"ಕೋಲ್ಕತ್ತಾ, ಜೈಪುರ, ದೆಹಲಿ ಅಥವಾ ಬಾಂಬೆ, ಇಲ್ಲಿಗೆಲ್ಲಾ ಬಿದಿರಿನಿಂದ ತಯಾರಿಸಿದ ಪೊಲೊ ಚೆಂಡುಗಳು ನೇರವಾಗಿ ದಿಯೋಲ್‌ಪುರಿಂದ ಹೋಗುತ್ತವೆ," ಎಂದು ಭಾರತದಲ್ಲಿ ಪೋಲೋ ಆಟವನ್ನು ಆಡುವ ಸ್ಥಳಗಳನ್ನು ಹೆಸರಿಸುತ್ತಾ ರಂಜಿತ್ ಮಾಲ್ ಹೇಳುತ್ತಾರೆ.

ಪಶ್ಚಿಮ ಬಂಗಾಳದ ದಿಯೋಲ್‌ಪುರ್ ಪಟ್ಟಣದ ಪೋಲೋ ಬಾಲ್ ತಯಾರಕ 71 ವರ್ಷ ಪ್ರಾಯದ ರಂಜಿತ್ ಸುಮಾರು 40 ವರ್ಷಗಳಿಂದ ಗಾಡುವಾ ಬಿದಿರಿನ ಕಾಂಡಗಳಿಂದ ಚೆಂಡುಗಳನ್ನು ತಯಾರಿಸುತ್ತಿದ್ದಾರೆ. ಬಿದಿರು ಹಿಂಡು ಹಿಂಡಾಗಿ ಹರಡುತ್ತಾ ಬೆಳೆಯಲು ನೆರವಾಗುವ, ಮಣ್ಣಿನ ಅಡಿಯಲ್ಲಿರುವ ಈ ಬೇರಿನ ಕಾಂಡಗಳನ್ನು ಸ್ಥಳೀಯರು ಬಾನ್‌ಷೇರ್ ಗೋರ್ಹಾ ಎಂದು ಕರೆಯುತ್ತಾರೆ. ಚರಿತ್ರೆಯ ಪುಟಗಳನ್ನು ಸೇರಿರುವ ಈ ಚೆಂಡುಗಳನ್ನು ತಯಾರಿಸುವ ರಂಜಿತ್, ಸದ್ಯ ಉಳಿದಿರುವ‌ ಏಕೈಕ ಶಿಲ್ಪಕಾರ (ಕುಶಲಕರ್ಮಿ).

160 ವರ್ಷಗಳಿಂದ ಮಾಡರ್ನ್‌ ಪೋಲೋ ಆಟವನ್ನು ಆಡಲಾಗುತ್ತಿದೆ. ಮೊದಮೊದಲು ಮಿಲಿಟರಿಯವರು, ರಾಜಮನೆತನದವರು ಮತ್ತು ದೊಡ್ಡ ದೊಡ್ಡ ಕ್ಲಬ್‌ಗಳಲ್ಲಿ ಸಿರಿವಂತರು ಆಡುತ್ತಿದ್ದರು. ಇಲ್ಲಿಗೆಲ್ಲಾ ಬಿದಿರಿನ ಚೆಂಡುಗಳನ್ನು ದಿಯೋಲ್‌ಪುರ್‌ನಿಂದ ತರಿಸಲಾಗುತ್ತಿತ್ತು. ಜಗತ್ತಿನ ಮೊದಲ ಪೋಲೋ ಕ್ಲಬ್ 1859 ರಲ್ಲಿ ಅಸ್ಸಾಂನ ಸಿಲ್ಚಾರ್‌ನಲ್ಲಿ ಸ್ಥಾಪಿಸಲಾಗಿತ್ತು. ಇದರ ನಂತರ, 1863ರಲ್ಲಿ ಕಲ್ಕತ್ತಾದಲ್ಲಿ ಎರಡನೇ ಪೋಲೋ ಕ್ಲಬ್ ಹುಟ್ಟಿಕೊಂಡಿತು. ಈ ಮಾಡರ್ನ್‌ ಪೋಲೋ ಆಟದ ಮೂಲ ಸಾಗೋಲ್ ಕಾಂಗ್ಜೆ ಎಂಬ ಮಣಿಪುರದ ಮೈತೇಯಿ ಸಮುದಾಯದ ಸಾಂಪ್ರದಾಯಿಕ ಆಟದಲ್ಲಿದೆ. ಮೈತೇಯಿಗಳು ಬಿದಿರಿನ ಕಾಂಡದಿಂದ ತಯಾರಿಸಿದ ಚೆಂಡುಗಳನ್ನು ಬಳಸಿ ಆಡುತ್ತಿದ್ದರು.

1940ರ ದಶಕದ ಆರಂಭದಲ್ಲಿ, ದಿಯೋಲ್‌ಪುರ್ ಗ್ರಾಮದಲ್ಲಿ ಆರರಿಂದ ಏಳು ಕುಟುಂಬಗಳು 125ಕ್ಕೂ ಹೆಚ್ಚು ಕುಶಲಕರ್ಮಿಗಳಿಗೆ ಕೆಲಸ ನೀಡಿ, ವರ್ಷಕ್ಕೆ ಸರಿಸುಮಾರು ಒಂದು ಲಕ್ಷ ಪೋಲೋ ಬಾಲ್‌ಗಳನ್ನು ತಯಾರಿಸುತ್ತಿದ್ದವು. "ನಮ್ಮ ನುರಿತ ಶಿಲ್ಪಕಾರರಿಗೆ ಪೋಲೋ ಮಾರ್ಕೆಟ್‌ ಬಗ್ಗೆ ತಿಳಿದಿತ್ತು," ಎಂದು ರಂಜಿತ್ ಹೇಳುತ್ತಾರೆ. ಇವರ ಅಭಿಪ್ರಾಯಕ್ಕೆ ಪೂರಕವಾಗಿ ಬ್ರಿಟಿಷರ ಕಾಲದ ಹೌರಾ ಜಿಲ್ಲೆಯ ಸಮೀಕ್ಷೆ ಮತ್ತು ವಸಾಹತುಶಾಹಿ ವರದಿ ಗಳೂ ಇದನ್ನು ಹೇಳುತ್ತವೆ: "ಭಾರತದಲ್ಲಿ ಪೋಲೋ ಬಾಲ್‌ಗಳನ್ನು ತಯಾರಿಸುವ ಏಕೈಕ ಸ್ಥಳ ದಿಯೋಲ್‌ಪುರ್."

