ಒನ್-ಟೈಮ್ ಪಾಸ್ ವರ್ಡ್ (ಒಟಿಪಿ) ಕುರಿತು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಅನಿಲ್ ಥೋಂಬ್ರೆ, "ಈ ಒಟಿಪಿಗಳ ಬಗ್ಗೆ ನನಗೆ ತುಂಬಾ ಭಯವಿದೆ. ಸಹಾ ಆಕ್ಡೆ ಆಣಿ ಪೈಸಾ ಗಾಯಬ್ [ಆರು ನಂಬರ್ ಬಂತಂದ್ರೆ ದುಡ್ಡು ಪೂರಾ ಮಾಯ]. ಈ ಸಂಭಾಷಣೆಯು ಗದ್ದಲದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ, ಬಸ್ಸುಗಳ ಹಾರ್ನ್ ಗದ್ದಲ, ಮಾರಾಟಗಾರರು ತಮ್ಮ ತಿಂಡಿಗಳು ಮತ್ತು ಬಾಟಲಿ ನೀರನ್ನು ಮಾರಾಟ ಮಾಡುವ ಸದ್ದು ಮತ್ತು ಆಗಮನ ಮತ್ತು ನಿರ್ಗಮನದ ಪ್ರಕಟಣೆಗಳ ನಡುವೆ ನಡೆಯುತ್ತಿತ್ತು. ಅವರ ಬಳಿ ಯಾರೋ ಒಟಿಪಿ ತಿಳಿಸುವಂತೆ ವಿನಂತಿಸಿದಾಗ, ಅವರು ಸಹಾಯಕ್ಕಾಗಿ ನನ್ನ ಕಡೆಗೆ ತಿರುಗಿದರು.
ಅವರು ಅರ್ಥ ಸಂಕಲ್ಪ ಎಂದು ಕರೆಯಲ್ಪಡುವ ಬಜೆಟ್ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದಾರೆ. "ಜನವರಿ 31ರಂದು, ಅದರ ಬಗ್ಗೆ ಕೆಲವು ಮಾಹಿತಿಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಲಾಯಿತು. ಸರ್ಕಾರವು ಪ್ರತಿಯೊಂದು ಇಲಾಖೆಗೂ ಒಂದಷ್ಟು ಅನುದಾನವನ್ನು ನೀಡಿದೆ. ಆ ಬಗ್ಗೆ ನನಗೆ ಮಾಹಿತಿಯಿದೆ. ನನಗೆ ಎಲ್ಲವೂ ಗೊತ್ತಿಲ್ಲದೆ ಇರಬಹುದು ಆದರೆ ರೂಪಾಯಿಗೆ ಹತ್ತು ಪೈಸೆಯಷ್ಟಾದರೂ ಗೊತ್ತು!" ಎಂದು ಅವರು ಅಡ್ಕಿಟ್ಟದಲ್ಲಿ ಅಡಿಕೆ ಕತ್ತರಿಸುತ್ತಾ ಹೇಳಿದರು.
ನಾವು ಅಷ್ಟು ಗದ್ದಲವಿಲ್ಲದ ಸ್ಥಳವನ್ನು ಹುಡುಕುತ್ತಿರುವಾಗ ಥೋಬ್ರೆಯವರ ಕೆಂಪು ಮತ್ತು ಬಿಳಿ ಬಣ್ಣದ ಕೋಲು ನಮ್ಮನ್ನು ನಮ್ಮನ್ನು ಕ್ಯಾಂಟೀನ್ ಕಡೆಗೆ ಕರೆದೊಯ್ಯಿತು. ಅಂದಹಾಗೆ ಥೋಂಬ್ರೆಯವರಿಗೆ ಕಣ್ಣು ಕಾಣುವುದಿಲ್ಲ. ಆದರೆ ಅವರಿಗೆ ಅಲ್ಲಿನ ಪ್ಲಾಟ್ ಫಾರ್ಮ್, ಜನಸಂದಣಿ, ಕ್ಯಾಂಟೀನ್ ಕೌಂಟರ್ಗಳು ಮತ್ತು ಮೆಟ್ಟಿಲುಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. "ನಾನು ಕೇವಲ ಒಂದು ತಿಂಗಳ ಮಗುವಿದ್ದಾಗ ದಡಾರ ಬಂದು ದೃಷ್ಟಿ ಹೋಯಿತು ಎಂದು ಮನೆಯಲ್ಲಿ ಹೇಳುತ್ತಾರೆ."



