ಅವಳು ಓಡಬಲ್ಲಳು. ಅವರು ತರಬೇತಿ ನೀಡಬಲ್ಲರು.

ಈ ಹಿನ್ನೆಲೆಯಲ್ಲಿ ಜಯಂತ್‌ ತಾಂಡೇಕರ್‌ ತಮ್ಮ ಎರಡು ಕೋಣೆಗಳ ಮನೆಯ ಬಾಗಿಲು ತೆರೆದು ಆಕೆಯನ್ನು ಬರಮಾಡಿಕೊಂಡರು.

ತಾಂಡೇಕರ್ ತನ್ನ ಕನಸನ್ನು ಎಂಟು ವರ್ಷದ ಊರ್ವಶಿ ಮೂಲಕ ಬದುಕಲು ಪ್ರಯತ್ನಿಸುತ್ತಿದ್ದಾರೆ.

ಇದೊಂದು ಮಗು, ಅವಳ ಪೋಷಕರು ಮತ್ತು ದೊಡ್ಡ ಕನಸು ಕಾಣಲು ಪ್ರಯತ್ನಿಸುತ್ತಿರುವ ಯುವ ಅಥ್ಲೆಟಿಕ್ಸ್ ತರಬೇತುದಾರನ ಕಥೆ. ಇವರು ಹಣಕಾಸಿನಲ್ಲಿ ಬಡವರು ಆದರೆ ಸಂಕಲ್ಪದಲ್ಲಿ ಶ್ರೀಮಂತರು.

ತಾಂಡೇಕರ್‌ ಅವರ ಮನೆಗೆ ಬರುವಾಗ ಊರ್ವಶಿ ನಿಂಬಾರ್ಟೆಗೆ ಎಂಟು ವರ್ಷ. ತಾಂಡೇಕರ್ ಭಂಡಾರ ನಗರದಲ್ಲಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದಾರೆ. ಮತ್ತು ಊರ್ವಶಿ ಅಂದು ಬರುವಾಗ ತನ್ನ ಬಟ್ಟೆ ಬರೆಗಳ ಸಮೇತ ಬಂದಿದ್ದಳು. ತಾಂಡೇಕರ್‌ ಅವಳಿಗೆ ಈಗ ಅಪ್ಪ, ಅಮ್ಮ ಎಲ್ಲವೂ ಹೌದು. ಊರ್ವಶಿಯ ತಂದೆ, ತಾಯಿಯ ಬಳಿ ಹಣವಿಲ್ಲ. ಅವರು ದವ್ವಾ ಎನ್ನುವ ಊರಿನಲ್ಲಿ ಸಣ್ಣ ರೈತರು. ಈ ಊರಿನಿಂದ ಭಂಡಾರ ನಗರಕ್ಕೆ 25 ಕಿಲೋಮೀಟರ್‌ ದೂರ. ಆದರೆ ಊರ್ವಶಿಯ ಅಮ್ಮ ಮಾಧುರಿಯವರು ತಮ್ಮ ಮಗಳು ಏನನ್ನಾದರೂ ಸಾಧಿಸಬೇಕೆಂದರೆ ನಾವು ಈ ಮಹತ್ವಾಕಾಂಕ್ಷಿ ಯುವಕನನ್ನು ನಂಬಬೇಕು ಎಂದು ನಿರ್ಧರಿಸಿದ್ದರು.