ರಂಜಿತ್ ಅವರ ಪತ್ನಿ ಮಿನೋತಿ ಮಾಲ್, " ಬೆಳೆಯುತ್ತಿರುವ ಪೋಲೋ ಬಾಲ್ ವ್ಯಾಪಾರವನ್ನು ನೋಡಿ, ನನ್ನ ಅಪ್ಪ ಕೇವಲ 14 ವರ್ಷ ಪ್ರಾಯದಲ್ಲಿಯೇ ಇಲ್ಲಿಗೆ ನನ್ನನ್ನು ಮದುವೆ ಮಾಡಿ ಕೊಟ್ಟರು," ಎಂದು ಹೇಳುತ್ತಾರೆ. ಅರವತ್ತರ ಹರೆಯದಲ್ಲಿರುವ ಇವರು ಒಂದು ದಶಕದ ಹಿಂದಿನವರೆಗೂ ತಮ್ಮ ಪತಿಗೆ ಕೆಲಸದಲ್ಲಿ ನೆರವಾಗುತ್ತಿದ್ದರು. ಇವರ ಕುಟುಂಬ ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲಾಗಿರುವ ಮಾಲ್ ಸಮುದಾಯಕ್ಕೆ ಸೇರಿದೆ. ರಂಜಿತ್ ತನ್ನ ಇಡೀ ಜೀವನವನ್ನು ದಿಯೋಲ್‌ಪುರ್‌ನಲ್ಲಿ ಕಳೆದಿದ್ದಾರೆ.

ಮನೆಯಲ್ಲಿ ಮದುರ್ ಹುಲ್ಲಿನ ಚಾಪೆಯ ಮೇಲೆ ಕುಳಿತುಕೊಂಡು, ತಾವು ಸಂಗ್ರಹಿಸಿದ ಹಳೆಯ ದಿನಪತ್ರಿಕೆ ಕಟ್ಟಿಂಗ್‌ಗಳು ಮತ್ತು ನಿಯತಕಾಲಿಕದ ಲೇಖನಗಳ ಮೇಲೆ ರಂಜಿತ್ ಕಣ್ಣುಹಾಯಿಸುತ್ತಿದ್ದರು. "ಈ ಜಗತ್ತಿನಲ್ಲಿ ಎಲ್ಲಿಯಾದರೂ ಲುಂಗಿಯಲ್ಲಿ ಪೋಲೋ ಬಾಲ್ ತಯಾರಿಸುವ ಮನುಷ್ಯನ ಫೋಟೋವನ್ನು ನೀವು ನೋಡಿದ್ದರೆ, ಅದು ನನ್ನದೇ" ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

Ranjit shows his photographs of ball-making published in a Bangla magazine in 2015 (left) and (right) points at his photograph printed in a local newspaper in 2000
PHOTO • Shruti Sharma
Ranjit shows his photographs of ball-making published in a Bangla magazine in 2015 (left) and (right) points at his photograph printed in a local newspaper in 2000
PHOTO • Shruti Sharma

2015ರಲ್ಲಿ ಬಾಂಗ್ಲಾದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಚೆಂಡು ತಯಾರಿಕೆಯ ಫೋಟೋಗಳನ್ನು ತೋರಿಸುತ್ತಿರುವ ರಂಜಿತ್ (ಎಡ) ಮತ್ತು (ಬಲ) 2000ರ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ತಮ್ಮ ಫೋಟೋವನ್ನು ತೋರಿಸುತ್ತಿದ್ದಾರೆ

ಸುಭಾಷ್ ಬಾಗ್ ಅವರ ವರ್ಕ್‌ಶಾಪ್‌ನಲ್ಲಿ ತಮ್ಮ ಟೇಪ್ ರೆಕಾರ್ಡರ್‌ನಲ್ಲಿ ಮೊಹಮ್ಮದ್ ರಫಿ ಅವರ ಹಾಡುಗಳನ್ನು ಕೇಳುತ್ತಾ ಕೆಲಸ ಮಾಡುತ್ತಿದ್ದ ದಿನಗಳನ್ನು ರಂಜಿತ್ ನೆನಪಿಸಿಕೊಳ್ಳುತ್ತಾರೆ. “ನಾನು ದೊಡ್ಡ ರಫಿ ಭೋಕ್ತೋ [ಆರಾಧಕ]. ಅವರ ಹಾಡುಗಳ ಕ್ಯಾಸೆಟ್‌ಗಳನ್ನೂ ಮಾಡಿದ್ದೆ,” ಎಂದು ಅವರು ನಗುತ್ತಾ ಹೇಳುತ್ತಾರೆ. ಕೋಲ್ಕತ್ತಾದ ಫೋರ್ಟ್ ವಿಲಿಯಂನಿಂದ ಮಿಲಿಟರಿ ಅಧಿಕಾರಿಗಳು ಪೋಲೋ ಚೆಂಡುಗಳನ್ನು ಖರೀದಿಸಲು ಬಂದಿದ್ದರು. “ಗಾನ್ ಶೂನೇ ಪೋಚೊಂದೋ ಹೋಗೆ ಚಿಲೋ. ಸೊಬ್ ಕ್ಯಾಸೆಟ್ ನೀಯೇ ಗೆಲೋ [ಅಧಿಕಾರಿಗಳು ಹಾಡುಗಳನ್ನು ಕೇಳಿ ಇಷ್ಟಪಟ್ಟರು. ಆಮೇಲೆ ಎಲ್ಲಾ ಕ್ಯಾಸೆಟ್ ಗಳನ್ನೂ ತೆಗೆದುಕೊಂಡು ಹೋದರು],” ಎಂದು ನೆನಪಿಸಿಕೊಳ್ಳುತ್ತಾರೆ ರಂಜಿತ್.

ಹೌರಾ ಜಿಲ್ಲೆಯ ಈ ಪ್ರದೇಶದಲ್ಲಿ ಕಂಡುಬರುವ, ಸ್ಥಳೀಯವಾಗಿ ಘೋರೋ ಬಾನ್ಸ್ ಎಂದು ಕರೆಯುವ ಗಾಡುವಾ ಬಿದಿರು ಸುಲಭವಾಗಿ ಸಿಗುವುದರಿಂದ ಇದು ದಿಯೋಲ್‌ಪುರದ ಹೆಮ್ಮೆಯ ಸ್ಥಳ. ಅಂಟಿಕೊಂಡು ಬೆಳೆಯುವ ಗಾಡುವಾ ಬಿದಿರು, ನೆಲದ ಅಡಿಯಲ್ಲಿ ಗಟ್ಟಿಮುಟ್ಟಾದ ಹಾಗೂ ಉದ್ದನೆಯ ಕಾಂಡಗಳನ್ನು ಹೊಂದಿರುತ್ತದೆ, ಇದರಿಂದ ಪೋಲೊ ಚೆಂಡುಗಳನ್ನು ತಯಾರಿಸಲಾಗುತ್ತದೆ.

