ವಾರಣಾಸಿ ಕ್ಷೇತ್ರದ ಮತದಾರರಾದ ಸಲ್ಮಾ ಮತದಾನದ ದಿನದಂದು ಮತ ಚಲಾಯಿಸಲು ಹೋದ ಸಂದರ್ಭದಲ್ಲಿ ಅಲ್ಲಿ ಎರಡು ಸಾಲುಗಳಿರುವುದನ್ನು ಕಂಡರು - ಒಂದು ಪುರುಷರಿಗೆ ಮತ್ತು ಇನ್ನೊಂದು ಮಹಿಳೆಯರಿಗೆ. ಪ್ರಸಿದ್ಧ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಕಿರಿದಾದ ಓಣಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬಂಗಾಲಿ ಟೋಲಾದ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.
ಈ 25 ವರ್ಷದ ಟ್ರಾನ್ಸ್ ಮಹಿಳೆ ಮಹಿಳೆಯರ ಸಾಲಿನಲ್ಲಿ ನಿಂತಿದ್ದರು, ಆದರೆ ಅವರು ಹೇಳುತ್ತಾರೆ, "ಆಂಖೇ ಬಡಿ ಹೋ ಗಯೀ ಥಿ ಸಬ್ಕಿ [ಎಲ್ಲರೂ ದೊಡ್ಡ ಕಣ್ಣು ಬಿಟ್ಟು ನೋಡುತ್ತಿದ್ದರು]. ಗಂಡಸರು ನನ್ನನ್ನು ನೋಡಿಲ್ಲವೇನೊ ಎಂಬಂತೆ ನಟಿಸುತ್ತಿದ್ದರು. ನನ್ನ ಸಾಲಿನಲ್ಲಿದ್ದ ಮಹಿಳೆಯರು ನನ್ನನ್ನು ಕಂಡು ನಗುವುದು ಮತ್ತು ಗುಟ್ಟಾಗಿ ಮಾತಾಡಿಕೊಳ್ಳುವುದನ್ನು ಮಾಡುತ್ತಿದ್ದರು. ನಾನು ಮಹಿಳೆಯರ ಸಾಲಿನ ಕೊನೆಯಲ್ಲಿದ್ದೆ.”
ಆದರೆ ಸಲ್ಮಾ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. “ನಾನು ಅದಕ್ಕೆ ತಲೆ ಕೆಡಿಸಿಕೊಳ್ಳದೆ. ಸಾಲಿನಲ್ಲಿ ಮುಂದೆ ಸಾಗಿದೆ, ನನಗೆ [ಮತ ಹಾಕುವ] ಹಕ್ಕಿದೆ. ನಾನು ಆ ಹಕ್ಕನ್ನು ಬದಲಾವಣೆ ತರುವ ಸಲುವಾಗಿ ಚಲಾಯಿಸಿದೆ” ಎಂದು ಅವರು ಹೇಳಿದರು.
ಭಾರತದ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 48,044 “ತೃತೀಯ ಲಿಂಗಿ ಮತದಾರರಿದ್ದಾರೆ.” ಗಣನೀಯ ಸಂಖ್ಯೆಯ ಹೊರತಾಗಿಯೂ, ಟ್ರಾನ್ಸ್ ವ್ಯಕ್ತಿಯಾಗಿ ಮತದಾರರ ಗುರುತಿನ ಚೀಟಿ ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ವಾರಣಾಸಿಯಲ್ಲಿ ಸುಮಾರು 300 ಟ್ರಾನ್ಸ್ ಜನರಿದ್ದಾರೆ ಮತ್ತು ಅವರಿಗೆ ಮತದಾರರ ಗುರುತಿನ ಚೀಟಿಗಳನ್ನು ಪಡೆಯುವುದು ಅವರಿಗೆ ಕಷ್ಟವಾಗಿದೆ ಎಂದು ಪ್ರಿಸ್ಮ್ಯಾಟಿಕ್ ಎನ್ನುವ ಸರ್ಕಾರೇತರ ಸಂಸ್ಥೆಯ ಸ್ಥಾಪಕ-ನಿರ್ದೇಶಕರಾದ ನೀತಿ ಹೇಳುತ್ತಾರೆ. "ನಾವು ಸುಮಾರು 50 ಟ್ರಾನ್ಸ್ ವ್ಯಕ್ತಿಗಳಿಗೆ ವೋಟರ್ ಐಡಿಗಳನ್ನು ಮಾಡಿಸಿದ್ದೇವೆ. ಆದರೆ ಚುನಾವಣಾ ಆಯೋಗ ವೆರಿಫಿಕೇಷನ್ ಸಲುವಾಗಿ ಮನೆ ಭೇಟಿಯನ್ನು ಕಡ್ಡಾಯ ಮಾಡಿದೆ. ಇದು ಸಮುದಾಯದ ಅನೇಕ ಸದಸ್ಯರ ಪಾಲಿಗೆ ಸಮಸ್ಯೆಯನ್ನು ತಂದಿಟ್ಟಿತು. ಈ ಸದಸ್ಯರಿಗೆ ಅಧಿಕಾರಿಗಳು ಮನೆಗೆ ಬಂದು ಲಿಂಗ ಪರಿಶೀಲನೆ ನಡೆಸುವುದು ಇಷ್ಟವಿರಲಿಲ್ಲ” ಎಂದು ಅವರು ಹೇಳುತ್ತಾರೆ.
ಆದರೆ ಸಲ್ಮಾ ತಾನು ಮತದಾರರ ಗುರುತಿನ ಚೀಟಿ ಮಾಡಿಸುವಾಗ ಯಾವುದೇ ಸಮಸ್ಯೆ ಎದುರಿಸಿಲ್ಲ ಎನ್ನುತ್ತಾರೆ. “ನಾನು ನನ್ನ ಕುಟುಂಬ ಅಥವಾ ನನ್ನ ಲಿಂಗ ಗುರುತು ಗೊತ್ತಿಲ್ಲದವರ ಜೊತೆ ಬದುಕುತ್ತಿಲ್ಲ” ಎಂದು ಅವರು ಹೇಳಿದರು.







