“ನಾನು ಮತ್ತೆ ನನ್ನಮ್ಮ ಇದೇ ವಿಷಯವಾಗಿ ನಿನ್ನೆ ರಾತ್ರಿ ಜಗಳವಾಡಿದೆವು” ಎನ್ನುತ್ತಾರೆ 21 ವರ್ಷ ವಯಸ್ಸಿನ ಆಶಾ ಬಸ್ಸಿ. “ಕಳೆದ ಮೂರೂವರೆ ವರ್ಷದಿಂದ ಮನೆಯಲ್ಲಿ ಓದು ಬಿಟ್ಟು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆಕೆ ವಿವರಿಸುತ್ತಾರೆ.
ಯವತ್ಮಳ್ ನಗರದ ಸಾವಿತ್ರಿ ಜ್ಯೋತಿರಾವ್ ಸಮಾಜಕಾರ್ಯ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಆಶಾ ಸೋಷಿಯಲ್ ವರ್ಕ್ ವಿಷಯದಲ್ಲಿ ಪದವಿಗಾಗಿ ಓದುತ್ತಿದ್ದಾರೆ. ಅವರು ತಮ್ಮ ಕುಟುಂಬದಲ್ಲೇ ಔಪಚಾರಿಕ ಶಿಕ್ಷಣ ಪಡೆಯುತ್ತಿರುವವರಲ್ಲಿ ಮೊದಲಿಗರಲ್ಲಿ ಒಬ್ಬರು. “ನಮ್ಮಲ್ಲಿ ಬೇಗನೆ ಮದುವೆಯಾಗುವ ಹುಡುಗಿಯರನ್ನು ಹೊಗಳಲಾಗುತ್ತದೆ. ಆದರೆ ನಾನು ಓದಲು ಬಯಸುತ್ತೇನೆ. ಇದೊಂದೇ ನನಗೆ ಸ್ವಾತಂತ್ರ್ಯ ಕೊಡಬಲ್ಲ ದಾರಿ” ಎಂದು ಅವರು ಹೇಳುತ್ತಾರೆ.
ಆಶಾ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಜೇವಾಲಿ ಗ್ರಾಮದವರಾಗಿದ್ದು, ಮಥುರಾ ಲಭಾನ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ರಾಜ್ಯದಲ್ಲಿ ಡಿ-ಅಧಿಸೂಚಿತ ಬುಡಕಟ್ಟು (ವಿಮುಕ್ತ ಜಾತಿ) ಎಂದು ಗುರುತಿಸಲಾಗಿದೆ. ಅವರ ಪೋಷಕರು ರೈತರಾಗಿದ್ದು, ಜೇವಾಲಿಯಲ್ಲಿರುವ ತಮ್ಮ ಒಡೆತನದ ಭೂಮಿಯಲ್ಲಿ ಸೋಯಾ, ಹತ್ತಿ, ಗೋಧಿ ಮತ್ತು ರಾಗಿಯನ್ನು ಬೆಳೆಯುತ್ತಾರೆ.
ಕುಟುಂಬವು ತಮ್ಮ ನಾಲ್ಕು ಮಕ್ಕಳ ಪೋಷಣೆಗೆ ಕೃಷಿಯನ್ನು ಅವಲಂಬಿಸಿದೆ - ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರಲ್ಲಿ ಆಶಾ ಹಿರಿಯರಾಗಿದ್ದು, ಅವರು ಯವತ್ಮಳ್ ನಗರದಲ್ಲಿ ತಮ್ಮ ಅಮ್ಮನ ಸಹೋದರ ಮತ್ತು ಅವರ ಪತ್ನಿಯೊಂದಿಗೆ ಉಳಿದುಕೊಂಡು ಪದವಿ ಓದುತ್ತಿದ್ದಾರೆ.
ಆಶಾರ ಪೋಷಕರು ಕೆಲವು ಸ್ಥಳೀಯ ಶಿಕ್ಷಕರ ಒತ್ತಾಯದ ಮೇರೆಗೆ 7ನೇ ವಯಸ್ಸಿನಲ್ಲಿ ತಮ್ಮ ಮನೆಯ ಹತ್ತಿರದ ಜಿಲ್ಲಾ ಪರಿಷತ್ (ಜಿಪ) ಶಾಲೆಗೆ ಮಗಳನ್ನು ದಾಖಲಿಸಿದರು. ಅವರು 3ನೇ ತರಗತಿಯವರೆಗೆ ಅಲ್ಲಿ ಓದಿದರು, ನಂತರ ಜೇವಾಲಿಯಿಂದ 112 ಕಿ.ಮೀ ದೂರದಲ್ಲಿರುವ ಯವತ್ಮಳ್ ನಗರಕ್ಕೆ ತೆರಳಿದರು. ಅಲ್ಲಿ ಅವರು ಮಹಾರಾಷ್ಟ್ರ ರಾಜ್ಯ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಶಾಲೆಯಲ್ಲಿ ಓದಿದರು ಮತ್ತು ಅಂತಿಮವಾಗಿ ಹತ್ತಿರದ ಕಾಲೇಜಿಗೆ ಸೇರಿದರು.








