ಎದೆ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಬಗ್ಗೆ ವಿಚಾರಿಸಲು 18 ವರ್ಷದ ಸುಮಿತ್ (ಹೆಸರು ಬದಲಾಯಿಸಲಾಗಿದೆ) ಮೊದಲ ಬಾರಿಗೆ ಹರಿಯಾಣದ ರೋಹ್ಟಕ್ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಹೋದಾಗ, ಅವರಿಗೆ ಸುಟ್ಟ ಗಾಯದ ರೋಗಿಯಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಯಿತು.
ಆದರೆ ಅದೊಂದು ಸುಳ್ಳಾಗಿತ್ತು. ಟ್ರಾನ್ಸ್‌ಜೆಂಡರ್ ಸಮುದಾಯವು ಭಾರತದಲ್ಲಿ ತಮ್ಮ ಜನ್ಮದತ್ತ ದೇಹದಿಂದ ತಾವು ಬಯಸಿದ ದೇಹಕ್ಕೆ ಪರಿವರ್ತನೆ ಹೊಂದಲು ಬಯಸಿದಲ್ಲಿ ಬಹಳಷ್ಟು ವೈದ್ಯಕೀಯ-ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆ ಸುಳ್ಳು ಸಹ ಅಂದು ಕೆಲಸ ಮಾಡಿರಲಿಲ್ಲ.
ಸುಮಿತ್‌ಗೆ ಅಂತಿಮವಾಗಿ 'ಟಾಪ್ ಸರ್ಜರಿ' (ಸ್ತನವನ್ನು ತೆಗೆಸುವ ಶಸ್ತ್ರ ಚಿಕಿತ್ಸೆಗೆ ಈ ಹೆಸರಿದೆ) ಗೆ ಒಳಗಾಗಲು ಇನ್ನೂ ಎಂಟು ವರ್ಷಗಳ ಕಾಲ ದಾಖಲೆಗಳು, ಅಂತ್ಯವಿಲ್ಲದ ಮಾನಸಿಕ ಮೌಲ್ಯಮಾಪನಗಳು, ವೈದ್ಯಕೀಯ ಸಮಾಲೋಚನೆಗಳು ಎಂದು ಓಡಾಡಬೇಕಾಯಿತು. ಜೊತೆಗೆ ಸಾಲಗಳು ಸೇರಿದಂತೆ ಒಂದು ಲಕ್ಷ ರೂಪಾಯಿಯಷ್ಟು ಹಣ, ಹದಗೆಟ್ಟ ಕೌಟುಂಬಿಕ ಸಂಬಂಧಗಳು ಮತ್ತು ತನ್ನ ಸ್ತನಗಳ ಕುರಿತಾದ ಬೇಸರವೂ ಇತ್ತು. ಕೊನೆಗೆ ಅವರು ಸರ್ಜರಿ ಮಾಡಿಸಿಕೊಂಡಿದ್ದು ರೋಹ್ಟಕ್ ನಗರದಿಂದ 100 ಕಿಲೋಮೀಟರ್ ದೂರದ ಹಿಸ್ಸಾರ್ ಎನ್ನುವಲ್ಲಿ.
ಸರ್ಜರಿ ಮಾಡಿಸಿಕೊಂಡು ಒಂದೂವರೆ ವರ್ಷ ಕಳೆದ ನಂತರವೂ 26 ವರ್ಷದ ಸುಮಿತ್ ಸ್ತನವಿದ್ದ ಕಾಲದ ನಾಚಿಕೆ ಮತ್ತು ಆತಂಕವನ್ನು ಮರೆತಿಲ್ಲ. ಅವರು ಈಗಲೂ ನಡೆಯುವಾಗ ತೋಳುಗಳನ್ನು ಕುಗ್ಗಿಸಿಕೊಂಡು ನಡೆಯುತ್ತಾರೆ.
ಸುಮಿತ್ ರೀತಿಯಲ್ಲಿ ಭಾರತದಲ್ಲಿ ಎಷ್ಟು ಜನರು ತಮ್ಮ ಜನ್ಮದತ್ತ ಲಿಂಗಕ್ಕಿಂತ ಭಿನ್ನ ಲಿಂಗದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇತ್ತೀಚಿನ ಗಣತಿ ಲಭ್ಯವಿಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಹಯೋಗದೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, 2017ರಲ್ಲಿ ಭಾರತದಲ್ಲಿ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಸಂಖ್ಯೆ 4.88 ಲಕ್ಷ.
2014ರಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು. ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ "ತೃತೀಯ ಲಿಂಗಿ" ಜನರು ಮತ್ತು ಅವರ "ಸ್ವಯಂ-ಗುರುತಿಸಿಕೊಳ್ಳಲಿಚ್ಛಿಸುವ" ಲಿಂಗದೊಂದಿಗೆ ಗುರುತಿಸಿಕೊಳ್ಳುವ ಅವರ ಹಕ್ಕನ್ನು ಗುರುತಿಸಿತು ಮತ್ತು ಅವರಿಗೆ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ನಿರ್ದೇಶನ ನೀಡಿತು. ಐದು ವರ್ಷಗಳ ನಂತರ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಲಿಂಗ-ದೃಢೀಕರಿಸುವ ಶಸ್ತ್ರಚಿಕಿತ್ಸೆಗಳು, ಹಾರ್ಮೋನ್ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ಸೇವೆಗಳಂತಹ ಸಮಗ್ರ ಆರೋಗ್ಯ ಸೇವೆಗಳನ್ನು ಸಮುದಾಯಕ್ಕೆ ಒದಗಿಸುವಲ್ಲಿ ಸರ್ಕಾರಗಳ ಪಾತ್ರವನ್ನು ಮತ್ತೆ ಒತ್ತಿಹೇಳಿತು.
ಈ ಶಾಸನಾತ್ಮಕ ಬದಲಾವಣೆಗಳಿಗೆ ಮುಂಚಿನ ವರ್ಷಗಳಲ್ಲಿ, ಅನೇಕ ಟ್ರಾನ್ಸ್ ವ್ಯಕ್ತಿಗಳಿಗೆ ಲಿಂಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅವಕಾಶವನ್ನು ನಿರಾಕರಿಸಲಾಗಿತ್ತು (ಲಿಂಗ-ಪರಿವರ್ತನೆ ಶಸ್ತ್ರಚಿಕಿತ್ಸೆ ಅಥವಾ ಲಿಂಗ-ದೃಢೀಕರಣ ಶಸ್ತ್ರಚಿಕಿತ್ಸೆ ಎಂದೂ ಕರೆಯಲಾಗುತ್ತದೆ), ಇದರಲ್ಲಿ ಮುಖದ ಶಸ್ತ್ರಚಿಕಿತ್ಸೆ, ಮತ್ತು ಎದೆ ಅಥವಾ ಜನನಾಂಗದ ಮೇಲಿನ ಸರ್ಜರಿಗಳನ್ನು ಒಳಗೊಂಡ 'ಬಾಟಮ್' ಅಥವಾ 'ಟಾಪ್' ಶಸ್ತ್ರಚಿಕಿತ್ಸೆ ಸೇರಿವೆ.
ಮೊದಲ ಎಂಟು ವರ್ಷಗಳ ಕಾಲ ಮತ್ತು 2019ರ ನಂತರವೂ ಅಂತಹ ಶಸ್ತ್ರಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದವರಲ್ಲಿ ಸುಮಿತ್ ಕೂಡ ಒಬ್ಬರು.
