ಶ್ರೀರಂಗಂ ಬಳಿಯ ಕೊಲ್ಲಿಡಂ ನದಿಯ ದಂಡೆಯಲ್ಲಿ ಆಗಷ್ಟೇ ಕತ್ತಲು ಕವಿಯಲಾರಂಭಿಸಿತ್ತು. ತಮ್ಮ ಎಳ್ಳಿನ ಹೊಲದಿಂದ 10 ನಿಮಿಷಗಳಷ್ಟು ನಡಿಗೆಯ ದೂರದಲ್ಲಿ ನದಿಯ ಮರಳಿನ ದಂಡೆಯ ಮೇಲೆ ಕುಳಿತು ವಡಿವೇಲನ್ ತಮ್ಮ ಬದುಕಿನ ಕತೆಯನ್ನು ನಮ್ಮೊಡನೆ ಹಂಚಿಕೊಳ್ಳುತ್ತಿದ್ದರು. 1978ರಲ್ಲಿ ಅವರು ಹುಟ್ಟಿದ 12 ದಿನಕ್ಕೆ ನದಿ ಉಕ್ಕಿ ಹರಿದಿತ್ತು. ಆಗ ಅವರ ಊರಿನಲ್ಲಿ ಎಲ್ಲರೂ ಎಳ್ಳು ಬೆಳೆಯುತ್ತಿದ್ದರು. ಎಳ್ಳು ಕೊಯ್ಲು ಮಾಡಿದ ನಂತರ ಅದರಿಂದ ಜೇನಿನ ಬಣ್ಣದ ಎಳ್ಳೆಣ್ಣೆ ತೆಗೆಯುತ್ತಿದ್ದರು. ಎರಡು ಬಳೆ ದಿಂಡುಗಳನ್ನು ಬಳಸಿ ಹೊಳೆಯಲ್ಲಿ ಈಜು ಕಲಿಯುತ್ತಿದ್ದರು. ದೊಡ್ಡ ನದಿಯ ದಡದಲ್ಲಿ ವಾಸಿಸುತ್ತಿದ್ದ ಪ್ರಿಯಾರನ್ನು ಪ್ರೇಮಿಸುತ್ತಿದ್ದರು. ತಂದೆಯ ಮುನಿಸಿನ ನಡುವೆಯೂ ಪ್ರಿಯಾರನ್ನೇ ಅವರು ಮದುವೆಯಾದರು. ಮತ್ತು ಈಗ ತಮ್ಮ ಒಂದೂವರೆ ಎಕರೆ ನೆಲದಲ್ಲಿ ಭತ್ತ, ಎಳ್ಳು ಮತ್ತು ಉದ್ದು ಬೆಳೆಯುತ್ತಿದ್ದಾರೆ…
ಮೊದಲ ಮೂರು ಬೆಳೆ ಒಂದಷ್ಟು ಹಣವನ್ನು ತಂದಿತ್ತು. “ಭತ್ತದಿಂದ ಬಂದ ಕಾಸನ್ನು ಕಬ್ಬಿನ ಬೆಳೆಯ ಮೇಲೆ ಹಾಕಿದೆವು. ಮತ್ತೆ ಆ ಹಣವನ್ನು ಅದೇ ಗದ್ದೆಯಲ್ಲಿ ಉಳುಮೆ ಮಾಡಿದೆವು” ಎಂದು ವಡಿವೇಲನ್ ವಿವರಿಸುತ್ತಾರೆ. ಎಳ್ಳನ್ನು ಸಾಮಾನ್ಯವಾಗಿ ಎಣ್ಣೆಗಾಗಿ ಬೆಳೆಯಲಾಗುತ್ತದೆ. ಮರದ ಗಾಣದಲ್ಲಿ ಅರೆದು ಹಿಂಡಿದ ಎಣ್ಣೆಯನ್ನು ತಮಿಳಿನಲ್ಲಿ ನಲ್ಲೆಣೈ (ಎಳ್ಳೆಣ್ಣೆ) ಎಂದು ಕರೆಯಲಾಗುತ್ತದೆ. ಅದನ್ನು ದೊಡ್ಡ ಪಾತ್ರೆಯೊಂದರಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. “ನಾವು ಅದನ್ನು ಅಡುಗೆಗೆ ಮತ್ತು ಉಪ್ಪಿನಕಾಯಿಗೆ ಬಳಸುತ್ತೇವೆ” ಎನ್ನುತ್ತಾರೆ ಪ್ರಿಯಾ. “ಮತ್ತೆ ಅವರು ದಿನವೂ ಅದರಿಂದ ಬಾಯಿ ಮುಕ್ಕಳಿಸುತ್ತಾರೆ” ಎಂದು ಪ್ರಿಯಾ ಹೇಳುವಾಗ ವಡಿವೇಲನ್ ಮುಗುಳ್ನಕ್ಕು “ಮತ್ತೆ ಎಣ್ಣೆ ಸ್ನಾನ! ಅದು ನನಗೆ ಬಹಳ” ಇಷ್ಟ ಎಂದು ಹೇಳಿದರು.