"ಎಲ್ಲಾ ಜಾತಿಯ ಬಿದಿರುಗಳು ಪೊಲೊ ಬಾಲ್‌ ತಯಾರಿಸಲು ಬೇಕಾದ ಸಮರ್ಪಕ ತೂಕ ಮತ್ತು ಗಾತ್ರವನ್ನು ಹೊಂದಿರುವ ರೈಜೋಮನ್ನು (ಬೇರುಕಾಂಡ) ಹೊಂದಿರುವುದಿಲ್ಲ," ಎಂದು ರಂಜಿತ್ ವಿವರಿಸುತ್ತಾರೆ. ಇಂಡಿಯನ್ ಪೋಲೋ ಅಸೋಸಿಯೇಷನ್ ಸೂಚಿಸಿರುವ ಮಾನದಂಡಗಳ ಪ್ರಕಾರ ಪ್ರತಿ ಚೆಂಡೂ ನಿಖರವಾಗಿ 78-90 ಮಿಮೀ ವ್ಯಾಸ ಮತ್ತು 150 ಗ್ರಾಂ ತೂಕವನ್ನು ಹೊಂದಿರಬೇಕು.

1990ರ ದಶಕದವರೆಗೆ, ಎಲ್ಲಾ ಪೊಲೊ ಚೆಂಡುಗಳನ್ನು ಇದರಿಂದ ಮಾತ್ರ ತಯಾರಿಸಲಾಗುತ್ತಿತ್ತು. "ಇವುಗಳ [ಬಿದಿರಿನ ಚೆಂಡುಗಳ] ಜಾಗವನ್ನು ಕ್ರಮೇಣ ಅರ್ಜೆಂಟೀನಾದಿಂದ ತಂದ ಫೈಬರ್‌ಗ್ಲಾಸ್ ಚೆಂಡುಗಳು ಆಕ್ರಮಿಸಿಕೊಂಡವು,” ಎಂದು ಈ ನುರಿತ ಕುಶಲಕರ್ಮಿ ಹೇಳುತ್ತಾರೆ.

ಫೈಬರ್‌ಗ್ಲಾಸ್ ಚೆಂಡುಗಳು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಬಿದಿರಿನ ಚೆಂಡುಗಳಿಗಿಂತ ಇವುಗಳ ಬೆಲೆ ಹೆಚ್ಚು. ಆದರೆ "ಪೋಲೋ ಪ್ರೋಚೂರ್ ಧೊನಿ ಲೋಕ್‌ [ಅತ್ಯಂತ ಶ್ರೀಮಂತ ಜನರ] ಕ್ರೀಡೆ. ಹಾಗಾಗಿ ಹೆಚ್ಚಿನ ಹಣವನ್ನು [ಬಾಲ್‌ಗಳ ಮೇಲೆ] ಖರ್ಚು ಮಾಡುವುದು ಅವರಿಗೆ ದೊಡ್ಡ ವಿಷಯವೇನಲ್ಲ," ಎಂದು ರಂಜಿತ್ ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಆಗಿರುವ ಈ ಬದಲಾವಣೆ ದಿಯೋಲ್‌ಪುರದ ಕರಕುಶಲತೆಯನ್ನು ನಾಶಮಾಡಿದೆ. "2009ಕ್ಕಿಂತ ಮೊದಲು ಇಲ್ಲಿ 100-150 ಬಾಲ್ ತಯಾರಕರಿದ್ದರು. 2015ರ ವೇಳೆಗೆ, ನಾನು ಮಾತ್ರ ಪೋಲೋ ಬಾಲ್ ತಯಾರಿಸುತ್ತಿದ್ದೆ. ಆದರೆ ಅವುಗಳನ್ನು ಖರೀದಿಸಲು ಯಾರೂ ಇರಲಿಲ್ಲ,” ಎಂದು ತುಂಬಾ ಖೇದದಿಂದ ಹೇಳುತ್ತಾರೆ.

*****

Left: Carrying a sickle in her hand, Minoti Mal leads the way to their six katha danga-zomin (cultivable piece of land) to show a bamboo grove.
PHOTO • Shruti Sharma
Right: She demarcates where the rhizome is located beneath the ground
PHOTO • Shruti Sharma

ಎಡಕ್ಕೆ: ಬಿದಿರಿನ ತೋಪು ತೋರಿಸಲು ತಮ್ಮ ಆರು ಕಥಾ ದಂಗಾ-ಜೋಮಿನ್ (ಕೃಷಿಯೋಗ್ಯ ತುಂಡು ಭೂಮಿ) ಗೆ ಕೈಯಲ್ಲಿ ಕುಡಗೋಲು ಹಿಡಿದುಕೊಂಡು ದಾರಿ ಮಾಡಿಕೊಡುತ್ತಿರುವ ಮಿನೋತಿ ಮಾಲ್. ಬಲ: ನೆಲದ ಕೆಳಗೆ ಇರುವ ಬೇರಿನ ಕಾಂಡವನ್ನು ಗುರುತಿಸುತ್ತಿರುವುದು

Left: The five tools required for ball-making. Top to bottom: kurul (hand axe), korath (coping saw), batali (chisel), pathor (stone), renda (palm-held filer) and (bottom left) a cylindrical cut rhizome - a rounded ball.
PHOTO • Shruti Sharma
Right: Using a katari (scythe), the rhizome is scraped to a somewhat even mass
PHOTO • Shruti Sharma

ಎಡಕ್ಕೆ: ಚೆಂಡು ತಯಾರಿಸಲು ಬಳಸುವ ಐದು ಉಪಕರಣಗಳು. ಮೇಲಿನಿಂದ ಕೆಳಕ್ಕೆ: ಕುರುಲ್ (ಕೈ ಕೊಡಲಿ), ಕೊರತ್ (ಕೋಪಿಂಗ್ ಗರಗಸ), ಬಟಾಲಿ (ಉಳಿ), ಪಾಥೋರ್ (ಕಲ್ಲು), ರೆಂಡಾ (ಕೈಯಲ್ಲಿ ಹಿಡಿಯುವ ಅರ) ಮತ್ತು (ಕೆಳಗಿನ ಎಡಭಾಗದಲ್ಲಿ) ಸಿಲಿಂಡರ್‌ ಆಕಾರದ ಕಟ್ ರೈಜೋಮ್ - ದುಂಡಾದ ಚೆಂಡು. ಬಲ: ಕಟಾರಿ (ಕುಡುಗೋಲು) ಬಳಸಿ ಬೇರುಕಾಂಡವನ್ನು ಸ್ವಲ್ಪ ಸಮ ತಟ್ಟು ಮಾಡಲಾಗುತ್ತದೆ

