ಸಾಂಪ್ರದಾಯಿಕ ಉಡುಪು, ಸೊಂಟದ ಮೇಲೊಂದು ಮತ್ತು ತಲೆಯ ಮೇಲೆರಡು ಕೊಡ ಹೊತ್ತಿರುವ ಯುವತಿಯರು ಮತ್ತು ವಯಸ್ಸಾದ ಮಹಿಳೆಯರ ರೂಢಿಗತ ಚಿತ್ರಗಳು ಭಾರತದ ಗ್ರಾಮೀಣ ಮಹಿಳೆಯರ ಜೀವನವನ್ನು ಬಹಳ ಹಿಂದಿನಿಂದಲೂ ಪ್ರತಿನಿಧಿಸುತ್ತಾ ಬಂದಿವೆ. ಭಾರತೀಯ ಹಳ್ಳಿಗಳಲ್ಲಿನ ಬಾವಿಗಳು, ಕೆಲವೊಮ್ಮೆ ಸುಂದರವಾದವು, ಕೆಲವೊಮ್ಮೆ ವರ್ಣಿಸಲಾಗದವು, ಅವು ಕೇವಲ ನೀರನ್ನು ತರುವ ಸ್ಥಳವಾಗಿರಲಿಲ್ಲ. ಉತ್ತಮ ಸ್ನೇಹ ಮತ್ತು ಇತ್ತೀಚಿನ ಹಳ್ಳಿಯ ಹಗರಣಗಳಿಂದ ಹಿಡಿದು ನೀರಿನ ಬಳಕೆಯನ್ನು ನಿರ್ಧರಿಸುವ ಅನ್ಯಾಯದ ಜಾತಿ ಸಂಬಂಧಗಳವರೆಗೆ ಎಲ್ಲವೂ ಬಾವಿಯ ಸುತ್ತಲೂ ತೆರೆದುಕೊಳ್ಳುತ್ತದೆ.
ವಿಪರ್ಯಾಸವೆಂದರೆ, ಅದೇ ಜೀವ ಉಳಿಸುವ ಬಾವಿಯು ತಮ್ಮ ಅತ್ತೆ-ಮಾವನ ಮನೆಗಳಲ್ಲಿ ನರಳುತ್ತಿರುವ ಅನೇಕ ಮಹಿಳೆಯರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಾಡಿನಲ್ಲಿರುವ ಬಾವಿಯೂ ವಿಫಲ ಮದುವೆಯ ಕಾರಣಕ್ಕೆ ನೊಂದಿರುವ ಹೆಣ್ಣೊಬ್ಬಳಿಗೆ ಆಪ್ತವಾಗಿದೆ. ಇಂತಹ ಮನೆಗೆ ಮದುವೆ ಮಾಡಿಕೊಟ್ಟ ಕುರಿತು ದೂರಲು ಅವಳಿಗೆ ಉಳಿದಿರುವುದು ಈ ಬಾವಿ ಮಾತ್ರ.
ಅಂಜಾರ್ ಮೂಲದ ಶಂಕರ್ ಬರೋಟ್ ಹಾಡಿರುವ ಈ ನೋವಿನ ಹಾಡಿನಲ್ಲಿ ಮಹಿಳೆ ತನ್ನ ಕುಟುಂಬದಲ್ಲಿನ ಕ್ರೂರ ಗಂಡಸರ ಕುರಿತು ದೂರುತ್ತಾಳೆ. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಹಾಡಲ್ಪಡುವ ವೈವಿಧ್ಯಮಯ ಹಾಡುಗಳಲ್ಲಿ ಈ ಹಾಡುಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ.



