ಪಿ.ಪೂಂಕೋಡಿ
ಮೀನುಗಾರ್ತಿ
ಸೆರುತೂರ್, ನಾಗಪಟ್ಟಿಣಂ, ತಮಿಳುನಾಡು
ನಾನು ಮದುವೆಯಾಗಿ 14 ವರ್ಷಗಳಾಗಿವೆ. ಅಂದಿನಿಂದ ನಾನು ನನ್ನ ಸ್ವಂತ ಹಳ್ಳಿಯಲ್ಲಿ ಒಮ್ಮೆಯೂ ಸಮುದ್ರ ತೀರಕ್ಕೆ ಹೋಗಿರಲಿಲ್ಲ. ಆದರೆ ನನ್ನ ಕ್ಯಾಮರಾ ನನ್ನನ್ನು ಸಮುದ್ರದ ಕಡೆಗೆ ಕರೆದೊಯ್ಯಿತು. ದೋಣಿಗಳನ್ನು ಸಮುದ್ರಕ್ಕೆ ಹೇಗೆ ತಳ್ಳುತ್ತಾರೆ, ಮೀನುಗಾರಿಕೆ ಪ್ರಕ್ರಿಯೆ ಮತ್ತು ಮೀನುಗಾರರ ಸಮುದಾಯಕ್ಕೆ ಮಹಿಳೆಯರ ಕೊಡುಗೆಯನ್ನು ಏನೆಂಬುದನ್ನು ನಾನು ದಾಖಲಿಸಿದ್ದೇನೆ.
ಕೇವಲ ಫೋಟೋಗಳನ್ನು ಕ್ಲಿಕ್ಕಿಸಲು ಯಾರಿಗಾದರೂ ತರಬೇತಿ ಕೊಡುವುದು ಸುಲಭ. ಆದರೆ ಫೋಟೋಗಳ ಮೂಲಕ ಕಥೆಗಳನ್ನು ಹೇಳುವುದು ಹೇಗೆಂಬ ತರಬೇತಿ ನೀಡುವುದು ಸಣ್ಣ ವಿಷಯವಲ್ಲ. ಆದರೆ ಪಳನಿ ನಮಗೆ ಅದನ್ನು ಕಲಿಸಿದ್ದಾರೆ. ನಮ್ಮ ತರಬೇತಿಯಲ್ಲಿ ಫೋಟೋಗಳನ್ನು ತೆಗೆಯುವ ಮೊದಲು ನಾವು ಜನರೊಂದಿಗೆ ಹೇಗೆ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು. ಇದರಿಂದ ಜನರ ಫೋಟೋ ತೆಗೆಯಲು ನನಗೆ ಆತ್ಮವಿಶ್ವಾಸ ಬಂತು.
ನಾನು ಮೀನುಗಾರ ಸಮುದಾಯದ ಬೇರೆ ಬೇರೆ ಉದ್ಯೋಗಗಳನ್ನು ದಾಖಲಿಸಲು ಹೋದೆ. ಇದರಲ್ಲಿ ಮೀನು ಮಾರಾಟ, ಸ್ವಚ್ಛಗೊಳಿಸುವಿಕೆ ಮತ್ತು ಹರಾಜು ಎಲ್ಲವೂ ಸೇರಿದೆ. ಇದರಿಂದಾಗಿ ಮಾರಾಟಗಾರರಾಗಿ ಕೆಲಸ ಮಾಡುವ ಸಮುದಾಯದ ಮಹಿಳೆಯರ ಜೀವನಶೈಲಿಯನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ಈ ಕೆಲಸ ಮಾಡಲು ಅವರಿಗೆ ತಲೆಯ ಮೇಲೆ ಭಾರವಾದ ಬುಟ್ಟಿಗಳ ತುಂಬಾ ಮೀನುಗಳನ್ನು ತುಂಬಿ ಸಮತೋಲನದಿಂದ ನಡೆಯುವುದು ಗೊತ್ತಿರಬೇಕು.
ಕುಪ್ಪುಸ್ವಾಮಿ ಅವರ ಬಗ್ಗೆ ಇರುವ ನನ್ನ ಫೋಟೋ ಸ್ಟೋರಿ ಮಾಡುವಾಗ ನಾನು ಅವರ ಜೀವನದ ಬಗ್ಗೆ ತಿಳಿದೆ. ಅವರು ಗಡಿಭಾಗದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಸಮುದ್ರದಲ್ಲಿ ಅವರ ಮೇಲೆ ಶ್ರೀಲಂಕಾ ನೌಕಾಪಡೆ ಹೇಗೆ ಗುಂಡು ಹಾರಿಸಿತು ಎಂಬ ಬಗ್ಗೆ ತಿಳಿದೆ. ಇದರಿಂದಾಗಿ ಅವರು ತಮ್ಮ ಕೈಕಾಲುಗಳನ್ನು ಮಾತ್ರವಲ್ಲ, ಮಾತನ್ನು ಸಹ ಕಳೆದುಕೊಂಡರು.