PHOTO • Jaideep Hardikar
PHOTO • Jaideep Hardikar

ಎಡ : ಜಯಂತ್ ತಾಂಡೇಕರ್ ಮತ್ತು ಊರ್ವಶಿ ತಮ್ಮ ಮನೆಯಲ್ಲಿ . ಬಲ : ಊರ್ವಶಿ ತಾಯಿ ಮಾಧುರಿ ಮತ್ತು ತಂದೆ ಅಜಯ್ ನಿಂಬಾರ್ಟೆ ಮಹಾರಾಷ್ಟ್ರದ ಭಂಡಾರ ಬಳಿಯ ದವ್ವಾ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ

ತೆಳ್ಳಗಿನ ಮೈಕಟ್ಟಿನ ಮಾಧುರಿಯವರು ತಮ್ಮ ಮಗಳು ಅವಳ ಬದುಕಿನಲ್ಲಿ ಏನನ್ನಾದರೂ ಅರ್ಥಪೂರ್ಣವಾದದ್ದನ್ನು ಸಾಧಿಸುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ. ಅವರ ಗಂಡ ಮತ್ತು ಊರ್ವಶಿಯ ಅಪ್ಪ ಊರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡುವುದರ ಜೊತೆಗೆ ಹತ್ತಿರ ಸಣ್ಣ ಕಾರ್ಖಾನೆಯೊಂದರಲ್ಲಿ ದಿನಗೂಲಿ ನೌಕರನಾಗಿಯೂ ದುಡಿಯುತ್ತಾರೆ.

“ಅವಳು ನಮ್ಮೊಂದಿಗೆ ಇದ್ದರೆ, ಇನ್ನೊಂದು 10 ವರ್ಷಗಳಲ್ಲಿ ಅವಳೂ ನನ್ನಂತೆಯೇ ಆಗುತ್ತಾಳೆ. ಮದುವೆ, ಮಕ್ಕಳು, ಹೊಲದಲ್ಲಿ ದುಡಿಯುವುದು ಮತ್ತೆ ಒಂದು ದಿನ ಸಾಯುವುದು. ಇಷ್ಟರಲ್ಲೇ ಅವಳ ಬದುಕು ಮುಗಿದುಹೋಗುತ್ತದೆ” ಎನ್ನುತ್ತಾರೆ ಊರ್ವಶಿಯ ತಾಯಿ. ಅವರು ಮೊಯಿ ಎನ್ನುವಲ್ಲಿರುವ ಮ್ಮ ಎರಡು ಕೋಣೆಗಳ ಮನೆಯಲ್ಲಿ ಪತಿ ಮತ್ತು ಮಾವನ ಪಕ್ಕದಲ್ಲಿ ಕುಳಿತು ಪರಿಯೊಂದಿಗೆ ಮಾತನಾಡುತ್ತಿದ್ದರು. “ಅವಳು ಅಂತಹ ಬದುಕನ್ನು ಬದುಕುವುದು ನನಗೆ ಇಷ್ಟವಿಲ್ಲ” ಎಂದು ಅವರು ಹೇಳುತ್ತಾರೆ.

ಊರ್ವಶಿ ತಾಂಡೇಕರ್‌ ಅವರನ್ನು ʼಮಾಮಾʼ ಎಂದು ಕರೆಯುತ್ತಾಳೆ. ಈ ಬಾಲಕಿಯನ್ನು ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಈ ತರಬೇತುದಾರನಿಗೆ 35 ವರ್ಷ ಮತ್ತು ಮದುವೆ ಆಗಿರಲಿಲ್ಲ.

ತಾಂಡೇಕರ್ ದಲಿತ, ಚಮ್ಹಾರ್ ಜಾತಿಗೆ ಸೇರಿದವರು ಮತ್ತು ಭಂಡಾರ, ಗೊಂಡಿಯಾ ಮತ್ತು ಗಡಚಿರೋಲಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ಉತ್ತಮ ಕ್ರೀಡಾಪಟುಗಳನ್ನು ಹೊರತರುವ  ಕನಸು ಕಾಣುತ್ತಿದ್ದಾರೆ. ಅವರು ಈ ಯುವ ಮನಸ್ಸುಗಳಿಗೆ ಹೊಸ ರೆಕ್ಕೆ ಕಟ್ಟುವ ಕನಸು ಕಾಣುತ್ತಿದ್ದಾರೆ. ಆ ಮಕ್ಕಳನ್ನು ಓಟದ ಮೈದಾನದಲ್ಲಿ ನೋಡುವ ಹಂಬಲ ಅವರದು.