ರಂಜಿತ್ ಮತ್ತು ನಾನು ಕುಡಗೋಲು ಹಿಡಿದುಕೊಂಡಿರುವ ಮಿನೋತಿಯವರನ್ನು ಹಿಂಬಾಲಿಸುತ್ತಿರುವಂತೆ, ಅವರು ತಮ್ಮ ಬಾನ್‌ಷೇರ್ ಬಗನ್ [ಬಿದಿರಿನ ತೋಪು] ಕಡೆಗೆ ದಾರಿ ತೋರಿಸಿದರು. ಈ ಆರು ಕಥಾ ಭೂಮಿ ದಂಪತಿಗಳ ಮನೆಯಿಂದ ಸುಮಾರು 200 ಮೀಟರ್‌ಗಳಷ್ಟು ದೂರದಲ್ಲಿದೆ. ಅಲ್ಲಿಯೇ ತಮ್ಮ ಮನೆಗೆ ಬೇಕಾದ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. ಬಳಸಿ ಉಳಿದದ್ದನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾರುತ್ತಾರೆ.

"ಬಿದಿರಿನ ಕಾಂಡವನ್ನು ಕತ್ತರಿಸಿದ ನಂತರ ಬೇರಿನ ಕಾಂಡವನ್ನು ನೆಲದಡಿಯಿಂದ ಹೊರತೆಗೆಯಬೇಕು," ಎಂದು ಮಿನೋತಿ ಹೊರತೆಗೆಯುವ ಪ್ರಕ್ರಿಯೆಯನ್ನು ವಿವರಿಸುತ್ತಾರೆ. ಹಿಂದೆಲ್ಲಾ ದಿಯೋಲ್‌ಪುರದಲ್ಲಿ ಈ ಕೆಲಸವನ್ನು ಸರ್ದಾರ್ ಸಮುದಾಯದವರು ಮಾಡುತ್ತಿದ್ದರು. ಇವರಿಂದ ರಂಜಿತ್‌ 2-3 ಕೆಜಿಗೆ 25-32 ರುಪಾಯಿ ಕೊಟ್ಟು ಬಿದಿರಿನ ರೈಜೋಮ್‌ಗಳನ್ನು ಖರೀದಿಸುತ್ತಿದ್ದರು.

ಬೇರಿನ ಕಾಂಡಗಳನ್ನು ಸುಮಾರು ನಾಲ್ಕು ತಿಂಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. “ನಾ ಶುಕ್ಲೇ, ಕಾಚಾ ಒಬೋಸ್ತ-ತೇ ಬಾಲ್ ಚಿತ್-ಕೆ ಜಾಬೇ. ತೇಧಾ ಬೇಕಾ ಹೋಯಿ ಜಾಬೆ [ಸರಿಯಾಗಿ ಒಣಗಿಸದಿದ್ದರೆ ಚೆಂಡು ಬಿರುಕು ಬಿಡುತ್ತದೆ ಮತ್ತು ಅದರ ಆಕಾರ ಕಳೆದುಕೊಳ್ಳುತ್ತದೆ],” ಎಂದು ರಂಜಿತ್ ವಿವರಿಸುತ್ತಾರೆ.

ನಂತರ ಅವುಗಳನ್ನು 15-20 ದಿನಗಳವರೆಗೆ ಒಂದು ಕೊಳದಲ್ಲಿ ಹಾಕಿ ನೆನೆಸಲಾಗುತ್ತದೆ. "ರಾಡ್-ಇ ಪಾಕಾ [ಬಿಸಿಲಿನಲ್ಲಿ ಕಾಯಿಸಿದ] ಬೇರಿನ ಕಾಂಡವನ್ನು ಮೃದುಗೊಳಿಸಲು ನೀರಿನಲ್ಲಿ ನೆನೆಹಾಕಬೇಕು. ಇಲ್ಲದಿದ್ದರೆ ಅದನ್ನು ಕತ್ತರಿಸಲು ಸಾಧ್ಯವಿಲ್ಲ. ನಾವು ಅದನ್ನು ಮತ್ತೆ 15-20 ದಿನಗಳವರೆಗೆ ಒಣಗಿಸುತ್ತೇವೆ. ಆಗ ಮಾತ್ರ ಬಾಲ್‌ ಮಾಡಲು ಸಾಧ್ಯವಾಗುತ್ತದೆ " ಎಂದು ಓರ್ವ ಅನುಭವಿ ಕುಶಲಕರ್ಮಿಯಾಗಿ ರಂಜಿತ್ ಹೇಳುತ್ತಾರೆ.

ಕಟಾರಿ (ಕುಡುಗೋಲು) ಅಥವಾ ಕುರುಲ್ (ಕೈ ಕೊಡಲಿ) ನಿಂದ ಬೇರಿನ ಕಾಂಡವನ್ನು ಕತ್ತರಿಸುವುದರಿಂದ ಹಿಡಿದು ಕೊರಾತ್ (ಕೋಪಿಂಗ್ ಗರಗಸ) ಬಳಸಿ ಸಿಲಿಂಡರ್ ಆಕಾರಕ್ಕೆ ತುಂಡುಗಳಾಗಿ ಕತ್ತರಿಸುವವರೆಗೆ, “ಇಡೀ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಒಬ್ಬರ ಕೈಯಲ್ಲೇ ಮಾಡಿಸಬೇಕಾಗಿತ್ತು. ನಮ್ಮಂತ ಶಿಲ್ಪಕಾರರ ಬೆನ್ನಿನ ಮೇಲೆ ಪೋಲೋ ಆಟವನ್ನು ಆಡಲಾಗುತ್ತಿದೆ,” ಎಂದು ದೀರ್ಘಕಾಲದ ಬೆನ್ನುನೋವಿನಿಂದ ಬಳಲುತ್ತಿರುವ ರಂಜಿತ್ ನಿಧಾನವಾಗಿ ನಡೆಯುತ್ತಾ ಹೇಳುತ್ತಾರೆ.

