“ಆವೋ ಸುನೋ ಅಪ್ನಾ ಭವಿಷ್ಯವಾಣಿ, ಸುನೀ ಅಪ್ನಿ ಆಗೇ ಕಿ ಕಹಾನಿ…” ಎನ್ನುವ ಅವರ ದನಿ ಜುಹು ಬೀಚಿನ ಗದ್ದಲದಲ್ಲಿ ದಿನಾಲು ಸಂಜೆ ಯಾವುದೋ ನಿಗೂಢ ಮಂತ್ರದಂತೆ ಪ್ರತಿಧ್ವನಿಸುತ್ತಿರುತ್ತದೆ. ಮುಂಬಯಿ ಉಪನಗರದ ಈ ಸುಂದರ ಕಡಲ ತೀರದಲ್ಲಿ ಸೂರ್ಯ ಮುಳುಗುವ ಹೊತ್ತಿಗೆ ಸುಮಾರು 27 ವರ್ಷ ಪ್ರಾಯದ ಉದಯ ಕುಮಾರ್ ಅಲ್ಲಿ ಓಡಾಡುವ ಜನರನ್ನು ಭವಿಷ್ಯ ಕೇಳುವಂತೆ ಆಹ್ವಾನಿಸುತ್ತಾರೆ.
ಅವರೊಬ್ಬ ಅಭಿಜಾತ ಜ್ಯೋತಿಷಿ, ಹಸ್ತ ಸಾಮುದ್ರಿಕದವರೋ ಅಥವಾ ಗಿಳಿ ಇಟ್ಟುಕೊಂಡು ಭವಿಷ್ಯ ಹೇಳುವವರೋ ಅಲ್ಲ. ಅವರು ತನ್ನ ಜೊತೆಗೆ ಒಂದು ಸುಮಾರು ಒಂದು ಅಡಿ ಎತ್ತರದ ಬೆಳಕಿನಿಂದ ಅಲಂಕರಿಸಿದ ರೋಬೊ ಇಟ್ಟುಕೊಂಡಿದ್ದಾರೆ. ಆ ರೋಬೊದ ಕೆಳಗೆ ನಾಲ್ಕು ಅಡಿ ಎತ್ತರದ ಒಂದು ಮಡಚಬಹುದಾದ ಟೇಬಲ್ ಇದೆ. ಆ ಟೇಬಲ್ ಸ್ಟ್ಯಾಂಡಿನ ಒಳಗೆ ಒಂದು ನಿಗೂಢ ಕಪ್ಪು ಪೆಟ್ಟಿಗೆಯಿದೆ. “ಇದನ್ನು ಲೈವ್ ಜ್ಯೋತಿಷ್ ಕಂಪ್ಯೂಟರ್ ಲೈವ್ ಸ್ಟೋರಿ” ಎಂದು ಕರೆಯಲಾಗುತ್ತದೆ ಎಂದು ತನ್ನ ರೋಬೊವನ್ನು ಈ ವರದಿಗಾರರಿಗೆ ಅವರು ಪರಿಚಯಿಸಿದರು.
ಈ ಯಂತ್ರವು ಮನುಷ್ಯರ ಭವಿಷ್ಯವನ್ನು ಗ್ರಹಿಸಬಲ್ಲದು ಎಂದು ಅವರು ಹೇಳುತ್ತಾರೆ. ತನ್ನ ಬಳಿಗೆ ಬಂದ ಗ್ರಾಹಕರಿಗೆ ಅವರು ಹೆಡ್ ಫೋನ್ ಒಂದನ್ನು ಹಸ್ತಾಂತರಿಸುತ್ತಾರೆ. ಒಂದು ಸಣ್ಣ ಮೌನದ ನಂತರ ಮಹಿಳಾ ದನಿಯೊಂದು ಹಿಂದಿಯಲ್ಲಿ ಆ ವ್ಯಕ್ತಿಯ ಭವಿಷ್ಯದಲ್ಲಿ ಅಡಗಿರುವ ಸಂಗತಿಗಳನ್ನು ಹೇಳತೊಡಗುತ್ತದೆ. ಇದಕ್ಕೆ 30 ರೂಪಾಯಿ ಪಾವತಿಸಬೇಕು.
ಕೆಲವು ದಶಕಗಳ ಹಿಂದೆ ಬಿಹಾರದ ಗೆಂದಾ ಎನ್ನುವ ಕುಗ್ರಾಮದಿಂದ ಮುಂಬೈಗೆ ಸ್ಥಳಾಂತರಗೊಂಡ ತನ್ನ ಚಿಕ್ಕಪ್ಪ ರಾಮ್ ಚಂದರ್ (ಮತ್ತು ಅವರನ್ನು ನಗರದಲ್ಲಿ ರಾಜು ಎಂದು ಗುರುತಿಸಲಾಗುತ್ತಿತ್ತು) ಅವರಿಂದ ಆನುವಂಶಿಕವಾಗಿ ತನ್ನದಾಗಿಸಿಕೊಂಡ ಈ ತಾಂತ್ರಿಕ ಅದ್ಭುತದ ಏಕೈಕ ರಕ್ಷಕ ಉದಯ್. ಪ್ರತಿ ಬಾರಿ ಚಿಕ್ಕಪ್ಪ ಊರಿಗೆ ಬರುವಾಗ ತನ್ನೊಂದಿಗೆ ನಗರದ ಕಥೆಗಳನ್ನು ಸಹ ತರುತ್ತಿದ್ದರು. "ಚಾಚಾ ತಾನು [ತಂದೆಯ ತಮ್ಮ] ಭವಿಷ್ಯವನ್ನು ಹೇಳಬಲ್ಲ ಅಜೂಬಾ [ವಿಚಿತ್ರ ವಸ್ತು] ಹೊಂದಿದ್ದು ಅದರ ಮೂಲಕ ಹಣವನ್ನು ಸಂಪಾದಿಸುತ್ತಿರುವುದಾಗಿ ಹೇಳಿದರು. ಇದನ್ನು ಕೇಳಿ ಅನೇಕರು ನಕ್ಕು ತಮಾಷೆಗೆ ಹೇಳುತ್ತಿರಬಹುದು ಎಂದುಕೊಂಡರು. ಆದರೆ ನಾನು ಅವರ ಮಾತಿನಿಂದ ಆಕರ್ಷಿತನಾಗಿದ್ದೆ!" ಎಂದು ಉದಯ್ ನೆನಪಿಸಿಕೊಳ್ಳುತ್ತಾರೆ. ರಾಜು ತನ್ನ 11 ವರ್ಷದ ಅಣ್ಣನ ಮಗನಿಗೆ ನಗರ ಜೀವನದ ಅದ್ಭುತಗಳನ್ನು ಮತ್ತು ಯಂತ್ರದ ಅದ್ಭುತಗಳನ್ನು ಪರಿಚಯಿಸಿದ್ದರು.















