ಶಶಿ ರೂಪೇಜಾ ಅವರಿಗೆ ಈ ಕುರಿತು ಖಾತರಿಯಿಲ್ಲ, ಆದರೂ ಅವರ ಪ್ರಕಾರ ಅವರ ಗಂಡ ಅವರು ಕಸೂತಿ ಕೆಲಸ ಮಾಡುವಾಗ ಗಂಡನ ಗಮನ ಅವರ ಮೇಲೆ ಬಿದ್ದಿದ್ದು. “ಖಂಡಿತವಾಗಿಯೂ ಅವರು ನಾನು ಫುಲ್ಕಾರಿ ಕಸೂತಿ ಹಾಕುತ್ತಿರುವಾಗ ನನ್ನನ್ನು ಗಮನಿಸಿ, ಇವಳು ಶ್ರಮಜೀವಿ ಎಂದು ಭಾವಿಸಿರಬಹುದು” ಎಂದು ಅವರು ನಕ್ಕರು. ಅರ್ಧ ಕೆಲಸ ಮುಗಿದ ಫುಲ್ಕಾರಿ ಅವರ ಕೈಯಲ್ಲಿತ್ತು.
ಅದು ಪಂಜಾಬಿನ ಚಳಿಯ ದಿನಗಳು. ಶಶಿ ತನ್ನ ಸ್ನೇಹಿತೆ ಬಿಮ್ಲಾ ಅವರೊಂದಿಗೆ ತನ್ನ ಪಕ್ಕದ ಮನೆಯ ಬಳಿ ಕುಳಿತಿದ್ದರು. ಇಬ್ಬರೂ ಚಳಿಗಾಲದ ಚಿಗುರು ಬಿಸಿಲನ್ನು ಆನಂದಿಸುತ್ತಿದ್ದರು. ದೈನಂದಿನ ಬದುಕಿನ ವಿಷಯಗಳನ್ನು ಮಾತನಾಡುತ್ತಿದ್ದ ಅವರಿಬ್ಬರ ಕೈಗಳು ಮಾತ್ರ ಕೆಲಸದಲ್ಲಿ ತೊಡಗಿಕೊಂಡಿದ್ದವು. ಅವರು ಮಾತಿನಲ್ಲಿ ಮುಳುಗಿದ್ದರೂ ಗಮನವೆಲ್ಲ ಕೈಯಲ್ಲಿದ್ದ ಸೂಜಿ ಮೇಲಿತ್ತು. ಇಬ್ಬರೂ ಬಣ್ಣದ ಬಟ್ಟೆಯ ಮೇಲೆ ಫುಲ್ಕಾರಿ ಕಸೂತಿ ಮೂಡಿಸುವುದರಲ್ಲಿ ಮಗ್ನರಾಗಿದ್ದರು.
ಕೆಂಪು ದುಪ್ಪಟ್ಟಾ ಒಂದಕ್ಕೆ ಜಾಗ್ರತೆಯಿಂದ ಕಸೂತಿ ಹಾಕುತ್ತಾ, “ಒಂದು ಕಾಲದಲ್ಲಿ ಇಲ್ಲಿನ ಪ್ರತಿ ಮನೆಯ ಮಹಿಳೆಯೂ ಫುಲ್ಕಾರಿ ಕಸೂತಿ ಮಾಡುತ್ತಿದ್ದಳು” ಎಂದು ಪಟಿಯಾಲದ ನಿವಾಸಿಯಾದ ಈ 56ರ ಮಹಿಳೆ ಹೇಳುತ್ತಾರೆ.
ಫುಲ್ಕರಿ ಹೂವಿನ ಮಾದರಿಗಳನ್ನು ಹೊಂದಿರುವ ಕಸೂತಿ ಶೈಲಿಯಾಗಿದ್ದು, ಇದನ್ನು ಸಾಮಾನ್ಯವಾಗಿ ದುಪಟ್ಟಾ, ಸಲ್ವಾರ್ ಕಮೀಜ್ ಮತ್ತು ಸೀರೆಯಂತಹ ಉಡುಪುಗಳಲ್ಲಿ ಬಳಸಲಾಗುತ್ತದೆ. ವಿನ್ಯಾಸವನ್ನು ಮೊದಲು ಕೆತ್ತಿದ ಮರದ ತುಂಡುಗಳನ್ನು ಬಳಸಿಕೊಂಡು ಶಾಯಿಯಿಂದ ಬಟ್ಟೆಯ ಮೇಲೆ ಅಚ್ಚು ಹಾಕಲಾಗುತ್ತದೆ. ಕುಶಲಕರ್ಮಿಗಳು ನಂತರ ಪಟಿಯಾಲ ನಗರದಿಂದ ತಂದ ಸ್ಥಳೀಯ ವರ್ಣರಂಜಿತ ರೇಷ್ಮೆ ಮತ್ತು ಹತ್ತಿ ದಾರಗಳನ್ನು ಬಳಸಿ ಅಚ್ಚಿನ ಮೇಲೆ ಕಸೂತಿ ಮಾಡುತ್ತಾರೆ.










