“ಮೊದಲು ಕಾಗದದಲ್ಲಿ ಮತ ಹಾಕುತ್ತಿದ್ದ ಕಾಲ ಚೆನ್ನಾಗಿತ್ತು. ಈಗಿನ ಮಿಷಿನ್ ವೋಟಿಂಗಿನಲ್ಲಿ ಯಾವ ಗುಂಡಿ ಒತ್ತಲಾಗುತ್ತಿದೆ, ಮತ ಯಾರಿಗೆ ಹೋಗುತ್ತಿದೆಯೆನ್ನುವುದು ತಿಳಿಯುವುದಿಲ್ಲ!”
ಕಲ್ಮುದೀನ್ ಅನ್ಸಾರಿ ಅವರು ಖಂಡಿತವಾಗಿಯೂ ಇವಿಎಂಗಳಿಗಿಂತ (ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು) ಕಾಗದದ ಮತಪತ್ರಗಳಿಗೆ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಪಲಾಮುವಿನ ಕುಮ್ನಿ ಗ್ರಾಮದ ನಿವಾಸಿಯಾದ 52 ವರ್ಷದ ಅವರು ಜಾರ್ಖಂಡ್ ರಾಜ್ಯದ ಏಪ್ರಿಲ್ ತಿಂಗಳ ಸುಡುವ ಬಿಸಿಲಿನಿಂದ ರಕ್ಷಣೆಗಾಗಿ ತಲೆಗೆ ಬಿಳಿ ಗಮ್ಚಾ ಸುತ್ತಿ ಸ್ಥಳೀಯ ಮಾವೇಶಿ (ಜಾನುವಾರು) ಜಾತ್ರೆಯಲ್ಲಿ ತಿರುಗಾಡುತ್ತಿದ್ದರು. ತೆಳುವಾದ, ಒರಟು ಹತ್ತಿ ಬಟ್ಟೆ, ಸಾಂಪ್ರದಾಯಿಕವಾಗಿ ಟವೆಲ್, ಸ್ಕಾರ್ಫ್ ಅಥವಾ ಪೇಟವಾಗಿ ಬಳಸಲಾಗುತ್ತದೆ. ಗಮ್ಚಾ ಹೊಂದಾಣಿಕೆಯ ಗುಣಗಳನ್ನು ಹೊಂದಿರುವ ಉಡುಪು ಕೂಡ ಆಗಿದೆ. ಅವರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಪಥರ್ ಎನ್ನುವಲ್ಲಿ ನಡೆಯುವ ವಾರದ ಜಾನುವಾರು ಜಾತ್ರೆಗೆ 13 ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. "ನಮಗೆ ಹಣ ಬೇಕು" ಎಂದು ಅವರು ಹೇಳುತ್ತಾರೆ.
ಕಳೆದ ವರ್ಷ (2023), ಅವರ ಭತ್ತದ ಬೆಳೆ ಇಡಿಯಾಗಿ ನಾಶವಾಯಿತು. ನಂತರ ಅವರು ರಬಿ ಹಂಗಾಮಿನಲ್ಲಿ ಸಾಸಿವೆ ಬಿತ್ತನೆ ಮಾಡಿದರು, ಆದರೆ ಅದರ ಮೂರನೇ ಒಂದು ಭಾಗ ಕೀಟಗಳ ಪಾಲಾಯಿತು. "ಸುಮಾರು 2.5 ಕ್ವಿಂಟಾಲ್ ಕೊಯ್ಲು ಮಾಡಿದ್ದೆವು. ಅದೆಲ್ಲವೂ ಸಾಲ ತೀರಿಸಲು ಖರ್ಚಾಯಿತು" ಎಂದು ಕಲ್ಮುದೀನ್ ಹೇಳುತ್ತಾರೆ.
ರೈತನಾದ ಕಲ್ಮುದಿನ್ ನಾಲ್ಕು ಬಿಘಾ (ಸುಮಾರು ಮೂರು ಎಕರೆ) ಭೂಮಿಯಲ್ಲಿ ಕೃಷಿ ಮಾಡುತ್ತಾರೆ ಮತ್ತು ಸ್ಥಳೀಯ ಲೇವಾದೇವಿಗಾರರಿಂದ ಬಹಳಷ್ಟು ಹಣವನ್ನು ಸಾಲವಾಗಿ ಪಡೆದಿದ್ದಾರೆ. "ಬಹುತ್ ಪೈಸಾ ಲೇ ಲೇವಾ ಲೇ [ಅವರು ಸಾಕಷ್ಟು ಹಣವನ್ನು ತೆಗೆದುಕೊಂಡಿದ್ದಾರೆ]" ಎಂದು ಅವರು ಹೇಳುತ್ತಾರೆ ಮತ್ತು ಸಾಲ ಪಡೆದ ಪ್ರತಿ ನೂರು ರೂಪಾಯಿಗಳಿಗೆ ಐದು ರೂಪಾಯಿಗಳ ಮಾಸಿಕ ಬಡ್ಡಿ ವಿಧಿಸಲಾಗುತ್ತಿದೆ, "ನಾನು 16,000 ರೂಪಾಯಿ ಸಾಲ ಪಡೆದಿದ್ದೆ, ಈಗ ಅದು 20,000 ಆಗಿದೆ, ಆದರೆ ನಾನು ಅದರಲ್ಲಿ ಕೇವಲ 5,000 ಮಾತ್ರ ಪಾವತಿಸಿದ್ದೇನೆ" ಎಂದು ಅವರು ಹೇಳುತ್ತಾರೆ.
ಈಗ ಅವರಿಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ತನ್ನ ಎತ್ತನ್ನು ಮಾರಾಟ ಮಾಡುವುದು. "ಇಸಿಲಿಯೇ ಕಿಸಾನ್ ಚುರ್ಮುರಾ ಜಾತಾ ಹೈ. ಖೇತಿ ಕಿಯೇ ಕಿ ಬೈಲ್ ಬೇಚಾ ಗಯಾ [ಇದಕ್ಕಾಗಿಯೇ ರೈತ ಕಷ್ಟಗಳನ್ನು ಎದುರಿಸುತ್ತಾನೆ. ಬೇಸಾಯ ಮಾಡುವ ನಾನು ಎತ್ತುಗಳನ್ನೇ ಮಾರುವ ಸ್ಥಿತಿಯಲ್ಲಿದ್ದೇನೆ]" ಎಂದು 2023ರಲ್ಲಿ ಮಳೆಯ ನಿರೀಕ್ಷೆಯಲ್ಲಿದ್ದ ಕಲ್ಮುದಿನ್ ಹೇಳುತ್ತಾರೆ.












