ಪನ್ನಾ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗುತ್ತಿದ್ದು, ಕೈತಾಬಾರೊ ಅಣೆಕಟ್ಟು ಪೂರ್ತಿಯಾಗಿ ತುಂಬಿದೆ. ಇದು ಹತ್ತಿರದ ಪನ್ನಾ ಹುಲಿ ಮೀಸಲು (ಪಿಟಿಆರ್) ಅರಣ್ಯದಲ್ಲಿರುವ ಬೆಟ್ಟಗಳಿಂದ ಹರಿಯುವ ನೀರು ಮಾರ್ಗ.
ಸುರೇನ್ ಆದಿವಾಸಿ ಸುತ್ತಿಗೆಯೊಂದಿಗೆ ಅಣೆಕಟ್ಟಿಗೆ ಆಗಮಿಸುತ್ತಾರೆ. ಅವರು ವೇಗವಾಗಿ ಹರಿಯುವ ನೀರನ್ನು ಎಚ್ಚರಿಕೆಯಿಂದ ನೋಡುತ್ತಾರೆ, ಯಾವುದೇ ಹೊಸ ಕಲ್ಲುಗಳು ಅಥವಾ ಅವಶೇಷಗಳು ಹರಿವನ್ನು ತಡೆಯುತ್ತಿದೆಯೇ ಎಂದು ಪರಿಶೀಲಿಸುತ್ತಾರೆ. ನೀರು ಸರಾಗವಾಗಿ ಹರಿಯುವಂತೆ ಮಾಡಲು ಅವರು ಸುತ್ತಿಗೆ ಬಳಸಿ ಒಂದೆರಡು ಕಲ್ಲನ್ನು ಒಡೆಯುತ್ತಾರೆ.
"ನೀರು ಸರಿಯಾಗಿ ಹರಿಯುತ್ತಿದೆಯೇ ಎಂದು ನೋಡಲು ಬಂದಿದ್ದೇನೆ" ಎಂದು ಅವರು ಪರಿಗೆ ತಿಳಿಸಿದರು. ನಂತರ "ಹೌದು, ಸರಿಯಾಗಿ ಹರಿಯುತ್ತಿದೆ" ಎನ್ನುತ್ತಾ ಬಿಲ್ಪುರ ಗ್ರಾಮದ ಈ ಸಣ್ಣ ರೈತ ತಲೆಯಾಡಿಸಿದರು, ಕೆಲವೇ ಮೀಟರ್ ಕೆಳಭಾಗದಲ್ಲಿರುವ ತನ್ನ ಭತ್ತದ ಬೆಳೆ ಒಣಗುವುದಿಲ್ಲ ಎನ್ನುವ ಸಮಾಧಾನ ಅವರಲ್ಲಿ ಕಾಣುತ್ತಿತ್ತು.
ಅವನ ಕಣ್ಣುಗಳು ಸಣ್ಣ ಅಣೆಕಟ್ಟಿನ ಮೇಲೆ ಹರಿದಂತೆ, "ಇದೊಂದು ದೊಡ್ಡ ಭಾಗ್ಯ. ಭತ್ತ ಬೆಳೆಯಬಹುದು, ಗೋಧಿಯನ್ನೂ ಬೆಳೆಯಬಹುದು. ಇದಕ್ಕೂ ಮೊದಲು ನಾನು ಇಲ್ಲಿರುವ ಒಂದು ಎಕರೆ ಭೂಮಿಗೆ ನೀರಾವರಿ ವ್ಯವಸ್ಥೆ ಮಾಡಲು ಮತ್ತು ಕೃಷಿ ಮಾಡಲು ಸಾಧ್ಯವಾಗಿರಲಿಲ್ಲ."
ಇದು ಬಿಲ್ಪುರದ ಜನರು ಅಣೆಕಟ್ಟು ಕಟ್ಟುವ ಮೂಲಕ ತಮಗೆ ತಾವೇ ಒಲಿಸಿಕೊಂಡ ಭಾಗ್ಯ.
ಸರಿಸುಮಾರು ಒಂದು ಸಾವಿರ ಜನರಿರುವ ಬಿಲ್ಪುರದಲ್ಲಿ ಹೆಚ್ಚು ಗೊಂಡ್ ಆದಿವಾಸಿ (ಪರಿಶಿಷ್ಟ ಪಂಗಡ) ರೈತರಿದ್ದಾರೆ, ಪ್ರತಿಯೊಬ್ಬರೂ ಕೆಲವು ಜಾನುವಾರುಗಳನ್ನು ಹೊಂದಿದ್ದಾರೆ. 2011ರ ಜನಗಣತಿಯಲ್ಲಿ ಗ್ರಾಮದಲ್ಲಿ ಕೇವಲ ಕೈಪಂಪ್ ಮತ್ತು ಬಾವಿ ಇದೆ ಎಂದು ದಾಖಲಿಸಲಾಗಿದೆ. ರಾಜ್ಯವು ಜಿಲ್ಲೆಯ ಸುತ್ತಮುತ್ತ ಕಲ್ಲುಗಳಿಂದ ಕೂಡಿದ ಕೊಳಗಳನ್ನು ನಿರ್ಮಿಸಿದೆ, ಆದರೆ ಸ್ಥಳೀಯರು ಇಲ್ಲಿ ಯಾವುದೇ ಜಲಾನಯನ ಪ್ರದೇಶವಿಲ್ಲ ಮತ್ತು "ಪಾನಿ ರುಕ್ತಾ ನಹೀ ಹೈ [ನೀರು ಉಳಿಯುವುದಿಲ್ಲ]" ಎಂದು ಹೇಳುತ್ತಾರೆ.








