ವಲಸೆ ಬಂದಿರುವ ಬಬನ್ ಅಕ್ಟೋಬರ್ ಮಧ್ಯದಿಂದ ಡಿಸೆಂಬರ್ ತನಕದ ಸಮಯವನ್ನು ಪಶ್ಚಿಮ ಬಂಗಾಳದಲ್ಲಿ ಕಳೆಯಲಿದ್ದು, ನಂತರ ಸ್ವಲ್ಪ ವಿರಾಮಕ್ಕಾಗಿ ಬಿಹಾರಕ್ಕೆ ಮರಳಲಿದ್ದಾರೆ. ಫೆಬ್ರವರಿಯಲ್ಲಿ, ಅವರು ಅಸ್ಸಾಂನ ಚಹಾ ಎಸ್ಟೇಟುಗಳಿಗೆ ತೆರಳುತ್ತಾರೆ. ಆ ಸಮಯದಲ್ಲಿ ಅಲ್ಲಿ ಚಹಾ ಎಲೆಗಳನ್ನು ಆರಿಸುವ ಹಂಗಾಮು ನಡೆಯುತ್ತಿರುತ್ತದೆ. ಮುಂದಿನ ಆರರಿಂದ ಎಂಟು ತಿಂಗಳುಗಳನ್ನು ಅವರು ಅಲ್ಲಿ ಕಳೆಯುತ್ತಾರೆ. "ಅಸ್ಸಾಂನಲ್ಲಿ ನಾನು ಹೋಗದ ಸ್ಥಳವಿಲ್ಲ... ದಿಬ್ರೂಘರ್, ತೇಜ್ಪುರ್, ತಿನ್ಸುಕಿಯಾ, ಗೋಲಾಘಾಟ್, ಜೋರಾಹಾಟ್, ಗುವಾಹಟಿ" ಎಂದು ಅವರು ದೊಡ್ಡ ಪಟ್ಟಣಗಳು ಮತ್ತು ನಗರಗಳ ಹೆಸರುಗಳನ್ನು ಹೇಳುತ್ತಾರೆ.
ಅಸ್ಸಾಮಿನಲ್ಲಿ ಅವರು ತಯಾರಿಸುವ ಬಿದಿರಿನ ಬುಟ್ಟಿಗಳನ್ನು ಧೋಕೊ ಎಂದು ಕರೆಯಲಾಗುತ್ತದೆ. ಡುಲಿಗೆ ಹೋಲಿಸಿದರೆ, ಡೋಕೊ ಎತ್ತರದಲ್ಲಿ ಬಹಳ ಚಿಕ್ಕದು - ಎಲ್ಲವೂ ಮೂರು ಅಡಿಗಳಷ್ಟು ಎತ್ತರ. ಟೀ ಎಲೆಗಳನ್ನು ಕೀಳುವಾಗ ಇವುಗಳನ್ನು ಬಳಸಲಾಗುತ್ತದೆ. ಅಲ್ಲಿ ಅವರು ತಿಂಗಳಿಗೆ 400 ಬುಟ್ಟಿಗಳನ್ನು ತಯಾರಿಸುತ್ತಾರೆ, ಕೆಲಸದಲ್ಲಿರುವಾಗ ಬೇಡಿಕೆಯನ್ನು ಸಲ್ಲಿಸುವ ಟೀ ತೋಟಗಳೇ ಅವರಿಗೆ ವಸತಿ ಮತ್ತು ಬಿದಿರನ್ನು ಒದಗಿಸುತ್ತವೆ.
"ಬಾನ್ಸ್ ಕಾ ಕಾಮ್ ಕಿಯಾ, ಗೋಬರ್ ಕಾ ಕಾಮ್ ಕಿಯಾ, ಮಾಟಿ ಕಾ ಕಾಮ್ ಕಿಯಾ, ಖೇತಿ ಮೇ ಕಾಮ್ ಕಿಯಾ, ಐಸ್ ಕ್ರೀಮ್ ಕಾ ಭಿ ಕಾಮ್ ಕಿಯಾ... [ಬಿದಿರಿನ ಕೆಲಸ ಮಾಡಿದ್ದೇನೆ, ಜೇಡಿಮಣ್ಣಿನ ಕೆಲಸ ಮಾಡಿದ್ದೇನೆ, ಹಸುವಿನ ಗೊಬ್ಬರ ತೆಗೆಯುವ ಕೆಲಸ ಮಾಡಿದ್ದೇನೆ, ಕೃಷಿ ಮಾಡುತ್ತಿದ್ದೇನೆ ಮತ್ತು ಜೀವನೋಪಾಯಕ್ಕಾಗಿ ಐಸ್ ಕ್ರೀಮ್ ಸಹ ಮಾರಾಟ ಮಾಡಿದ್ದೇನೆ.) ಎಂದು ಬಹುಮುಖ ಪ್ರತಿಭೆಯ ಬಬನ್ ತಾನು ವರ್ಷವಿಡೀ ಮಾಡುವ ಕೆಲಸವನ್ನು ವಿವರಿಸುತ್ತಾ ಹೇಳುತ್ತಾರೆ.
ಅಸ್ಸಾಮಿನಲ್ಲಿ ಬುಟ್ಟಿಗೆ ಬೇಡಿಕೆ ಕಡಿಮೆಯಾದರೆ, ಅವರು ರಾಜಸ್ಥಾನ ಅಥವಾ ದೆಹಲಿಗೆ ಹೋಗಿ ಬೀದಿ ವ್ಯಾಪಾರಿಯಾಗಿ ಐಸ್ ಕ್ರೀಮ್ ಮಾರುತ್ತಾರೆ. ಅವರ ಊರಿನ ಹಲವರು ಈ ರೀತಿ ವ್ಯಾಪಾರದಲ್ಲಿ ತೊಡಗಿದ್ದು, ಅಗತ್ಯವಿದ್ದಾಗ ಹೋಗಿ ಇವರು ಅವರನ್ನು ಸೇರಿಕೊಳ್ಳುತ್ತಾರೆ. "ರಾಜಸ್ಥಾನ, ದೆಹಲಿ, ಅಸ್ಸಾಂ, ಬಂಗಾಳ - ನನ್ನ ಇಡೀ ಜೀವನವನ್ನು ಈ ಸ್ಥಳಗಳ ನಡುವೆ ಕಳೆದಿದ್ದೇನೆ" ಎಂದು ಅವರು ಹೇಳುತ್ತಾರೆ.