ಬಟ್ಟೆ ಒಗೆಯುವುದು, ತೋಟಗಾರಿಕೆ ಮತ್ತು ಶುಚಿಗೊಳಿಸುವುದು ಮುಂತಾದ ಅವರ ದೈನಂದಿನ ಕೆಲಸಗಳನ್ನು ಮಾಡುತ್ತಿದ್ದಾಗ ನಾನು ಅವರನ್ನು ಭೇಟಿ ಮಾಡಿ ಹಿಂಬಾಲಿಸಿದೆ. ಅವನು ತನ್ನ ಕೈ ಮತ್ತು ಕಾಲುಗಳನ್ನು ಬಳಸಲು ಸಾಧ್ಯವಿಲ್ಲದ ಕಾರಣ ಅವರು ಎದುರಿಸಬೇಕಾದ ಕಷ್ಟಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರು ಕೆಲಸ ಮಾಡುವುದರಲ್ಲಿ ಹೇಗೆ ಹೆಚ್ಚು ಸಂತೋಷ ಪಡೆಯುತ್ತಾರೆ ಎಂಬುದನ್ನು ನನಗೆ ತೋರಿಸಿದರು. ಅಂಗವೈಕಲ್ಯದಿಂದಾಗಿ ಹೊರಗಿನ ಪ್ರಪಂಚ ಅವರನ್ನು ನಿರಾಕರಿಸಿದ ಬಗ್ಗೆ ಅವರಿಗೆ ಚಿಂತೆಯಿಲ್ಲ. ಕೆಲವೊಮ್ಮೆ ಅವರು ಒಂಟಿತನವನ್ನು ಅನುಭವಿಸುತ್ತಾರೆ, ಸಾವನ್ನೂ ಬಯಸುತ್ತಾರೆ ಎಂದು ಹೇಳಿದರು.
ಮೀನುಗಾರರು ಸಾರ್ಡೀನ್ ಮೀನುಗಳನ್ನು ಹಿಡಿಯುವ ಫೋಟೋ ಸರಣಿಯನ್ನು ನಾನು ಮಾಡಿದ್ದೇನೆ. ಸಾರ್ಡೀನ್‌ಗಳು ಸಾಮಾನ್ಯವಾಗಿ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಆದ್ದರಿಂದ ಅವುಗಳನ್ನು ಸ್ವತಃ ಒಬ್ಬನೇ ನಿರ್ವಹಿಸುವುದು ದೊಡ್ಡ ಸವಾಲು. ಈ ಮೀನುಗಳನ್ನು ಬಲೆಗಳಿಂದ ತೆಗೆದುಹಾಕಲು ಮತ್ತು ಐಸ್ ಬಾಕ್ಸ್‌ಗಳಲ್ಲಿ ತುಂಬಲು ಪುರುಷರು ಮತ್ತು ಮಹಿಳೆಯರು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ಇಲ್ಲಿ ದಾಖಲಿಸಿದ್ದೇನೆ.
ಮಹಿಳಾ ಛಾಯಾಗ್ರಾಹಕಿಯಾಗಿ , ಅದರಲ್ಲೂ ಅದೇ ಸಮುದಾಯಕ್ಕೆ ಸೇರಿ ಕೂಡ ಇದೊಂದು ಸವಾಲು. 'ನೀವು ಯಾಕೆ ಅವರ ಫೋಟೋ ತೆಗೆಯುತ್ತಿದ್ದೀರಿ? ಮಹಿಳೆಯರು ಏಕೆ ಫೋಟೋಗ್ರಾಫಿ ಮಾಡಬೇಕು?’ ಎಂಬ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ.
ಈಗ ಫೋಟೋಗ್ರಾಫರ್ ಎಂದು ಗುರುತಿಸಿಕೊಳ್ಳುತ್ತಿರುವ ಈ ಮೀನುಗಾರ್ತಿಯ ಹಿಂದಿನ ದೊಡ್ಡ ಶಕ್ತಿಯೇ ಪಳನಿ ಅಣ್ಣ.