ಒಮ್ಮೆ ರಫ್‌ ಆಗಿ ಸಿಲಿಂಡರ್‌ ಆಕಾರದ ತುಂಡುಗಳನ್ನು ಬೇರಿನ ಕಾಂಡದಿಂದ ಕತ್ತರಿಸಿ ತೆಗೆದ ನಂತರ, ಉಳಿಯ ಹಿಡಿಕೆಯ ಮೇಲೆ ಕಲ್ಲಿನಿಂದ ಬಡಿಯುತ್ತಾ ಅವುಗಳಿಗೆ ನಿರ್ದಿಷ್ಟ ಆಕಾರ ನೀಡಲಾಗುತ್ತದೆ. ಬೇರಿನ ಕಾಂಡದ ಗಾತ್ರಕ್ಕೆ ಅನುಗುಣವಾಗಿ ನಾವು ಒಂದು ತುಂಡಿನಿಂದ ಎರಡು, ಮೂರು ಅಥವಾ ನಾಲ್ಕು ಚೆಂಡುಗಳನ್ನು ಕೆತ್ತಿಸಬಹುದು,” ಎಂದು ರಂಜಿತ್ ಹೇಳುತ್ತಾರೆ. ನಂತರ ಅವರು ಚೆಂಡನ್ನು ಅಂಗೈಯಲ್ಲಿ ಹಿಡಿದಿರುವ ರಾಂಡಾವನ್ನು ಬಳಸಿ ಅದರ ಮೇಲೆ ಇರುವ ಸವೆತಗಳನ್ನು ಪ್ಲೇನ್ ಮಾಡುತ್ತಾರೆ.

ಹೌರಾ ಜಿಲ್ಲೆಯ ಈ ಪ್ರದೇಶದಲ್ಲಿ ಕಂಡುಬರುವ, ಸ್ಥಳೀಯವಾಗಿ ಘೋರೋ ಬಾನ್ಸ್ ಎಂದು ಕರೆಯುವ ಗಾಡುವಾ ಬಿದಿರು ಸುಲಭವಾಗಿ ಸಿಗುವುದರಿಂದ ಇದು ದೇಲ್‌ಪುರದ ಹೆಮ್ಮೆಯ ಸ್ಥಳ

ಕರಕುಶಲತೆಯ ಬಗೆಗಿನ ಈ ಕಿರು ವೀಡಿಯೊವನ್ನು ವೀಕ್ಷಿಸಿ

ಹಳೆಯ ಚೆಂಡೊಂದನ್ನು ಕೈಗೆತ್ತಿಕೊಂಡು ಮೆರುಗು ನೀಡುವ ಕೆಲಸವನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತಾ ಮಿನೋತಿಯವರು: “ಮನೆಗೆಲಸದ ಮಧ್ಯೆ, ಶಿರೀಷ್ ಪೇಪರ್ ನೀಯೇ ಬಾಲ್ ಆಮಿ ಮಜ್ತಮ್ [ನಾನು ಸ್ಯಾಂಡ್‌ ಪೇಪರ್ ಬಳಸಿ ನುಣುಪುಗೊಳಿಸಿ, ಫಿನಿಷಿಂಗ್‌ ಕೆಲಸ ಮಾಡುತ್ತಿದ್ದೆ]. ನಂತರ ಅದಕ್ಕೆ ಬಿಳಿ ಬಣ್ಣ ಬಳಿದು, ಕೆಲವೊಮ್ಮೆ ಅದರ ಮೇಲೆ ಮುದ್ರೆ‌ ಕೂಡ ಹಾಕುತ್ತೇವೆ,” ಎಂದು ವಿವರಿಸುತ್ತಾರೆ.

ಪ್ರತಿ ಚೆಂಡಿನ ಕೆಲಸ 20-25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. “ನಾವಿಬ್ಬರೂ ಸೇರಿ ಒಂದು ದಿನದಲ್ಲಿ 20 ಬಾಲ್‌ಗಳನ್ನು ತಯಾರಿಸುತ್ತೇವೆ. ಇದರಿಂದ 200 ರುಪಾಯಿ ಸಿಗುತ್ತದೆ,” ಎಂದು ರಂಜಿತ್ ಹೇಳುತ್ತಾರೆ.

ಈ ವೃತ್ತಿಯಲ್ಲಿ ಕೌಶಲ್ಯ ಮಾತ್ರವಲ್ಲ, ಜ್ಞಾನ ಮತ್ತು ಪ್ರತೀ ಅಂಶದ ಮೇಲೆ ಗಮನಹರಿಸುವುದೂ ಅಗತ್ಯ. ರಂಜಿತ್ ಕೆಲ ವರ್ಷಗಳಲ್ಲಿ ಸ್ವಲ್ಪ ಲಾಭವನ್ನೂ ಕಂಡಿದ್ದರು. ಅವರು ಕಾರ್ಖಾನಾದಲ್ಲಿ (ವರ್ಕ್‌ಶಾಪ್) ಪೋಲೋ ಬಾಲ್‌ಗಳನ್ನು ತಯಾರಿಸಲು ಪ್ರಾರಂಭಿಸಿದಾಗ, ಪ್ರತಿ ಪೀಸ್‌ಗೆ ಕೇವಲ 30 ಪೈಸೆ ಪಡೆಯುತ್ತಿದ್ದರು. 2015ರ ವೇಳೆಗೆ ಪ್ರತಿ ಪೀಸ್‌ಗೆ ನೀಡುವ ಸಂಬಳ 10 ರುಪಾಯಿಗೆ ಏರಿತ್ತು.

“ದಿಯೋಲ್‌ಪುರ್‌ನಿಂದ ಪ್ರತಿ ಚೆಂಡು 50 ರುಪಾಯಿಗೆ ಮಾರಾಟವಾಗುತ್ತಿತು," ಎಂದು ಅವರು ಹೇಳುತ್ತಾರೆ. ಕಲ್ಕತ್ತಾ ಪೋಲೋ ಕ್ಲಬ್ ವೆಬ್‌ಸೈಟ್‌ ನ ಮರ್ಚಂಡೈಸ್ ವಿಭಾಗ ಶಿಲ್ಪಕಾರರ ಪರಿಶ್ರಮದಿಂದ ಅಪಾರ ಲಾಭ ಗಳಿಸಿರುವ ಬಗ್ಗೆ ತಿಳಿಸುತ್ತದೆ.

ವೆಬ್‌ಸೈಟ್‌ನಲ್ಲಿ, ಚೆಂಡುಗಳನ್ನು "ವಿಶೇಷವಾಗಿ ಬಿದಿರಿನ ಚೆಂಡುಗಳನ್ನು ಪಶ್ಚಿಮ ಬಂಗಾಳದ ಗ್ರಾಮೋದ್ಯಮದ ಮೂಲಕ ತಯಾರಿಸಲಾಗಿದೆ," ಎಂದು ವಿವರಿಸಲಾಗಿದೆ. ಸದ್ಯ ಪ್ರತಿ ಚೆಂಡಿನ ಬೆಲೆ 150 ರುಪಾಯಿ, ಇದು ರಂಜಿತ್‌ರವರ ಸಂಬಳಕ್ಕಿಂತ 15 ಪಟ್ಟು ಹೆಚ್ಚು.

