ಕಾರದಗಾ ಗ್ರಾಮದಲ್ಲಿ ಯಾರಿಗಾದರೂ ಮಗುವಾದರೆ ಮೊದಲು ಆ ಸುದ್ದಿಯನ್ನು ಸೋಮಕ್ಕ ಪೂಜಾರಿಯವರಿಗೆ ತಿಳಿಸಲಾಗುತ್ತದೆ. ಸೋಮಕ್ಕ ಕುರಿ ಉಣ್ಣೆ ಬಳಸಿ ಕಡಗ ನೇಯುವುದರಲ್ಲಿ ಪರಿಣಿತರು. ಊರಿನ 9,000 ಜನರಲ್ಲಿ ಕೆಲವೇ ಕೆಲವರಷ್ಟೇ ಈ ಉಣ್ಣೆಯ ಕಡಗವನ್ನು ನೇಯಬಲ್ಲರು. ಸ್ಥಳೀಯವಾಗಿ ಕಂಡಾ ಎಂದು ಕರೆಯಲ್ಪಡುವ ಈ ಕಡಗಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತು ಇದನ್ನು ನವಜಾತ ಶಿಶುಗಳ ಮಣಿಕಟ್ಟಿಗೆ ಕಟ್ಟಲಾಗುತ್ತದೆ.
“ಕುರಿಗಳು ಆಗಾಗ ಪ್ರತಿಕೂಲ ಹವಾಮಾನವನ್ನು ಸಹ ಲೆಕ್ಕಿಸದೆ ಹುಲ್ಲುಗಾವಲುಗಳನ್ನು ಹುಡುಕಿಕೊಂಡು ಹಳ್ಳಿ ಹಳ್ಳಿಗೂ ಹೋಗುತ್ತವೆ. ಅಲ್ಲಿ ಅವು ಹಲವು ಬಗೆಯ ಜನರನ್ನು ಭೇಟಿಯಾಗುತ್ತವೆ” ಎಂದು 50ರ ದಶಕದ ಕೊನೆಯಲ್ಲಿರುವ ಸೋಮಕ್ಕ ಹೇಳುತ್ತಾರೆ. ಕುರಿಗಳನ್ನು ಸಹಿಷ್ಣುತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಮತ್ತು ಅವುಗಳ ಕೂದಲಿನಿಂದ ತಯಾರಿಸಿದ ಕಂಡಾ ದುಷ್ಟತನವನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.
ಧಂಗರ್ ಸಮುದಾಯಕ್ಕೆ ಸೇರಿದ ಮಹಿಳೆಯರು ಸಾಂಪ್ರದಾಯಿಕವಾಗಿ ಈ ಬಳೆಗಳನ್ನು ತಯಾರಿಸುತ್ತಾರೆ. ಇಂದು, ಕಾರದಗಾದಲ್ಲಿ ಕೇವಲ ಎಂಟು ಧಂಗರ್ ಕುಟುಂಬಗಳು ಮಾತ್ರವೇ ಈ ಕಲೆಯನ್ನು ಅಭ್ಯಾಸ ಮಾಡುತ್ತಿವೆ ಎಂದು ಹೇಳಲಾಗುತ್ತದೆ. "ನಿಮ್ಮಾ ಗವಾಲ ಘಟ್ಲಾ ಆಹೆ [ನಾನು ಈ ಹಳ್ಳಿಯ ಅರ್ಧದಷ್ಟು ಮಕ್ಕಳ ಮಣಿಕಟ್ಟುಗಳನ್ನು ಈ ಈ ಕಡಗಗಳಿಂದ ಅಲಂಕರಿಸಿದ್ದೇನೆ]" ಎಂದು ಸೋಮಕ್ಕ ಮರಾಠಿಯಲ್ಲಿ ಹೇಳುತ್ತಾರೆ. ಕಾರದಗಾ ಗ್ರಾಮವು ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ, ಹೀಗಾಗಿ ಇಲ್ಲಿನ ಸೋಮಕ್ಕ ಅವರಂತಹ ಅನೇಕ ನಿವಾಸಿಗಳು ಕನ್ನಡ ಮತ್ತು ಮರಾಠಿ ಎರಡನ್ನೂ ಮಾತನಾಡಬಲ್ಲರು.
