ಪ್ರಕಾಶ್ ಬುಂದಿವಾಲ್ ತಮ್ಮ ಪನ್ವಾರಿಯಲ್ಲಿ ನಿಂತು ನಮ್ಮೊಡನೆ ಮಾತನಾಡುತ್ತಿದ್ದಾರೆ. ಅವರ ವೀಳ್ಯದೆಲೆ ತೋಟದಲ್ಲಿನ ಪಾನ್ (ವೀಳ್ಯದೆಲೆಗಳು) ಬಿದಿರಿನ ಗಳಗಳ ಮೇಲೆ ದಟ್ಟವಾಗಿ ಹರಡಿದ್ದವು. ಅವುಗಳನ್ನು ಜೋರು ಬಿಸಿಲು ಮತ್ತು ಗಾಳಿಯಿಂದ ರಕ್ಷಿಸುವ ಸಲುವಾಗಿ ಅವುಗಳ ಮೇಲೆ ಸಿಂಥೆಟಿಕ್ ಬಲೆಯನ್ನು ಹೊದೆಸಲಾಗಿದೆ.
ಭಾರತದಲ್ಲಿ ಊಟದ ನಂತರ ಎಲೆಯಡಿಕೆ ತಿನ್ನುವ ಹವ್ಯಾಸ ಸರ್ವೇ ಸಾಮಾನ್ಯ. ಈ ಎಲೆಯಡಿಕೆಯಲ್ಲಿ ತಯಾರಿಸಲು ಪಾನ್ ಅಥವಾ ಎಲೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೀಡಾ ಅಥವಾ ಪಾನ್ ಮೊದಲಿಗೆ ವೀಳ್ಯದೆಲೆಯ ಮೇಲೆ ಸುಣ್ಣು ಮತ್ತು ಕಾಚನ್ನು ಹಚ್ಚಲಾಗುತ್ತದೆ. ನಂತರ ಅದರ ಹಲವು ಬಗೆಯ ಬೀಜಗಳು, ಸೋಂಪು, ಅಡಿಕೆ, ಗುಲ್ಕಂದ್ ಬಳಸಲಾಗುತ್ತದೆ. ಇವೆಲ್ಲವೂ ಸೇರಿ ಬೀಡಾಕ್ಕೆ ರಸಭರಿತ ರುಚಿ ಮತ್ತು ಪರಿಮಳವನ್ನು ಒದಗಿಸುತ್ತವೆ.
11,956 ಜನರಿರುವ ಈ ಗ್ರಾಮವು ಉತ್ತಮ ಗುಣಮಟ್ಟದ ವೀಳ್ಯದೆಲೆಗೆ ಹೆಸರುವಾಸಿಯಾಗಿದೆ. ಪ್ರಕಾಶ್ ಅವರ ಕುಟುಂಬವೂ ಕುಕ್ಕಡೇಶ್ವರದ ಇತರ ಅನೇಕರಂತೆ, ತಮಗೆ ನೆನಪಿರುವ ಕಾಲದಿಂದಲೂ ವೀಳ್ಯದೆಲೆ ಬೇಸಾಯದಲ್ಲಿ ತೊಡಗಿಕೊಂಡಿದೆ. ಅವರು ಮಧ್ಯಪ್ರದೇಶದಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಎಂದು ಪಟ್ಟಿ ಮಾಡಲಾಗಿರುವ ತಂಬೋಲಿ ಸಮುದಾಯಕ್ಕೆ ಸೇರಿದವರು. ಪ್ರಸ್ತುತ ಬದುಕಿನ ಅರವತ್ತು ವಸಂತಗಳನ್ನು ದಾಟಿರುವ ಪ್ರಕಾಶ್ ಅವರು ತಮ್ಮ ಒಂಬತ್ತನೇ ವಯಸ್ಸಿನಿಂದ ಪನ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆದರೆ ಬುಂದಿವಾಲ್ ಅವರ 0.2 ಎಕರೆ ವಿಸ್ತೀರ್ಣದ ಹೊಲದಲ್ಲಿ ಪರಿಸ್ಥಿತಿ ಒಂದಿಷ್ಟೂ ಸರಿಯಿಲ್ಲ. 2023ರ ಮೇ ತಿಂಗಳಿಲ್ಲ ಬೀಸಿದ ಬಿಪರ್ಜಾಯ್ ಚಂಡಮಾರುತವು ಅವರ ತೋಟದಲ್ಲಿ ವಿನಾಶವನ್ನೇ ಸೃಷ್ಟಿಸಿ ಹೋಗಿದೆ. “ನಮಗೆ ಯಾವುದೇ ವಿಮೆಯ ರಕ್ಷಣೆ ಲಭ್ಯವಿಲ್ಲ. ಚಂಡಮಾರುತದಿಂದಾಗಿ ಇರುವುದೆಲ್ಲವನ್ನೂ ಕಳೆದುಕೊಂಡು ಕುಳಿತಿದ್ದರೂ ಸರ್ಕಾರ ನಮಗೆ ಯಾವುದೇ ಸಹಾಯ ನೀಡಿಲ್ಲ” ಎಂದು ಅವರು ಹೇಳುತ್ತಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎನ್ಎಐಎಸ್) ಅಡಿಯಲ್ಲಿ ಹಲವಾರು ಕೃಷಿ ಉತ್ಪನ್ನಗಳಿಗೆ ಹವಾಮಾನ ಸಂಬಂಧಿತ ವಿಮೆಯನ್ನು ಒದಗಿಸುತ್ತದೆ, ಆದರೆ ಈ ಯೋಜನೆಯ ವ್ಯಾಪ್ತಿಯಡಿ ವೀಳ್ಯದೆಲೆ ಬರುವುದಿಲ್ಲ.










