ಝಾಕೀರ್ ಹುಸೇನ್ ಮತ್ತು ಮಹೇಶ್ ಕುಮಾರ್ ಚೌಧರಿ ಬಾಲ್ಯದಿಂದಲೇ ಆತ್ಮೀಯ ಸ್ನೇಹಿತರು. ಈಗ ನಲವತ್ತರ ಹರೆಯದಲ್ಲಿರುವ ಇಬ್ಬರು ಇನ್ನೂ ತಮ್ಮ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಅಜ್ನಾ ಗ್ರಾಮದಲ್ಲಿ ವಾಸಿಸುವ ಝಾಕೀರ್ ಅವರು, ಪಾಕೂರ್‌ನಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಾರೆ. ಇದೇ ಪಟ್ಟಣದಲ್ಲಿ ಮಹೇಶ್ ಸಣ್ಣ ರೆಸ್ಟೋರೆಂಟೊಂದನ್ನು ನಡೆಸುತ್ತಿದ್ದಾರೆ.
“ಪಾಕೂರ್ [ಜಿಲ್ಲೆ] ಜನರು ಅತ್ಯಂತ ಶಾಂತಿಯಿಂದ ಬದುಕು ಕಟ್ಟಿಕೊಂಡಿರುವ ಸ್ಥಳ; ಇಲ್ಲಿಯ ಜನರ ನಡುವೆ ಸಹಬಾಳ್ವೆಯಿದೆ,” ಎಂದು ಹೇಳುತ್ತಾರೆ ಮಹೇಶ್.
"[ಅಸ್ಸಾಂನ ಮುಖ್ಯಮಂತ್ರಿ] ಹಿಮಂತ ಬಿಸ್ವಾ ಶರ್ಮಾ ಅವರಂತಹ ಹೊರಗಿನಿಂದ ಬರುವ ಜನರು ಭಾಷಣಗಳನ್ನು ಮಾಡಿ ಜನರನ್ನು ಪ್ರಚೋದಿಸುತ್ತಿದ್ದಾರೆ," ಎಂದು ಹೇಳುತ್ತಾ ಝಾಕೀರ್ ಅವರು ತಮ್ಮ ಸ್ನೇಹಿತನ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ.
ಸಂತಾಲ್ ಪರಗಣ ಪ್ರದೇಶದ ಒಂದು ಭಾಗವಾಗಿರುವ ಪಾಕೂರ್ ಜಾರ್ಖಂಡ್‌ನ ಪೂರ್ವ ಮೂಲೆಯಲ್ಲಿದೆ. ಇಲ್ಲಿ ನವೆಂಬರ್ 20, 2024 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಒಟ್ಟು 81 ಸ್ಥಾನಗಳನ್ನು ಕಬಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. 2019 ರ ಕೊನೆಯ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಬಿಜೆಪಿಯನ್ನು ಕಿತ್ತೆಸೆದಿತ್ತು.
ಕಳೆದುಕೊಂಡಿರುವ ಅಧಿಕಾರವನ್ನು ಮತ್ತೆ ಪಡೆಯುವ ಉದ್ದೇಶದಿಂದ ಮತದಾರರನ್ನು ಹೇಗಾದರೂ ಮಾಡಿ ಓಲೈಸಲು ಬಿಜೆಪಿಯು ಅಸ್ಸಾಂನ ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರನ್ನು ಇಲ್ಲಿಗೆ ಚುನಾವಣಾ ಪ್ರಚಾರಕ್ಕಾಗಿ ಕಳುಹಿಸಿದೆ. ಇಲ್ಲಿಗೆ ಬಂದ ಬಿಜೆಪಿ ನಾಯಕರು ಮುಸ್ಲೀಮರನ್ನು ‘ಬಾಂಗ್ಲಾದೇಶದಿಂದ ಬಂದ ನುಸುಳುಕೋರರು’ ಎಂಬ ಕರೆದು ಇಡೀ ಸಮುದಾಯದ ವಿರುದ್ಧ ಇತರ ಸಮುದಾಯಗಳು ಹಗೆತನ ಸಾಧಿಸುವಂತೆ ಮಾಡುತ್ತಿದ್ದಾರೆ.
“ಹಿಂದೂಗಳು ನನ್ನ ನೆರೆಹೊರೆಯಲ್ಲೇ ವಾಸಿಸುತ್ತಿದ್ದಾರೆ; ಅವರು ನನ್ನ ಮನೆಗೆ ಬರುತ್ತಾರೆ, ನಾನು ಅವರ ಮನೆಗೆ ಹೋಗುತ್ತೇನೆ. ಚುನಾವಣೆಯ ಸಮಯದಲ್ಲಿ ಮಾತ್ರ ಯಾವಾಗಲೂ ಈ ರೀತಿ ಹಿಂದೂ-ಮುಸ್ಲಿಂ ಸಮಸ್ಯೆ ಬರುತ್ತದೆ. ಇಲ್ಲದಿದ್ದರೆ ಅವರು (ಬಿಜೆಪಿ) ಹೇಗೆ ಗೆಲ್ಲಲು ಸಾಧ್ಯ?” ಎಂದು ಝಾಕೀರ್ ಹೇಳುತ್ತಾರೆ.
2024 ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಮ್‌ಶೆಡ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಒಳನುಸುಳುಕೋರರ ಸಮಸ್ಯೆಗಳಿಗೆ ತಮ್ಮ ರಾಜಕೀಯ ಬಣ್ಣವನ್ನು ಬಳಿದರು. “ಸಂತಾಲ್ ಪರಗಣದಲ್ಲಿ [ಪ್ರದೇಶ] ಆದಿವಾಸಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಆವರ ಭೂಮಿಯನ್ನು ಅತಿಕ್ರಮಣ ಮಾಡಲಾಗುತ್ತಿದೆ. ನುಸುಳುಕೋರರು ಪಂಚಾಯತಿಗಳಲ್ಲಿಯೂ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ,” ಎಂದು ತುಂಬಿದ ಸಭೆಯಲ್ಲಿ ಮೋದಿಯವರು ಹೇಳಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಸಾರ್ವಜನಿಕ ಭಾಷಣಗಳಲ್ಲಿ ಈ ದಾಟಿಯಲ್ಲಿಯೇ ಮಾತನಾಡಿದರು. "ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿಗಳ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯೂ ಹೇಳುತ್ತದೆ.