"ಒಂದೇ ಪೋಲೋ ಪಂದ್ಯಕ್ಕೆ 25-30ಕ್ಕಿಂತ ಹೆಚ್ಚು ಬಿದಿರಿನ ಚೆಂಡುಗಳು ಬೇಕಾಗಿದ್ದವು," ಎಂದು ವಿವರಿಸುತ್ತಾ, "ರೈಜೋಮ್ ನಿಸರ್ಗದತ್ತ ವಸ್ತು, ಆದ್ದರಿಂದ ಅದರ ತೂಕವೂ ಬದಲಾಗುತ್ತದೆ. ಪೋಲೋ ಪಂದ್ಯದ ಸಮಯದಲ್ಲಿ ಮ್ಯಾಲೆಟ್‌ನಿಂದ ಪದೇ ಪದೇ ಹೊಡೆದಾಗ ಅದು ಬೇಗನೇ ಆಕಾರವನ್ನು ಕಳೆದುಕೊಳ್ಳುತ್ತದೆ, ಇಲ್ಲವೇ ಬಿರುಕು ಬಿಡುತ್ತದೆ,” ಎನ್ನುತ್ತಾರೆ ಅವರು. ಇನ್ನೊಂದು ಕಡೆ ಫೈಬರ್‌ಗ್ಲಾಸ್‌ ಚೆಂಡುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ: "ಒಂದು ಪೋಲೋ ಪಂದ್ಯಕ್ಕೆ ಇಂತಹ ಮೂರರಿಂದ ನಾಲ್ಕು ಚೆಂಡುಗಳು ಮಾತ್ರ ಸಾಕು," ಎಂದು ರಂಜಿತ್ ಹೇಳುತ್ತಾರೆ.

A sack full of old bamboo rhizome balls (left).
PHOTO • Shruti Sharma
Minoti (right) demonstrating the task of glazing a polo ball with sand paper. 'Between housework, I used to do the smoothening and finishing,' she says
PHOTO • Shruti Sharma

ಹಳೆಯ ಬಿದಿರಿನ ರೈಜೋಮ್ ಚೆಂಡುಗಳಿಂದ ತುಂಬಿರುವ ಚೀಲ (ಎಡ). ಮಿನೋತಿ (ಬಲ) ಸ್ಯಾಂಡ್‌ ಪೇಪರ್‌ನಿಂದ ಪೋಲೋ ಚೆಂಡನ್ನು ನುಣುಪುಗೊಳಿಸುವ ಕೆಲಸವನ್ನು ತೋರಿಸುತ್ತಿದ್ದಾರೆ. 'ಮನೆಕೆಲಸದ ನಡುವೆ, ನಾನು ನುಣುಗೊಳಿಸುವ ಮತ್ತು ಫಿನಿಷಿಂಗ್‌ ಕೆಲಸವನ್ನು ಮಾಡುತ್ತಿದ್ದೆ,' ಎಂದು ಅವರು ಹೇಳುತ್ತಾರೆ

Left : Ranjit holds a cut rhizome and sits in position to undertake the task of chiselling.
PHOTO • Shruti Sharma
Right: The renda (palm-held file) is used to make the roundedness more precise
PHOTO • Shruti Sharma

ಎಡಕ್ಕೆ: ಉಳಿಯ ಕೆಲಸ ಮಾಡಲು ಕತ್ತರಿಸಿದ ಬೇರಿನ ಕಾಂಡವನ್ನು ಹಿಡಿದಿಕೊಂಡು ಕುಳಿತಿರುವ ರಂಜಿತ್. ಬಲ: ದುಂಡನೆಯನ್ನು ಇನ್ನಷ್ಟು ಚೆನ್ನಾಗಿ ಮಾಡಲು ರೆಂಡಾ (ಕೈಯಿಂದ ಬಳಸುವ ಅರ) ವನ್ನು ಬಳಸಲಾಗುತ್ತದೆ

1860ರ ದಶಕದ ಆರಂಭದಲ್ಲಿ ಕಲ್ಕತ್ತಾ ಪೊಲೊ ಕ್ಲಬ್ ಸ್ಥಾಪನೆಯಾದ ಮೇಲೆ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ದಿಯೋಲ್‌ಪುರ್‌ನಲ್ಲಿ ಪೋಲೊ ಬಾಲ್ ತಯಾರಿಕೆಗೆ ಒಂದು ಉತ್ತೇಜನ ಸಿಕ್ಕಿತು, ಆದರೆ ಈ ಚೆಂಡುಗಳಿಗೆ ಬೇಡಿಕೆ ಕಡಿಮೆಯಾದ ಕಾರಣ 2015ರ ವೇಳೆಗೆ ಕ್ಲಬ್‌ ಬಿದಿರಿನ ಚೆಂಡುಗಳನ್ನು ಖರೀದಿಸುವುದನ್ನು ನಿಲ್ಲಿಸಿತು.

*****

ರಂಜಿತ್‌ರವರಿಗೆ ಕ್ರೀಡೆ, ಕ್ರೀಡಾಸ್ಫೂರ್ತಿ ಹೊಸದೇನಲ್ಲ. ಅವರು ಹಳ್ಳಿಯಲ್ಲಿರುವ ಸ್ಪೋರ್ಟ್ಸ್ ಕ್ಲಬ್ ದಿಯೋಲ್‌ಪುರ್ ಪ್ರಗತಿ ಸಂಘದ ಪರವಾಗಿ ಫುಟ್‌ಬಾಲ್ ಮತ್ತು ಕ್ರಿಕೆಟ್ ಆಡಿದ್ದರು. ಆ ಕ್ಲಬ್ಬಿನ ಮೊದಲ ಕಾರ್ಯದರ್ಶಿಯೂ ಆಗಿದ್ದರು. ವೇಗದ ಬೌಲರ್ ಮತ್ತು ಡಿಫೆಂಡರ್ ಆಗಿ "ಖೂಬ್ ನಾಮ್ ಥಾ ಹಮಾರಾ ಗಾಂವ್ ಮೇ" [ನಾನು ಹಳ್ಳಿಯಲ್ಲಿ ಪ್ರಸಿದ್ಧಿ ಪಡೆದಿದ್ದೆ]," ಅವರು ನೆನಪಿಸಿಕೊಳ್ಳುತ್ತಾರೆ.

ಅವರು ಸುಭಾಷ್ ಬಾಗ್ ಒಡೆತನಕ್ಕೆ ಸೇರಿದ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ದಿಯೋಲ್‌ಪುರ್‌ಗೆ ಪೋಲೋ ಬಾಲ್‌ಗಳನ್ನು ತಯಾರಿಸುವ ಕರಕುಶಲತೆಯನ್ನು ಪರಿಚಯಿಸಿದ ಕೀರ್ತಿ ಅವರ ಅಜ್ಜನಿಗೆ ಸಲ್ಲುತ್ತದೆ. ಸದ್ಯ 55 ವರ್ಷ ಪ್ರಾಯದ ಸುಭಾಷ್ ಪೋಲೋ ಮತ್ತು ದಿಯೋಲ್‌ಪುರ್‌ ನಡುವೆ ಉಳಿದಿರುವ ಏಕೈಕ ಕೊಂಡಿ. ಆದರೆ ಅವರೂ ಈಗ ಪೋಲೋ ಮ್ಯಾಲೆಟ್‌ಗಳನ್ನು ತಯಾರಿಸಲು ಶುರುಮಾಡಿದ್ದಾರೆ.

