“ನನ್ನ ಕುಟುಂಬದವರಷ್ಟೇ ನನ್ನನ್ನು ಸ್ವೀಕರಿಸಲು ಹಿಂಜರಿದರು. ಈ ಮೀನುಗಾರರಲ್ಲ. ದೋಣಿ ಮಾಲಿಕರು ನನ್ನನ್ನು ಕೈರಾಸಿ (ಅದೃಷ್ಟದ ಕೈ) ಯಾಗಿ ನೋಡುತ್ತಾರೆ” ಎನ್ನುತ್ತಾರೆ ಮನೀಷಾ. ಟ್ರಾನ್ಸ್ ಮಹಿಳೆಯಾಗಿ ಗುರುತಿಸಿಕೊಳ್ಳುವ ಅವರು, ಈ ಬಂದರಿನಲ್ಲಿ ಮೀನು ಹರಾಜುಗಾರರಾಗಿ ಕೆಲಸ ಮಾಡುತ್ತಾರೆ. “ಅವರು ನನ್ನನ್ನು ತಿರಸ್ಕರಿಸಲಿಲ್ಲ. ಅವರಿಗೆ ನಾನು ಯಾರೆನ್ನುವುದು ಸಮಸ್ಯೆಯಲ್ಲ. ಅವರಿಗೆ ಬೇಕಿರುವುದು ಅವರ ಮೀನು ಮಾರಾಟವಾಗುವುದು ಮಾತ್ರ” ಎಂದು ಅವರು ಸಂತೋಷದಿಂದ ಹೇಳುತ್ತಾರೆ.
ಕಡಲೂರು ಓಲ್ಡ್ ಟೌನ್ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಸುಮಾರು 30 ಮಹಿಳಾ ಹರಾಜುದಾರರಲ್ಲಿ 37 ವರ್ಷದ ಮನೀಷಾ ಕೂಡ ಒಬ್ಬರು. "ನಾನು ದೊಡ್ಡ ದನಿಯಲ್ಲಿ ಹರಾಜು ಮಾಡಲು ಸಾಧ್ಯವಿರುವ ಕಾರಣ ಹೆಚ್ಚಿನ ಬೆಲೆಯನ್ನು ಪಡೆಯಬಹುದು. ಅನೇಕರು ನನ್ನಿಂದ ಮೀನುಗಳನ್ನು ಖರೀದಿಸಲು ಬಯಸುತ್ತಾರೆ" ಎಂದು ಅವರು ಹೇಳುತ್ತಾರೆ, ಖರೀದಿದಾರರನ್ನು ಕರೆಯುವಾಗ ಅವರ ಧ್ವನಿ ಇತರ ಮಾರಾಟಗಾರರಿಗಿಂತ ಎತ್ತರದ ಸ್ತರದಲ್ಲಿರುತ್ತದೆ.
ಮನೀಷಾ ಅವರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲೇ ಮೀನು ಹರಾಜುಗಾರ್ತಿ ಮತ್ತು ಒಣ ಮೀನು ವ್ಯಾಪಾರಿಯಾಗಿದ್ದರು. ಈ ಜೀವನೋಪಾಯಕ್ಕಾಗಿ ಅವರು ಪ್ರತಿದಿನ ದೋಣಿ ಮಾಲೀಕರು ಮತ್ತು ಮೀನುಗಾರರೊಂದಿಗೆ ಸಂವಹನ ನಡೆಸಬೇಕಾಗುತ್ತದೆ. "ಅವರಿಗೆ ನನ್ನೊಂದಿಗೆ ಯಾವುದೇ ಸಮಸ್ಯೆ ಇಲ್ಲ. ನಾನು ಇತರರಿಗಿಂತ ಉತ್ತಮವಾಗಿ ಮೀನುಗಳನ್ನು ಹರಾಜು ಹಾಕುತ್ತೇನೆ."
ದೋಣಿ ಮಾಲೀಕರ ನೈತಿಕ ಬೆಂಬಲವಿಲ್ಲದೆ ಹೋಗಿದ್ದರೆ ತಾನು 2012ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ಅವರಲ್ಲಿ ಅವರ ನಂಬಿಗಸ್ತ ಆಪ್ತ ಸ್ನೇಹಿತ ಕೂಡಾ ಸೇರಿದ್ದಾರೆ, ಇದೇ ಸ್ನೇಹಿತ ಮನೀಷಾರನ್ನು ಆಪರೇಷನ್ ಮುಗಿದ ನಂತರ ಸ್ಥಳೀಯ ದೇವಾಲಯದಲ್ಲಿ ವಿವಾಹವಾದರು.
