ಹರಿಯಾಣದ ರೋಹ್ಟಕ್ ಜಿಲ್ಲೆಯ ದಲಿತ ಕುಟುಂಬದಲ್ಲಿ ಹೆಣ್ಣಾಗಿ ಜನಿಸಿದ ಸುಮಿತ್ ಅವರಿಗೆ ಮೂವರು ಒಡಹುಟ್ಟಿದವರಿದ್ದರು. ಸುಮಿತ್ ತನ್ನ ಒಡಹುಟ್ಟಿದವರ ಜವಬ್ದಾರಿಯನ್ನು ಹೆಗಲ ಮೇಲೆ ಹೊರಬೇಕಿತ್ತು. ಕುಟುಂಬದಲ್ಲಿ ಸರ್ಕಾರಿ ಉದ್ಯೋಗ ಪಡೆದವರಲ್ಲಿ ಮೊದಲ ತಲೆಮಾರಿನವರಾಗಿದ್ದ ಅವರ ತಂದೆ ಬಹುತೇಕ ಕುಟುಂಬದಿಂದ ದೂರವೇ ಉಳಿದಿದ್ದರು. ಅವರ ಹೆತ್ತವರ ಸಂಬಂಧ ಬಿಗಡಾಯಿಸಿತ್ತು. ದಿನಗೂಲಿ ಮಾಡಿ ಅವರನ್ನು ಪೋಷಿಸುತ್ತಿದ್ದ ಅಜ್ಜ, ಅಜ್ಜಿ ಸುಮಿತ್ ಚಿಕ್ಕವರಿರುವಾಗಲೇ ತೀರಿಕೊಂಡಿದ್ದರು. ಸುಮಿತ್ ಮೇಲೆ ಬಿದ್ದ ಗಣನೀಯ ಕೌಟುಂಬಿಕ ಜವಾಬ್ದಾರಿಗಳು ಮನೆಯ ಹಿರಿಯ ಮಗಳು ಆರೈಕೆ ಮಾಡುವ ಕರ್ತವ್ಯಗಳನ್ನು ಪೂರೈಸುತ್ತಾಳೆ ಎಂಬ ಜನರ ಗ್ರಹಿಕೆಯೊಂದಿಗೆ ಹೊಂದಿಕೆಯಾಯಿತು. ಆದರೆ ಅದು ಸುಮಿತ್ ಬಯಸಿದ್ದ ಗುರುತಿನೊಂದಿಗೆ ಹೊಂದಿಕೆಯಾಗಲಿಲ್ಲ. "ಒಬ್ಬ ಗಂಡಸಾಗಿ ನಾನು ಆ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದ್ದೇನೆ" ಎಂದು ಅವರು ಹೇಳುತ್ತಾರೆ.
ಮೂರು ವರ್ಷದವರಾಗಿದ್ದಾಗಲೂ ತನಕ ಫ್ರಾಕ್ ತೊಡಲು ಉಂಟಾಗುತ್ತಿದ್ದ ಆತಂಕದ ಕುರಿತು ಸುಮಿತ್ ನೆನಪಿಸಿಕೊಳ್ಳುತ್ತಾರೆ. ಅದೃಷ್ಟವಶಾತ್ ಕ್ರೀಡಾ ವಾತಾವರಣ ಹೆಚ್ಚಿರುವ ಹರ್ಯಾಣದಲ್ಲಿ ಹೆಣ್ಣು ಮಕ್ಕಳಿಗೆ ಜೆಂಡರ್ ನ್ಯೂಟ್ರಲ್ ಆದ, ಗಂಡು ಮಕ್ಕಳ ಹಾಗೂ ಸ್ಪೋರ್ಟ್ ಬಟ್ಟೆಗಳನ್ನು ಧರಿಸುವ ವಾತಾವರಣವಿತ್ತು. ”ನಾನು ಸಣ್ಣವನಿದ್ದಾಗಿನಿಂದಲೂ ನನಗೆ ಬೇಕನ್ನಿಸಿದ ಬಟ್ಟೆಯನ್ನೇ ತೊಡುತ್ತಿದ್ದೆ. ನನ್ನ [ಟಾಪ್] ಸರ್ಜರಿಗೂ ಮೊದಲೇ ನಾನು ಗಂಡಿನಂತೆ ಬದುಕುತ್ತಿದ್ದೆ” ಎನ್ನುವ ಸುಮಿತ್ ಅವರಿಗೆ ಆಗಲೂ ಏನೋ ಕೊರತೆಯೊಂದು ಕಾಡುತ್ತಿತ್ತು.
13ನೇ ವಯಸ್ಸಿನಲ್ಲಿ ಸುಮಿತ್ ಅವರಿಗೆ ತನ್ನ ಭೌತಿಕ ದೇಹವೂ ಗಂಡಿನಂತೆ ತನ್ನ ಭಾವನೆಗಳೊಂದಿಗೆ ಹೊಂದಿಕೊಳ್ಳಬೇಕು ಎನ್ನಿಸತೊಡಗಿತು. “ಆಗ ನಾನು ತೆಳ್ಳಗಿನ ದೇಹವನ್ನು ಹೊಂದಿದ್ದೆ.ಸ್ಥನವೂ ದೊಡ್ಡದಾಗಿ ಮೂಡಿರಲಿಲ್ಲ. ಆದರೆ ಕಿರಿಕಿರಿ ಎನ್ನಿಸಲು ಅಷ್ಟೇ ಸಾಕಿತ್ತು” ಎಂದು ಹೇಳುತ್ತಾರವರು. ತನ್ನ ಅನಿಸಿಕೆಗಳ ಹೊರತಾಗಿಯೂ ತನಗೆ ಆಗುತ್ತಿದ್ದ ಇರಿಸುಮುರಿಸನ್ನು ವಿವರಿಸಬಹುದಾದ ಯಾವುದೇ ಮಾಹಿತಿ ಅವರ ಬಳಿಯಿರಲಿಲ್ಲ. (ಜೈವಿಕ ಲಿಂಗ ಮತ್ತು ತಮ್ಮ ಲಿಂಗ ಗುರುತಿನ ನಡುವಿನ ವ್ಯತ್ಯಾಸದಿಂದ ಒಬ್ಬ ವ್ಯಕ್ತಿ ಇಂತಹ ಅಸಮಾಧಾನವನ್ನು ಹೊಂದಿರುವ ಸಾಧ್ಯತೆ ಇರುತ್ತದೆ.)
ಆಗ ಒಬ್ಬ ಸ್ನೇಹಿತೆ ಅವರ ಸಹಾಯಕ್ಕೆ ಬಂದರು.