ಊರ್ವಶಿ ಜಾತಿಯಿಂದ ಕುಣಬಿ (ಒಬಿಸಿ). ಆದರೆ ಅವಳ ಪೋಷಕರು ಜಾತಿ ಶ್ರೇಣಿ ಮತ್ತು ಪಿತೃಪ್ರಭುತ್ವದ ಎರಡನ್ನೂ ಮೀರಿ ನಿಲ್ಲಬೇಕಾದ ಅವಶ್ಯಕತೆಯನ್ನು ಮನಗಂಡರು. ಭಂಡಾರದ ಶಿವಾಜಿ ಕ್ರೀಡಾಂಗಣದಲ್ಲಿ 2024 ರ ಬೇಸಿಗೆಯ ಬೆಳಿಗ್ಗೆ ಪರಿಯೊಂದಿಗೆ ಮಾತನಾಡಿದ ತಾಂಡೇಕರ್, ಊರ್ವಶಿ ವಿಶೇಷ ಮಗು ಎಂದು ಹೇಳುತ್ತಾರೆ.

ಭಂಡಾರದಲ್ಲಿ, ಅವರು ಅನಾಥ ಪಿಂಡಕ್ ಎಂಬ ಹೆಸರಿನ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ. ಸಣ್ಣ ಸಣ್ಣ ದೇಣಿಗೆಗಳ ಮೂಲಕ ಅವರು ಈ ಅಕಾಡೆಮಿಯನ್ನು ಒಬ್ಬರೇ ನಿಭಾಯಿಸುತ್ತಾ ಬಂದಿದ್ದಾರೆ. ಮೂಲಕ ಹಣವನ್ನು ಸಂಗ್ರಹಿಸುತ್ತಾರೆ. ದುಂಡಗಿನ ಮುಖ ಮತ್ತು ತೀಕ್ಷ್ಣವಾದ, ಪ್ರೀತಿಯ ಕಣ್ಣುಗಳನ್ನು ಹೊಂದಿರುವ ಕುಳ್ಳಗಿನ ವ್ಯಕ್ತಿಯಾದ ಅವರು ಮಹಾತ್ವಾಂಕ್ಷೆಯೊಂದಿಗೆ ತನ್ನ ಬಳಿ ಬಂದಿರುವ ಮಕ್ಕಳಿಗೆ ಎಂದಿಗೂ ವೈಫಲ್ಯ ಮತ್ತು ಹಿನ್ನೆಡೆಗೆ ಹೆದರಬೇಡಿ ಎಂದು ಹುರಿದುಂಬಿಸುವ ಮಾತನ್ನಾಡುತ್ತಾರೆ.

PHOTO • Courtesy: Jayant Tandekar
PHOTO • Courtesy: Jayant Tandekar

ಎಡ : ಭಂಡಾರದ ಶಿವಾಜಿ ಕ್ರೀಡಾಂಗಣದಲ್ಲಿ ಊರ್ವಶಿ . ಬಲ : ಊರ್ವಶಿ ತಾಂಡೇಕರ್ ತನ್ನ ಅನಾಥ್ ಪಿಂಡಕ್ ಅಕಾಡೆಮಿ ಲ್ಲಿ ಇತರ ಮಕ್ಕಳಿಗಿಂತ ಹೆಚ್ಚು ಕಠಿಣ ತರಬೇತಿ ಪಡೆಯುತ್ತಾಳೆ

PHOTO • Courtesy: Jayant Tandekar
PHOTO • Jaideep Hardikar

ಎಡ: ತಾಂಡೇಕರ್‌ ಊರ್ವಶಿಯನ್ನು ತನ್ನ ಎರಡು ಕೋಣೆಗಳ ಮನೆಯಲ್ಲಿ ಇರಿಸಿಕೊಂಡು ಅವಳ ಲಾಲನೆ ಪಾಲನೆ ನೋಡಿಕೊಳ್ಳುತ್ತಾರೆ. ಬಲ: ಭಂಡಾರದ ಶಿವಾಜಿ ಕ್ರೀಡಾಂಗಣದಲ್ಲಿ ಬರಿಗಾಲಿನಲ್ಲಿ ಓಡು ತ್ತಿರುವ ಯುವ ಕ್ರೀಡಾಪಟುಗಳು

