"ಬಿಜು [ಹೊಸ ವರ್ಷದ ಹಬ್ಬ] ಸಮಯದಲ್ಲಿ, ನಾವೆಲ್ಲರೂ ಬೇಗನೆ ಎದ್ದು ಹೂವುಗಳನ್ನು ಕೀಳಲು ಹೊರಗೆ ಹೋಗುತ್ತಿದ್ದೆವು. ಕಿತ್ತು ತಂದ ಹೂವುಗಳನ್ನು ನದಿಯಲ್ಲಿ ತೇಲಿಸಿ ಸ್ನಾನ ಮಾಡಿದ ನಂತರ ಹಳ್ಳಿಯ ಪ್ರತಿಯೊಂದು ಮನೆಗೂ ಭೇಟಿ ನೀಡಿ, ಅವರನ್ನು ಭೇಟಿಯಾಗಿ ನಮಸ್ಕರಿಸುತ್ತಿದ್ದೆವು" ಎಂದು ಜಯಾ ನೆನಪಿಸಿಕೊಳ್ಳುತ್ತಾರೆ. ಇದೆಲ್ಲ ಆಗಿ ಅರ್ಧ ಶತಮಾನಕ್ಕೂ ಹೆಚ್ಚು ಸಮಯ ಕಳೆದಿದೆ, ಆದರೆ ಆ ದಿನದ ನೆನಪು ಮಾಸಿಲ್ಲ.
“ಹೋದ ಪ್ರತಿ ಮನೆಗೂ ನಾವು ಅದೃಷ್ಟದ ಸಂಕೇತವಾಗಿ ಒಂದಷ್ಟು ಅಕ್ಕಿ ಕಾಳುಗಳನ್ನು ನೀಡುತ್ತಿದ್ದೆವು. ಪ್ರತಿಯಾಗಿ ಅವರು ನಮಗೆ ಅಕ್ಕಿಯಿಂದ ತಯಾರಿಸಿದ ಲಾಂಗಿ [ಅಕ್ಕಿಯಿಂದ ತಯಾರಿಸಿದ ಬಿಯರ್] ಕೊಡುತ್ತಿದ್ದರು. ಒಂದೊಂದು ಮನೆಯಲ್ಲಿ ಕೆಲವೇ ಗುಟುಕು ಕುಡಿಯುತ್ತಿದ್ದೆವಾದರೂ ಹಲವು ಮನೆಗೆ ಹೋಗುತ್ತಿದ್ದ ಕಾರಣ ಕೊನೆಗೆ ಬಹಳ ದೊಡ್ಡ ಮಟ್ಟದಲ್ಲೇ ಸೇವಿಸಿರುತ್ತಿದ್ದೆವು” ಎಂದು ಅವರು ಹೇಳುತ್ತಾರೆ. “ಜೊತೆಗೆ ಊರಿನ ಯುವಜನರು ತಮ್ಮ ಮನೆಯ ಹಿರಿಯರನ್ನು ಹೊಳೆಗೆ ಕರೆದುಕೊಂಡು ಹೋಗಿ ಗೌರವದ ಪ್ರತೀಕವಾಗಿ ಅವರಿಗೆ ಸ್ನಾನ ಮಾಡಿಸುತ್ತಿದ್ದರು.” ಎನ್ನುವಾಗ ಜಯಾ ಅವರ ಮುಖವು ನೆನಪಿನ ಲೋಕದಲ್ಲಿ ಹೊಳೆಯುತ್ತಿತ್ತು.
ಈಗ, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಆ ಮನೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿ, ಉಳಿದಿರುವುದು ಲಾಂಗಿ ಮಾತ್ರ - ಇದು ಅನೇಕ ನಿರಾಶ್ರಿತರನ್ನು ಅವರ ಚಕ್ಮಾ ಸಮುದಾಯದ ಆಚರಣೆಗಳು ಮತ್ತು ಪದ್ಧತಿಗಳೊಂದಿಗೆ ಬಂಧಿಸುವ ಎಳೆಯಾಗಿದೆ. "ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ" ಎಂದು ಬಾಂಗ್ಲಾದೇಶದ ರಂಗಮತಿಯಲ್ಲಿ ಬೆಳೆದ ಜಯಾ ಹೇಳುತ್ತಾರೆ. ಈ ಪ್ರದೇಶದ ಇತರ ಬುಡಕಟ್ಟು ಜನಾಂಗದವರು ಸಹ ಆಚರಣೆಗಳು ಮತ್ತು ನೈವೇದ್ಯಗಳಲ್ಲಿ ಲಾಂಗಿಯನ್ನು ಬಳಸುತ್ತಾರೆ.
"ನಾನು ಇದನ್ನು [ಲಾಂಗಿ] ತಯಾರಿಸಲು ಹೆತ್ತವರಿಂದ ಕಲಿತಿದ್ದು. ಮದುವೆಯಾದ ನಂತರ, ಪತಿ ಸುರೇನ್ ಮತ್ತು ನಾನು ಒಟ್ಟಿಗೆ ತಯಾರಿಸಲು ಪ್ರಾರಂಭಿಸಿದೆವು" ಎಂದು ಅವರು ಹೇಳುತ್ತಾರೆ. ದಂಪತಿಗೆ ಇತರ ಮೂರು ರೀತಿಯ ಬಿಯರ್ ತಯಾರಿಸಲು ಬರುತ್ತದೆ - ಲಾಂಗಿ, ಮೋಡ್ ಮತ್ತು ಜೋಗೊರಾ.
ಅಕ್ಕಿಯಿಂದ ತಯಾರಿಸಿದ ಜೋಗೊರಾದ ಸಿದ್ಧತೆಗಳು ಚೈತ್ರದ ಮೊದಲ ದಿನದಂದು (ಬಂಗಾಳಿ ಕ್ಯಾಲೆಂಡರ್ ವರ್ಷದಲ್ಲಿ ವರ್ಷದ ಕೊನೆಯ ತಿಂಗಳು) ಪ್ರಾರಂಭವಾಗುತ್ತವೆ. "ನಾವು ಬಿರೋಯಿನ್ ಚಾಲ್ [ಉತ್ತಮ ಗುಣಮಟ್ಟದ ಅಂಟು ಅಂಟಾದ ಅಕ್ಕಿ] ಬಳಸುತ್ತೇವೆ ಮತ್ತು ಅದನ್ನು ಬಟ್ಟಿ ಇಳಿಸುವ ಮೊದಲು ವಾರಗಳವರೆಗೆ ಬಿದಿರಿನಲ್ಲಿ ಹುದುಗಿಸಿ ಇಡುತ್ತೇವೆ. ನಾವು ಈಗ ಹೆಚ್ಚು ಜೋಗೊರಾ ತಯಾರಿಸುವುದಿಲ್ಲ" ಎಂದು ಜಯಾ ಹೇಳುತ್ತಾರೆ, ಏಕೆಂದರೆ ಇದನ್ನು ತಯಾರಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ ಮತ್ತು ಅಕ್ಕಿ ಕೂಡ ಈಗ ತುಂಬಾ ದುಬಾರಿ. "ಈ ಮೊದಲು ನಾವು ಈ ಭತ್ತವನ್ನು ಜುಮ್ [ಗುಡ್ಡಗಾಡು ಕೃಷಿ] ನಲ್ಲಿ ಬೆಳೆಯುತ್ತಿದ್ದೆವು, ಆದರೆ ಈಗ ಹೆಚ್ಚಿನ ಭೂಮಿ ಉಳಿದಿಲ್ಲ."
















