಅವರು ತಮ್ಮ ಆಂತರಿಕ ಕಹಿಯನ್ನು ಮರೆಮಾಚಲು ಪ್ರಯತ್ನಿಸಲಿಲ್ಲ. "ಯಾವ ಬಜೆಟ್? ಯಾರ ಬಜೆಟ್? ಇದೆಲ್ಲವೂ ನಿಮ್ಮನ್ನು ಮೂರ್ಖರನ್ನಾಗಿಸುವ ಯತ್ನ ಮಾತ್ರ!" ಎಂದು ಕೋಲ್ಕತ್ತಾದ ಜಾದವಪುರದಲ್ಲಿ ಸೈಕಲ್ರಿಕ್ಷಾ ಚಾಲಕನಾಗಿ ಕೆಲಸ ಮಾಡುವ 53 ವರ್ಷದ ಚಂದುದಾ ಹೇಳುತ್ತಾರೆ.
"ಇಷ್ಟೊಂದು ಬಜೆಟ್ಗಳು ಬಂದವು, ಹಲವು ಯೋಜನೆಗಳನ್ನು ತರಲಾಯಿತು, ಆದರೆ ನಮಗೆ ದೀದಿ [ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ] ಅಥವಾ [ಪ್ರಧಾನಿ] ಮೋದಿ ಅವರಿಂದ ಒಂದು ಮನೆ ಸಿಗಲಿಲ್ಲ. ನಾನು ಈಗಲೂ ಟಾರ್ಪಾಲಿನ್ ಮತ್ತು ಬಿದಿರಿನ ಕೋಲು ಬಳಸಿ ಕಟ್ಟಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ, ಅದು ಸಹ ಸುಮಾರು ಒಂದು ಅಡಿ ನೆಲದಡಿ ಮುಳುಗಿದೆ" ಎಂದು ಚಂದು ದಾ ಹೇಳುತ್ತಾರೆ. ಸರ್ಕಾರಿ ಬಜೆಟ್ ಬಗ್ಗೆ ಅವರ ನಿರೀಕ್ಷೆಗಳು ಮತ್ತಷ್ಟು ಕುಸಿದಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಚಂದುದಾ ಪಶ್ಚಿಮ ಬಂಗಾಳದ ಸುಭಾಷ್ ಗ್ರಾಮ್ ಪ್ರದೇಶದ ನಿವಾಸಿಯಾಗಿದ್ದು, ಭೂರಹಿತ ಕಾರ್ಮಿಕ. ಅವರು ಮುಂಜಾನೆ ಸೀಲ್ಡಾದಿಂದ ಜಾದವಪುರಕ್ಕೆ ಬರಲುಸ್ಥಳೀಯ ರೈಲನ್ನು ಹತ್ತುತ್ತಾರೆ ಮತ್ತು ಸಂಜೆಯವರೆಗೂ ಕೆಲಸ ಮಾಡುತ್ತಾರೆ. ಅದರ ನಂತರವೇ ಅವರು ಮನೆಗೆ ಮರಳುವುದು. "ನಮ್ಮ ಸ್ಥಳೀಯ ರೈಲುಗಳಂತೆ ಬಜೆಟ್ಟುಗಳು ಬರುತ್ತವೆ ಮತ್ತು ಕಣ್ಮರೆಯಾಗುತ್ತವೆ. ನಗರಕ್ಕೆ ಪ್ರಯಾಣಿಸುವುದು ಈಗ ತುಂಬಾ ಕಷ್ಟ. ನಮ್ಮ ಖಾಲಿ ಹೊಟ್ಟೆಯನ್ನು ಒದೆಯುವ ಬಜೆಟ್ಟಿಗೆಯಾವ ಅರ್ಥವಿದೆ?" ಎಂದು ಅವರು ಕೇಳುತ್ತಾರೆ.




