"ಪ್ರತಿ ಬಾರಿ ಭಟ್ಟಿ [ಕುಲುಮೆ] ಉರಿಸುವಾಗಲೂ, ನಾನು ಗಾಯ ಮಾಡಿಕೊಳ್ಳುತ್ತೇನೆ."
ಸಲ್ಮಾ ಲೋಹರ್ ಅವರ ಬೆರಳಿನ ಗೆಣ್ಣುಗಳಿಗೆ ಗಾಯವಾಗಿತ್ತು. ಅವರ ಎಡಗೈಯಲ್ಲಿ ಎರಡು ಸೀಳುಗಳಿದ್ದವು. ಕುಲುಮೆಯಿಂದ ಒಂದು ಹಿಡಿ ಬೂದಿಯನ್ನು ತೆಗೆದುಕೊಂಡು, ಆ ಗಾಯ ಬೇಗ ಗುಣವಾಗಲು ಅದರ ಮೇಲೆ ಉಜ್ಜುತ್ತಾರೆ.
ಅಲ್ಲಿರುವ ಆರು ಲೋಹರ್ ಕುಟುಂಬಗಳಲ್ಲಿ 41 ವರ್ಷ ಪ್ರಾಯದ ಸಲ್ಮಾರವರ ಕುಟುಂಬವೂ ಒಂದಾಗಿದೆ. ಅವರು ಸೋನಿಪತ್‌ನ ಬಹಲ್‌ಗಢ್ ಮಾರುಕಟ್ಟೆಯಲ್ಲಿರುವ ಸಾಲು ಜುಗ್ಗಿಗಳನ್ನು (ಕೊಳೆಗೇರಿಯ ಗುಡಿಸಲು) ತಮ್ಮ ಮನೆ ಎಂದು ಕರೆಯುತ್ತಾರೆ. ಒಂದು ಕಡೆ ಜನನಿಬಿಡ ಮಾರುಕಟ್ಟೆಯ ರಸ್ತೆ, ಮತ್ತೊಂದು ಕಡೆ ನಗರಸಭೆಯವರು ತಂದು ಸುರಿದ ಕಸದ ರಾಶಿ. ಸಮೀಪದಲ್ಲೇ ಒಂದು ಸರ್ಕಾರಿ ಶೌಚಾಲಯ ಮತ್ತು ನೀರಿನ ಟ್ಯಾಂಕಿ. ಸಲ್ಮಾರವರ ಕುಟುಂಬ ಇವುಗಳನ್ನೇ ಸಂಪೂರ್ಣವಾಗಿ ಅವಲಂಬಿಸಿದೆ.
ಜುಗ್ಗಿಗಳಿಗೆ ವಿದ್ಯುತ್ ಸೌಲಭ್ಯಇಲ್ಲ. ನಾಲ್ಕಾರು ಗಂಟೆಗಳಿಗಿಂತ ಹೆಚ್ಚು ಕಾಲ ಮಳೆಯಾದರೆ ಇಡೀ ಪರಿಸರದಲ್ಲಿ ಪ್ರವಾಹ ಉಂಟಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ (2023) ಹೀಗೇ ಆಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮ ಕಾಲುಗಳನ್ನು ಮೇಲೆ ಹಾಕಿ ಹಾಸಿಗೆಗಳ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ನೀರಿನ ಮಟ್ಟ ಇಳಿಯುವ ವರೆಗೆ ಕಾಯಬೇಕು. ಇದಕ್ಕೆ ಎರಡು ಮೂರು ದಿನಗಳು ಬೇಕು. "ಆ ದಿನಗಳಲ್ಲಿ ಇಲ್ಲೆಲ್ಲಾ ತುಂಬಾ ಕೆಟ್ಟ ದುರ್ವಾಸನೆ ಬರಲು ಶುರುವಾಗುತ್ತದೆ," ಎಂದು ಸಲ್ಮಾ ಅವರ ಮಗ ದಿಲ್ಶಾದ್ ನೆನಪಿಸಿಕೊಳ್ಳುತ್ತಾರೆ.
"ಆದರೆ ನಾವು ಬೇರೆಲ್ಲಿಗೆ ಹೋಗಲು ಸಾಧ್ಯ?" ಎಂದು ಸಲ್ಮಾ ಕೇಳುತ್ತಾರೆ. “ಈ ಕಸದ ರಾಶಿಯ ಪಕ್ಕ ವಾಸಿಸುವುದರಿಂದ ನಮಗೆ ಅನಾರೋಗ್ಯ ಬರುತ್ತದೆ ಎಂಬುದು ನನಗೆ ಗೊತ್ತಿದೆ. ಕಸದ ಮೇಲೆ ಕುಳಿತುಕೊಳ್ಳುವ ನೊಣಗಳು ನಮ್ಮ ಊಟದ ಮೇಲೂ ಬಂದು ಕುಳಿತುಕೊಳ್ಳುತ್ತವೆ. ಆದರೆ ನಾವು ಬೇರೆಲ್ಲಿಗೆ ಹೋಗಲು ಸಾಧ್ಯ ಹೇಳಿ?” ಎನ್ನುತ್ತಾರೆ.
ಗಾಡಿಯಾ, ಗಾಡಿಯಾ ಅಥವಾ ಗಡುಲಿಯಾ ಲೋಹರ್‌ಗಳನ್ನು ರಾಜಸ್ಥಾನದಲ್ಲಿ ಅಲೆಮಾರಿ ಬುಡಕಟ್ಟು (ಎನ್‌ಟಿ) ಮತ್ತು ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಈ ಸಮುದಾಯದವರು ದೆಹಲಿ ಮತ್ತು ಹರ್ಯಾಣದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರನ್ನು ಈ ಹಿಂದೆ ಅಲೆಮಾರಿ ಬುಡಕಟ್ಟು ಎಂದು ಗುರುತಿಸಿದರೂ, ಹರ್ಯಾಣದಲ್ಲಿ ಅವರನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ.
ಅವರು ವಾಸಿಸುವ ಮಾರ್ಕೆಟ್ ರಾಜ್ಯ ಹೆದ್ದಾರಿ 11 ರ ಪಕ್ಕದಲ್ಲಿದೆ. ಹಾಗಾಗಿ ತಾಜಾ ಉತ್ಪನ್ನಗಳು, ಸಿಹಿತಿಂಡಿಗಳು, ಅಡಿಗೆ ಮಸಾಲೆಗಳು, ವಿದ್ಯುತ್ ಉಪಕರಣಗಳು ಮತ್ತು ಬೇರೆ ಏನೇನೋ ಮಾರುವವರು ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ. ಹಲವರು ಸ್ಟಾಲ್‌ಗಳನ್ನು ಹಾಕಿ ಮಾರ್ಕೆಟ್ ಮುಚ್ಚಿದ ನಂತರ ಸ್ಟಾಲ್‌ಗಳನ್ನೂ ಮುಚ್ಚುತ್ತಾರೆ.




















