“ನನಗೆ ಒಂದೇ ಒಂದು ಮೀನು ಸಿಕ್ಕದೆ ಇವತ್ತಿಗೆ ಆರು ದಿನ ಆಯ್ತು” ಎಂದು ವುಲಾರ್ ಸರೋವರದ ದಡದಲ್ಲಿ ನಿಂತಿರುವ ಅಬ್ದುಲ್ ರಹೀಮ್ ಕಾವಾ ಹೇಳುತ್ತಾರೆ. 65 ವರ್ಷದ ಈ ಮೀನುಗಾರ ತನ್ನ ಪತ್ನಿ ಮತ್ತು ಮಗನೊಂದಿಗೆ ಇಲ್ಲಿ ಒಂದು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಬಂಡಿಪೊರ್ ಜಿಲ್ಲೆಯ ಕಾನಿ ಬಾತಿ ಪ್ರದೇಶದಲ್ಲಿ ನೆಲೆಗೊಂಡಿರುವ ಮತ್ತು ಝೀಲಂ ನದಿ ಮತ್ತು ಮಧುಮತಿ ಹೊಳೆಯಿಂದ ಪೋಷಿಸಲ್ಪಡುವ ವುಲಾರ್ ಸರೋವರ ತನ್ನ ಸುತ್ತಲೂ ವಾಸಿಸುವ ಜನರ ಪಾಲಿಗೆ ಏಕೈಕ ಜೀವನೋಪಾಯ ಮೂಲ - ಸರಿಸುಮಾರು 18 ಹಳ್ಳಿಗಳ ಕನಿಷ್ಠ 100 ಕುಟುಂಬಗಳು ಈ ಸರೋವರದ ದಡದಲ್ಲಿ ಬದುಕುತ್ತಿವೆ.

“ಮೀನು ಹಿಡಿಯುವುದೊಂದೇ ನಮಗಿರುವ ಹೊಟ್ಟೆಪಾಡಿನ ದಾರಿ” ಎನ್ನುತ್ತಾರೆ ಅಬ್ದುಲ್.‌ ಆದರೆ “ಸರೋವರದಲ್ಲಿ ನೀರಿಲ್ಲ. ಈಗ ನೀರಿನಲ್ಲಿ ನಡೆದುಕೊಂಡು ಈ ಕೆರೆಯನ್ನು ದಾಟಬಹುದು ಏಕೆಂದರೆ, ಮೂಲೆಗಳಲ್ಲಿ ನೀರಿನ ಆಳ ಕೇವಲ ನಾಲ್ಕೈದು ಅಡಿಗಳಿಗೆ ಇಳಿದಿದೆ” ಎಂದು ಅವರು ಸರೋವರದ ಅಂಚುಗಳನ್ನು ತೋರಿಸುತ್ತಾ ಹೇಳುತ್ತಾರೆ.

ಮೀನುಗಾರ ಕುಟುಂಬದ ಮೂರನೇ ತಲೆಮಾರಿನವರಾದ ಅವರು ಈ ಸರೋವರದಲ್ಲಿ ಕಳೆದ 40 ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿದ್ದಾರೆ. “ನಾನು ಸಣ್ಣವನಿರುವಾಗ ಅಪ್ಪ ಮೀನು ಹಿಡಿಯಲು ಹೋಗುವಾಗ ನನ್ನನ್ನೂ ಕರೆದೊಯ್ಯುತ್ತಿದ್ದರು. ಅವರು ಮೀನು ಹಿಡಿಯುವುದನ್ನು ನೋಡುತ್ತಾ ನಾನೂ ಅದನ್ನು ಕಲಿತುಕೊಂಡೆ” ಎಂದು ಅವರು ಹೇಳುತ್ತಾರೆ. ಅಬ್ದುಲ್ ಅವರ ಮಗ ಕೂಡ ಕುಟುಂಬದ ವೃತ್ತಿಯನ್ನು ಅನುಸರಿಸಿದ್ದಾರೆ.

ಪ್ರತಿ ದಿನ ಬೆಳಗ್ಗೆ ಅಬ್ದುಲ್‌ ಮತ್ತು ಅವರ ಸಹಚರಿ ಮೀನುಗಾರರು ತಮ್ಮ ಜಾಲ್‌ ಜೊತೆ ವುಲರ್‌ ಕಡೆ ಹೊರಡುತ್ತಾರೆ (ಜಾಲ್‌ - ನೈಲಾನ್‌ ಹಗ್ಗ ಬಳಸಿ ಅವರೇ ನೇಯ್ದ ಬಲೆ). ಬಲೆಯನ್ನು ನೀರಿಗೆ ಎಸೆಯುವ ಅವರು ಕೆಲವೊಮ್ಮೆ ಮೀನುಗಳನ್ನು ಆಕರ್ಷಿಸುವ ಸಲುವಾಗಿ ತಾವೇ ಕೈಯಿಂದ ತಯಾರಿಸಿದ ಸಣ್ಣ ಡೋಲನ್ನು ಬಾರಿಸುತ್ತಾರೆ.

