ಆದಿವಾಸಿಗಳನ್ನು ಕುರಿತ ಸಂಭಾಷಣೆಗಳು ಮತ್ತು ತನ್ನೊಳಗಿನ ಕಲಾವಿದನೊಂದಿಗೆ ಮಾತನಾಡುತ್ತಿವೆಯೋ ಎಂಬಂತೆ ಭಾಸವಾಗುತ್ತಿದ್ದ ಸಂಗೀತ ವಾದ್ಯಗಳೊಂದಿಗೆ ಸಂಬಲ್‌ಪುರದಲ್ಲಿ ಚಿತ್ರೀಕರಿಸಲ್ಪಟ್ಟ ಭುಖ ಎಂಬ ಚಿತ್ರವನ್ನು ವೀಕ್ಷಿಸಿದ ಕೃಷ್ಣ ಚಂದ್ರ ಬಾಘ್, ಅದನ್ನು ವೀಕ್ಷಿಸಿದ ದಿನದ ಬಗ್ಗೆ ಭಾವುಕರಾಗಿ ಹೀಗೆಂದರು: “ಈ ಕೈಗಳಿರುವುದೇ ಸಂಗೀತಕ್ಕಾಗಿ.”
ದಶಕಗಳ ನಂತರ, ಕೃಷ್ಣ, ಆ ಚಿತ್ರದ ಸಂಭಾಷಣೆಯೊಂದನ್ನು ಅಪ್ರಯತ್ನಪೂರ್ವಕವಾಗಿ ತಪ್ಪಿಲ್ಲದಂತೆ ನುಡಿದರು: “ನಮ್ಮ ಈ ಪ್ರಾಚೀನ ವೃತ್ತಿಯನ್ನು (ದುಲ್‌ದುಲಿ) ನಾವು ಬಿಡಲಾರೆವು. ನಮ್ಮ ತಂದೆಯಾಗಲಿ, ತಾತನಾಗಲಿ ಎಂದಿಗೂ ಕೂಲಿಗಾರರಾಗಿರಲಿಲ್ಲ.”
ಪ್ರದರ್ಶನಗಳಲ್ಲಿ, ಸಂಬಲ್‌ಪುರಿ ಜನರ ಜಾನಪದ ಪರಂಪರೆಯೆನಿಸಿದ ದುಲ್‌ದುಲಿಯಲ್ಲಿ, ಐದು ನಗಾರಿ ಮತ್ತು ನಾದವನ್ನು ಹೊರಡಿಸುವ ಸಂಗೀತವಾದ್ಯಗಳು ಸಮ್ಮಿಳಿತಗೊಳ್ಳುತ್ತವೆ. ಹೆಚ್ಚಿನ ಕೌಶಲ್ಯವುಳ್ಳ ಸಂಗೀತಗಾರರು ಮಾತ್ರವೇ ಇದರಲ್ಲಿ ಭಾಗವಹಿಸಲು ಸಾಧ್ಯ.
ಕೃಷ್ಣ ಅವರು ಹೀಗೆನ್ನುತ್ತಾರೆ: ನನ್ನಂತಹ ದುಲ್‌ದುಲಿ ಕಲಾಕಾರರಿಗೆ ನಾವು ಗುರುತಿಸಲ್ಪಟ್ಟಿದ್ದೇವೆಂಬ ಭಾವವನ್ನು ಮೂಡಿಸಿದ ಮೊದಲ ಚಿತ್ರಗಳಲ್ಲಿ ಭುಖ ಚಿತ್ರವೂ ಒಂದು. 50ರ ಪತ್ನಿ ಸುಕಂತಿ ಬಾಘ್ ಮತ್ತು ಮಗ ಕ್ಷಿತಿಷ್ ಬಾಘ್ ಅವರೊಡನೆ ಪಶ್ಚಿಮ ಒಡಿಶಾದ ಸಂಬಲ್‌ಪುರದಲ್ಲಿ ವಾಸಿಸುವ ಇವರು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಘಾಸಿಯಾ ಸಮುದಾಯವು ಸಂಗೀತ ವಾದ್ಯಗಳನ್ನು ತಯಾರಿಸುತ್ತದೆ. ಗಂಡಾ ಸಮುದಾಯದ ಜನರು ಅವನ್ನು ನುಡಿಸುತ್ತಾರೆ. ಈ ಎರಡೂ ಸಮುದಾಯಗಳು ಚರ್ಮದ ಕೆಲಸದಲ್ಲಿ ತೊಡಗುವುದರಿಂದ ಅವರನ್ನು ಅಪವಿತ್ರರೆಂದು ಪರಿಗಣಿಸಲಾಗುತ್ತದೆ. ಇವರಿಗೆ ಕೆಲಸವನ್ನು ದೊರಕಿಸಿಕೊಳ್ಳುವುದು ಕಷ್ಟ. ಹೀಗಾಗಿ ಇವರು, ನೃತ್ಯ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಘಾಸಿ ಮತ್ತು ಗಂಡಾ ಸುಮುದಾಯಗಳೆರಡನ್ನೂ ಒಡಿಶಾದಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿಮಾಡಲಾಗಿದೆ (ಜನಗಣತಿ 2011).
ಬಳಸಲ್ಪಡುವ ಐದು ಸಂಗೀತವಾದ್ಯಗಳಲ್ಲಿ, ಈ ಸಮುದಾಯಗಳು ಢೋಲ್ ಮತ್ತು ನಿಶಾನ್‌ಗಳನ್ನು ತಯಾರಿಸುತ್ತವೆ. ಈ ಡ್ರಮ್ ವಾದ್ಯಗಳ ತೊಗಲು ಪ್ರಾಣಿಯ ಚರ್ಮದಿಂದ ಮಾಡಲ್ಪಟ್ಟಿರುತ್ತದೆ. ನಿಶಾನ್‌ನ ಎರಡು ಪಾರ್ಶ್ವಗಳನ್ನು ಜಿಂಕೆಯ ಕೊಂಬುಗಳಿಂದ ಅಲಂಕರಿಸಲಾಗುತ್ತದೆ. ಈ ಸಂಗೀತ ವಾದ್ಯಗಳನ್ನು ಮಾಡಲು ಪ್ರಾಣಿಯ ಕಚ್ಚಾ ಅಥವಾ ಹದಮಾಡಿದ ತೊಗಲು ಮತ್ತು ಕೊಂಬುಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಪರಂಪರೆಯಿಂದಲೂ ಈ ಕೆಲಸಗಳನ್ನು ದಲಿತ ಸಮುದಾಯದವರು ನಿರ್ವಹಿಸುತ್ತಾರೆ.