ಪ್ರತಿದಿನ ಬೆಳಗ್ಗೆ ಊರ್ವಶಿಯನ್ನು ಮೈದಾನಕ್ಕೆ ಕರೆತರುವ ಅವರು, ಇತರ ಮಕ್ಕಳು ಅಲ್ಲಿಗೆ ಬಂದು ಸೇರುವ ಮೊದಲೇ ಅವಳಿಗೆ ಒಂದಷ್ಟು ತರಬೇತಿಯನ್ನು ನೀಡುತ್ತಾರೆ. ಅವಳು ದಿನಾಲೂ ತನ್ನ ನಿಯಮಿತ ಅಭ್ಯಾಸವನ್ನು ಮಾಡಬೇಕು ಎಂದು ಅವರು ಹೇಳುತ್ತಾರೆ.

ಟ್ರ್ಯಾಕ್‌ ಸೂಟ್‌ ಧರಿಸಿದ ಊರ್ವಶಿ ಓಟದ ಟ್ರ್ಯಾಕಿನಲ್ಲಿ ಬೇರೆಯದೇ ಆದ ಸ್ಫೂರ್ತಿಯಲ್ಲಿರುತ್ತಾಳೆ. ತನ್ನ ಮಾಮಾ ಮತ್ತು ಗುರುವಿನ ಮಾರ್ಗದರ್ಶನದಲ್ಲಿ ಉತ್ಸಾಹದ ಬುಗ್ಗೆಯಾಗಿ ಕೂಗುತ್ತಾ ಓಡುತ್ತಾಳೆ. ಊರ್ವಶಿ ಸಾಗಬೇಕಾದ ದೂರ ಬಹಳವಿದೆ. ಅವಳು ಈಗಷ್ಟೇ ಅವಳು ಶಾಲಾ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ್ದಾಳೆ; ನಂತರ ತಾಂಡೇಕರ್ ಅವಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗಳಿಗೆ ಕರೆದೊಯ್ಯುವ ಗುರಿಯಲ್ಲಿದ್ದಾರೆ. ಅವಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಆಡುವುದನ್ನು ಕಾಣುವ ಕನಸಿದೆ ಅವರಿಗೆ,

ಏನೇ ಪರಿಸ್ಥಿತಿಯಿರಲಿ ಗ್ರಾಮೀಣ ಮಕ್ಕಳು ಓಟವನ್ನು ಕಲಿಯಬೇಕು ಎನ್ನುವುದು ತಾಂಡೇಕರ್‌ ಅವರ ಅಭಿಪ್ರಾಯ. ಪಿ.ಟಿ. ಉಷಾ ಮತ್ತು ಇತರರ ಉದಾಹರಣೆಗಳಿಂದ ಸ್ಫೂರ್ತಿ ಪಡೆಯಲು ಅವರು ಭಾರತದ ಕೆಲವು ಓಟಗಾರರ ಕಥೆಗಳನ್ನು ತಾಂಡೇಕರ್‌ ತಮ್ಮ ಮಕ್ಕಳಿಗೆ ಹೇಳುತ್ತಾರೆ. ಕಷ್ಟಪಟ್ಟು ಅಭ್ಯಾಸ ಮಾಡಿದರೆ, ದೊಡ್ಡ ಕನಸು ಕಂಡರೆ ತಾವೂ ಮಹತ್ವದ ಸಾಧನೆಯನ್ನು ಮಾಡಬಹುದು ಎಂದು ಅವರ ವಿದ್ಯಾರ್ಥಿಗಳಲ್ಲಿ ನಂಬಿಕೆ ಹುಟ್ಟುವಂತೆ ಅವರು ಮಾಡುತ್ತಿದ್ದಾರೆ.