"ಎಲ್ಲಾ ಜಾತಿ ಮತ್ತು ಧರ್ಮದ ಜನರು ಕಂಡಾ ಕೇಳಿಕೊಂಡು ನಮ್ಮ ಬಳಿಗೆ ಬರುತ್ತಾರೆ" ಎಂದು ಸೋಮಕ್ಕ ಹೇಳುತ್ತಾರೆ.
ಬಾಲ್ಯದಲ್ಲಿ, ಸೋಮಕ್ಕ ತನ್ನ ತಾಯಿ ದಿವಂಗತ ಕಿಸ್ನಾಬಾಯಿ ಬಣಕಾರ್ ಅವರು ಕಾರದಗಾದಲ್ಲೇ ಅತ್ಯುತ್ತಮ ಕಂಡಾ ತಯಾರಿಸುವುದನ್ನು ನೋಡಿದ್ದರು. "ಕಂಡಾ ತಯಾರಿಸುವ ಮೊದಲು ಅವಳು ಕುರಿಯ ಉಣ್ಣೆಯ ಪ್ರತಿಯೊಂದು ಎಳೆಯನ್ನು (ಲೋಕರ್ ಎಂದೂ ಕರೆಯಲಾಗುತ್ತದೆ) ಏಕೆ ಪರೀಕ್ಷಿಸುತ್ತಾಳೆ ಎನ್ನುವ ಕುರಿತು ಕುತೂಹಲವಿತ್ತು" ಎಂದು ಅವರು ಹೇಳುತ್ತಾರೆ, ಅವರ ತಾಯಿ ಸುಲಭವಾಗಿ ಆಕಾರಕ್ಕೆ ತರಬಹುದು ಎನ್ನುವ ಕಾರಣಕ್ಕಾಗಿ ಉತ್ತಮ ಎಳೆಗಳನ್ನು ಬಳಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಕುರಿಯ ಮೊದಲ ಬಾರಿಯ ಉಣ್ಣೆಯನ್ನು ಕಡಗದ ಕಚ್ಚಾ ಆಕಾರವನ್ನು ಪಡೆಯಲು ಬಳಸಲಾಗುತ್ತದೆ. “ನೂರು ಕುರಿಗಳಲ್ಲಿ ಒಂದು ಕುರಿಯಲ್ಲಿ ಮಾತ್ರ ಸರಿಯಾದ ಉಣ್ಣೆಯ ಎಳೆ ಸಿಗುತ್ತದೆ.”
ಸೋಮಕ್ಕ ತನ್ನ ತಂದೆ ದಿವಂಗತ ಅಪ್ಪಾಜಿ ಬಣಕಾರ್ ಅವರಿಂದ ಕಂಡಾ ತಯಾರಿಸುವುದನ್ನು ಕಲಿತರು. ಆಗ ಅವರಿಗೆ 10 ವರ್ಷ ವಯಸ್ಸು. ಅವರಿಗೆ ಈ ಕಲೆಯನ್ನು ಕಲಿಯಲು ಎರಡು ತಿಂಗಳು ಬೇಕಾಯಿತು. ನಾಲ್ಕು ದಶಕಗಳ ನಂತರವೂ, ಸೋಮಕ್ಕ ಈ ಕಲೆಯನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಿದ್ದಾರೆ ಮತ್ತು ಪ್ರಸ್ತುತ ಅದರ ಜನಪ್ರಿಯತೆ ಕುಸಿಯುತ್ತಿರುವ ಬಗ್ಗೆ ಚಿಂತಿತರಾಗಿದ್ದಾರೆ: "ಈ ದಿನಗಳಲ್ಲಿ ಕುರುಬ ಯುವಕರು ಕುರಿಗಳನ್ನು ಮೇಯಿಸುತ್ತಿಲ್ಲ. ಇನ್ನು ಕುರಿಯ ಉಣ್ಣೆಯ ಕಲೆಗಳ ಬಗ್ಗೆ ಏನು ತಿಳಿದಿರಲು ಸಾಧ್ಯ?"