ಆ ಸಮಯದಲ್ಲಿ ಸುಮಿತ್ ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಆ ಮನೆಯ ಮಾಲೀಕರ ಮಗಳೊಂದಿಗೆ ಸ್ನೇಹ ಬೆಳೆಸಿದ್ದರು. ಅವಳು ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದಳು. ಈ ಗೆಳತಿ ಸ್ತನ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಕಂಡುಹಿಡಿಯಲು ಅವರಿಗೆ ಸಹಾಯ ಮಾಡಿದಳು. ನಿಧಾನವಾಗಿ, ಶಾಲೆಯಲ್ಲಿ ಸುಮಿತ್ ವಿವಿಧ ಮಟ್ಟದ ಇರಿಸುಮುರಿಸನ್ನು ಅನುಭವಿಸಿದ ಇತರ ಟ್ರಾನ್ಸ್ ಹುಡುಗರ ಸಮುದಾಯದ ಪರಿಚಯ ಹೊಂದಿದರು. ಆಗ ಹದಿ ಹರೆಯದಲ್ಲಿದ್ದ ಅವರು ಆಸ್ಪತ್ರೆಗೆ ಹೋಗುವ ಮೊದಲು ಕೆಲವು ವರ್ಷಗಳ ಕಾಲ ಈ ಕುರಿತು ಮಾಹಿತಿ ಸಂಗ್ರಹಿಸತೊಡಗಿದರು.
2014ರಲ್ಲಿ, 18 ವರ್ಷದ ಸುಮಿತ್ ತನ್ನ ಮನೆಯ ಹತ್ತಿರದ ಬಾಲಕಿಯರ ಶಾಲೆಯಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದರು. ಅವರ ತಂದೆ ಕೆಲಸಕ್ಕೆ ಹೋಗಿದ್ದರು, ತಾಯಿ ಮನೆಯಲ್ಲಿ ಇರಲಿಲ್ಲ. ಅವರನ್ನು ತಡೆಯಬಲ್ಲವರು, ಪ್ರಶ್ನಿಸಬಲ್ಲವರು ಅಥವಾ ಅವರಿಗೆ ಸಹಾಯ ಮಾಡಬಲ್ಲವರು ಯಾರೂ ಇದ್ದಿರದ ಕಾರಣ ಅವರೊಬ್ಬರೇ ಹೋಹ್ಟಕ್ ನಗರದ ಆಸ್ಪತ್ರೆಗೆ ಹೋಗಿ ಹಿಂಜರಿಕೆಯಿಂದಲೇ ಸ್ತನ ತೆಗೆಸುವ ಪ್ರಕ್ರಿಯೆಯ ಕುರಿತು ವಿಚಾರಿಸಿದರು.
ಈ ವಿಷಯದಲ್ಲಿ ಅವರು ಪಡೆದ ಪ್ರತಿಕ್ರಿಯೆಗಳು ಎದ್ದು ಕಾಣುವಂತಿವೆ.
ಅವರಿಗೆ ಮೊದಲಿಗೆ ಸುಟ್ಟ ಗಾಯಗಳ ರೋಗಿಯಾಗಿ ದಾಖಲಾಗುವ ಮೂಲಕ ಬ್ರೆಸ್ಟ್ ರೀಕನ್ಸ್ಟ್ರಕ್ಷನ್ ಸರ್ಜರಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಸುಟ್ಟಗಾಯಗಳ ವಿಭಾಗದ ಮೂಲಕ ರಸ್ತೆ ಅಪಘಾತ ಪ್ರಕರಣಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಸುವುದು ಅಸಾಮಾನ್ಯವೇನಲ್ಲ. ಆದರೆ ಸುಮಿತ್ ಅವರನ್ನು ಕಾಗದದ ಮೇಲೆ ಮಲಗುವಂತೆ ಮತ್ತು ಸುಟ್ಟ ಗಾಯಗಳ ರೋಗಿಯಾಗಿ ನೋಂದಾಯಿಸಿಕೊಳ್ಳುವಂತೆ ಸ್ಪಷ್ಟವಾಗಿ ಕೇಳಲಾಯಿತು, ಅವರು ನಿಜವಾಗಿಯೂ ಬಯಸಿದ ಶಸ್ತ್ರಚಿಕಿತ್ಸೆಯ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತನ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಸುಟ್ಟಗಾಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಅಂತಹ ವಿನಾಯಿತಿಯ ಕುರಿತು ಯಾವುದೇ ನಿಯಮವು ಸೂಚಿಸದಿದ್ದರೂ, ಅವರು ಸರ್ಜರಿಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ಅವರಿಗೆ ತಿಳಿಸಲಾಯಿತು.
ಮುಂದಿನ ಒಂದೂವರೆ ವರ್ಷಗಳನ್ನು ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಕಳೆಯಲು ಸುಮಿತ್ ಗೆ ಇದು ಸಾಕಷ್ಟು ಕಾರಣ ಮತ್ತು ಭರವಸೆಯಾಗಿತ್ತು. ಆದರೆ ಈ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಹಣದ ಖರ್ಚು ಇರುತ್ತದೆನ್ನುವುದು ಅವರಿಗೆ ನಂತರ ತಿಳಿಯಿತು.
“ಅಲ್ಲಿನ ಡಾಕ್ಟರುಗಳ ಬಹಳಷ್ಟು ಜಡ್ಜಮೆಂಟಲ್ ಆಗಿದ್ದರು. ಅವರು ನನಗೆ ಭ್ರಮೆ ಕಾಡುತ್ತಿದೆ ಎನ್ನುತ್ತಿದ್ದರು. ಅವರು ʼನೀನು ಯಾಕೆ ಸರ್ಜರಿ ಮಾಡಿಸಿಕೊಳ್ಳುತ್ತಿರುವೆʼ, ʼನೀನು ಈಗ ಇರುವಂತೆಯೇ ಬಯಸಿದ ಹುಡುಗಿಯರ ಜೊತೆ ಇರಬಹುದುʼ ಎಂದೆಲ್ಲ ಹೇಳುತ್ತಿದ್ದರು. ಅವರಲ್ಲಿ ಆರೇಳು ಜನರು ನನ್ನ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದರೆ ನಾನು ಹೆದರಿ ಹೋಗುತ್ತಿದ್ದೆ” ಎಂದು ಸುಮಿತ್ ನೆನಪಿಸಿಕೊಳ್ಳುತ್ತಾರೆ.
"ಎರಡು-ಮೂರು ಬಾರಿ 500-700 ಪ್ರಶ್ನೆಗಳನ್ನು ಹೊಂದಿರುವ ಅರ್ಜಿಗಳನ್ನು ಭರ್ತಿ ಮಾಡಿದ್ದು ನನಗೆ ಈಗಲೂ ನೆನಪಿದೆ." ಪ್ರಶ್ನೆಗಳು ರೋಗಿಯ ವೈದ್ಯಕೀಯ ಮತ್ತು ಕೌಟುಂಬಿಕ ಇತಿಹಾಸ, ಮಾನಸಿಕ ಸ್ಥಿತಿ ಮತ್ತು ವ್ಯಸನಗಳಿಗೆ ಸಂಬಂಧಿಸಿದಂತೆ ಇರುತ್ತವೆ. ಆದರೆ ಯುವಕರಾಗಿದ್ದ ಸುಮಿತ್ ಅವರಿಗೆ ಅದು ನಿರಾಕರಣೆಯಂತೆ ಕಂಡಿತ್ತು. "ನನಗೆ ನನ್ನ ದೇಹದ ಕುರಿತು ಸಂತೋಷವಿಲ್ಲ ಅದಕ್ಕಾಗಿಯೇ ನಾನು ಸರ್ಜರಿ ಮಾಡಿಸಿಕೊಳ್ಳಲು ಬಯಸುತ್ತಿದ್ದೇನೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ” ಎನ್ನುತ್ತಾ ಅವರು ಮಾತು ಮುಗಿಸಿದರು.