ಅರ್ಧ ಶತಮಾನದ ಹಿಂದೆ ಪೋಲೋ ಬಾಲ್ ತಯಾರಿಕೆ ದಿಯೋಲ್‌ಪುರದ ನಿವಾಸಿಗಳ ಜೀವನೋಪಾಯದ ದಾರಿಯಾಗಿತ್ತು. "ಝರಿ-ರ್ ಕಾಜ್ [ಮೆಟಲ್-ಥ್ರೆಡ್ ಕಸೂತಿ ಕೆಲಸ], ಬೀಡಿ ಬಂಧ [ಬೀಡಿ ಕಟ್ಟುವುದು], ಪೋಲೋ ಬಾಲ್ ತಯಾರಿಕೆಯಲ್ಲಿ ನಮ್ಮನ್ನು ನಾವು ಉಳಿಸಿಕೊಳ್ಳಲು ಮತ್ತು ನಮ್ಮ ಮೂವರೂ ಮಕ್ಕಳನ್ನು ಬೆಳೆಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿ ನೋಡಿದ್ದೇವೆ" ಎಂದು ಮಿನೋತಿ ಹೇಳುತ್ತಾರೆ. “ಸೊಬ್ ಆಲ್ಪೊ ಪೊಯಿಸಾ-ರ್ ಕಾಜ್ ಚಿಲೊ. ಖೂಬ್ ಕೋಷ್ಟೋ ಹೋಯೆ ಚಿಲೋ [ಇವೆಲ್ಲವೂ ಕಡಿಮೆ ಸಂಬಳದ, ಹೆಚ್ಚು ದೈಹಿಕ ಶ್ರಮದ ಕೆಲಸಗಳು. ನಾವು ತುಂಬಾ ಕಷ್ಟಪಟ್ಟಿದ್ದೇವೆ]," ಎಂದು ರಂಜಿತ್ ಹೇಳುತ್ತಾರೆ.

"ಈಗ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಧುಲಾಘರ್ ಚೌರಸ್ತಾದ ಸಮೀಪದಲ್ಲಿ ಸಾಕಷ್ಟು ಕೈಗಾರಿಕೆಗಳಿವೆ," ದಿಯೋಲ್‌ಪುರದ ನಿವಾಸಿಗಳ ಕೈಯಲ್ಲಿ ಒಳ್ಳೆಯ ಉದ್ಯೋಗಗಳಿವೆ ಎಂದು ರಂಜಿತ್ ಸಂತೋಷಪಟ್ಟಿದ್ದಾರೆ. “ಪ್ರತಿ ಮನೆಯಲ್ಲೂ ಒಬ್ಬ ಈಗ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ. ಆದರೆ ಇನ್ನೂ ಕೆಲವರು ಮನೆಯಲ್ಲಿ ಝರಿ-ರ್ ಕಾಜ್ ಮಾಡುತ್ತಾರೆ,” ಎಂದು ಮಿನೋತಿ ಹೇಳುತ್ತಾರೆ.ದಿಯೋಲ್‌ಪುರದಲ್ಲಿ ಸುಮಾರು 3,253 ಜನರು ಗೃಹ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ (2011ರ ಜನಗಣತಿ).

ದಂಪತಿಗಳು ತಮ್ಮ ಕಿರಿಯ ಮಗ ಸೌಮಿತ್ (31) ಮತ್ತು ಸೊಸೆ ಸುಮೋನಾರೊಂದಿಗೆ ವಾಸಿಸುತ್ತಿದ್ದಾರೆ. ಸೌಮಿತ್ ಕೋಲ್ಕತ್ತಾ ಬಳಿಯ ಸಿಸಿಟಿವಿ ಕ್ಯಾಮೆರಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಸುಮೋನಾ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಅವಳಿಗೂ ಒಳ್ಳೆಯ ಉದ್ಯೋಗ ಸಿಗುವ ಖಾತರಿಯಿದೆ.

Left : Sumona, Ranjit and Minoti on the road from where Mal para (neighbourhood) begins. The localities in Deulpur are segregated on the basis of caste groups.
PHOTO • Shruti Sharma
Right : Now, there are better livelihood options for Deulpur’s residents in the industries that have come up closeby. But older men and women here continue to supplement the family income by undertaking low-paying and physically demanding zari -work
PHOTO • Shruti Sharma

ಎಡಕ್ಕೆ: ಮಾಲ್ ಪಾರಾ (ನೆರೆಹೊರೆ) ಪ್ರಾರಂಭವಾಗುವ ರಸ್ತೆಯಲ್ಲಿರುವ ಸುಮೋನಾ, ರಂಜಿತ್ ಮತ್ತು ಮಿನೋತಿ. ದಿಯೋಲ್‌ಪುರದ ಪ್ರದೇಶಗಳನ್ನು ಜಾತಿ ಸಮುದಾಯಗಳ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಬಲ: ಸದ್ಯ ಉತ್ತಮ ಜೀವನೋಪಾಯಕ್ಕಾಗಿ ಸಮೀಪವೇ ಆರಂಭವಾಗಿರುವ ಕೈಗಾರಿಕೆಗಳಲ್ಲಿ ದಿಯೋಲ್‌ಪುರದ ನಿವಾಸಿಗಳಿಗೆ ಒಳ್ಳೆಯ ಅವಕಾಶಗಳಿವೆ. ಆದರೆ ಇಲ್ಲಿನ ವಯಸ್ಸಾದ ಪುರುಷರು ಮತ್ತು ಮಹಿಳೆಯರು ಕಡಿಮೆ ಸಂಬಳದ, ಹೆಚ್ಚು ದೈಹಿಕ ಶ್ರಮದ ಝರಿ-ಕೆಲಸವನ್ನು ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ

*****

"ನನ್ನಂತಹ ಶಿಲ್ಪಕಾರರು ಈ ಕರಕುಶಲತೆಗಾಗಿ ತಮ್ಮದೆಲ್ಲವನ್ನೂ ನೀಡಿದ್ದಾರೆ, ಆದರೆ ಇದಕ್ಕೆ ಪ್ರತಿಯಾಗಿ ಪೋಲೋ ಆಟಗಾರರಿಂದ ಅಥವಾ ಸರ್ಕಾರದಿಂದ ಅವರು ಏನನ್ನೂ ಪಡೆಯಲಿಲ್ಲ" ಎಂದು ರಂಜಿತ್ ಹೇಳುತ್ತಾರೆ.

2013 ರಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಯುನೆಸ್ಕೋದ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲತೆಯನ್ನು ಅಭಿವೃದ್ಧಿಪಡಿಸಲು ರೂರಲ್ ಕ್ರಾಫ್ಟ್ ಹಬ್ ಯೋಜನೆ ಗಳನ್ನು ಪ್ರಾರಂಭಿಸಿತು. ಇಂದು ಇದರ ಪಾಲುದಾರಿಕೆ ಮೂರನೇ ಹಂತದಲ್ಲಿದೆ ಮತ್ತು ರಾಜ್ಯದಾದ್ಯಂತ 50,000 ಫಲಾನುಭವಿಗಳನ್ನು ಒಳಗೊಂಡಿದೆ. ಆದರೆ ಅವರಲ್ಲಿ ಒಬ್ಬನೇ ಒಬ್ಬ ಬಿದಿರಿನ ಪೊಲೊ ಚೆಂಡುಗಳನ್ನು ತಯಾರಿಸುವ ಕುಶಲಕರ್ಮಿಯಿಲ್ಲ.

“ನಮ್ಮ ಕರಕುಶಲತೆಯನ್ನು ಉಳಿಸಲು ಒತ್ತಾಯಿಸಿ 2017-18 ರಲ್ಲಿ ನಬನ್ನಾ [ರಾಜ್ಯ ಸರ್ಕಾರದ ಪ್ರಧಾನ ಕಚೇರಿ] ಗೆ ಹೋಗಿದ್ದೆವು. ನಾವು ನಮ್ಮ ಪರಿಸ್ಥಿತಿಯನ್ನು ಹೇಳಿಕೊಂಡೆವು, ಅರ್ಜಿಗಳನ್ನು ಸಲ್ಲಿಸಿದೆವು, ಆದರೆ ಅದರಿಂದ ಏನೂ ಪ್ರಯೋಜನ ಆಗಲಿಲ್ಲ,” ಎಂದು ರಂಜಿತ್ ಹೇಳುತ್ತಾರೆ. “ನಮ್ಮ ಆರ್ಥಿಕ ಸ್ಥಿತಿಗತಿ ಏನಾಗಬೇಕು? ನಾವು ಏನನ್ನು ತಿನ್ನಬೇಕು? ನಮ್ಮ ಕಸುಬು ಮತ್ತು ಜೀವನೋಪಾಯವೂ ಸತ್ತಿದೆ, ಎಂದು ನಾವು ಅವರನ್ನು ಕೇಳಿದೆವು,” ಎನ್ನುತ್ತಾರೆ ಅವರು.

"ಬಹುಶಃ ಪೋಲೋ ಬಾಲ್‌ಗಳು ನೋಡಲು ಸುಂದರವಾಗಿಲ್ಲ ಎಂಬುದೇ ಕೆಲವರಿಗೆ ದೊಡ್ಡ ವಿಷಯವಾಗಿತ್ತು," ಎನ್ನುತ್ತಾ ರಂಜಿತ್ ಒಂದು ಕ್ಷಣ ನಿಟ್ಟುಸಿರು ಬಿಟ್ಟು "...ನಮ್ಮ ಬಗ್ಗೆ ಯಾರೂ ಯೋಚಿಸಲಿಲ್ಲ," ಎಂದು ಖೇದದಿಂದ ಹೇಳಿದರು.

ಮಿನೋತಿಯವರು ಸ್ವಲ್ಪ ದೂರದಲ್ಲಿ ಅಡುಗೆಗೆ ಬಟಾ (ಸಿಹಿನೀರಿನ ಮೈನರ್ ಕಾರ್ಪ್) ಮೀನುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ರಂಜಿತ್ ಅವರ ಮಾತನ್ನು ಕೇಳುತ್ತಿದ್ದ ಅವರು, "ನಮ್ಮ ನಿರಂತರ ಶ್ರಮಕ್ಕೆ ಸ್ವಲ್ಪವಾದರೂ ಮನ್ನಣೆ ಸಿಗುವ ಭರವಸೆ ನನಗಿದೆ," ಎಂದು ಹೇಳಿದರು.

ಆದರೆ, ರಂಜಿತ್ ಅವರಲ್ಲಿ ಆ ಬರವಸೆ ಇಲ್ಲ. "ಕೆಲವು ವರ್ಷಗಳ ಹಿಂದೆ ಇಡೀ ಪೋಲೋ ಜಗತ್ತು ನಮ್ಮಂತ ಕುಶಲಕರ್ಮಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು. ಆದರೆ ಅದೂ ಈಗ ಇಲ್ಲ. ನಾವು ಅಳಿವಿನಂಚಿನಲ್ಲಿ ಇರುವ ಈ ಕರಕುಶಲತೆಗೆ ಸದ್ಯ ಉಳಿದಿರುವ ಪುರಾವೆಯೆಂದರೆ ನಾನೊಬ್ಬನೇ,” ಎಂದು ಅವರು ಹೇಳುತ್ತಾರೆ.

ಅನುವಾದ: ಚರಣ್ ಐವರ್ನಾಡು

Shruti Sharma

ଶ୍ରୁତି ଶର୍ମା ଜଣେ ଏମଏମଏଫ୍ ପରୀ ବ୍ୟକ୍ତିତ୍ୱ (୨୦୨୨-୨୦୨୩)। ସେ କୋଲକାତାର ସେଣ୍ଟର ଫର୍ ଷ୍ଟଡିଜ୍ ଇନ୍ ସୋସିଆଲ୍ ସାଇନ୍ସରେ ଭାରତରେ କ୍ରୀଡା ସାମଗ୍ରୀ ନିର୍ମାଣର ସାମାଜିକ ଇତିହାସ ସଂପର୍କରେ ପିଏଚଡି କରିବା ଦିଗରେ କାମ କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Shruti Sharma
Editor : Dipanjali Singh

ଦୀପାଞ୍ଜଳି ସିଂ ପିପୁଲ୍ସ ଆର୍କାଇଭ୍‌ ଅଫ୍‌ ରୁରାଲ ଇଣ୍ଡିଆର ସହାୟକ ସମ୍ପାଦିକା। ସେ ପରୀ ଲାଇବ୍ରେରୀ ପାଇଁ ଗବେଷଣା କରିବା ସହିତ ଦସ୍ତାବିଜ ପ୍ରସ୍ତୁତ କରିଥାନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Dipanjali Singh
Translator : Charan Aivarnad