ಸುನೀತಾ ಭುರ್ಕುಟೆ ಅವರ ಮನೆಮಾತು ಕೊಲಾಮಿ, ಆದರೆ ಈ ಹತ್ತಿ ಬೆಳೆಗಾರ ತನ್ನ ದೈನಂದಿನ ಚಟುವಟಿಕೆಯ ಹೆಚ್ಚಿನ ಸಮಯವನ್ನು ಮರಾಠಿಯಲ್ಲಿ ಮಾತನಾಡುತ್ತಾ ಕಳೆಯುತ್ತಾರೆ. "ನಾವು ಬೆಳೆದ ಹತ್ತಿಯನ್ನು ಮಾರಾಟ ಮಾಡಲು ನಮಗೆ ಮಾರುಕಟ್ಟೆ ಭಾಷೆ ತಿಳಿದಿರಬೇಕು" ಎಂದು ಅವರು ಹೇಳುತ್ತಾರೆ.
ಮಹಾರಾಷ್ಟ್ರದ ಯವತ್ ಮಳ್ ಜಿಲ್ಲೆಯಲ್ಲಿ ಬೆಳೆದ ಅವರು, ಕೊಲಾಮ್ ಆದಿವಾಸಿ ಕುಟುಂಬಕ್ಕೆ ಸೇರಿದವರು. ಮನೆಯಲ್ಲಿ ಕೊಲಾಮಿ ಭಾಷೆಯನ್ನು ಮಾತನಾಡುತ್ತಿದ್ದರು. ಸುರ್ ದೇವಿ ಪಾಡ್ (ಕುಗ್ರಾಮ) ನಲ್ಲಿರುವ ತನ್ನ ಮಹೆರ್ (ಜನ್ಮಸ್ಥಳ) ದಲ್ಲಿ ತನ್ನ ಹಿರಿಯರು ಸ್ಥಳೀಯ ಭಾಷೆಯಾದ ಮರಾಠಿಯಲ್ಲಿ ಮಾತನಾಡಲು ಕಷ್ಟಪಡುತ್ತಿದ್ದ ದಿನಗಳನ್ನು ಸುನೀತಾ ನೆನಪಿಸಿಕೊಳ್ಳುತ್ತಾರೆ. “ಅವರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಹರುಕು ಮುರುಕು ಭಾಷೆಯಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದರು” ಎಂದು ಅವರು ಹೇಳುತ್ತಾರೆ.
ನಂತರ ಕುಟುಂಬದ ಹೆಚ್ಚಿನ ಸದಸ್ಯರು ಹತ್ತಿ ಮಾರಾಟಕ್ಕಾಗಿ ಮಾರುಕಟ್ಟೆಗೆ ಹೋಗಲು ಆರಂಭಿಸಿದ ನಂತರ ಮರಾಠಿ ಅವರಿಗೆ ಅಭ್ಯಾಸವಾಯಿತು. ಇಂದು ಅವರ ಭುಲ್ಗಡ್ ಗ್ರಾಮದಲ್ಲಿರುವ ಪಾಡದಲ್ಲಿನ ಎಲ್ಲರೂ ಬಹು ಭಾಷಿಗರು – ಎಲ್ಲರೂ ಕೊಲಾಮ್ ಆದಿವಾಸಿ ಸಮುದಾಯಕ್ಕೆ ಸೇರಿದವರು – ಮರಾಠಿ, ಕೆಲವು ಹಿಂದಿ ಶಬ್ದಗಳ ಜೊತೆಗೆ ತಮ್ಮ ಮನೆ ಮಾತಾಗಿರುವ ಕೊಲಾಮಿ ಭಾಷೆಯನ್ನು ಮಾತನಾಡಬಲ್ಲರು.
ಕೊಲಾಮಿ ದ್ರಾವಿಡ ಭಾಷೆಯಾಗಿದ್ದು, ಇದನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಛತ್ತೀಸ್ ಗಢಗಳಲ್ಲಿ ಪ್ರಧಾನವಾಗಿ ಮಾತನಾಡಲಾಗುತ್ತದೆ. ಯುನೆಸ್ಕೋದ ಅಟ್ಲಾಸ್ ಆಫ್ ದಿ ವರ್ಲ್ಡ್ಸ್ ಲ್ಯಾಂಗ್ವೇಜಸ್ ಇನ್ ಡೇಂಜರ್ ಪ್ರಕಾರ, ಇದನ್ನು 'ಖಂಡಿತವಾಗಿಯೂ ಅಳಿವಿನಂಚಿನಲ್ಲಿರುವ' ಭಾಷೆ ಎಂದು ವರ್ಗೀಕರಿಸಲಾಗಿದೆ – ಮುಂದಿನ ಜನಾಂಗದ ಮಕ್ಕಳು ಇದನ್ನು ಮಾತೃಭಾಷೆಯಾಗಿ ಕಲಿಯುವುದಿಲ್ಲ ಎಂದು ಅದು ಹೇಳುತ್ತದೆ.
“ಫಣ ಅಮ್ಚಿ ಭಾಷಾ ಕಮಿ ಹೋತ್ ನಾಹಿ, ಅಮ್ಹಿ ವಾಪರ್ತಾತ್ [ಆದರೆ ನಮ್ಮ ಭಾಷೆ ಸಾಯುತ್ತಿಲ್ಲ, ನಾವು ಅದನ್ನು ಬಳಸುತ್ತಿದ್ದೇವೆ]!” ಎಂದು 40 ವರ್ಷದ ಸುನೀತಾ ವಾದಿಸುತ್ತಾರೆ.














