60 ವರ್ಷಗಳ ಹಿಂದೆ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿ, ಈ ಇಬ್ಬರೂ ಬೇರೆ ಬೇರೆ ದಿಕ್ಕಿನಲ್ಲಿ ನಡೆದು ಹೋದಾಗ ಅವರ ನಡುವೆ ಕಹಿ ಭಾವನೆ ಅಥವಾ ದುಃಖ ಇರಲಿಲ್ಲವೇ? ಅದು ಒಳ್ಳೆಯ ಬೇರ್ಪಡುವಿಕೆಯಂತೂ ಆಗಿರಲಿಲ್ಲ.
ʻಆದರೆ, ಆನಂತರವೂ ನಾವು ಹಲವು ವಿಷಯಗಳ ಬಗ್ಗೆ ಹಾಗೂ ಹೋರಾಟಗಳಲ್ಲಿ ಒಟ್ಟಿಗೇ ಕೆಲಸ ಮಾಡಿದ್ದೇವೆ ಮೊದಲು ಯಾವ ರೀತಿಯಲ್ಲಿದ್ದೆವೋ ಅದೇ ರೀತಿಯಲ್ಲಿಯೇʼ ಎಂದರು ನಲ್ಲಕುನ್ನು.
ʻನಾವಿಬ್ಬರೂ ಒಟ್ಟಿಗೇ ಸೇರಿದಾಗ ನಾವು ಒಂದೇ ಪಕ್ಷʼ ಎಂದರು ಶಂಕರಯ್ಯ.
ಅವರು ಈಗ ಉಲ್ಬಣಗೊಂಡಿರುವ ಕೋಮು ಹಿಂಸಾಚಾರ ಹಾಗೂ ದ್ವೇಷಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಯಾವ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಅವರು ಸಹಾಯ ಮಾಡಿದ್ದರೋ ಆ ದೇಶದ ಉಳಿವಿನ ಬಗ್ಗೆ ಅವರಿಗೆ ಆತಂಕವಿದೆಯೇ?
ʻಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಪರಿಸ್ಥಿತಿ ನಿರಾಶಾದಾಯಕವಾಗಿದೆ ಎನ್ನುವ ಸಂದರ್ಭಗಳೂ ಇದ್ದವು. ನೀವು ಗೆಲ್ಲಲು ಸಾಧ್ಯವೇ ಇಲ್ಲ. ಏಕೆಂದರೆ ನೀವು ತಿರುಗಿ ಬಿದ್ದಿರುವುದು ಅತಿ ದೊಡ್ಡ ಸಾಮ್ರಾಜ್ಯದ ವಿರುದ್ಧ ಎನ್ನುತ್ತಿದ್ದರು. ನಮ್ಮನ್ನು ಹೋರಾಟದಿಂದ ದೂರ ಇರಿಸುವಂತೆ ನಮ್ಮ ಕೆಲವು ಮನೆಗಳವರಿಗೆ ತಾಕೀತು ಸಹಾ ಮಾಡಿದ್ದರು. ಆದರೆ, ನಾವು ಆ ಎಲ್ಲಾ ಎಚ್ಚರಿಕೆ, ಬೆದರಿಕೆಯನ್ನು ಮೀರಿ ಹೋರಾಟ ನಡೆಸಿದೆವು. ಹಾಗಾಗಿಯೇ ನಾವು ಇಂದು ಇಲ್ಲಿದ್ದೇವೆʼ ಎಂದರು ನಲ್ಲಕುನ್ನು.
ನಾವು ಈ ಮೊದಲಿನಂತೆ ಜನರ ಬಳಿ ಹೋಗಿ ಅವರಿಂದ ತಿಳಿಯಲು ವಿಶಾಲ ಮೈತ್ರಿಯನ್ನು ರೂಪಿಸುವ ಆಗತ್ಯ ಇದೆ ಎಂದು ಇಬ್ಬರೂ ಅಭಿಪ್ರಾಯಪಟ್ಟರು. ʻನನಗೆ ಗೊತ್ತಿರುವ ಪ್ರಕಾರ ಇಎಂಎಸ್ (ಇಎಂಎಸ್ ನಂಬೂದರಿಪಾಡ್) ಅವರ ಕೊಠಡಿಯಲ್ಲಿಯೂ ಗಾಂಧೀಜಿಯವರ ಚಿತ್ರವಿದೆʼ ಎಂದರು ಆರ್‌ಎನ್‌ಕೆ.
ನಮ್ಮ ನಡುವಿನ ಲಕ್ಷಾಂತರ ಜನರನ್ನು ಭೀತಿಗೆ ತಳ್ಳಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಅವರಿಬ್ಬರೂ ಅದು ಹೇಗೆ ಅಷ್ಟು ಶಾಂತಚಿತ್ತವಾಗಿ ಹಾಗೂ ಆಶಾವಾದಿಗಳಾಗಿ ಉಳಿಯಲು ಸಾಧ್ಯ?. ನಲ್ಲಕಣ್ಣುಹೇಳಿದರು, ʻನಾವು ಇದಕ್ಕಿಂತಾ ಭೀಕರವಾದದ್ದನ್ನು ಕಂಡಿದ್ದೇವೆʼ.
ಷರಾ:
2022 ರ ಸ್ವಾತಂತ್ರ್ಯ ದಿನದಂದು - ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ ಈಗಾಗಲೇ ಮುದ್ರಣಾಲಯಕ್ಕೆ ಹೋಗಿತ್ತು, ಆ ಸಮಯದಲ್ಲಿ ತಮಿಳುನಾಡು ಸರ್ಕಾರವು ಆರ್‌ಎನ್‌ಕೆ ಅವರಿಗೆ ತಗೈಸಲ್ ತಮಿಳರ್ ಪ್ರಶಸ್ತಿಯನ್ನು ನೀಡಿತು. ಈ ಪ್ರಶಸ್ತಿಯನ್ನು 2021ರಲ್ಲಿ ಸ್ಥಾಪಿಸಲಾಗಿದ್ದು, ರಾಜ್ಯ ಹಾಗೂ ತಮಿಳು ಸಮುದಾಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಗಣ್ಯರಿಗೆ ಇದನ್ನು ನೀಡಲಾಗುತ್ತದೆ. 10 ಲಕ್ಷ ರೂಪಾಯಿಗಳ ನಗದು ಬಹುಮಾನ ಹೊಂದಿರುವ ಈ ಪ್ರಶಸ್ತಿಯನ್ನು ತಗೈಸಲ್ ತಮಿಳರ್ ಪ್ರಶಸ್ತಿಯನ್ನು ನೀಡಿತು. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಸೇಂಟ್ ಜಾರ್ಜ್ ಕೋಟೆಯ ಮೇಲಿನಿಂದ ಆರ್‌ಎನ್‌ಕೆ ಅವರಿಗೆ ಅರ್ಪಿಸಿದರು.
ಅನುವಾದ: ಜಿ ಎನ್ ಮೋಹನ್