ಸಹಾನುಭೂತಿಯ ಕೊರತೆ ಒಂದೆಡೆಯಾದರೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳ (ಜಿಎಎಸ್/ಜೆಂಡರ್ ರೀ ಅಸೈನ್‌ಮೆಂಟ್ ಸರ್ಜರಿ) ಮೂಲಕ ತಮ್ಮ ದೈಹಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಬಯಸಿದಲ್ಲಿ ಟ್ರಾನ್ಸ್ ಸಮುದಾಯಕ್ಕೆ ಅದಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಕೌಶಲಗಳ ಕೊರತೆ ಆಗಲೂ ಇತ್ತು ಮತ್ತು ಈಗಲೂ ಇದೆ.
ಗಂಡಿನಿಂದ ಹೆಣ್ಣಾಗಿ ಪರಿವರ್ತನೆ ಹೊಂದಲು ಎರಡು ಪ್ರಮುಖ ಸರ್ಜರಿಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ (ಬ್ರೆಸ್ಟ್ ಇಂಪ್ಲಾಂಟ್ ಮತ್ತು ವ್ಯಾಜಿನೋಪ್ಲಾಸ್ಟಿ/ಸ್ಥನ ಮತ್ತು ಯೋನಿ ಆಳವಡಿಕೆ). ಆದರೆ ಹೆಣ್ಣಿನಿಂದ ಗಂಡಾಗಿ ಪರಿವರ್ತನೆ ಹೊಂದಲು ಬಹಳಷ್ಟು ಪ್ರಕ್ರಿಯೆಗಳಿವೆ. ಇದಕ್ಕಾಗಿ ಅವರು ಏಳು ಮೇಜರ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ಮೊದಲನೆಯದು, ದೇಹದ ಮೇಲ್ಭಾಗ ಅಥವಾ 'ಟಾಪ್' ಶಸ್ತ್ರಚಿಕಿತ್ಸೆಯು ಎದೆಯ ಪುನರ್ನಿರ್ಮಾಣ ಅಥವಾ ಸ್ತನ ತೆಗೆಯುವಿಕೆಯನ್ನು ಒಳಗೊಂಡಿರುತ್ತದೆ.
"ನಾನು ವಿದ್ಯಾರ್ಥಿಯಾಗಿದ್ದಾಗ [ಸುಮಾರು 2012] [ವೈದ್ಯಕೀಯ] ಪಠ್ಯಕ್ರಮದಲ್ಲಿ ಅಂತಹ ಸರ್ಜರಿಗಳನ್ನು ಉಲ್ಲೇಖಿಸಲಾಗಿರಲಿಲ್ಲ. ನಮ್ಮ ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಿಸಿದ್ದ ಪಠ್ಯಕ್ರಮದಲ್ಲಿ ಕೆಲವು ಶಿಶ್ನ ಪುನರ್ನಿರ್ಮಾಣ ಸರ್ಜರಿಯ ಕುರಿತು ಪಾಠವನ್ನು ಹೊಂದಿತ್ತು, [ಆದರೆ] ಅದು ಗಾಯಗಳು ಮತ್ತು ಅಪಘಾತಗಳ ಸಂದರ್ಭದಲ್ಲಿ ಮಾಡಿಸುವಂತಹದ್ದು. ಆದರೆ ಈಗ ಪರಿಸ್ಥಿತಿ ಬದಲಾಗಿದೆ" ಎಂದು ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಉಪಾಧ್ಯಕ್ಷ ಡಾ.ಭೀಮ್ ಸಿಂಗ್ ನಂದಾ ನೆನಪಿಸಿಕೊಳ್ಳುತ್ತಾರೆ.
2019ರ ಟ್ರಾನ್ಸ್‌ಜೆಂಡರ್ ಪರ್ಸನ್ಸ್ ಆಕ್ಟ್ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಅಗತ್ಯವಿರುವ ವೈದ್ಯಕೀಯ ಪಠ್ಯಕ್ರಮ ಮತ್ತು ಸಂಶೋಧನೆಗಳ ಕುರಿತಾಗಿ ಪರಿಶೀಲಿಸುವಂತೆ ಕರೆ ನೀಡಿತು. ಆದರೆ ಇದೆಲ್ಲ ಆಗಿ ಐದು ವರ್ಷಗಳ ನಂತರವೂ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಎಸ್‌ಆರ್‌ಎಸ್ ಸೌಲಭ್ಯ ಕೈಗೆಟುಕುವಂತೆ ಮಾಡುವಲ್ಲಿ ಸರ್ಕಾರದಿಂದ ಗಮನಾರ್ಹ ಕೆಲಸಗಳು ನಡೆದಿಲ್ಲ
2019ರ ಟ್ರಾನ್ಸ್‌ಜೆಂಡರ್ ಪರ್ಸನ್ಸ್ ಆಕ್ಟ್ ನಿಜಕ್ಕೂ ಒಂದು ಮೈಲಿಗಲ್ಲಾಗಿತ್ತು. ಇದು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಅಗತ್ಯವಿರುವ ವೈದ್ಯಕೀಯ ಪಠ್ಯಕ್ರಮ ಮತ್ತು ಸಂಶೋಧನೆಗಳ ಕುರಿತಾಗಿ ಪರಿಶೀಲಿಸುವಂತೆ ಕರೆ ನೀಡಿತು. ಆದರೆ ಇದೆಲ್ಲ ಆಗಿ ಐದು ವರ್ಷಗಳ ನಂತರವೂ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಜಿಎಎಸ್ ಸೌಲಭ್ಯ ಕೈಗೆಟುಕುವಂತೆ ಮಾಡುವಲ್ಲಿ ಸರ್ಕಾರದಿಂದ ಗಮನಾರ್ಹ ಕೆಲಸಗಳು ನಡೆದಿಲ್ಲ. ಸರ್ಕಾರಿ ಆಸ್ಪತ್ರೆಗಳೂ ಜಿಎಎಸ್ ಪ್ರಕ್ರಿಯೆಯಿಂದ ಬಹಳ ದೂರ ನಿಂತಿವೆ.
ಟ್ರಾನ್ಸ್ ಪುರುಷರಿಗೆ ವಿಶೇಷವಾಗಿ ಆಯ್ಕೆಗಳು ಬಹಳ ಸೀಮಿತವಾಗಿವೆ. ಅವರಿಗೆ ನಡೆಸಲಾಗುವ ಜಿಎಎಸ್ ಪ್ರಕ್ರಿಯೆಗಳಿಗೆ ಸ್ತ್ರೀರೋಗತಜ್ಞ, ಮೂತ್ರಶಾಸ್ತ್ರಜ್ಞ ಮತ್ತು ರೀಕನ್ಸ್ಟ್ರಕ್ಷನ್ ಪ್ಲಾಸ್ಟಿಕ್ ಸರ್ಜನ್ ರೀತಿಯ ಅತ್ಯಂತ ನುರಿತ ವೃತ್ತಿಪರರ ಅಗತ್ಯವಿದೆ. "ಈ ಕ್ಷೇತ್ರದಲ್ಲಿ ತರಬೇತಿ ಮತ್ತು ಪರಿಣತಿ ಹೊಂದಿರುವ ವೈದ್ಯಕೀಯ ವೃತ್ತಿಪರರು ಬಹಳ ಕಡಿಮೆ, ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಕಡಿಮೆ" ಎಂದು ತೆಲಂಗಾಣ ಹಿಜ್ರಾ ಇಂಟರ್‌ಸೆಕ್ಸ್ ಟ್ರಾನ್ಸ್‌ಜೆಂಡರ್ ಸಮಿತಿಯ ಟ್ರಾನ್ಸ್ ಮ್ಯಾನ್ ಮತ್ತು ಕಾರ್ಯಕರ್ತ ಕಾರ್ತಿಕ್ ಬಿಟ್ಟು ಕೊಂಡಯ್ಯ ಹೇಳುತ್ತಾರೆ.
