“ನಮ್ಮ ಕಾಲದವರು ಭೇಡ್ ಬಕ್ರಿ ಚಾರ್ನಾ [ಪಶುಪಾಲನೆ] ಮಾಡುವುದು ಕಷ್ಟ” ಎನ್ನುತ್ತಾರೆ ತಾಲಿಬ್ ಕಸಾಣ. ಇವರು ಭೊರ್ಥೇನ್ ಎನ್ನುವ ಗ್ರಾಮದ ಪೆಹ್ಲಿ ಎನ್ನುವ ಬಕರ್ವಾಲ್ ಕುಗ್ರಾಮಕ್ಕೆ ಸೇರಿದವರು. ಅವರು ದೂರಶಿಕ್ಷಣದ ಮೂಲಕ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಓದುತ್ತಿದ್ದಾರೆ.
ಪಶುಪಾಲಕ ಸಮುದಾಯವಾಗಿರುವ ಬಕರ್ವಾಲ್ ಜನರು ತಮ್ಮ ಜಾನುವಾರುಗಳಿಗೆ ಮೇವಿನ ಮಾಳವನ್ನು ಹುಡುಕುತ್ತಾ ಹಿಮಾಲಯದ ಸುತ್ತ ದೊಡ್ಡ ಗುಂಪುಗಳಲ್ಲಿ ಹೊರಡುತ್ತಾರೆ. “ಒಮ್ಮೆ ಹಳ್ಳಿಗಳಲ್ಲಿ ಬದುಕುತ್ತಾ ಕುರಿ ಮೇಯಿಸುವ ಬದಲು ಓದಲು ಪ್ರಾರಂಭಿಸಿದರೆ ನಮಗೂ ಇತರ ವಿಷಯಗಳು ಅಭ್ಯಾಸವಾಗುತ್ತವೆ… ನಮಗೂ ಬಾಗಿಲಿರುವ ಬಚ್ಚಲು ಮನೆಯಲ್ಲಿ ಸ್ನಾನ ಮಾಡಬೇಕೆನ್ನಿಸುತ್ತದೆ ಅಥವಾ ಒಂದೇ ಸ್ಥಳದಲ್ಲಿದ್ದು ಓದಬೇಕೆನ್ನುವ ಆಸೆಯೂ ಇರುತ್ತದೆ.”
ತಾಲಿಬ್ ಜಮ್ಮುವಿನ ಕಥುವಾ ಜಿಲ್ಲೆಯ ಸಣ್ಣ ಬಕರ್ವಾಲ್ ನೆಲೆಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇದು ಅರೆ-ಶಾಶ್ವತ ನೆಲೆಯಾಗಿದೆ, ಮತ್ತು ಇಲ್ಲಿನ ಯಾವುದೇ ನಿವಾಸಿಗಳಿಗೆ ಭೂಮಿಯ ಮೇಲೆ ಹಕ್ಕುಗಳಿಲ್ಲ.
ಕಳೆದ ದಶಕದಲ್ಲಿ, ಈ ಅರೆ ಅಲೆಮಾರಿ ಸಮುದಾಯದ ಅನೇಕ ಯುವಕರು ತಮ್ಮ ಸಾಂಪ್ರದಾಯಿಕ ಗ್ರಾಮೀಣ ಜೀವನದಿಂದ ದೂರ ಸರಿದು ಉನ್ನತ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಣವಿದ್ದವರು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಓದುತ್ತಿದ್ದಾರೆ. ಉಳಿದಂತೆ ರಾಜಕೀಯ ಮತ್ತು ನಾಗರಿಕ ಸೇವಾ ಉದ್ಯೋಗಗಳಲ್ಲಿಯೂ ವೃತ್ತಿಜೀವನವನ್ನು ಹುಡುಕುತ್ತಿದ್ದಾರೆ.
ಬಕರ್ವಾಲ್ ಕುಟುಂಬಗಳಲ್ಲಿ ಎರಡು ಗಂಡು ಮಕ್ಕಳಿದ್ದಾಗ ಅವರಲ್ಲಿ ಒಬ್ಬರು ಕುರಿಗಳನ್ನು ನೋಡಿಕೊಂಡರೆ ಇನ್ನೊಬ್ಬರು ಹೊರಗೆ ಕೆಲಸಕ್ಕಾಗಿ ಪ್ರಯತ್ನಿಸುತ್ತಾರೆ. ತಾಲಿಬ್ ಕಸಾಣ ತನ್ನ ಓದನ್ನು ಮುಂದುವರೆಸುವ ಯೋಚನೆಯಲ್ಲಿದ್ದಾರೆ, ಆದರೆ ಅವರ ತಮ್ಮನಿಗೆ ಕುರಿ ಮೇಯಿಸುವ ಕೆಲಸ ಇಷ್ಟವಿಲ್ಲ. ಅವರೂ ಹೊರಗೆ ಕೆಲಸ ಹುಡುಕಲು ಬಯಸುತ್ತಿದ್ದಾರೆ. ಆದರೆ ಅಣ್ಣ ತಮ್ಮನಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾರೆ, “ನಮ್ಮಂತಹವರಿಗೆ ಹೊರಗೆ ಕೆಲಸ ಅಷ್ಟು ಸುಲಭವಾಗಿ ಸಿಗುವುದಿಲ್ಲ” ಎಂದು.














