"ಮೊದಲ ದಿನ ಮಜಿದಾನ್ ನನ್ನ ಕೈಗೆ ಹೀಗೆ ಹೊಡೆದರು," ಎಂದು 65 ವರ್ಷ ಪ್ರಾಯದ ಖರ್ಸೇದ್ ಬೇಗಮ್ ತಮಾಷೆಯಿಂದ ಆ ಕ್ಷಣವನ್ನು ಅಭಿನಯಿಸುತ್ತಾ ಹೇಳುತ್ತಾರೆ. ಅವರ ಪಕ್ಕದಲ್ಲಿಯೇ ಕುಳಿತಿದ್ದ ಮಜಿದಾನ್ ಬೇಗಮ್, ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಾ ಹಳೆಯ ನೆನಪುಗಳನ್ನು ನೆನೆದು ಸಂತಸ ಪಡುತ್ತಾರೆ. “ಆರಂಭದಲ್ಲಿ ಖರ್ಸೇದ್‌ಗೆ ನೂಲಿನಲ್ಲಿ ಕೆಲಸ ಮಾಡುವುದು ಹೇಗೆಂದೇ ತಿಳಿದಿರಲಿಲ್ಲ. ಒಮ್ಮೆ ಮಾತ್ರ ನಾನು ಅವಳ ಕೈಗೆ ತಟ್ಟಿದೆ,” ಎಂದು ಅವರು ಹೇಳುತ್ತಾ, "ಆಮೇಲೆ ಅವಳು ಬೇಗ ಬೇಗನೆ ಕಲಿತಳು," ಎಂದು ಮಾತನ್ನು ಮುಂದುವರಿಸಿದರು.
ಪಂಜಾಬ್‌ನ ಭಟಿಂಡಾ ಜಿಲ್ಲೆಯ ಘಂಡಾ ಬನಾ ಎಂಬ ಹಳ್ಳಿಯ ವಯಸ್ಸಾಗಿರುವ ಮಹಿಳೆಯರಾದ ಮಜಿದಾನ್ ಮತ್ತು ಖರ್ಸೇದ್ ಅವರು ಹತ್ತಿ, ಸೆಣಬು ಮತ್ತು ಹಳೆಯ ಬಟ್ಟೆಗಳನ್ನು ನೇಯ್ಗೆ ಮಾಡಿ ತಯಾರಿಸುವ ಸಂಕೀರ್ಣವಾದ ಮತ್ತು ಸುಂದರವಾದ ಧುರ್ರಿಗಳಿಗೆ [ರಗ್ಗುಗಳಿಗೆ] ಖ್ಯಾತಿಯನ್ನು ಪಡೆದಿದ್ದಾರೆ.
"ನಾನು ನನ್ನ 35 ನೇ ವಯಸ್ಸಿನಲ್ಲಿ ಮಜಿದಾನ್‌ನಿಂದ ಧುರ್ರಿಗಳನ್ನು ನೇಯುವುದು ಹೇಗೆಂದು ಕಲಿತೆ," ಎಂದು ಖರ್ಸೇದ್ ಹೇಳುತ್ತಾರೆ. "ಅಂದಿನಿಂದ, ನಾವು ಇಬ್ಬರು ಒಟ್ಟಿಗೆ ಧುರ್ರಿಗಳನ್ನು ನೇಯುತ್ತಾ ಬಂದಿದ್ದೇವೆ," ಎಂದು 71 ವರ್ಷ ಪ್ರಾಯದ ಮಜಿದಾನ್ ಹೇಳುತ್ತಾರೆ. "ಇದು ಕೇವಲ ಒಬ್ಬಳೇ ಮಾಡುವ ಕೆಲಸವಲ್ಲ, ಇಬ್ಬರ ಕೆಲಸ ಇದರಲ್ಲಿದೆ," ಎಂದು ಅವರು ಹೇಳುತ್ತಾರೆ.
ಇಬ್ಬರು ಸಹೋದರರನ್ನು ಮದುವೆಯಾಗಿರುವ ಇವರು ಪರಸ್ಪರ ತಮ್ಮನ್ನು ಸಹೋದರಿಯರು, ಒಂದೇ ಕುಟುಂಬದ ಸದಸ್ಯರು ಎಂದು ಕರೆದುಕೊಳ್ಳುತ್ತಾರೆ. "ನಮಗೂ ನಿಜವಾದ ಸಹೋದರಿಯರಿಗೂ ವ್ಯತ್ಯಾಸವೇನು ಇಲ್ಲ," ಎಂದು ಖರ್ಸೇದ್‌ರವರು ಹೇಳುವಾಗ, "ನಮ್ಮ ಸ್ವಭಾವಗಳು ಸಂಪೂರ್ಣವಾಗಿ ತದ್ವಿರುದ್ಧವಾಗಿದ್ದರೂ ಕೂಡ," ಎಂದು ಮಜಿದಾನ್ ಮಧ್ಯೆ ಬಾಯಿ ಹಾಕುತ್ತಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತಾ ಖರ್ಸೇದ್, "ಅವಳು ತುಂಬಾ ಮಾತನಾಡುತ್ತಾಳೆ, ನಾನು ಮೌನವಾಗಿರುತ್ತೇನೆ,” ಎಂದು ಹೇಳುತ್ತಾರೆ.
ಗಂಟೆಗಳ ಕಾಲ ಈ ಧುರ್ರಿಗಳನ್ನು ನೇಯುವ ಕೆಲಸ ಮಾತ್ರವಲ್ಲದೇ, ಮಜಿದಾನ್ ಮತ್ತು ಖರ್ಸೇದ್‌ರವರು ಮನೆ ಸಹಾಯಕರಾಗಿ ಕೆಲಸ ಮಾಡಿ ತಿಂಗಳಿಗೆ ಕೆಲವು ಸಾವಿರ ರೂಪಾಯಿಗಳಷ್ಟು ಸಂಪಾದನೆ ಮಾಡಿ ತಮ್ಮ ಮನೆಯನ್ನು ನೋಡಿಕೊಳ್ಳುತ್ತಾರೆ. ಈ ಎರಡೂ ಕೆಲಸಗಳಿಗೆ ಹೆಚ್ಚಿನ ದೈಹಿಕ ಶ್ರಮವನ್ನು, ಅದರಲ್ಲೂ ಈ ವಯಸ್ಸಾದ ಹೆಂಗಸರು ಹೆಚ್ಚಿನ ಶ್ರಮವನ್ನು ಹಾಕಬೇಕು.


















