ಸಹರಿಯಾ ಆದಿವಾಸಿ ಸಮುದಾಯದವರಾದ ಗುಟ್ಟಿ ಸಮಾನ್ಯ ಅವರನ್ನು ಮಧ್ಯಪ್ರದೇಶದ ಅರಣ್ಯ ಇಲಾಖೆ 'ಚೀತಾ ಮಿತ್ರ' (ಚಿರತೆ ಮಿತ್ರ)ನನ್ನಾಗಿ ನೇಮಿಸಿದ ದಿನ ಅವರಿಗೆ, “ಚಿರತೆಗಳು ಕಂಡುಬಂದಲ್ಲಿ ನೀವು ಆ ಮಾಹಿತಿಯನ್ನು ಫಾರೆಸ್ಟ್ ರೇಂಜರ್ ಅವರಿಗೆ ತಲುಪಿಸಿ” ಎಂದು ಹೇಳಲಾಗಿತ್ತು.
ಈ ಕೆಲಸಕ್ಕೆ ಸಂಬಳವಿಲ್ಲವಾದರೂ ಅಂದು ಅವರಿಗೆ ಸಾಕಷ್ಟು ದೊಡ್ಡ ಕೆಲಸವಾಗಿ ಕಂಡಿತ್ತು. ಅಷ್ಟಕ್ಕೂ ಅದೂ ಅಲ್ಲದೆ ಆ ಆಫ್ರಿಕನ್ ಚಿರತೆಗಳು 8,000 ಕಿಲೋಮೀಟರ್ ದೂರದಿಂದ, ಸಮುದ್ರ ಮತ್ತು ಭೂಮಿಯ ಮೂಲಕ, ಸರಕು ಮತ್ತು ಮಿಲಿಟರಿ ವಿಮಾನಗಳು ಮತ್ತು ಹೆಲಿಕ್ಯಾಪ್ಟರುಗಳನ್ನೇರಿ ಭಾರತಕ್ಕೆ ಬರಲಿದ್ದವು. ಭಾರತ ಸರ್ಕಾರವು ಈ ಚಿರತೆಗಳನ್ನು ತರಿಸಿಕೊಂಡು ಅವುಗಳನ್ನು ಇಲ್ಲಿ ನೆಲೆಗೊಳಿಸುವ ಸಲುವಾಗಿ ಜನರಿಗೆ ಯಾವ ಮಾಹಿತಿಯನ್ನೂ ನೀಡದೆ ಹಣ ಖರ್ಚು ಮಾಡುತ್ತಿತ್ತು.
ಕಳ್ಳ ಬೇಟೆಗಾರರಿಂದ ಈ ಚಿರತೆಗಳನ್ನು ರಕ್ಷಿಸುವ ಕೆಲಸವನ್ನು ಚೀತಾ ಮಿತ್ರರಿಗೆ ವಹಿಸಲಾಗಿತ್ತು. ಜೊತೆಗೆ ಈ ಯೋಜನೆಯಿಂದ ಕೋಪಗೊಂಡಿರು ಗ್ರಾಮಸ್ಥರ ಕೈಯಿಂದಲೂ ಅವರು ಈ ದೊಡ್ಡ ಬೆಕ್ಕುಗಳನ್ನು ಕಾಪಾಡಬೇಕಿತ್ತು. ಅದೇ ಉಮೇದಿನೊಂದಿಗೆ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನದ (ಕೆಎನ್‌ಪಿ) ಗಡಿಯಲ್ಲಿರುವ ಸಣ್ಣ ಕುಗ್ರಾಮಗಳು ಮತ್ತು ಹಳ್ಳಿಗಳಲ್ಲಿ ಹರಡಿರುವ ಸುಮಾರು 400-500 ಮಿತ್ರರು, ಎಲ್ಲರೂ ಅರಣ್ಯವಾಸಿಗಳು, ರೈತರು ಮತ್ತು ದಿನಗೂಲಿ ಕಾರ್ಮಿಕರು ರಾಷ್ಟ್ರೀಯ ಸೇವೆಗೆ ಸಿದ್ಧರಾದರು.
ಆದರೆ ಈ ಚಿರತೆಗಳು ಭಾರತಕ್ಕೆ ಬಂದ ದಿನದಿಂದ ಸಾಕಷ್ಟು ದಿನಗಳನ್ನು ಬೇಲಿ ಹಾಕಿದ ಪ್ರದೇಶದೊಳಗೆ ಕಳೆದವು. ಅಲ್ಲದೆ ಕುನೋದಲ್ಲಿನ ಕಾಡಿಗೂ ಬೇಲಿ ಸುತ್ತಲಾಗಿದೆ. ಅವುಗಳನ್ನು ಕಾಡಿನೊಳಗೆ ಉಳಿಸಿಕೊಳ್ಳಲು ಮತ್ತು ಹೊರಗಿನವರು ಹೊರಗೇ ಇರುವಂತೆ ನೋಡಿಕೊಳ್ಳುವ ಸಲುವಾಗಿ ಈ ಬೇಲಿಯನ್ನು ನಿರ್ಮಿಸಲಾಗಿದೆ. “ನಮ್ಮನ್ನು ಒಳಗೆ ಬಿಡುವುದಿಲ್ಲ. ಸಿಯಾಸಿಯಾಪುರ ಮತ್ತು ಬಾಗ್ಚಾದಲ್ಲಿ ಈಗ ಹೊಸ ಗೇಟುಗಳನ್ನು ನಿರ್ಮಿಸಲಾಗಿದೆ” ಎನ್ನುತ್ತಾರೆ ಶ್ರೀನಿವಾಸ ಆದಿವಾಸಿ. ಅವರು ಸಹ ಚೀತಾ ಮಿತ್ರ.




















