ಅದು ಮಧ್ಯ ಭಾರತದಲ್ಲಿರುವ ಖಾರ್ಗೋನ್ ಪಟ್ಟಣ. ಮಧ್ಯಪ್ರದೇಶದ ಈ ಪಟ್ಟಣದ ಜನದಟ್ಟಣೆಯ ಚಾಂದನಿ ಚೌಕ್ ಪ್ರದೇಶದಲ್ಲಿ ಎಪ್ರಿಲ್ ತಿಂಗಳ ಚುರುಕು ಬಿಸಿಲಿನ ಬೆಳಗು ಆಗಷ್ಟೇ ಕಣ್ಣು ಬಿಡುತ್ತಿತ್ತು. ಅಲ್ಲಿಗೆ ಇದ್ದಕ್ಕಿದ್ದಂತೆ ನುಗ್ಗಿಬಂದ ಬುಲ್ಡೋಜರುಗಳು ಅಲ್ಲಿನ ಜನರ ಗದ್ದಲವನ್ನು ಒಮ್ಮೆಗೇ ತಣ್ಣಗಾಗಿಸಿತು. ಇದರಿಂದ ಭಯಭೀತರಾದ ನಿವಾಸಿಗಳು ತಮ್ಮ ಸಣ್ಣ ಅಂಗಡಿಗಳು ಮತ್ತು ಮನೆಗಳಿಂದ ಹೊರಬರತೊಡಗಿದರು.
ಜೆಸಿಬಿಯ ದಪ್ಪ ಬ್ಲೇಡಿನ ಹಲ್ಲುಗಳು ಕೆಲವೇ ನಿಮಿಷಗಳಲ್ಲಿ ತನ್ನ ದಿನಸಿ ಅಂಗಡಿ ಮತ್ತು ಅದರೊಳಗಿನ ವಸ್ತುಗಳನ್ನು ಪುಡಿಪುಡಿ ಮಾಡುವುದನ್ನು ಭಯಭೀತರಾಗಿ ನೋಡುತ್ತಾ ನಿಂತಿದ್ದ 35 ವರ್ಷದ ವಾಸಿಮ್ ಅಹ್ಮದ್ ಇಡೀ ಜೀವಮಾನದ ಸಂಪಾದನೆ ಅಂದು ಮಣ್ಣುಪಾಲಾಗಿತ್ತು. “ನನ್ನ ಬಳಿ ಇದ್ದಿದ್ದನ್ನೆಲ್ಲ ಈ ಅಂಗಡಿಯ ಮೇಲೆ ಸುರಿದಿದ್ದೆ” ಎಂದು ಅವರು ಹೇಳುತ್ತಾರೆ.
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಲ್ಲಿಗೆ ಬಂದಿದ್ದ ಬುಲ್ಡೋಜರುಗಳು ಕೇವಲ ಅವರೊಬ್ಬರ ಸಣ್ಣ ಅಂಗಡಿಯನ್ನಷ್ಟೇ ನೆಲಸಮಗೊಳಿಸಿರಲಿಲ್ಲ. ಅಂದು (ಏಪ್ರಿಲ್ 11, 2022ರಂದು) ಮುಸ್ಲಿ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಸುಮಾರು 50 ಅಂಗಡಿಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಗಿತ್ತು. ಮಧ್ಯಪ್ರದೇಶ ರಾಜ್ಯ ಸರ್ಕಾರವು ರಾಮನವಮಿ ಹಬ್ಬದ ಸಂದರ್ಭದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ "ಗಲಭೆಕೋರರಿಗೆ" ಪಾಠ ಕಲಿಸುವ ಸಲುವಾಗಿ ಈ ಕಾರ್ಯಾಚರಣೆಯನ್ನು ಕೈಗೊಂಡಿತ್ತು.
ಆದರೆ ವಾಸಿಮ್ ಅಂತಹ ಕೆಲಸ ಮಾಡಿದ್ದಾರೆನ್ನುವುದನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ಕಲ್ಲು ಹೊಡೆಯುವುದು ಅತ್ತಗಿರಲಿ, ಅವರಿಗೆ ಇನ್ನೊಬ್ಬರ ಸಹಾಯವಿಲ್ಲದೆ ಒಂದು ಕಪ್ ಚಹಾ ಕುಡಿಯಲು ಸಹ ಸಾಧ್ಯವಿಲ್ಲ. ಏಕೆಂದರೆ ಅವರೊಬ್ಬ ಎರಡೂ ಕೈಗಳಿಲ್ಲದ ಅಂಗವಿಕಲ.
“ಆ ದಿನ ನಡೆದ ಘಟನೆಗೂ ನನಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ” ಎನ್ನುತ್ತಾರೆ ವಾಸಿಮ್.
ಒಂದು ಕಾಲದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಅವರು, 2005ರಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡರು. “ಒಂದು ಕೆಲಸ ಮಾಡುತ್ತಿರುವಾಗ ನನಗೆ ವಿದ್ಯುತ್ ಶಾಕ್ ಹೊಡೆಯಿತು. ನಂತರ ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನನ್ನ ಎರಡೂ ತೋಳುಗಳನ್ನು ಕತ್ತರಿಸಬೇಕಾಗಿ ಬಂತು. ಇಂತಹ ಪರಿಸ್ಥಿತಿಯಲ್ಲೂ ನಾನು ಹೇಗೋ [ಅಂಗಡಿ ಮೂಲಕ] ಬದುಕು ಕಟ್ಟಿಕೊಂಡಿದ್ದೆ.” ಎನ್ನುವ ವಾಸಿಮ್ ಅವರಿಗೆ ತಾನು ಸ್ವಾನುಕಂಪದೊಂದಿಗೆ ವ್ಯರ್ಥ ಕುಳಿತುಕೊಳ್ಳದೆ ಬದುಕು ಕಟ್ಟಿಕೊಂಡ ಕುರಿತು ಹೆಮ್ಮೆಯಿದೆ.








