ರಾಯಪುರದ ಹೊರವಲಯದ ಇಟ್ಟಿಗೆ ಭಟ್ಟಿಯಲ್ಲಿ ಅದು ಊಟದ ಸಮಯ. ಅಲ್ಲಿದ್ದ ಕೆಲಸದವರಲ್ಲಿ ಕೆಲವರು ಗಡಿಬಿಡಿಯಲ್ಲಿ ಊಟ ಮಾಡುತ್ತಿದ್ದರೆ ಇನ್ನೂಕೆಲವರು ಅಲ್ಲಿದ್ದ ತಾತ್ಕಾಲಿಕ ಗುಡಿಸಲುಗಳಲ್ಲಿ ವಿರಾಮ ಪಡೆಯುತ್ತಿದ್ದರು.
"ನಾವು ಸತ್ನಾದಿಂದ ಬಂದವರು" ಎಂದು ಮಹಿಳೆಯೊಬ್ಬರು ತಮ್ಮ ಮಣ್ಣಿನ ಗುಡಿಸಲಿನಿಂದ ಹೊರಬರುತ್ತಾ ಹೇಳಿದರು. ಇಲ್ಲಿನ ಹೆಚ್ಚಿನ ಕಾರ್ಮಿಕರು ಮಧ್ಯಪ್ರದೇಶದಿಂದ ವಲಸೆ ಬಂದವರು. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಕೊಯ್ಲಿನ ಹಂಗಾಮು ಮುಗಿದ ನಂತರ ಅವರು ಛತ್ತೀಸಗಢದ ರಾಜಧಾನಿಗೆ ಬರುತ್ತಾರೆ ಮತ್ತು ಮೇ ಅಥವಾ ಜೂನ್ ತನಕ ಆರು ತಿಂಗಳ ಕಾಲ ಇಲ್ಲಿ ಇರುತ್ತಾರೆ. ಭಾರತದ ವಿಶಾಲವಾದ ಇಟ್ಟಿಗೆ ಉದ್ಯಮವು ಅಂದಾಜು 10-23 ಮಿಲಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದೆ (ಭಾರತದ ಇಟ್ಟಿಗೆ ಗೂಡುಗಳಲ್ಲಿ ಗುಲಾಮಗಿರಿ, 2017 ).
ಈ ವರ್ಷ, ಅವರು ಮನೆಗೆ ಹಿಂದಿರುಗುವ ಹೊತ್ತಿಗೆ, ಕೇಂದ್ರದಲ್ಲಿ ಹೊಸ ಸರ್ಕಾರ ಬಂದಿರುತ್ತದೆ. ಆದರೆ ನಾಯಕರನ್ನು ಆಯ್ಕೆ ಮಾಡುವಲ್ಲಿ ಇಲ್ಲಿನ ವಲಸೆ ಕಾರ್ಮಿಕರ ಪಾತ್ರವಿರಲಿದೆಯೇ ಎಂಬುದು ಅನಿಶ್ಚಿತವಾಗಿದೆ.
"ಮತದಾನದ ಸಮಯ ಬಂದಾಗ ನಮಗೆ ತಿಳಿಸಲಾಗುತ್ತದೆ" ಎಂದು ಹೆಸರು ಹೇಳಲು ಬಯಸದ ಮಹಿಳೆ ಪರಿಗೆ ತಿಳಿಸಿದರು.
ಬಹುಶಃ ಈ ಮಾಹಿತಿಯನ್ನು ಅವರ ಗುತ್ತಿಗೆದಾರ ಸಂಜಯ್ ಪ್ರಜಾಪತಿ ಒದಗಿಸುತ್ತಾರೆ. ಗುಡಿಸಲುಗಳಿಂದ ಸ್ವಲ್ಪ ದೂರದಲ್ಲಿ ನಿಂತು ಮಾತನಾಡುತ್ತಿದ್ದ ಅವರು, "ಸತ್ನಾದಲ್ಲಿ ಮತದಾನ ಯಾವಾಗ ಎನ್ನುವುದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮಗೆ ಮಾಹಿತಿ ದೊರೆತಾಗ ನಾವು ಅವರಿಗೆ ತಿಳಿಸುತ್ತೇವೆ” ಎಂದು ಹೇಳಿದರು. ಸಂಜಯ್ ಮತ್ತು ಇಲ್ಲಿನ ಅನೇಕ ಕಾರ್ಮಿಕರು ಪ್ರಜಾಪತಿ ಸಮುದಾಯಕ್ಕೆ ಸೇರಿದವರು (ಮಧ್ಯಪ್ರದೇಶದಲ್ಲಿ ಇತರ ಹಿಂದುಳಿದ ವರ್ಗಗಳಡಿ ಎಂದು ಪಟ್ಟಿ ಮಾಡಲಾಗಿದೆ).
ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ತನಕ ಸಮೀಪಿಸಬಹುದಾದ ಏಪ್ರಿಲ್ ತಿಂಗಳ ಬಿರು ಬೇಸಗೆಯ ಬಿಸಿಲಿನಲ್ಲಿ, ಇಟ್ಟಿಗೆ ಭಟ್ಟಿಗಳಲ್ಲಿನ ಕಾರ್ಮಿಕರು ಇಟ್ಟಿಗೆಗಳನ್ನು ರೂಪಿಸುವುದು, ಸುಡುವುದು, ಸಾಗಿಸುವುದು ಮತ್ತು ಲೋಡ್ ಮಾಡುವ ಶ್ರಮದಾಯಕ ಕಾರ್ಯಗಳನ್ನು ನಿರ್ವಹಿಸುತ್ತಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ( 2019 ) ವರದಿಯ ಪ್ರಕಾರ, ಇಟ್ಟಿಗೆಗಳನ್ನು ತಯಾರಿಸುವ ಕಾರ್ಮಿಕರು ಪ್ರತಿದಿನ ಸುಮಾರು 400 ರೂ.ಗಳನ್ನು ಸಂಪಾದಿಸುತ್ತಾರೆ. ದಂಪತಿಗಳು ಒಂದು ಘಟಕವಾಗಿ ಕೆಲಸ ಮಾಡಿದರೆ, ಅವರಿಗೆ 600-700 ರೂ.ಗಳನ್ನು ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ. ಒಂದು ಘಟಕವಾಗಿ ಕೆಲಸ ಮಾಡುವುದು ಇಲ್ಲಿನ ಕಾರ್ಮಿಕರ ನಡುವೆ ಸಾಮಾನ್ಯ.
ಉದಾಹರಣೆಗೆ ರಾಮ್‌ಜಸ್ ತನ್ನ ಪತ್ನಿ ಪ್ರೀತಿಯವರೊಂದಿಗೆ ಇಲ್ಲಿ ಜೋಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ಶೆಡ್ ಅಡಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ 20ರ ಹರೆಯದ ಈ ಯುವಕನಿಗೆ ಚುನಾವಣೆ ಯಾವ ದಿನ ನಡೆಯಲಿದೆ ಎನ್ನುವುದರ ಕುರಿತು ಖಚಿತವಾಗಿ ತಿಳಿದಿಲ್ಲ. ಬಹುಶಃ ಮೇ ತಿಂಗಳಿನ ಯಾವುದೋ ಒಂದು ದಿನ ನಡೆಯಬಹುದು ಎಂದು ಅವರು ಹೇಳಿದರು.
“ನಾವು 1,500 ಸಾವಿರ ಖರ್ಚು ಮಾಡಿಕೊಂಡು ಸತ್ನಾಕ್ಕೆ ಹೋಗಿ ಮತ ಚಲಾಯಿಸುತ್ತಿದ್ದೆವು. ಅದು ನಮ್ಮ ಹಕ್ಕು” ಎಂದು ಹೇಳಿದರು. ಮತ ಹಾಕಲು ಎಲ್ಲರೂ ಹೋಗುತ್ತಾರೆಯೇ ಎಂದು ನಾವು ಕೇಳಿದ ಪ್ರಶ್ನೆಗೆ ರಾಮಜಸ್ ಸುಮ್ಮನಾದಾಗ, ಸಂಜಯ್ ನಡುವೆ ಪ್ರವೇಶಿಸಿ “ಸಬ್ ಜಾತೇ ಹೈ [ಎಲ್ಲರೂ ಹೋಗುತ್ತಾರೆ]” ಎಂದು ಹೇಳಿದರು.
ಸತ್ನಾದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಿತು ಮತ್ತು ಈ ವರದಿಗಾರ ಏಪ್ರಿಲ್ 23ರಂದು ಕಾರ್ಮಿಕರೊಂದಿಗೆ ಮಾತನಾಡಿದರು. ಈ ಸಮಯದಲ್ಲಿ ಅವರಲ್ಲಿ ಯಾರ ಬಳಿಯೂ ರೈಲು ಟಿಕೆಟ್ ಇರಲಿಲ್ಲ.
ರಾಮ್‌ಜಸ್ ವಲಸೆ ಕಾರ್ಮಿಕರ ಕುಟುಂಬದಿಂದ ಬಂದವರು. ಅವರ ತಂದೆ ಕೂಡ ಛತ್ತೀಸಗಢದ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದರು. ರಾಮ್‌ಜಸ್ 10ನೇ ತರಗತಿಯಲ್ಲಿದ್ದಾಗ ತಂದೆಯನ್ನು ಕಳೆದುಕೊಂಡರು. ಮೂವರು ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಕಿರಿಯವರಾದ ರಾಮ್‌ಜಸ್ ಶಾಲೆಯನ್ನು ಪೂರ್ಣಗೊಳಿಸಿದ ನಂತರ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಅಣ್ಣಂದಿರು ಸಹ ಸತ್ನಾ ಜಿಲ್ಲೆಯ ತಮ್ಮ ಹಳ್ಳಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ರಾಮ್‌ಜಸ್ ಐದು ವರ್ಷಗಳಿಂದ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಹಬ್ಬಗಳು ಅಥವಾ ತುರ್ತು ಸಂದರ್ಭಗಳಲ್ಲಿ ಮನೆಗೆ ಹೋಗುತ್ತಾರೆ. ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮುಗಿದ ನಂತರವೂ ಅವರು ಇಲ್ಲಿಯೇ ಇದ್ದು ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಜನಗಣತಿಯ ಅಂಕಿಅಂಶಗಳ ಪ್ರಕಾರ (2011) ಮಧ್ಯಪ್ರದೇಶದಲ್ಲಿ 24,15,635 ಜನರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ.
ಆದರೆ ಇಲ್ಲಿ ಮತದಾನ ತಪ್ಪಿಸಿಕೊಳ್ಳುವುದು ಕೇವಲ ಹೊರ ರಾಜ್ಯದ ಕಾರ್ಮಿಕರಷ್ಟೇ ಅಲ್ಲ.
ರಾಯ್ಪುರದಲ್ಲಿ ಪ್ರತಿಪಕ್ಷಗಳು ಇಲ್ಲವೇ ಇಲ್ಲವೆನ್ನುವಷ್ಟು ಬಲಹೀನವಾಗಿರುವುದರಿಂದಾಗಿ ಚುನಾವಣಾ ಪ್ರಚಾರ ಕಳಾಹೀನವಾಗಿದೆ. ಹೊರವಲಯದಲ್ಲಿರುವ ಇಟ್ಟಿಗೆ ಭಟ್ಟಿಗಳ ಸುತ್ತಮುತ್ತ ಎಲ್ಲೂ ಪೋಸ್ಟರ್ ಅಥವಾ ಬ್ಯಾನರ್ ಕಾಣುವುದಿಲ್ಲ. ಧ್ವನಿವರ್ಧಕಗಳಲ್ಲಿ ಅಭ್ಯರ್ಥಿ ಮತ ಕೇಳಲು ಬರುವ ಘೋಷಣೆಯೂ ಕೇಳುವುದಿಲ್ಲ.
ಛತ್ತೀಸಗಢದ ಬಲೋಡಾಬಜಾರ್ ಜಿಲ್ಲೆಯ ಮಹಿಳೆಯೊಬ್ಬರು ಮರದ ಕೆಳಗೆ ಕುಳಿತು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದರು. ಅವರು ತನ್ನ ಪತಿ ಮತ್ತು ನಾಲ್ಕು ಮಕ್ಕಳೊಂದಿಗೆ ಇಲ್ಲಿದ್ದಾರೆ. "ನಾನು ಮೂರು-ನಾಲ್ಕು ತಿಂಗಳ ಹಿಂದೆ ಮತ ಚಲಾಯಿಸಿದ್ದೇನೆ" ಎಂದು 2023ರ ನವೆಂಬರ್ ತಿಂಗಳಿನಲ್ಲಿ ನಡೆದ ಛತ್ತೀಸಗಢ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ. ಆದರೆ ಮತ ಚಲಾಯಿಸುವ ಸಮಯ ಬಂದಾಗ ತನ್ನ ಊರಿಗೆ ಹೋಗುವುದಾಗಿ ಅವರು ಹೇಳುತ್ತಾರೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಅವರ ಗ್ರಾಮದ ಸರಪಂಚ್ ಸಂದೇಶವನ್ನು ಕಳುಹಿಸಿದ್ದರು. ಜೊತೆಗೆ ಪ್ರಯಾಣ ಮತ್ತು ಆಹಾರದ ಖರ್ಚಿಗಾಗಿ 1500 ರೂ. ಹಣವನ್ನೂ ಕಳುಹಿಸಿದ್ದರು.
“ನಮಗೆ ಫೋನ್ ಮಾಡಿ ವಿಷಯ ತಿಳಿಸುವ ವ್ಯಕ್ತಿಯೇ ಹಣವನ್ನೂ ಕೊಡುತ್ತಾನೆ” ಎಂದು ಅವರು ಹೇಳುತ್ತಾರೆ. ರಾಯ್ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಲೋಡಾಬಜಾರ್ ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ.
ಅನುವಾದ: ಶಂಕರ. ಎನ್. ಕೆಂಚನೂರು