ವುಲಾರ್ ಭಾರತದಲ್ಲೇ ಅತಿದೊಡ್ಡ ಸಿಹಿನೀರಿನ ಸರೋವರ ಆದರೆ ಕಳೆದ ನಾಲ್ಕು ವರ್ಷಗಳಲ್ಲಿ, ವುಲಾರ್ ಸರೋವರದ ನೀರು ಹೆಚ್ಚು ಮಲಿನಗೊಂಡಿರುವುದರಿಂದಾಗಿ ವರ್ಷಪೂರ್ತಿ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. "ಈ ಮೊದಲು, ನಾವು ವರ್ಷದಲ್ಲಿ ಕನಿಷ್ಠ ಆರು ತಿಂಗಳು ಮೀನು ಹಿಡಿಯುತ್ತಿದ್ದೆವು. ಆದರೆ ಈಗ ನಾವು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಮೀನು ಹಿಡಿಯುತ್ತೇವೆ" ಎಂದು ಅಬ್ದುಲ್ ಹೇಳುತ್ತಾರೆ.

ನೋಡಿ: ಕಾಶ್ಮೀರ - ಕಣ್ಮರೆಯಾದ ಕೆರೆ

ಶ್ರೀನಗರದ ಮೂಲಕ ಹರಿಯುವ ಝೀಲಂ ನದಿಯು ಹೊತ್ತು ತರುವ ತ್ಯಾಜ್ಯವು ಇಲ್ಲಿನ ಮಾಲಿನ್ಯದ ಮುಖ್ಯ ಮೂಲವಾಗಿದೆ, ಇದು ನಗರದ ತ್ಯಾಜ್ಯವನ್ನು ದಾರಿಯುದ್ದಕ್ಕೂ ತನ್ನೊಡಲಿನೊಳಗೆ ಸುರಿದುಕೊಳ್ಳುತ್ತದೆ. 1990ರ ರಾಮ್ಸರ್ ಒಡಂಬಡಿಕೆಯಲ್ಲಿ "ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ನೀರಾವರಿ ಭೂಮಿ" ಎಂದು ಹೆಸರಿಸಲ್ಪಟ್ಟ ಈ ಸರೋವರವು ಈಗ ಒಳಚರಂಡಿ, ಕೈಗಾರಿಕಾ ಹರಿವು ಮತ್ತು ತೋಟಗಾರಿಕೆ ತ್ಯಾಜ್ಯದ ಬಸಿಗುಂಡಿಯಾಗಿ ಮಾರ್ಪಟ್ಟಿದೆ. "ಸರೋವರದ ಮಧ್ಯಭಾಗದಲ್ಲಿ ನೀರಿನ ಮಟ್ಟವು 40-60 ಅಡಿಗಳಷ್ಟಿತ್ತು, ಅದು ಈಗ ಕೇವಲ 8-10 ಅಡಿಗಳಿಗೆ ಇಳಿದಿದೆ" ಎಂದು ಮೀನುಗಾರರು ಹೇಳುತ್ತಾರೆ.

ಅವರ ನೆನಪಿನ ಶಕ್ತಿ ಸರಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 2022ರ ಅಧ್ಯಯನವೊಂದು 2008 ಮತ್ತು 2019ರ ನಡುವೆ ಸರೋವರವು ಕಾಲು ಭಾಗದಷ್ಟು ಕುಗ್ಗಿದೆ ಎಂದು ಬಹಿರಂಗಪಡಿಸಿದೆ.

