23 ವರ್ಷದ ಭಾರತಿ ಕಸ್ತೆ ಅವರ ಪಾಲಿಗೆ ಬಹಳ ಮುಖ್ಯವಾದ ವಿಷಯವೆಂದರೆ ಅವರ ಕುಟುಂಬ. 10ನೇ ತರಗತಿಗೆ ಓದು ತೊರೆದ ಅವರು ತಮ್ಮ ತಂಗಿಯರನ್ನು ಓದಿಸುವ ಸಲುವಾಗಿ ಕೆಲಸಕ್ಕೆ ಸೇರಿಕೊಂಡರು. ಕಂಪನಿಯೊಂದಕ್ಕೆ ಕಚೇರಿ ಸಹಾಯಕಿಯಾಗಿ ಸೇರಿಕೊಂಡು ಒಂದಷ್ಟು ಸಂಪಾದಿಸಿದರೆ ತನ್ನ ತಂದೆ ಮತ್ತು ಅಣ್ಣನಿಗೆ ನಿರಾಳವಾಗಿ ಉಸಿರಾಡಬಹುದು ಎನ್ನುವುದು ಅವರ ಭಾವನೆಯಾಗಿತ್ತು ಮತ್ತು ಅದನ್ನು ನಿಜವಾಗಿಸುವ ಸಲುವಾಗಿ ಅವರು ಶ್ರಮವಹಿಸಿ ದುಡಿಯುತ್ತಿದ್ದರು. ಅವರ ಯೋಚನೆಯಲ್ಲಿ ಕುಟುಂಬದ ಹೊರತಾಗಿ ಇನ್ನೇನೂ ಸುಳಿಯುತ್ತಿರಲಿಲ್ಲ. ಆದರೆ ಇದೆಲ್ಲ 2021ರ ಮೇ ತಿಂಗಳ ತನಕವಷ್ಟೇ.
ಅದರ ನಂತರ ಯೋಚಿಸಲು ಅವರ ಪಾಲಿಗೆ ಕುಟುಂಬವೇ ಇದ್ದಿರಲಿಲ್ಲ.
ಮೇ 13, 2021ರಂದು, ಭಾರತಿಯವರ ಕುಟುಂಬದ ಐವರು ಸದಸ್ಯರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿರುವ ಅವರ ಗ್ರಾಮವಾದ ನೇಮಾವರ್ ಎನ್ನುವಲ್ಲಿಂದ ರಾತ್ರೋರಾತ್ರಿ ಕಾಣೆಯಾಗಿದ್ದರು. ಇದರಲ್ಲಿ ಆಕೆಯ ತಂಗಿಯರಾದ ರೂಪಾಲಿ (17), ದಿವ್ಯಾ (12), ತಾಯಿ ಮಮತಾ (45) ಮತ್ತು ಆಕೆಯ ಸೋದರಸಂಬಂಧಿಗಳಾದ ಪೂಜಾ (16) ಮತ್ತು ಪವನ್ (14) ಸೇರಿದ್ದರು. "ನಾನು ಅವರಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. "ಒಂದು ದಿನ ಕಳೆದ ನಂತರವೂ ಅವರು ಮನೆಗೆ ಮರಳದಿದ್ದಾಗ ನಮಗೆ ಭಯವಾಗತೊಡಗಿತು."
ಭಾರತಿ ಪೊಲೀಸರ ಬಳಿ ಕಾಣೆಯಾದ ಕುರಿತು ದೂರು ದಾಖಲಿಸಿದರು, ನಂತರ ಪೊಲೀಸರು ಕಾಣೆಯಾದವರ ಬಗ್ಗೆ ತನಿಖೆ ಪ್ರಾರಂಭಿಸಿದರು.
ಒಂದು ದಿನವೆನ್ನುವುದು ಎರಡಾಗಿ, ಮೂರಾಗಿ ಬದಲಾದವು ಆದರೆ ಕುಟುಂಬ ಸದಸ್ಯರು ಮಾತ್ರ ಮರಳಲಿಲ್ಲ. ಒಂದೊಂದು ದಿನ ಕಳೆಯುತ್ತಿದ್ದ ಹಾಗೆ ಅವರ ಅನುಪಸ್ಥಿತಿ ಕುಟುಂಬದಲ್ಲಿ ಭಯವನ್ನು ಹೆಚ್ಚಿಸತೊಡಗಿತು. ಭಾರತಿಯವರ ಸಂಕಟ ಹೆಚ್ಚುತ್ತಾ ಹೋಯಿತು. ಮನೆಯಲ್ಲಿ ಭೀಕರ ಮೌನ ತುಂಬಿತ್ತು.
ಅವರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು.










