ಪೂರ್ವಭಾರತದ ಈ ಕಡಲ ತೀರದಲ್ಲಿ ಆಗಷ್ಟೇ ಬೆಳಗಿನ ಜಾವದ 3 ಗಂಟೆಯಾಗುತ್ತಿತ್ತು. ರಾಮೋಲು ಲಕ್ಷ್ಮಯ್ಯ ಫ್ಲ್ಯಾಶ್ ಲೈಟ್ ಬಳಸಿ ಆಲಿವ್ ರಿಡ್ಲೆ ಆಮೆ ಮೊಟ್ಟೆಗಳನ್ನು ಹುಡುಕುತ್ತಿದ್ದಾರೆ. ಅವರ ಕೈಯಲ್ಲೊಂದು ಕೋಲು ಮತ್ತು ಬಕೆಟ್ ಹಿಡಿದಿದ್ದ ಅವರು ಜಲಾರಿಪೇಟಾದಲ್ಲಿರುವ ತನ್ನ ಮನೆ ಮತ್ತು ಆರ್ ಕೆ ಬೀಚ್ ನಡುವಿನ ಸಣ್ಣ, ಮರಳು ದಾರಿಯನ್ನು ನಿಧಾನವಾಗಿ ದಾಟತೊಡಗಿದರು.
ಹೆಣ್ಣು ಆಲಿವ್ ರಿಡ್ಲೆ ಆಮೆಗಳು ಮೊಟ್ಟೆಯಿಡುವ ಸಲುವಾಗಿ ಕಡಲ ತೀರಕ್ಕೆ ಬರುತ್ತವೆ. ವಿಶಾಖಪಟ್ಟಣದಲ್ಲಿನ ಮರಳಿನಿಂದ ಕೂಡಿದ ಇಳಿಜಾರು ಕಡಲ ತೀರ ಅವುಗಳಿಗೆ ಗೂಡು ಮಾಡಿ ಮೊಟ್ಟೆಯಿಡಲು ಪ್ರಶಸ್ತ ಸ್ಥಳವೆನ್ನಿಸಿಕೊಂಡಿದೆ. 1980ರ ದಶಕದಿಂದಲೂ ಅವು ಇಲ್ಲಿಗೆ ಬರುತ್ತಿವೆ. ಆದಾಗ್ಯೂ, ಇಲ್ಲಿಂದ ಉತ್ತರಕ್ಕೆ ಕೆಲವು ಕಿಲೋಮೀಟರ್ ದೂರದಲ್ಲಿರುವ ಒಡಿಶಾ ಕರಾವಳಿಯು ದೇಶದ ಅತಿದೊಡ್ಡ ಕಡಲಾಮೆಗಳ ಗೂಡು ಕಟ್ಟುವ ತಾಣವನ್ನು ಹೊಂದಿದೆ. ಹೆಣ್ಣು ಆಮೆಗಳು ಒಮ್ಮೆಗೆ 100-150 ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಅವುಗಳನ್ನು ಮರಳಿನ ಗುಂಡಿಗಳಲ್ಲಿ ಆಳವಾಗಿ ಹೂಳುತ್ತವೆ.
"ತಾಯಿ ಆಮೆ ಮೊಟ್ಟೆಯಿಟ್ಟ ಜಾಗದಲ್ಲಿ ಮರಳು ಸಡಿಲವಾಗಿರುತ್ತದೆ" ಎಂದು ಲಕ್ಷ್ಮಯ್ಯ ವಿವರಿಸುತ್ತಾರೆ. ಅಂದು ಲಕ್ಷ್ಮಯ್ಯ ಅವರೊಂದಿಗೆ ಜಲಾರಿ ಸಮುದಾಯದ (ಆಂಧ್ರಪ್ರದೇಶದಲ್ಲಿ ಇತರ ಹಿಂದುಳಿದ ವರ್ಗದಡಿ ಪಟ್ಟಿ ಮಾಡಲಾಗಿದೆ) ಮೀನುಗಾರರಾದ ಕರಿ ಜಲ್ಲಿಬಾಬು, ಪುಟ್ಟಿಯಪ್ಪನ ಯರ್ರಣ್ಣ ಮತ್ತು ಪುಲ್ಲಾ ಪೊಲಾರಾವ್ ಇದ್ದರು. ಕಡಲಾಮೆ ಸಂರಕ್ಷಣಾ ಯೋಜನೆಯ ಅಡಿಯಲ್ಲಿ ಆಲಿವ್ ರಿಡ್ಲೆ ಆಮೆ ಮೊಟ್ಟೆಗಳನ್ನು ಸಂರಕ್ಷಿಸುವ ಪ್ರಯತ್ನದ ಭಾಗವಾಗಿ 2023ರಲ್ಲಿ ಅವರು ಆಂಧ್ರಪ್ರದೇಶ ಅರಣ್ಯ ಇಲಾಖೆಯಲ್ಲಿ (ಎಪಿಎಫ್ಡಿ) ಕಾವಲುಗಾರರಾಗಿ ಅರೆಕಾಲಿಕ ಕೆಲಸವನ್ನು ವಹಿಸಿಕೊಂಡರು.
ಆಲಿವ್ ರಿಡ್ಲೆ ಆಮೆಗಳನ್ನು (ಲೆಪಿಡೋಚೆಲಿಸ್ ಒಲಿವೇಸಿಯಾ) ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್) 'ದುರ್ಬಲ ಜಾತಿ' ಎಂದು ಪರಿಗಣಿಸಿ ಕೆಂಪು ಪಟ್ಟಿಯಡಿ ವರ್ಗೀಕರಿಸಿದೆ. ಮತ್ತು ಭಾರತೀಯ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 (ತಿದ್ದುಪಡಿ 1991) ರ ಶೆಡ್ಯೂಲ್ -1 ರ ಅಡಿಯಲ್ಲಿ ಅವುಗಳನ್ನು ಸಂರಕ್ಷಿಸಲಾಗಿದೆ.
ಕರಾವಳಿ ನಾಶ, "ಮುಖ್ಯವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಅವು ಗೂಡುಕಟ್ಟುವ ಆವಾಸಸ್ಥಾನಗಳ ನಾಶ ಮತ್ತು ಹವಾಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ಸಮುದ್ರ ಆವಾಸಸ್ಥಾನಗಳ ನಷ್ಟದಂತಹ ಹಲವಾರು ಅಂಶಗಳಿಂದಾಗಿ ಆಮೆಗಳು ಅಪಾಯದಲ್ಲಿವೆ" ಎಂದು ವಿಶಾಖಪಟ್ಟಣಂನ ಕಂಬಲಕೊಂಡ ವನ್ಯಜೀವಿ ಅಭಯಾರಣ್ಯದ ಯೋಜನಾ ವಿಜ್ಞಾನಿ ಯಜ್ಞಪತಿ ಅದಾರಿ ಹೇಳುತ್ತಾರೆ. ಕಡಲಾಮೆಗಳನ್ನು ಅವುಗಳ ಮಾಂಸ ಮತ್ತು ಮೊಟ್ಟೆಗಳಿಗಾಗಿ ಬೇಟೆಯಾಡಲಾಗುತ್ತದೆ.