ಏಳೆಂಟು ವರ್ಷಗಳ ಹಿಂದೆಯೂ ಅವರು ಎರಡು ರೀತಿಯ ಗಾಡ್ (ಮೀನು) ಗಳನ್ನು ಹಿಡಿಯುತ್ತಿದ್ದರು - ಕಾಶ್ಮೀರಿ ಮತ್ತು ಪಂಜಿಯಾಬ್, ಇದು ಎಲ್ಲಾ ಕಾಶ್ಮೀರಿಯೇತರ ವಿಷಯಗಳಿಗೆ ಸ್ಥಳೀಯ ಪದ ಎಂದು ಅಬ್ದುಲ್ ಹೇಳುತ್ತಾರೆ. ಅವರು ತಾವು ಹಿಡಿದ ಮೀನುಗಳನ್ನು ವುಲಾರ್ ಮಾರುಕಟ್ಟೆಯಲ್ಲಿನ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಿದ್ದರು. ವುಲಾರ್ ಸರೋವರದ ಮೀನುಗಳು ಶ್ರೀನಗರ ಸೇರಿದಂತೆ ಕಾಶ್ಮೀರದಾದ್ಯಂತದ ಅನ್ನದ ಬಟ್ಟಲುಗಳನ್ನು ತಲುಪುತ್ತಿದ್ದವು.

“ಸರೋವರದಲ್ಲಿ ನೀರು ಇದ್ದ ಸಂದರ್ಭದಲ್ಲಿ ಮೀನು ಹಿಡಿದು ಮಾರಾಟ ಮಾಡುವುದರಿಂದ ನನಗೆ 1,000 ರೂಪಾಯಿಗಳವರೆಗೆ ಸಂಪಾದನೆಯಾಗುತ್ತಿತ್ತು” ಎಂದು ಅಬ್ದುಲ್ ಹೇಳುತ್ತಾರೆ. “ಈಗ ಮೀನು ಚೆನ್ನಾಗಿ ಸಿಕ್ಕ ದಿನದಂದು ನಾನು ಮುನ್ನೂರು [ರೂಪಾಯಿ] ಗಳಿಸುತ್ತೇನೆ.” ಹೆಚ್ಚು ಮೀನು ಸಿಗದಿದ್ದ ದಿನ ಅವರು ಅದನ್ನು ಮಾರುವ ಕುರಿತು ತಲೆ ಕೆಡಿಸಿಕೊಳ್ಳದೆ ತಮ್ಮ ಸ್ವಂತ ಬಳಕೆಗಾಗಿ ಮನೆಗೆ ತರುತ್ತಾರೆ.

ಮಾಲಿನ್ಯ ಮತ್ತು ನೀರಿನ ಮಟ್ಟದ ಕುಸಿತ ಈ ಕೆರೆಯಲ್ಲಿನ ಮೀನು ಕೊರತೆಗೆ ಕಾರಣವಾಗಿವೆ. ಇದರಿಂದಾಗಿ ಈಗ ಇಲ್ಲಿನ ಮೀನುಗಾರರು ನವೆಂಬರ್ ಮತ್ತು ಫೆಬ್ರವರಿ ನಡುವೆ ವಾಟರ್‌ ಚೆಸ್ಟ್‌ ನಟ್‌ (ಸಿಂಘಾರ/ಒಂದು ಬಗೆಯ ಮರದ ಕಂದು ಬಣ್ಣದ ಹಣ್ಣು) ಸಂಗ್ರಹಿಸಿ ಮಾರುವಂತಹ ಪರ್ಯಾಯ ಜೀವನೋಪಾಯದ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಇವುಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ಕಿಲೋಗೆ ಸುಮಾರು 30-40 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.

ಈ ಚಿತ್ರವು ವುಲಾರ್ ಸರೋವರದಲ್ಲಿನ ಮಾಲಿನ್ಯ ಮತ್ತು ಅದರಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿರುವ ಮೀನುಗಾರರ ಕಥೆಯನ್ನು ಹೇಳುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Muzamil Bhat

ମୁଜାମିଲ୍ ଭଟ ହେଉଛନ୍ତି ଶ୍ରୀନଗରରେ ବାସ କରୁଥିବା ଜଣେ ମୁକ୍ତବୃତ୍ତ ଫଟୋ ସାମ୍ବାଦିକ ଓ ଚଳଚ୍ଚିତ୍ର ନିର୍ମାତା ଏବଂ ସେ 2022 ର ପରୀ ଫେଲୋ ଥିଲେ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Muzamil Bhat
Editor : Sarbajaya Bhattacharya

ସର୍ବଜୟା ଭଟ୍ଟାଚାର୍ଯ୍ୟ ପରୀର ଜଣେ ବରିଷ୍ଠ ସହାୟିକା ସମ୍ପାଦିକା । ସେ ମଧ୍ୟ ଜଣେ ଅଭିଜ୍ଞ ବଙ୍ଗଳା ଅନୁବାଦିକା। କୋଲକାତାରେ ରହୁଥିବା ସର୍ବଜୟା, ସହରର ଇତିହାସ ଓ ଭ୍ରମଣ ସାହିତ୍ୟ ପ୍ରତି ଆଗ୍ରହୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru