ಸಂತೋಷಿ ಕೋರಿ ಮಾಲಿಕತ್ವದ ಹೊಸ ಅನುಭೂತಿಯನ್ನು ಸಂಭ್ರಮಿಸುತ್ತಿದ್ದಾರೆ. “ನಾವು ರೈತ ಮಹಿಳೆಯರೇ ಸೇರಿ ಈ ರೈತರ ಸಹಕಾರಿ ಸಂಘವನ್ನು ಆರಂಭಿಸಿದ್ದು. ಈಗ ಊರಿನ ಗಂಡಸರೂ ಇದೊಂದು ಒಳ್ಳೆಯ ಉಪಾಯ ಎಂದು ಒಪ್ಪಿಕೊಂಡಿದ್ದಾರೆ” ಎಂದು ಅವರು ನಗುತ್ತಾ ಹೇಳುತ್ತಾರೆ.
ಭೈರಹಾ ಪಂಚಾಯತ್ ವ್ಯಾಪ್ತಿಯ ಗುಚರಾ ಎನ್ನುವ ಕುಗ್ರಾಮದ ದಲಿತ ರೈತ ಮಹಿಳೆಯಾದ ಅವರು 2024ರ ಜನವರಿಯಲ್ಲಿ ಪನ್ನಾ ಜಿಲ್ಲೆಯ 300 ಆದಿವಾಸಿ, ದಲಿತ ಮತ್ತು ಒಬಿಸಿ (ಇತರ ಹಿಂದುಳಿದ ವರ್ಗ) ಮಹಿಳಾ ಸದಸ್ಯರನ್ನು ಹೊಂದಿರುವ ರೂಂಜ್ ಮಹಿಳಾ ರೈತ ಉತ್ಪಾದಕ ಸಹಕಾರಿ ನಿಯಮಿತಕ್ಕೆ (ಎಮ್ಎಫ್ಪಿಒ) ಸದಸ್ಯತ್ವ ಶುಲ್ಕವಾಗಿ 1,000 ರೂ.ಗಳನ್ನು ಪಾವತಿಸಿದರು. ರೂಂಜ್ ಸಂಸ್ತೆಯ ಐದು ಮಂದಿ ಮಂಡಳಿ ಸದಸ್ಯರಲ್ಲಿ ಸಂತೋಷಿ ಕೂಡಾ ಒಬ್ಬರು. ಅವರನ್ನು ಸಭೆಗಳಲ್ಲಿ ಸಂಸ್ಥೆಯ ಕೆಲಸಗಳ ಕುರಿತು ಪ್ರಚಾರ ಭಾಷಣ ಮಾಡುವುದಕ್ಕೂ ಆಹ್ವಾನಿಸಲಾಗುತ್ತದೆ.
“ಹಿಂದೆ ನಾವು ಅರ್ಹರ್ ದಾಲ್ ದಾಲ್ [ತೊಗರಿ ಬೇಳೆ] ಯನ್ನು ಮಿಲ್ ಮಾಡದೆ ಹಾಗೇ ಮಾರುತ್ತಿದ್ದೆವು. ಈ ಕಾರಣಕ್ಕಾಗಿ ಬಿಚೋಲಿಯಾ [ವ್ಯಾಪಾರಿ] ತೊಗರಿಯನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದ. ಅಲ್ಲದೆ ಅವನು ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲವಾದ ಕಾರಣ ನಮಗೆ ಸರಿಯಾದ ಸಮಯಕ್ಕೆ ಹಣವೂ ಸಿಗುತ್ತಿರಲಿಲ್ಲ” ಎಂದು ಅವರು ಪರಿಗೆ ತಿಳಿಸಿದರು. ಮೂರುಮಕ್ಕಳತಾಯಿಯಾದ ಈ 45 ವರ್ಷದಮಹಿಳೆತನ್ನಕುಟುಂಬದ ಎರಡು ಎಕರೆ ಮಳೆಯಾಶ್ರಿತ ಭೂಮಿಯಲ್ಲಿ ತೊಗರಿ ಬೆಳೆಯನ್ನು ಬೆಳೆಯುತ್ತಾರೆ. ಇದರ ಜೊತೆಗೆ ಇನ್ನೊಂದು ಎಕರೆಯನ್ನು ಗೇಣಿಗೆ ಪಡೆದಿದ್ದಾರೆ. ದೇಶದಲ್ಲಿ ಕೇವಲ11 ಪ್ರತಿಶತದಷ್ಟು ಮಹಿಳೆಯರು ಮಾತ್ರ ಭೂಮಿಯ ಮಾಲಿಕತ್ವವನ್ನು ಹೊಂದಿದ್ದಾರೆ. ಮಧ್ಯಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಯಮುನಾ ನದಿಯನ್ನು ಸೇರುವ ಭಾಘೈನ್ ನದಿಯ ಉಪನದಿಯಾದ ರೂಂಜ್ ನದಿಯ ಹೆಸರನ್ನೇ ಈ ಎಮ್ಎಫ್ಪಿ ಸಂಸ್ಥೆಗೆ ಇರಿಸಲಾಗಿದೆ. ಇದು ಅಜಯಗಢ ಮತ್ತು ಪನ್ನಾ ಬ್ಲಾಕಿನ 28 ಹಳ್ಳಿಗಳ ರೈತ ಮಹಿಳೆಯರನ್ನು ಸದಸ್ಯರನ್ನಾಗಿ ಹೊಂದಿದೆ. 2024ರಲ್ಲಿ ಆರಂಭಗೊಂಡ ಈ ಸಂಸ್ಥೆಯು ಪ್ರಸ್ತುತ 40 ಲಕ್ಷ ರೂಪಾಯಿಗಳ ವಹಿವಾಟನ್ನು ಹೊಂದಿದ್ದು, ಮುಂದಿನ ವರ್ಷ ಇದನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.