ವಡಿವೇಲನ್ ಅವರಿಗೆ ಪ್ರಿಯವಾದ ಹಲವು ಸಂಗತಿಗಳಿವೆ. ಅವೆಲ್ಲವೂ ಸರಳ ಸಂತೋಷಗಳು. ಅವುಗಳಲ್ಲಿ ಸ್ನೇಹಿತರೊಡನೆ ಹೊಳೆಯಲ್ಲಿ ಮೀನು ಹಿಡಿದು ಸುಟ್ಟು ತಿನ್ನುವುದು. ಪಂಚಾಯತ್ ಅಧ್ಯಕ್ಷರ ಮನೆಯಲ್ಲಿದ್ದ ಗ್ರಾಮದ ಏಕೈಕ ಟಿವಿ ನೋಡುವುದು ಕೆಲವು. “ಅದೇನೋ ಗೊತ್ತಿಲ್ಲ ಟಿವಿಯೆಂದರೆ ನನಗೆ ಬಹಳ ಇಷ್ಟವಾಗಿತ್ತು. ಟಿವಿ ಸರಿಯಾಗಿ ಕೆಲಸ ಮಾಡದಿದ್ದಾಗ ಅದರಿಂದ ಬರುತ್ತಿದ್ದ ʼಒಂಯ್ʼ ಎನ್ನುವ ಸದ್ದನ್ನು ಸಹ ಬಿಡದೆ ಕೇಳುತ್ತಿದ್ದೆ ನಾನು!”
ಆದರೆ ಹಗಲಿನ ಬೆಳಕು ಮಸುಕಾಗುತ್ತ ಹೋದಂತೆ ಅವರ ಫ್ಲಾಶ್‌ಬ್ಯಾಕ್ ಕೂಡಾ ಮಸುಕಾಗುತ್ತಾ ಹೋಯಿತು. “ಈಗ ನೀವು ಕೇವಲ ಕೃಷಿ ನಂಬಿ ಬದುಕು ನಡೆಸಲು ಸಾಧ್ಯವಿಲ್ಲ” ಎಂದು ವಡಿವೇಲನ್ ಹೇಳುತ್ತಾರೆ. “ನನ್ನ ಹತ್ತಿರ ಒಂದು ಬಾಡಿಗೆ ಕಾರು ಕೂಡಾ ಇರುವುದರಿಂದ ಹೇಗೋ ಮ್ಯಾನೇಜ್ ಆಗುತ್ತಿದೆ.” ಅವರು ನಮ್ಮನ್ನು ತಮ್ಮ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಶ್ರೀರಂಗಂ ತಾಲ್ಲೂಕಿನ ತಿರುವಳಾರ್‌ಸೋಯಲ್ಲಿರುವ ತಮ್ಮ ಮನೆಯಿಂದ ನದಿಯ ದಡಕ್ಕೆ ಕರೆತಂದಿದ್ದಾರೆ. ಅವರು ಕಾರನ್ನು ಖಾಸಗಿ ಫೈನಾನ್ಸಿನಲ್ಲಿ ಎಂಟರ ಬಡ್ಡಿ ದರದಲ್ಲಿ ಸಾಲದ ಮೂಲಕ ಕೊಂಡಿದ್ದಾರೆ. ಈ ಸಾಲದ ಕಂತಾಗಿ ಅವರು ತಿಂಗಳಿಗೆ 25,000 ರೂ.ಗಳ ಭಾರಿ ಮೊತ್ತವನ್ನು ಕಟ್ಟಬೇಕು. ಹಣದ ವಿಷಯದಲ್ಲಿ ಸದಾ ಪರದಾಟವಿರುವುದಾಗಿ ಗಂಡ ಹೆಂಡತಿ ಹೇಳುತ್ತಾರೆ. ಕೆಲವೊಮ್ಮೆ ಕಂತು ಕಟ್ಟಲು ಹಣವಿಲ್ಲದಿದ್ದಾಗ ಚಿನ್ನ ಅಡವಿಟ್ಟು ಕಟ್ಟುತ್ತಾರೆ. “ನಮ್ಮಂತಹವರು ಬ್ಯಾಂಕಿನಲ್ಲಿ ಸಾಲ ಪಡೆಯಬೇಕೆಂದರೆ ಕನಿಷ್ಟ 10 ಜೋಡಿ ಚಪ್ಪಲಿ ಸವೆಸಬೇಕು. ಅಷ್ಟು ಅಲೆದಾಡಿಸುತ್ತಾರೆ” ಎನ್ನುತ್ತಾ ವಡಿವೇಲನ್ ನಿಟ್ಟುಸಿರು ಬಿಡುತ್ತಾರೆ.
ಇಷ್ಟು ಹೊತ್ತಿಗೆ ಆಕಾಶವು ಗುಲಾಬಿ, ನೀಲಿ ಮತ್ತು ಕಪ್ಪು ಬಣ್ಣ ಬಳಿದುಕೊಂಡ ಕಲಾಕೃತಿಯಂತೆ ಕಾಣತೊಡಗಿತ್ತು. ದೂರದಲ್ಲಿ ನವಿಲುಗಳು ಕೂಗುವ ಸದ್ದು ಕೇಳುತ್ತಿತ್ತು. “ಈ ಹೊಳೆಯಲ್ಲಿ ನೀರುನಾಯಿಗಳಿವೆ” ಎಂದು ವಡಿವೇಲನ್ ಹೇಳುತ್ತಾರೆ. ನಮ್ಮಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಮಕ್ಕಳ ಹಿಂಡೊಂದು ನೀರು ನಾಯಿಗಳಂತೆಯೇ ನೀರಿಗೆ ಚುರುಕಾಗಿ ಧುಮುಕುತ್ತಾ ಆಟವಾಡುತ್ತಿತ್ತು. “ನಾನು ಕೂಡಾ ಹೀಗೆ ಆಡುತ್ತಿದ್ದೆ. ಇಲ್ಲಿ ಬೇರೆ ಆಟಗಳು ಹುಟ್ಟಲೇ ಇಲ್ಲ!”






