ಟ್ರಾನ್ಸ್ ವ್ಯಕ್ತಿಗಳಿಗೆ ಲಭ್ಯವಿರುವ ಸಾರ್ವಜನಿಕ ಮಾನಸಿಕ ಆರೋಗ್ಯ ಸೇವೆಗಳ ಸ್ಥಿತಿಯೂ ಅಷ್ಟೇ ಶೋಚನೀಯವಾಗಿದೆ. ಅವರಿಗೆ ತಮ್ಮ ದಿನನಿತ್ಯದ ಬದುಕಿಗೂ ಇದು ಅಗತ್ಯವಿದೆಯಾದರೂ, ಲಿಂಗಾಂತರ ಮಾಡಿಸಿಕೊಳ್ಳಲು ಬೇಕಾಗುವ ಸರ್ಜರಿಗಳಿಗೆ ಈ ಕೌನ್ಸೆಲಿಂಗ್ ಕಾನೂನು ಪ್ರಕಾರ ಕಡ್ಡಾಯವಾಗಿದೆ. ಟ್ರಾನ್ಸ್ ಜನರು ಲಿಂಗ ಗುರುತಿನ ಅಸ್ವಸ್ಥತೆ ಕುರಿತಾದ ಪ್ರಮಾಣಪತ್ರ ಮತ್ತು ಅವರು ಸರ್ಜರಿಗೆ ಅರ್ಹರು ಎನ್ನುವ ದೃಢೀಕರಣ ಪತ್ರವನ್ನು ಮನಶ್ಶಾಸ್ತ್ರಜ್ಞರು ಅಥವಾ ಮನೋವೈದ್ಯರಿಂದ ಪಡೆಯಬೇಕು. ಇದಕ್ಕಾಗಿ ಅವರು ತಿಳುವಳಿಕೆಯೊಂದಿಗಿನ ಸಮ್ಮತಿ, ಲಿಂಗ ಗೊಂದಲದ ಮಟ್ಟ, ದೃಡೀಕೃತ ಲಿಂಗದೊಂದಿಗೆ ಬದುಕಿರುವ ವರ್ಷಗಳು, ಅಗತ್ಯ ವಯಸ್ಸು, ಮತ್ತು ತಿಳುವಳಿಕೆಯ ಖಾತರಿಗಾಗಿ ಮಾನಸಿಕ ಆರೋಗ್ಯ ಮೌಲ್ಯಮಾಪನದಂತಹ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಪೂರೈಸಲು ಅವರು ವಾರಕ್ಕೊಮ್ಮೆ ಮನಶ್ಶಾಸ್ತ್ರಜ್ಞ ಅಥವಾ ಮನೋವೈದ್ಯರೊಂದಿಗೆ ಕನಿಷ್ಠ ಒಂದು ಸೆಷನ್ ಅಥವಾ ಗರಿಷ್ಠ ನಾಲ್ಕು ಸೆಷನ್ನುಗಳಿಗೆ ಹಾಜರಾಗಬೇಕಾಗುತ್ತದೆ
2014ರ ಸುಪ್ರೀಂ ಕೋರ್ಟ್ ತೀರ್ಪಿನ ಒಂದು ದಶಕದ ನಂತರ, ಒಳಗೊಳ್ಳುವಿಕೆಯನ್ನು ಹೊಂದಿರುವ, ಸಹಾನುಭೂತಿ ತೋರಿಸುವ ಮಾನಸಿಕ ಆರೋಗ್ಯ ಸೇವೆಗಳು ದೈನಂದಿನ ಬದುಕಿನ ತೊಡಕುಗಳನ್ನು ಎದುರಿಸಲು ಮತ್ತು ಲಿಂಗ ಬದಲಾವಣೆ ಸರ್ಜರಿಗಳಿಗೆ ನಿರ್ಣಾಯಕ ಎನ್ನುವುದು ಸಮುದಾಯದ ಒಕ್ಕೊರಲಿನ ಅಭಿಪ್ರಾಯ. ಆದರೆ ಈ ಜನರ ಪಾಲಿಗೆ ಅದೊಂದು ಕನಸಾಗಿಯೇ ಉಳಿದಿದೆ.
“ಟಾಪ್ ಸರ್ಜರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ನನಗೆ ಎರಡು ವರ್ಷಗಳ ಕಾಲ ಕೌನ್ಸೆಲಿಂಗ್ ನಡೆಸಲಾಯಿತು” ಎಂದು ಸುಮಿತ್ ಹೇಳುತ್ತಾರೆ. ಕೊನೆಗೆ 2016ರಲ್ಲಿ ಅವರು ಅಲ್ಲಿಗೆ ಹೋಗುವುದನ್ನೇ ನಿಲ್ಲಿಸಿದರು. “ಒಂದು ಹಂತದ ನಂತರ ಎಂತಹವರಿಗೂ ಸಾಕಾಗಿ ಹೋಗುತ್ತದೆ.”
ತಾನು ಬಯಸಿದ ಲಿಂಗವನ್ನು ಪಡೆಯುವ ಬಯಕೆಯು ಸುಮಿತ್ ಅವರ ದಣಿವನ್ನು ಮೀರಿತ್ತು. ಹೀಗಾಗಿ ಸುಮಿತ್ ತನಗಾಗುತ್ತಿರುವ ಅನುಭವ ಸ್ವಾಭಾವಿಕವೇ, ಜಿಎಎಸ್ ಏನೆಲ್ಲ ವಿಷಯಗಳನ್ನು ಒಳಗೊಂಡಿದೆ ಎನ್ನುವುದರ ಕುರಿತಾದ ಮಾಹಿತಿಯನ್ನು ಸ್ವತಃ ತಾನೇ ಹುಡುಕಿಕೊಳ್ಳಲು ನಿರ್ಧರಿಸಿದರು.
ಇದೆಲ್ಲ ಮಾಡುವಾಗ ಅವರು ತನ್ನ ಕುಟುಂಬ ಜೊತೆಯಲ್ಲೇ ಇದ್ದ ಕಾರಣ ಅವರು ಇದೆಲ್ಲವನ್ನೂ ಗುಟ್ಟಾಗಿ ಮಾಡುತ್ತಿದ್ದರು. ಅವರು ಈ ನಡುವೆ ಗೋರಂಟಿ ಕಲಾವಿದನಾಗಿ ಮತ್ತು ಟೈಲರ್ ಆಗಿ ಕೆಲಸ ಮಾಡಲು ಆರಂಭಿಸಿದರು. ಮತ್ತು ಈ ಮೂಲಕ ಆಗುತ್ತಿದ್ದ ಸಂಪಾದನೆಯಿಂದ ಒಂದಷ್ಟು ಮೊತ್ತವನ್ನು ತನ್ನ ಬಹಳ ದಿನಗಳ ಬಯಕೆಯಾದ ಟಾಪ್ ಸರ್ಜರಿಗೆಂದು ಉಳಿಸತೊಡಗಿದರು.