ಆಹಾರ ಮತ್ತು ಪೋಷಣೆಯ ಮಹತ್ವವನ್ನು ಒತ್ತಿಹೇಳಲು ತಾಂಡೇಕರ್ ತಮ್ಮ ವೈಯಕ್ತಿಕ ಅನುಭವವನ್ನೇ ಬಳಸುತ್ತಾರೆ. ಅವರಿಗೆ ಬಾಲ್ಯದಲ್ಲಿ ಹಾಲು ಮೊಟ್ಟೆಗಳಂತಹ ಆಹಾರ ಸಿಗುತ್ತಿರಲಿಲ್ಲ. ಆದರೆ ಅವರು ಊರ್ವಶಿಗೆ ಇವೆಲ್ಲವೂ ಸಿಗುವಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಊರ್ವಶಿಯ ಆಹಾರದಲ್ಲಿ ಸಾಕಷ್ಟು ಪ್ರೋಟೀನ್‌, ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬು ಇರುವಂತೆ ನೋಡಿಕೊಳ್ಳುತ್ತಾರೆ. ಭಂಡಾರದಲ್ಲಿ ವಾಸಿಸುವ ತಾಂಡೇಕರ್‌ ಅವರ ಸಹೋದರಿ ಊರ್ವಶಿಗಾಗಿ ಮೀನನ್ನು ಕೊಟ್ಟುಕಳಿಸುತ್ತಾರೆ. ಜೊತೆಗೆ ಊರ್ವಶಿಯ ತಾಯಿ ತನ್ನ ಮಗಳ ಯೋಗಕ್ಷೇಮದ ಮೇಲ್ವಿಚಾರಣೆಗೆ ಮತ್ತು ಅವಳ ಶೈಕ್ಷಣಿಕ ಜವಾಬ್ದಾರಿ ಹಾಗೂ ದೈನಂದಿನ ಕೆಲಸಗಳಿ ಸಹಾಯ ಮಾಡಲೆಂದು ಆಗಾಗ ಭಂಡಾರಕ್ಕೆ ಬರುತ್ತಿರುತ್ತಾರೆ.

ಈ ತರಬೇತುದಾರ ತನ್ನ ಶಿಷ್ಯೆಗೆ ಒಳ್ಳೆಯ ಶೂಗಳನ್ನು ಸಹ ಕೊಡಿಸಿದ್ದಾರೆ, ಅವರು ತಮ್ಮ ಬಾಲ್ಯದ ದಿನಗಳಲ್ಲಿ ಅದನ್ನು ಕಂಡವರಲ್ಲ. ಓರ್ವ ಭೂರಹಿತ ಕಾರ್ಮಿಕರಾಗಿದ್ದ ತಾಂಡೇಕರ್‌, ತನ್ನ ಅಪ್ಪನಿಗೆ ಬದುಕು ನಡೆಸಲು ಬೇಕಾಗುವ ಸಾಮಾಗ್ರಿಗಳನ್ನು ಮನೆಗೆ ತರುವುದೇ ಕಷ್ಟವಿತ್ತು ಎನ್ನುತ್ತಾರೆ. ವಿಪರೀತ ಕುಡಿಯುತ್ತಿದ್ದ ಅಪ್ಪ ತಾನು ದುಡಿಯುತ್ತಿದ್ದ ಹಣದಲ್ಲಿ ದೊಡ್ಡ ಭಾಗವನ್ನು ತಮ್ಮ ದೈನಂದಿನ ಕುಡಿತಕ್ಕೆ ವ್ಯಯಿಸುತ್ತಿದ್ದರು ಎನ್ನುತ್ತಾರೆ. ತಾನು ಮತ್ತು ತನ್ನ ಒಡಹುಟ್ಟಿದವರು ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದ ದಿನಗಳೂ ಇದ್ದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

“ನಾನು ಟ್ರ್ಯಾಕಿನಲ್ಲಿ ಓಡುವ ಕನಸು ಕಂಡಿದ್ದೆ, ಆದರೆ ಅಂತಹ ಅವಕಾಶವೇ ನನಗೆ ಸಿಗಲಿಲ್ಲ” ಎಂದ ಅವರು ತನ್ನ ಮುಖದ ಮೇಲಿನ ಹತಾಶೆಯನ್ನು ಮರೆಮಾಚಲು ಸಣ್ಣ ನಗುವೊಂದನ್ನು ತನ್ನ ತುಟಿಯ ಮೇಲೆ ತಂದುಕೊಂಡರು.

PHOTO • Jaideep Hardikar
PHOTO • Jaideep Hardikar

ಊರ್ವಶಿಯ ಕೋಚ್‌ ಅವಳ ಆಹಾರವಾಗಿ ಮೊಟ್ಟೆ, ಹಾಲನ್ನು ನೀಡುತ್ತಾರೆ. ಜೊತೆಗೆ ಸಾಕಷ್ಟು ಪ್ರೋಟೀನ್‌, ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬಿನಂಶ ಇರುವಂತೆ ನೋಡಿಕೊಳ್ಳುತ್ತಾರೆ

ಊರ್ವಶಿ ಮತ್ತು ಅವಳಂತಹವರು ದೊಡ್ಡ ದೊಡ್ಡ ಅವಕಾಶವನ್ನು ಪಡೆಯಲು ಅವರಿಗೆ ಆರೋಗ್ಯಕರ ಆಹಾರ, ಒಳ್ಳೆಯ ಶೂಗಳು ಮತ್ತು ಇತರ ಮೂಲಭೂಲತ ಅವಶ್ಯಕತೆಗಳು ಸಿಗಬೇಕು ಎನ್ನುವುದು ತಾಂಡೇಕರ್‌ ಅವರಿಗೆ ಅರಿವಿದೆ.

ಇದೆಲ್ಲವನ್ನು ಗಳಿಸಲು ಮಕ್ಕಳು ಒಳ್ಳೆಯ ಶಾಲೆಗೆ ಸೇರಿ ಉತ್ತಮ ಸ್ಪರ್ಧೆಯನ್ನು ನೀಡಬೇಕು ಎನ್ನುತ್ತಾರೆ.

ಇದರ ಜೊತೆಗೆ ಪಾದ ಉಳುಕುವುದು, ಸ್ನಾಯು ಮರಗಟ್ಟುವುದು, ಬಳಲಿಕೆ ಮತ್ತು ಬೆಳವಣಿಗೆಯ ವೇಗವನ್ನು ನಿರ್ವಹಿಸಲು ಸಾಕಷ್ಟು ವೈದ್ಯಕೀಯ ಬೆಂಬಲವೂ ಬೇಕು.

“ಇದೆಲ್ಲ ಸಿಗುವುದು ಕಷ್ಟವಿದೆ. ಆದರೆ ನಾನು ಈ ಮಕ್ಕಳಿಗೆ ಕನಿಷ್ಠ ದೊಡ್ಡ ಕನಸು ಕಾಣುವುದು ಹೇಗೆ ಎನ್ನುವುದನ್ನಾದರೂ ಕಲಿಸುತ್ತೇನೆ” ಎಂದು ಅವರು ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Jaideep Hardikar

ଜୟଦୀପ ହାର୍ଦିକର୍‌ ନାଗପୁରର ଜଣେ ସାମ୍ବାଦିକ ଏବଂ ଲେଖକ, ଏବଂ PARIର ଜଣେ କୋର୍‌ ଟିମ୍‌ ସଦସ୍ୟ

ଏହାଙ୍କ ଲିଖିତ ଅନ୍ୟ ବିଷୟଗୁଡିକ ଜୟଦୀପ ହାର୍ଦିକର
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru