“ಒಂದು ಕಾಲದಲ್ಲಿ ಪಟ್ನಾದಲ್ಲಿ ವಾರವಿಡೀ ಗಾಳಿಪಟ ಸ್ಪರ್ಧೆಗಳು ನಡೆಯುತ್ತಿದ್ದವು. ಲಕ್ನೋ, ದೆಹಲಿ, ಮತ್ತು ಹೈದರಬಾದಿನ ಕಡೆಯಿಂದೆಲ್ಲ ಸ್ಪರ್ಧಿಗಳು ಬರುತ್ತಿದ್ದರು. ಅದೊಂದು ಹಬ್ಬದ ಹಾಗೆ ನಡೆಯುತ್ತಿತ್ತು” ಎನ್ನುತ್ತಾರೆ ಸೈಯದ್ ಫೈಜಾನ್ ರಜಾ. ನಾವು ಆಕಾಶದ ನೀಲಿಯನ್ನು ಪ್ರತಿಫಲಿಸುತ್ತಾ ಹರಿಯುತ್ತಿದ್ದ ಗಂಗಾ ತೀರದ ಗುಂಟ ನಡೆಯುತ್ತಾ ಮಾತನಾಡುತ್ತಿರುವಾಗ, ಒಂದು ಕಾಲದಲ್ಲಿ ಇಲ್ಲಿ ಸಾವಿರಾರು ಗಾಳಿಪಟಗಳು ಆಗಸವನ್ನು ಚುಂಬಿಸುತ್ತಿದ್ದವು ಎಂದು ಹೇಳಿದರು.
ಪಟ್ನಾ ನದಿ ತೀರದಲ್ಲಿರುವ ಧೂಲಿಘಾಟ್ ಪ್ರದೇಶದ ಹಿರಿಯ ನಿವಾಸಿಯಾದ ರಜಾ ಅವರು, ಇಲ್ಲಿನ ಶ್ರೀಮಂತರಿಂದ ಹಿಡಿದು ತವಾಯಿಫ್‌ಗಳ ತನಕ ಎಲ್ಲಾ ಸಾಮಾಜಿಕ ವರ್ಗದ ಜನರೂ ಈ ಕ್ರೀಡೆಗೆ ಬೆಂಬಲ ನೀಡಿದ್ದರು ಎನ್ನುತ್ತಾರೆ. “ಬಿಸ್ಮಿಲ್ಲಾ ಜಾನ್ (ತವಾಯಿಫ್) ಆಶ್ರಯ ನೀಡುತ್ತಿದ್ದರು, ಹಾಗೂ ಮೀರ್ ಅಲಿ ಜಮೀನ್ ಮತ್ತು ಮೀರ್ ಕೆಫಾಯತ್ ಅಲಿ ಪಟಾಂಗ್-ಸಾಜಿ [ಗಾಳಿಪಟಗಳನ್ನು ತಯಾರಿಸುವುದು] ಮತ್ತು ಪತಂಗ್-ಬಾಜಿ [ಗಾಳಿಪಟ ಹಾರಿಸುವ ಕ್ರೀಡೆ] ಯ ಕೆಲವು ಪ್ರಸಿದ್ಧ ಉಸ್ತಾದರು."
ಪಟ್ನಾದ ಗುಡ್‌ಹಟ್ಟಾ ಪ್ರದೇಶ ಮತ್ತು ಅಶೋಕ ರಾಜಪಥದ ಬಳಿಯ ಖ್ವಾಜಾಕಲಾ ನಡುವಿನ ಪ್ರದೇಶವು (ಸುಮಾರು 700-800 ಮೀಟರ್ ದೂರ) ಈ ಕ್ರೀಡೆಗೆ ಬೇಕಾದ ಸರಕುಗಳನ್ನು ಪೂರೈಸುವ ಅಂಗಡಿಗಳಿಂದ ತುಂಬಿತ್ತು. ಅವರ ಅಂಗಡಿಗಳ ಹೊರಗೆ ಬಣ್ಣ ಬಣ್ಣದ ಪಟಗಳು ಗ್ರಾಹಕರನ್ನು ಆಹ್ವಾನಿಸುತ್ತಾ ನೇತಾಡುತ್ತಿದ್ದವು. “ಪಟ್ನಾದಲ್ಲಿ ಗಾಳಿಪಟಗಳಿಗೆ ಬಳಸಲಾಗುವ ದಾರವು ಇತರೆಡೆಗಳಿಗಿಂತಲೂ ದಪ್ಪವಿರುತ್ತಿತ್ತು. ನಾಖ್ ಎನ್ನುವ ಹೆಸರಿನಿಂದ ಜನಪ್ರಿಯವಾಗಿರುವ ಇದನ್ನು ಹತ್ತಿ ಮತ್ತು ರೇಶ್ಮೆಯನ್ನು ಸೇರಿಸಿ ಹೆಣೆಯಲಾಗುತ್ತಿತ್ತು” ಎಂದು ಅವರು ಹೇಳುತ್ತಾರೆ.
ಬಲ್ಲೌ ಎನ್ನುವ ಮಾಸಿಕ ಪತ್ರಿಕೆ ತನ್ನ 1868ರ ಪ್ರತಿಯೊಂದರಲ್ಲಿ ಪಟ್ನಾ ಗಾಳಿಪಟಗಳಿಗೆ ಹೆಸರುವಾಸಿಯಾದ ಊರು ಎನ್ನುತ್ತದೆ. “ಯಾರಾದರೂ ವ್ಯವಹಾರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಬಯಸಿದ್ದಲ್ಲಿ ಈ ಊರಿನಲ್ಲಿ ಒಂದು ಗಾಳಿಪಟದ ಅಂಗಡಿಯನ್ನು ತೆರೆಯಬೇಕು. ಇಲ್ಲಿನ ಪ್ರತಿ ಹತ್ತು ಅಂಗಡಿಗಳಿಗೆ ಒಂದರಂತೆ ಗಾಳಿಪಟ ಮಾರುವ ಅಂಗಡಿಗಳಿವೆ. ಇದನ್ನು ನೋಡಿದರೆ ಊರಿಗೆ ಊರೇ ಗಾಳಿಪಟ ಹಾರಿಸುತ್ತದೆಯೇನೋ ಎನ್ನಿಸತೊಡಗುತ್ತದೆ. ಪಟವು ವಜ್ರದ ಆಕಾರದಲ್ಲಿರುತ್ತದೆ. ಗರಿಯಷ್ಟೇ ಹಗುರವಾಗಿರುವ ಇದಕ್ಕೆ ಬಾಲವಿರುವುದಿಲ್ಲ ಮತ್ತು ಸಾಧ್ಯವಿರುವಷ್ಟು ಹಗುರವಾಗಿರುವ ದಾರ ಬಳಸಿ ಇವುಗಳನ್ನು ಹಾರಿಸಲಾಗುತ್ತದೆ.”
ಆದರೆ ಈಗ ನೂರು ವರ್ಷಗಳ ನಂತರ ಇಲ್ಲಿನ ಸಂಗತಿಗಳು ಬದಲಾಗಿವೆ. ಆದರೆ ಪಟ್ನಾದ ತಿಲಂಗಿಗಳು ತಮ್ಮ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡಿವೆ – ಬಾಲವಿಲ್ಲದ ಗಾಳಿಪಟ ಎನ್ನುವುದು. “ದುಮ್ ತೋ ಕುತ್ತೇ ಕಾ ನಾ ಹೋತಾ ಹೈ ಜೀ, ತಿಲಂಗ್ ಕಾ ಥೋಡೆ [ಬಾಲ ನಾಯಿಗಳಿಗೆ ಚಂದ, ಪಟಗಳಿಗಲ್ಲ]” ಎಂದು ನಗುತ್ತಾ ಹೇಳುತ್ತಾರೆ ಪಟ ತಯಾರಿಸುವ ಕಸುಬು ಮಾಡುವ ಶಬೀನಾ. ಪ್ರಸ್ತುತ ಬದುಕಿನ ಏಳನೇ ದಶಕದಲ್ಲಿರುವ ಅವರು ತಮ್ಮ ಕಣ್ಣುಗಳು ಮಂಜಾದ ಕಾರಣ ಈಗ ಕೆಲವು ಸಮಯದ ಹಿಂದೆ ಪಟ ತಯಾರಿಸುವುದನ್ನು ನಿಲ್ಲಿಸಿದರು.




















