"ನಮಗೆ ಇದರ ಬಗ್ಗೆ ತಿಳಿದಿಲ್ಲ" ಎಂದು ಹೇಳಿದ ಬಾಬಾ ಸಾಹೇಬ್, ಬಜೆಟ್ ಕುರಿತಾದ ನನ್ನ ಪುನರಾವರ್ತಿತ ಪ್ರಶ್ನೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.
"ನಮಗೇನು ಬೇಕು ಎಂದು ಸರ್ಕಾರ ಯಾವಾತ್ತು ಕೇಳಿತ್ತು?" ಎಂದು ಅವರ ಪತ್ನಿ ಮಂದಾ ಕೇಳುತ್ತಾರೆ. “ನಮಗೆ ಏನು ಬೇಕೆನ್ನುವುದು ಗೊತ್ತಿಲ್ಲದೆ ಅವರು ನಮಗಾಗಿ ಹೇಗೆ ನಿರ್ಧಾರ ತೆಗೆದುಕೊಳ್ಳಬಲ್ಲರು? ನಮಗೆ ಬೇಕಾಗಿರುವುದು ಎಲ್ಲಾ 30 ದಿನಗಳ ಕೆಲಸ."
ಪುಣೆ ಜಿಲ್ಲೆಯ ಶಿರೂರ್ ತಾಲ್ಲೂಕಿನ ಕುರುಲಿ ಗ್ರಾಮದ ಹೊರವಲಯದಲ್ಲಿರುವ ಅವರ ಒಂದು ಕೋಣೆಯ ತಗಡಿನ ಮನೆ ನಾನು ಹೋದ ದಿನದಂದು ಬೆಳಗ್ಗೆ ಅಸಾಮಾನ್ಯವಾಗಿ ಗಡಿಬಿಡಿಯಲ್ಲಿತ್ತು. "ನಾವು 2004ರಲ್ಲಿ ಜಲ್ನಾದಿಂದ ಇಲ್ಲಿಗೆ ವಲಸೆ ಬಂದಿದ್ದೇವೆ. ನಮಗೆ ನಮ್ಮದೇ ಆದ ಹಳ್ಳಿ ಇರಲಿಲ್ಲ. ನಾವು ವಲಸೆ ಹೋಗುತ್ತಿರುವುದರಿಂದ ನಮ್ಮ ಜನರು ಮೊದಲಿನಿಂದಲೂ ಹಳ್ಳಿಗಳ ಹೊರಗೆ ವಾಸಿಸುತ್ತಿದ್ದರು" ಎಂದು ಬಾಬಾ ಸಾಹೇಬ್ ಹೇಳುತ್ತಾರೆ.
ಒಂದು ಕಾಲದಲ್ಲಿ ಬ್ರಿಟಿಷ್ ರಾಜ್ ನಿಂದ 'ಕ್ರಿಮಿನಲ್' ಬುಡಕಟ್ಟು ಎಂದು ಹಣೆಪಟ್ಟಿ ಕಟ್ಟಲ್ಪಟ್ಟಿದ್ದ ಭಿಲ್ ಪಾರ್ಧಿಗಳು, ಡಿನೋಟಿಫೈ ಮಾಡಿದ 70 ವರ್ಷಗಳ ನಂತರವೂ ಸಾಮಾಜಿಕ ಕಳಂಕ ಮತ್ತು ವಂಚಿತತೆಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಅವರು ಹೇಳುವುದಿಲ್ಲ. ಮತ್ತು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಿದ ನಂತರವೂ. ಈ ಸಮುದಾಯದ ವಲಸೆಗಳು ಹೆಚ್ಚಾಗಿ ದಬ್ಬಾಳಿಕೆಯ ಕಾರಣದಿಂದ ನಡೆಯುತ್ತವೆ.
ನಿಸ್ಸಂಶಯವಾಗಿ, ಈ ಜನರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ವಲಸೆಯ ಬಗ್ಗೆ ಮಾತನಾಡಿದ್ದನ್ನು ಕೇಳಿಲ್ಲ. ಅವರು ಹಾಗೆ ಮಾತನಾಡಿದರೂ ಅದು ಅವರನ್ನು ಮೆಚ್ಚಿಸುವುದಿಲ್ಲ. "ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ, ಇದರಿಂದ ವಲಸೆ ಒಂದು ಆಯ್ಕೆಯಾಗುತ್ತದೆ, ಆದರೆ ಅಗತ್ಯವಾಗಿ ಉಳಿಯುವುದಿಲ್ಲ" ಎಂದು ಅವರು ತಮ್ಮ 2025-26 ರ ಬಜೆಟ್ ಭಾಷಣದಲ್ಲಿ ಹೇಳಿದ್ದರು.