2022ರಲ್ಲಿ ಸುಮಿತ್ ಮತ್ತೊಮ್ಮೆ ತಮ್ಮ ಪ್ರಯತ್ನವನ್ನು ಮುಂದುವರೆಸಿದರು. ಈ ಬಾರಿ ಅವರು ರೋಹ್ಟಕ್ ನಗರದಿಂದ ನೂರು ಕಿಲೋಮೀಟರಿಗಿಂತಲೂ ದೂರವಿರುವ ಹಿಸ್ಸಾರ್ ಜಿಲ್ಲೆಗೆ ಪ್ರಯಾಣಿಸಿದರು. ಅಲ್ಲಿನ ಖಾಸಗಿ ಮನಶ್ಶಾಸ್ತ್ರಜ್ಞರು ಎರಡು ಸೆಷನ್ ಗಳಲ್ಲಿ ತಮ್ಮ ಸಮಾಲೋಚನೆಯನ್ನು ಪೂರ್ಣಗೊಳಿಸಿದರು. ಇದಕ್ಕಾಗಿ ಅವರು 2,300 ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಿದರು. ಇದಾದ ಎರಡು ವಾರಗಳಲ್ಲಿ ಮನಶಾಸ್ತ್ರಜ್ಞರು ಸುಮಿತ್ ಟಾಪ್ ಸರ್ಜರಿಗೆ ಅರ್ಹರು ಎಂದು ಹೇಳಿದರು.
ಅವರನ್ನು ಹಿಸಾರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 4 ದಿನಗಳ ಕಾಲ ದಾಖಲಿಸಿಕೊಳ್ಳಲಾಯಿತು. ಅಲ್ಲಿ ಸರ್ಜರಿ ಮತ್ತು ಆಸ್ಪತ್ರೆ ವಾಸದ ವೆಚ್ಚ ಸೇರಿ ಒಂದು ಲಕ್ಷ ರೂಪಾಯಿಗಳಷ್ಟು ಖರ್ಚಾಯಿತು. “ಈ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕರುಣೆ ತೋರಿಸುತ್ತಿದ್ದರು ಜೊತೆಗೆ ವಿನಯದಿಂದಲೂ ನಡೆಸಿಕೊಳ್ಳುತ್ತಿದ್ದರು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ನನಗೆ ಇದಕ್ಕೆ ವ್ಯತಿರಿಕ್ತವಾದ ಅನುಭವವಾಗಿತ್ತು” ಎಂದು ಸುಮಿತ್ ಹೇಳುತ್ತಾರೆ.
ಆದರೆ ಈ ನಿರಾಳತೆ ಅಲ್ಪ ಕಾಲದ್ದಾಗಿತ್ತು.
ರೋಹ್ಟಕ್ ರೀತಿಯ ಸಣ್ಣ ಪಟ್ಟಣದಲ್ಲಿ ಎಲ್ಜಿಬಿಟಿಕ್ಯೂಐಎ+ ಸಮುದಾಯಕ್ಕೆ ಸೇರಿದವರಿಗೆ ತಮ್ಮ ಗುಟ್ಟಿನ ಪ್ರಪಂಚದಿಂದ ಹೊರ ಬಂದು ಸಾರ್ವಜನಿಕವಾಗಿ ಬದುಕುವುದು ಬಹಳ ಕಷ್ಟ. ಈಗ ಸುಮಿತ್ ಅವರ ರಹಸ್ಯವೂ ಹಗಲಿನಷ್ಟೇ ಸ್ಪಷ್ಟವಾಗಿತ್ತು. ಮೊದಲಿಗೆ ಅವರ ಕುಟುಂಬಕ್ಕೆ ಇದನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಸರ್ಜರಿ ಮಾಡಿಸಿಕೊಂಡ ಕೆಲವು ದಿನಗಳ ನಂತರ ರೋಹ್ಟಕ್ ಪಟ್ಟಣದಲ್ಲಿನ ಮನೆಗೆ ಬಂದ ಅವರನ್ನು ಸ್ವಾಗತಿಸಿದ್ದು ಮನೆಯ ಹೊರಗೆ ಬಿದ್ದಿದ್ದ ಅವರ ವಸ್ತುಗಳು. “ನನ್ನ ಕುಟುಂಬ ನನಗೆ ಯಾವುದೇ ಭಾವನಾತ್ಮಕ ಅಥವಾ ಆರ್ಥಿಕ ಬೆಂಬಲ ನೀಡದೆ ಮನೆಯಿಂದ ಹೊರಗೆ ಹಾಕಿತು. ಅವರು ನನ್ನ ಪರಿಸ್ಥಿತಿಯ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ.” ಟಾಪ್ ಸರ್ಜರಿಯ ನಂತರ ಸುಮಿತ್ ಇನ್ನೂ ಮಹಿಳೆಯಾಗಿದ್ದರಾದರೂ ಆಸ್ತಿ ಹಕ್ಕುಗಳ ಕುರಿತು ಕಳವಳ ಉಂಟಾಗಲು ಆರಂಭವಾಯಿತು. “ಕೆಲವರು ನಾನು ಒಬ್ಬ ಗಂಡಸಿನಂತೆ ನಿಂತು ದುಡಿದು ನಿರೀಕ್ಷಿತ ಜವಬ್ದಾರಿಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.”
ಜಿಎಎಸ್ ಚಿಕಿತ್ಸೆಯ ನಂತರ ಕೆಲವು ದಿನಗಳ ಕಾಲ ವಿರಾಮ ಪಡೆಯಲು ಸೂಚಿಸಲಾಗುತ್ತದೆ. ಜೊತೆಗೆ ಕೆಲವು ಸಂಕೀರ್ಣ ಪ್ರಕರಣಗಳ ಸಂದರ್ಭದಲ್ಲಿ ಆಸ್ಪತ್ರೆಗೆ ಹತ್ತಿರದಲ್ಲೇ ಮನೆ ಮಾಡಿಕೊಂಡು ಇರುವಂತೆಯೂ ಹೇಳಲಾಗುತ್ತದೆ. ಇದು ಟ್ರಾನ್ಸ್ ವ್ಯಕ್ತಿಗಳಿಗೆ ಅದರಲ್ಲೂ ಕಡಿಮೆ ಆದಾಯದ ಮತ್ತು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯವರಿಗೆ ಇದು ಹೆಚ್ಚಿನ ಹೊರೆಯಾಗಿ ಪರಿಣಮಿಸುತ್ತದೆ. ಸುಮಿತ್ ಅವರಿಗೆ ಪ್ರತಿ ಹಿಸಾರ್ ನಗರಕ್ಕೆ ಹೋಗಿ ಬರಲು ಮೂರು ಗಂಟೆಯ ಪ್ರಯಾಣಕ್ಕೆ 700 ರೂಪಾಯಿ ಬೇಕಾಗುತ್ತದೆ. ಅವರು ಕನಿಷ್ಟ ಹತ್ತು ಬಾರಿ ಅಲ್ಲಿಗೆ ಹೋಗಿ ಬಂದಿದ್ದಾರೆ.
ಟಾಪ್ ಸರ್ಜರಿಯ ನಂತರ ರೋಗಿಗಳು ತಮ್ಮ ಎದೆಯ ಸುತ್ತ ಬೈಂಡರ್ ಎಂದು ಕರೆಯಲ್ಪಡುವ ಬಿಗಿಯಾದ ಬಟ್ಟೆಯನ್ನು ಸುತ್ತಿಕೊಳ್ಳಬೇಕಾಗುತ್ತದೆ. "ಭಾರತದ ಬಿಸಿ ವಾತಾವರಣದಲ್ಲಿ, [ಹೆಚ್ಚಿನ] ರೋಗಿಗಳಿಗೆ ಹವಾನಿಯಂತ್ರಣ ಸೌಲಭ್ಯ ಲಭ್ಯವಿಲ್ಲದ ಕಾರಣ, [ಜನರು] ಚಳಿಗಾಲದಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಬಯಸುತ್ತಾರೆ" ಎಂದು ಡಾ. ಭೀಮ್ ಸಿಂಗ್ ನಂದಾ ವಿವರಿಸುತ್ತಾರೆ, ಬೆವರು ಶಸ್ತ್ರಚಿಕಿತ್ಸೆಯ ಹೊಲಿಗೆಗಳ ಸುತ್ತಲೂ ಸೋಂಕಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಮೇ ತಿಂಗಳ ಸುಡುವ ಬಿಸಿಲಿನ ಸಮಯದಲ್ಲಿ ಸುಮಿತ್ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಉತ್ತರ ಭಾರತದ ಆ ಬಿಸಿಲಿನಲ್ಲೇ ಅವರನ್ನು ಮನೆಯಿಂದ ಹೊರಹಾಕಲಾಯಿತು. "[ನಂತರದ ವಾರಗಳು] ಯಾರೋ ನನ್ನ ಮೂಳೆಗಳನ್ನು ಎಳೆದಂತೆ ನೋವಿನಿಂದ ಕೂಡಿದ್ದವು. ಬೈಂಡರ್ ನಡೆಯಲು ಕಷ್ಟವಾಗುವಂತೆ ಮಾಡಿತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ನನ್ನ ಟ್ರಾನ್ಸ್ ಗುರುತನ್ನು ಮರೆಮಾಚದೆ ನಾನು ಸ್ಥಳವನ್ನು ಬಾಡಿಗೆಗೆ ಪಡೆಯಲು ಬಯಸಿದ್ದೆ ಆದರೆ ಆರು ಭೂಮಾಲೀಕರು ಮನೆ ನೀಡಲು ನಿರಾಕರಿಸಿದರು. ನನ್ನ ಶಸ್ತ್ರಚಿಕಿತ್ಸೆಯ ನಂತರ ಒಂದು ತಿಂಗಳು ಸಹ ನನಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗಲಿಲ್ಲ" ಎಂದು ಸುಮಿತ್ ಹೇಳುತ್ತಾರೆ. ಶಸ್ತ್ರಚಿಕಿತ್ಸೆಯ ಒಂಬತ್ತು ದಿನಗಳ ನಂತರ ಮತ್ತು ಪೋಷಕರು ಮನೆಯಿಂದ ಹೊರಹಾಕಿದ ನಾಲ್ಕು ದಿನಗಳ ನಂತರ, ಸುಮಿತ್ ತಾನು ಯಾರು ಎಂಬುದರ ಬಗ್ಗೆ ಸುಳ್ಳು ಹೇಳದೆ ಎರಡು ಕೋಣೆಗಳ ಸ್ವತಂತ್ರ ಮನೆಯೊಂದನ್ನು ಬಾಡಿಗೆ ಪಡೆಯುವಲ್ಲಿ ಯಶಸ್ವಿಯಾದರು.
ಇಂದು, ಸುಮಿತ್ ಗೋರಂಟಿ ಕಲಾವಿದ, ಟೈಲರ್, ಚಹಾ ಅಂಗಡಿಯಲ್ಲಿ ಸಹಾಯಕ ಮತ್ತು ರೋಹ್ಟಕ್ ನಗರದಲ್ಲಿ ಗಿಗ್ ಆಧಾರಿತ ದೈಹಿಕ ಶ್ರಮದ ಕೆಲಸಗಾರನಾಗಿ ದುಡಿಯುತ್ತಿದ್ದಾರೆ. ಅವರು ತಿಂಗಳಿಗೆ 5-7,000 ರೂಪಾಯಿಗಳಷ್ಟು ಗಳಿಸುತ್ತಿದ್ದು ಅದರಲ್ಲೇ ಜೀವನ ಸಾಗಿಸುತ್ತಿದ್ದಾರೆ, ಅದರಲ್ಲಿ ಹೆಚ್ಚಿನ ಮೊತ್ತ ಬಾಡಿಗೆ, ಆಹಾರ ವೆಚ್ಚ, ಅಡುಗೆ ಅನಿಲ ಮತ್ತು ವಿದ್ಯುತ್ ಬಿಲ್ ಮತ್ತು ಸಾಲವನ್ನು ಪಾವತಿಸಲು ಹೋಗುತ್ತದೆ. ಎದೆಯ ಶಸ್ತ್ರಚಿಕಿತ್ಸೆಗಾಗಿ ಸುಮಿತ್ ಪಾವತಿಸಿದ ಒಂದು ಲಕ್ಷ ರೂ.ಗಳಲ್ಲಿ 30,000 ರೂ.ಗಳು 2016-2022ರ ನಡುವೆ ಅವರು ಉಳಿಸಿದ ಹಣವಾಗಿತ್ತು. ಉಳಿದ 70,000 ರೂ.ಗಳನ್ನು ಅವರು ಲೇವಾದೇವಿಗಾರರಿಂದ ಶೇ.5ರ ಬಡ್ಡಿ ದರದಲ್ಲಿ ಮತ್ತು ಒಂದಷ್ಟನ್ನು ಸ್ನೇಹಿತರಿಂದ ಸಾಲವಾಗಿ ಪಡೆದಿದ್ದರು.
ಜನವರಿ 2024ರಲ್ಲಿ, ಸುಮಿತ್ ಇನ್ನೂ 90,000 ರೂ.ಗಳ ಸಾಲವನ್ನು ಹೊಂದಿದ್ದರು, ಇದಕ್ಕೆ ಪ್ರತಿ ತಿಂಗಳು 4,000 ರೂ.ಗಳ ಬಡ್ಡಿ ಕಟ್ಟಬೇಕು. "ನಾನು ಗಳಿಸುವ ಅಲ್ಪ ಮೊತ್ತದಲ್ಲಿ ಜೀವನ ವೆಚ್ಚಗಳು ಮತ್ತು ಸಾಲದ ಬಡ್ಡಿಯನ್ನು ಹೇಗೆ ಭರಿಸುವುದು ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ನಿಯಮಿತ ಕೆಲಸ ಸಿಗುವುದಿಲ್ಲ" ಎಂದು ಸುಮಿತ್ ಹೇಳುತ್ತಾರೆ. ಅವರ ಸುಮಾರು ಒಂದು ದಶಕದ ಪ್ರಯಾಸಕರ, ಏಕಾಂಗಿ ಮತ್ತು ದುಬಾರಿ ಪರಿವರ್ತನೆಯ ಪ್ರಯಾಣವು ಅವರನ್ನು ಆತಂಕ ಮತ್ತು ನಿದ್ರೆಯಿಲ್ಲದ ರಾತ್ರಿಗಳಿಗೆ ಕಾರಣವಾಗಿದೆ. "ಈ ದಿನಗಳಲ್ಲಿ ನನಗೆ ಉಸಿರುಗಟ್ಟುತ್ತಿದೆ. ಮನೆಯಲ್ಲಿ ಒಬ್ಬನೇ ಇರುವಾಗ ಆತಂಕ, ಭಯ ಮತ್ತು ಒಂಟಿತನ ಕಾಡುತ್ತದೆ. ಮೊದಲು ಹೀಗಾಗುತ್ತಿರಲಿಲ್ಲ."
ಅವರನ್ನು ಮನೆಯಿಂದ ಹೊರಹಾಕಿದ ಅವರ ಕುಟುಂಬ ಸದಸ್ಯರು ಒಂದು ವರ್ಷದ ನಂತರ ಅವರನ್ನು ಮಾತನಾಡಿಸತೊಡಗಿದರು. ಸುಮಿತ್ ಕೇಳಿದಲ್ಲಿ ಅವರು ಕೆಲವೊಮ್ಮೆ ಹಣವನ್ನು ಕೊಟ್ಟು ಸಹಾಯ ಮಾಡುತ್ತಾರೆ.
ಸುಮಿತ್ ಈಗ ಗರ್ವದಿಂದ ಹೇಳಿಕೊಳ್ಳಬಹುದಾದ ಟ್ರಾನ್ಸ್ ಮ್ಯಾನ್ ಅಲ್ಲ. ಭಾರತದಲ್ಲಿ ಇಂದಿಗೂ ಹಾಗೆ ಹೇಳಿಕೊಳ್ಳಬಹುದಾದ ವಾತಾವರಣ ಇಲ್ಲ. ದಲಿತ ವ್ಯಕ್ತಿಗಂತೂ ಅಂತಹ ಸವಲತ್ತು ದೂರದ ಮಾತು. ಅವರಿಗೆ ಈಗ ನಾನು ನಿಜವಾದ ಗಂಡಸಲ್ಲ ಎನ್ನುವ ಹಣೆಪಟ್ಟಿ ತಗುಲಬಹುದಾದ ಆತಂಕ ಕಾಡುತ್ತಿರುತ್ತದೆ. ಸ್ಥನಗಳು ಇಲ್ಲದಿರುವುದರಿಂದ ದೈಹಿಕ ಶ್ರಮದ ಕೆಲಸಗಳನ್ನು ಮಾಡುವುದು ಈಗ ಅವರಿಗೆ ಸುಲಭ. ಆದರೆ ಇತರ ಗಂಡಸರ ಲಕ್ಷಣಗಳಾದ ಗಡಸು ಧ್ವನಿ, ಮುಖದ ಮೇಲಿನ ಕೂದಲು ಇಲ್ಲದಿರುವುದು ಜನರು ಅವರ ಮೇಲೆ ಅನುಮಾನದ ಕಣ್ಣುಗಳನ್ನು ಹಾಯಿಸುವಂತೆ ಮಾಡುತ್ತದೆ. ಜೊತೆಗೆ ಅವರ ಹಿಂದಿನ ಹೆಸರೂ ಹಾಗೇ ಇದ್ದು ಅದನ್ನು ಅವರು ಇನ್ನೂ ಕಾನೂಬದ್ಧವಾಗಿ ಬದಲಾಯಿಸಿಕೊಂಡಿಲ್ಲ.
ಹಾರ್ಮೋನ್ ಬದಲಿ ಚಿಕಿತ್ಸೆಗೆ ಅವರು ಇನ್ನೂ ಸಿದ್ಧವಾಗಿಲ್ಲ; ಅದರ ಅಡ್ಡಪರಿಣಾಮಗಳ ಬಗ್ಗೆ ಅವರಿಗೆ ಗೊಂದಲಗಳಿವೆ. "ಆದರೆ ನಾನು ಆರ್ಥಿಕವಾಗಿ ದೃಢವಾದ ನಂತರ ಅದನ್ನು ಮಾಡಿಸಿಕೊಳ್ಳುತ್ತೇನೆ" ಎಂದು ಸುಮಿತ್ ಹೇಳುತ್ತಾರೆ.
ಅವರು ಪ್ರಸ್ತುತ ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಟಾಪ್ ಸರ್ಜರಿಯ ಆರು ತಿಂಗಳ ನಂತರ, ಸುಮಿತ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ಟ್ರಾನ್ಸ್ ಮ್ಯಾನ್ ಆಗಿ ನೋಂದಾಯಿಸಿಕೊಂಡರು, ಅದು ಅವರಿಗೆ ರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಟ್ರಾನ್ಸ್‌ಜೆಂಡರ್ ಪ್ರಮಾಣಪತ್ರ ಮತ್ತು ಗುರುತಿನ ಚೀಟಿಯನ್ನು ಸಹ ಕೊಡಿಸಿತು. ಈಗ ಅವರಿಗೆ ಲಭ್ಯವಿರುವ ಸೇವೆಗಳಲ್ಲಿ ಜೀವನೋಪಾಯ ಮತ್ತು ಉದ್ಯಮಶೀಲತೆಗಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ( ಸ್ಮೈಲ್ ) ಎಂಬ ಯೋಜನೆಯೂ ಸೇರಿದೆ, ಇದು ಭಾರತದ ಪ್ರಮುಖ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ತೃತೀಯ ಲಿಂಗಿಗಳಿಗೆ ಲಿಂಗ ದೃಢೀಕರಣ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
"ಸಂಪೂರ್ಣ ಪರಿವರ್ತನೆಗೆ ನನಗೆ ಬೇರೆ ಯಾವ ಶಸ್ತ್ರಚಿಕಿತ್ಸೆಗಳು ಬೇಕಾಗುತ್ತವೆ ಎನ್ನುವುದು ಇನ್ನೂ ತಿಳಿದಿಲ್ಲ" ಎಂದು ಸುಮಿತ್ ಹೇಳುತ್ತಾರೆ. "ನಾನು ಅವುಗಳನ್ನು ನಿಧಾನವಾಗಿ ಮಾಡಿಸಿಕೊಳ್ಳುತ್ತೇನೆ. ನಾನು ಎಲ್ಲಾ ದಾಖಲೆಗಳಲ್ಲಿಯೂ ನನ್ನ ಹೆಸರನ್ನು ಬದಲಾಯಿಸುತ್ತೇನೆ. ಇದು ಕೇವಲ ಆರಂಭ ಮಾತ್ರ.”
ಈ ಕಥಾನಕವು ಭಾರತದಲ್ಲಿ ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರದಿಂದ (ಎಸ್‌ಜಿಬಿವಿ) ಸಂತ್ರಸ್ತರಾದವರ ಆರೈಕೆಗೆ ಇರುವ ಸಾಮಾಜಿಕ, ಸಾಂಸ್ಥಿಕ ಮತ್ತು ರಚನಾತ್ಮಕ ಅಡೆತಡೆಗಳನ್ನು ಕೇಂದ್ರವಾಗಿರಿಸಿಕೊಂಡು ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯ ಭಾಗವಾಗಿದೆ. ಇದು ಡಾಕ್ಟರ್ಸ್ ವಿತೌಟ್ ಬಾರ್ಡರ್ಸ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗವಾಗಿದೆ.
ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಅವರ ಗುರುತನ್ನು ರಕ್ಷಿಸುವ ಉದ್ದೇಶದಿಂದ ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು