ಒಂದು ಮಧ್ಯಾಹ್ನ ಅಶೋಕ್‌ ತಾಂಗ್ಡೆ ಸುಮ್ಮನೆ ಕುಳಿತು ತನ್ನ ಫೋನ್‌ ಸ್ಕ್ರಾಲ್‌ ಮಾಡುತ್ತಿರುವ ವೇಳೆ ಅವರಿಗೊಂದು ವಾಟ್ಸಾಪ್‌ ನೋಟಿಫಿಕೇಷನ್‌ ಬಂತು. ಅದೊಂದು ಡಿಜಿಟಿಟಲ್‌ ಮದುವೆ ಕಾಗದವಾಗಿತ್ತು. ಅದರಲ್ಲಿದ್ದ ಸಣ್ಣ ವಯಸ್ಸಿನ ಮದುವೆ ಹೆಣ್ಣು ಮತ್ತು ಗಂಡು ಇಬ್ಬರೂ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಪರಸ್ಪರ ನೋಡುತ್ತಿದ್ದರು. ಕಾಗದದಲ್ಲಿ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರವೂ ಇತ್ತು.

ಆದರೆ ಆ ಮದುವೆ ಕಾಗದ ತಾಂಗ್ಡೆಯವರನ್ನು ಮದುವೆಗೆ ಆಹ್ವಾನಿಸಿ ಕಳುಹಿಸಿದ್ದಾಗಿರಲಿಲ್ಲ.

ಅವರಿಗೆ ಆ ಆಹ್ವಾನ ಪತ್ರಿಕೆಯನ್ನು ಪಶ್ಚಿಮ ಭಾರತದ ಆ ಜಿಲ್ಲೆಯ ಮಾಹಿತಿದಾರರೊಬ್ಬರು ಕಳುಹಿಸಿದ್ದರು. ಮುದವೆ ಕಾಗದದ ಜೊತೆಗೆ ಅವರು ಜನ್ಮ ಪ್ರಮಾಣಪತ್ರವನ್ನು ಸಹ ಕಳುಹಿಸಿದ್ದರು. ಅದರ ಪ್ರಕಾರ ಹುಡುಗಿಯ ವಯಸ್ಸು 17. ಕಾನೂನಿನ ದೃಷ್ಟಿಯಲ್ಲಿ ಅವಳು ಅಪ್ರಾಪ್ತೆ.

ಆಹ್ವಾನ ಪತ್ರಿಕೆ ಓದುತ್ತಿದ್ದಂತೆ 58 ವರ್ಷದ ತಾಂಗ್ಡೆಯವರಿಗೆ ಮದುವೆಗೆ ಇನ್ನು ಒಂದು ಗಂಟೆಯಷ್ಟೇ ಬಾಕಿಯಿದೆ ಎನ್ನುವುದು ತಿಳಿಯಿತು. ಅವರು ಕೂಡಲೇ ತನ್ನ ಜೊತೆಗಾರ ತತ್ವಶೀಲ್ ಕಾಂಬ್ಳೆ ಅವರಿಗೆ ಫೋನ್ ಮಾಡಿದರು. ನಂತರ ಕೂಡಲೇ ಕಾರಿನಲ್ಲಿ ಇಬ್ಬರೂ ಹೊರಟರು.

“ಮದುವೆ ನಡೆಯುವ ಸ್ಥಳ ನಮ್ಮ ಬೀಡ್‌ ನಗರದಿಂದ ಸುಮಾರು ಅರ್ಧ ಗಂಟೆಯಷ್ಟು ದೂರದಲ್ಲಿತ್ತು” ಎಂದು ಜೂನ್ 2023ರ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. “ನಾವು ಹೆಚ್ಚು ಸಮಯ ವ್ಯರ್ಥವಾಗದಂತೆ ತಡೆಯಲು ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಮತ್ತು ಗ್ರಾಮ ಸೇವಕರಿಗೆ ಮದುವೆ ಕಾಗದವನ್ನು ವಾಟ್ಸಾಪ್‌ ಮೂಲಕ ಕಳುಹಿಸಿದೆವು.”

ತಾಂಗ್ಡೆ ಮತ್ತು ಕಾಂಬ್ಳೆ ಮಕ್ಕಳ ಹಕ್ಕುಗಳ ಕಾರ್ಯಕರ್ತರಾಗಿದ್ದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕರ್ತರಾಗಿ (ವಿಷಲ್‌ ಬ್ಲೋವರ್ಸ್) ಕಾರ್ಯನಿರ್ವಹಿಸುತ್ತಿದ್ದಾರೆ.

ಅವರ ಹೋರಾಟದ ಹಾದಿಗೆ ಸಹಾಯವಾಗಿ ಅವರ ಹಿಂದೆ ವ್ಯಾಪಕ ಶ್ರೇಣಿಯ ಮಾಹಿತಿದಾರರ ದಂಡಿದೆ; ವಧುವಿನ ಮೇಲೆ ಒಲವು ಹೊಂದಿರುವ ಹಳ್ಳಿಯ ಹುಡುಗನಿಂದ ಹಿಡಿದು ಶಾಲಾ ಶಿಕ್ಷಕ ಅಥವಾ ಸಾಮಾಜಿಕ ಕಾರ್ಯಕರ್ತರವರೆಗೆ, ಬಾಲ್ಯ ವಿವಾಹವು ಅಪರಾಧ ಎನ್ನುವ ಅರಿವಿರುವ ಎಲ್ಲರೂ ಇವರ ಪಾಲಿಗೆ ಮಾಹಿತಿದಾರರು. ಅವರು ತಮ್ಮ ಈ ಪ್ರಯಾಣದಲ್ಲಿ ಜಿಲ್ಲೆಯಾದ್ಯಂತ 2,000ಕ್ಕೂ ಹೆಚ್ಚು ಮಾಹಿತಿದಾರರ ಜಾಲವನ್ನು ಬೆಳೆಸಿಕೊಂಡಿದ್ದಾರೆ. ಈ ಮಾಹಿತಿದಾರರೇ ಇವರಿಗೆ ಮದುವೆಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತಾರೆ.

Tatwasheel Kamble (left) and Ashok Tangde (right) are child rights activists working in Beed, Maharashtra. In the past decade, they have together prevented over 4,000 child marriages
PHOTO • Parth M.N.

ತತ್ವಶೀಲ್ ಕಾಂಬ್ಳೆ (ಎಡ) ಮತ್ತು ಅಶೋಕ್ ತಾಂಗ್ಡೆ (ಬಲ) ಮಹಾರಾಷ್ಟ್ರದ ಬೀಡ್‌ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹಕ್ಕುಗಳ ಕಾರ್ಯಕರ್ತರು. ಕಳೆದ ದಶಕದಲ್ಲಿ, ಅವರು ಒಟ್ಟಾಗಿ 4,000 ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ

“ನಮ್ಮ ಮಾಹಿತಿದಾರರ ಜಾಲ ಬೆಳೆಯುತ್ತಿದ್ದ ಹಾಗೆ ಅವರು ನಮಗೆ ಮಾಹಿತಿ ನೀಡಲಾರಂಭಿಸಿದರು. ಈ ಜಾಲವನ್ನು ಕಟ್ಟಿ ಬೆಳೆಸಲು ನಮಗೆ ಹತ್ತು ವರ್ಷಗಳಷ್ಟು ಹಿಡಿದಿದೆ. ನಮಗೆ ನಿಯಮಿತವಾಗಿ ಫೋನ್‌ ಮೂಲಕ ಮದುವೆ ಆಮಂತ್ರಣಗಳು ಬರುತ್ತಿರುತ್ತವೆ. ಆದರೆ ಅವ್ಯಾವುದೂ ನಮ್ಮನ್ನು ಆಹ್ವಾನಿಸಿ ಬಂದ ಕಾಗದಳಾಗಿರುವುದಿಲ್ಲ” ಎಂದು ಅವರು ನಗುತ್ತಾರೆ.

ವಾಟ್ಸಾಪ್‌ ಬಳಸಿ ದಾಖಲೆಯ ಫೋಟೊ ತೆಗೆದು ಕಳುಹಿಸುವುದು ಬಹಳ ಸುಲಭ ಎನ್ನುತ್ತಾರೆ ಕಾಂಬ್ಳೆ. ದಾಖಲೆ ಕೈಗೆ ಸಿಗುವಂತಿಲ್ಲದ ಸಂದರ್ಭಗಳಲ್ಲಿ ಅವರು ಹುಡುಗಿ ಓದುವ ಶಾಲೆಗೆ ಹೋಗಿ ಅಲ್ಲಿ ಆಕೆಯ ವಯಸ್ಸಿನ ಕುರಿತಾದ ದಾಖಲೆಯನ್ನು ಪಡೆದುಕೊಳ್ಳುತ್ತಾರೆ. ”ಈ ರೀತಿಯಾಗಿ ಮಾಹಿತಿದಾರ ಅನಾಮಧೇಯನಾಗಿ ಉಳಿಯುತ್ತಾನೆ” ಎಂದು ಅವರು ಹೇಳುತ್ತಾರೆ. “ವಾಟ್ಸಾಪ್‌ ಬರುವುದಕ್ಕೂ ಮೊದಲು ಮಾಹಿತಿದಾರ ದಾಖಲೆಯನ್ನು ಕೈಯಲ್ಲಿ ಹಿಡಿದು ತರಬೇಕಿತ್ತು. ಮತ್ತು ಅವರು ಭತಿಕವಾಗಿಯೇ ದಾಖಲೆಗಳನ್ನು ಸಂಗ್ರಹಿಸಬೇಕಿತ್ತು. ಇದು ಬಹಳ ಅಪಾಯಕಾರಿಯಾಗಿತ್ತು. ಊರಿನ ಒಬ್ಬ ವ್ಯಕ್ತಿ ಮಾಹಿತಿದಾರನೆಂದು ಗೊತ್ತಾದರೆ ಊರಿನ ಜನರು ಅವನ ಬದುಕನ್ನು ನರಕವಾಗಿಸಬಲ್ಲರು.”

ಸಾಕ್ಷಿಗಳನ್ನು ತ್ವರಿತವಾಗಿ ಸಂಗ್ರಹಿಸುವ ನಿಟ್ಟಿನಲ್ಲಿ ಮತ್ತು ಕೊನೆಯ ಕ್ಷಣದಲ್ಲಿ ಜನರನ್ನು ಈ ಕುರಿತು ಸಜ್ಜುಗೊಳಿಸುವಲ್ಲಿ ವಾಟ್ಸಾಪ್‌ ಬಹಳ ಸಹಾಯಕ ಎನ್ನುತ್ತಾರೆ ಈ 42 ವರ್ಷದ ಹೋರಾಟಗಾರ.

ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ( ಐಎಎಂಎಐ ) 2022 ರ ವರದಿಯ ಪ್ರಕಾರ, ದೇಶದ 759 ಮಿಲಿಯನ್ ಸಕ್ರಿಯ ಇಂಟರ್ನೆಟ್ ಬಳಕೆದಾರರಲ್ಲಿ, 399 ಮಿಲಿಯನ್ ಗ್ರಾಮೀಣ ಭಾರತದವರು, ಅವರಲ್ಲಿ ಹೆಚ್ಚಿನವರು ವಾಟ್ಸಾಪ್‌ ಬಳಸುತ್ತಿದ್ದಾರೆ.

"ಅಗತ್ಯವಾದ ಕಾನೂನು ಮತ್ತು ಪೊಲೀಸ್ ಸಹಾಯದೊಂದಿಗೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪುವುದೇ ದೊಡ್ಡ ಸವಾಲು, ಅದೇ ಸಮಯದಲ್ಲಿ ನಮ್ಮ ಆಗಮನದ ಸುದ್ದಿ ರಹಸ್ಯವಾಗಿ ಉಳಿದಿದೆ ಎಂದು ಖಚಿತಪಡಿಸಿಕೊಳ್ಳುವುದು ಕೂಡಾ ಮುಖ್ಯ" ಎಂದು ಕಾಂಬ್ಳೆ ಹೇಳುತ್ತಾರೆ. “ವಾಟ್ಸಾಪ್‌ ಬರುವ ಮೊದಲು ಇದು ಬಹಳ ದೊಡ್ಡ ಸವಾಲಾಗಿತ್ತು.”

ಮದುವೆಯ ಸ್ಥಳದಲ್ಲಿ ಮಾಹಿತಿದಾರರನ್ನು ಭೇಟಿಯಾಗುವುದು ಕೆಲವೊಮ್ಮೆ ತಮಾಷೆಯಾಗಿರುತ್ತದೆ ಎನ್ನುತ್ತಾರೆ ತಾಂಗ್ಡೆ. “ನಾವು ಅವರಿಗೆ ನಮ್ಮನ್ನು ನೋಡದವರಂತೆ ವರ್ತಿಸಲು ಮತ್ತು ನಮ್ಮ ಪರಿಚಯ ಇಲ್ಲದವರಂತೆ ನಡೆದುಕೊಳ್ಳಲು ಹೇಳಿರುತ್ತೇವೆ. ಆದರೆ ಎಲ್ಲರೂ ಅಷ್ಟು ಜಾಣರಿರುವುದಿಲ್ಲ. ನಾವು ಕೆಲವೊಮ್ಮೆ ಮಾಹಿತಿದಾರರ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ ಅವರೇ ಮಾಹಿತಿದಾರರೆಂದು ಯಾರಿಗೂ ತಿಳಿಯದಿರುವಂತೆ ನೋಡಿಕೊಳ್ಳುತ್ತೇವೆ” ಎಂದು ಅವರು ಹೇಳುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್ 5 ) ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ 20-24 ವರ್ಷದೊಳಗಿನ ಶೇಕಡಾ 23.3ರಷ್ಟು ಮಹಿಳೆಯರು 18 ವರ್ಷ ತುಂಬುವ ಮೊದಲು ಮದುವೆಯಾಗಿದ್ದಾರೆ. ಸರಿಸುಮಾರು 3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಬೀಡ್ ಜಿಲ್ಲೆಯಲ್ಲಿ, ಈ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ - ಶೇಕಡಾ 43.7 . ಬಾಲ್ಯ ವಿವಾಹವು ಒಂದು ದೊಡ್ಡ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ, ಏಕೆಂದರೆ ಇದು ಅಪ್ರಾಪ್ತ ವಯಸ್ಸಿನಲ್ಲೇ ಗರ್ಭದಾರಣೆಗೆ ಕಾರಣವಾಗುವುದರ ಜೊತೆಗೆ ತಾಯಿಯ ಮರಣ ಮತ್ತು ಅಪೌಷ್ಟಿಕತೆಯ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ.

WhatsApp has greatly helped their cause by allowing them to quickly gather evidence and mobilise people at the last minute. O ver the years, the two activists have cultivated a network of over 2,000 informants
PHOTO • Parth M.N.

ಸಾಕ್ಷ್ಯಗಳನ್ನು ತ್ವರಿತವಾಗಿ ಸಂಗ್ರಹಿಸಲು ಮತ್ತು ಕೊನೆಯ ಕ್ಷಣದಲ್ಲಿ ಜನರನ್ನು ಸಜ್ಜುಗೊಳಿಸಲು ಅನುವು ಮಾಡಿಕೊಡುವ ಮೂಲಕ ವಾಟ್ಸಾಪ್ ಅವರ ಉದ್ದೇಶಕ್ಕೆ ಬಹಳ ಸಹಾಯ ಮಾಡಿದೆ. ತಮ್ಮ ಹೋರಾಟದ ಮೂಲಕ ಈ ಇಬ್ಬರು ಕಾರ್ಯಕರ್ತರು 2,000 ಕ್ಕೂ ಹೆಚ್ಚು ಮಾಹಿತಿದಾರರ ಜಾಲವನ್ನು ಬೆಳೆಸಿದ್ದಾರೆ

ಬೀಡ್‌ ಪ್ರದೇಶದಲ್ಲಿನ ಬಾಲ್ಯ ವಿವಾಹಗಳಿಗೂ ಇಲ್ಲಿನ ಭರ್ಜರಿ ಸಕ್ಕರೆ ಉದ್ಯಮಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಈ ಜಿಲ್ಲೆಯು ಕಬ್ಬು ಕಟಾವು ಕಾರ್ಮಿಕರ ಕೇಂದ್ರ ಬಿಂದುವಾಗಿದೆ. ಇವರು ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬನ್ನು ಕತ್ತರಿಸಲು ಅವರು ಪ್ರತಿವರ್ಷ ನೂರಾರು ಕಿಲೋಮೀಟರ್ ಗಳಷ್ಟು ರಾಜ್ಯದ ಪಶ್ಚಿಮ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಅನೇಕ ಕಾರ್ಮಿಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಸೇರಿದವರು - ಭಾರತದಲ್ಲಿ ಅತ್ಯಂತ ಅಂಚಿನಲ್ಲಿರುವ ಸಮುದಾಯಗಳು.

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಬೆಳೆ ಬೆಲೆಗಳ ಕುಸಿತ ಮತ್ತು ಹವಾಗುಣ ಬದಲಾವಣೆಯಿಂದಾಗಿ, ಈ ಜಿಲ್ಲೆಯ ರೈತರು ಮತ್ತು ಕಾರ್ಮಿಕರು ಪ್ರಸ್ತುತ ಕೃಷಿಯನ್ನು ತಮ್ಮ ಏಕೈಕ ಆದಾಯದ ಮೂಲವಾಗಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ವರ್ಷದ ಆರು ತಿಂಗಳ ಕಾಲ ಈ ಕಠಿಣ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ. ಈ ಕೆಲಸದಿಂದ ಅವರಿಗೆ ಸುಮಾರು 25,000-30,000 ರೂ.ಗಳ ಗಳಿಕೆ ದೊರೆಯುತ್ತದೆ. (ಓದಿ : ಕಬ್ಬಿನ ಗದ್ದೆಯ ದಾರಿ ಬಲು ದೂರ )

ಈ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರು ವಿವಾಹಿತ ಜೋಡಿಗಳನ್ನು ಬಯಸುತ್ತಾರೆ. ಏಕೆಂದರೆ ಈ ಕೆಲಸಕ್ಕೆ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ - ಒಬ್ಬರು ಕಬ್ಬನ್ನು ಕತ್ತರಿಸಲು ಮತ್ತು ಇನ್ನೊಬ್ಬರು ಕಟ್ಟುಗಳನ್ನು ತಯಾರಿಸಿ ಟ್ರ್ಯಾಕ್ಟರ್‌ ಟ್ರಾಲಿಗೆ ತುಂಬಲು. ಈ ಉದ್ಯೋಗದಲ್ಲಿ ದಂಪತಿಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಗುತ್ತಿಗೆದಾರರಿಗೆ ಕೆಲಸದವರಿಗೆ ಬಟವಾಡೆ ಮಾಡಲು ಸುಲಭವಾಗುತ್ತದೆ. ಪರಸ್ಪರ ಸಂಬಂಧವಿಲ್ಲದ ಜೋಡಿ ಕಾರ್ಮಿಕರ ನಡುವೆ ಬಟವಾಡೆ ಹಂಚಿಕೆಯಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆಯಿರುತ್ತದೆ.

“ಹೆಚ್ಚಿನ [ಕಬ್ಬು ಕಟಾವು ಮಾಡುವ] ಕುಟುಂಬಗಳು ಬದುಕು ನಡೆಸುವ ಹತಾಶ ಪ್ರಯತ್ನದ ಭಾಗವಾಗಿ ಅದನ್ನು [ಬಾಲ್ಯ ವಿವಾಹ] ಮಾಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತವೆ. ಈ ಸಮಸ್ಯೆ ಅಷ್ಟು ಸರಳವಾಗಿಲ್ಲ” ಎಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಕಾನೂನುಬಾಹಿರವಾದ ಅಭ್ಯಾಸವನ್ನು ಉಲ್ಲೇಖಿಸಿ ತಾಂಗ್ಡೆ ಹೇಳುತ್ತಾರೆ. “ಈ ಮದುವೆಯು ವರನ ಕುಟುಂಬಕ್ಕೆ ಹೆಚ್ಚುವರಿ ಆದಾಯ ಮೂಲವೊಂದನ್ನು ತೆರೆದರೆ, ವಧುವಿನ ಕುಟುಂಬಕ್ಕೆ ಒಂದು ತಿನ್ನುವ ಕೈ ಕಡಿಮೆಯಾಗಿಸುತ್ತದೆ” ಎಂದು ಅವರು ವಿವರಿಸುತ್ತಾರೆ.

ಆದರೆ ಇದೇ ಬಾಲ್ಯ ವಿವಾಹ ತಾಂಗ್ಡೆ ಮತ್ತು ಕಾಂಬ್ಳೆಯಂತಹ ಕಾರ್ಯಕರ್ತರ ಕೆಲಸವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ತಾಂಗ್ಡೆ ಬೀಡ್ ಜಿಲ್ಲೆಯಲ್ಲಿ, ಬಾಲನ್ಯಾಯ ಕಾಯ್ದೆ, 2015ರ ಅಡಿಯಲ್ಲಿ ರಚಿಸಲಾಗಿರುವ ಸ್ವಾಯತ್ತ ಸಂಸ್ಥೆಯಾದ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಐದು ಸದಸ್ಯರ ತಂಡದ ಮುಖ್ಯಸ್ಥ. ಅಪರಾಧದ ವಿರುದ್ಧ ಹೋರಾಡುವಲ್ಲಿ ಅವರ ಪಾಲುದಾರ, ಈ ಜಿಲ್ಲೆಯ ಮಾಜಿ ಸಿಡಬ್ಲ್ಯೂಸಿ ಸದಸ್ಯ ಕಾಂಬ್ಳೆ ಪ್ರಸ್ತುತ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ. "ಕಳೆದ ಐದು ವರ್ಷಗಳಲ್ಲಿ, ನಮ್ಮಲ್ಲಿ ಒಬ್ಬರು ಅಧಿಕಾರವನ್ನು ಹೊಂದಿದ್ದರೆ ಮತ್ತು ಇನ್ನೊಬ್ಬರು ಕ್ಷೇತ್ರ ಕಾರ್ಯದಲ್ಲಿದ್ದಾರೆ. ನಾವು ಅಸಾಧಾರಣ ತಂಡವನ್ನು ರಚಿಸಿದ್ದೇವೆ" ಎಂದು ತಾಂಗ್ಡೆ ಹೇಳುತ್ತಾರೆ.

*****

Early marriages in Beed are closely linked to the state's sugar industry. Contractors prefer to hire married couples as the job requires two people to work in tandem; the couple is treated as one unit, which makes it easier to pay them and also avoids conflict
PHOTO • Parth M.N.

ಬೀಡ್ ಜಿಲ್ಲೆಯ ಬಾಲ್ಯ ವಿವಾಹಗಳು ರಾಜ್ಯದ ಸಕ್ಕರೆ ಉದ್ಯಮದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಇಲ್ಲಿನ ಗುತ್ತಿಗೆದಾರರು ವಿವಾಹಿತ ದಂಪತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಬಯಸುತ್ತಾರೆ ಏಕೆಂದರೆ ಇದರಲ್ಲಿ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ; ಇಲ್ಲಿ ದಂಪತಿಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತದೆ, ಇದು ಬಟವಾಡೆ ಹಂಚುವಿಕೆಯನ್ನು ಸುಲಭಗೊಳಿಸಿ ಸಂಘರ್ಷವನ್ನು ತಪ್ಪಿಸುತ್ತದೆ

ಪೂಜಾ ತನ್ನ ಚಿಕ್ಕಪ್ಪ ಸಂಜಯ್ ಮತ್ತು ಚಿಕ್ಕಮ್ಮ ರಾಜಶ್ರೀ ಅವರೊಂದಿಗೆ ಬೀಡ್‌ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ, ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕಳೆದ 15 ವರ್ಷಗಳಿಂದ ಕಬ್ಬನ್ನು ಕತ್ತರಿಸುವ ಕೆಲಸಕ್ಕೆ ವಾರ್ಷಿಕವಾಗಿ ವಲಸೆ ಹೋಗುತ್ತಿದ್ದಾರೆ. ಜೂನ್ 2023ರಲ್ಲಿ ತಾಂಗ್ಡೆ ಮತ್ತು ಕಾಂಬ್ಳೆ ಆಕೆಯ ಅಕ್ರಮ ಮದುವೆಯನ್ನು ತಡೆಯಲು ಹೋಗಿದ್ದರು.

ಈ ಕಾರ್ಯಕರ್ತ ಜೋಡಿ ಮದುವೆ ಮಂಟಪವನ್ನು ತಲುಪುವ ಹೊತ್ತಿಗಾಗಲೇ ಅಲ್ಲಿಗೆ ಗ್ರಾಮ ಸೇವಕ ಮತ್ತು ಪೊಲೀಸರು ಆಗಲೇ ತಲುಪಿದ್ದರು. ಅಲ್ಲಿದ್ದ ಗದ್ದಲದ ಸಂಭ್ರಮವು ಗೊಂದಲಕ್ಕೆ ತಿರುಗಿ ನಂತರ ಅದು ಸ್ಮಶಾನ ಮೌನಕ್ಕೆ ಕಾರಣವಾಗಿತ್ತು. ಈ ಮದುವೆಯ ಹಿಂದಿದ್ದ ವಯಸ್ಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎನ್ನುವುದು ಅಲ್ಲಿನ ಮೌನಕ್ಕೆ ಕಾರಣವಾಗಿತ್ತು. “ಅಂದು ನೂರಾರು ನೆಂಟರಿಷ್ಟರು ಮದುವೆ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಇತ್ತ ಮದುಮಕ್ಕಳ ಪೋಷಕರು ಪೊಲೀಸರ ಕಾಲಿಗೆ ಬಿದ್ದು ಕ್ಷಮೆಯಾಚಿಸುತ್ತಿದ್ದರು” ಎಂದು ಕಾಂಬ್ಳೆ ಹೇಳುತ್ತಾರೆ.

ಈ ಮದುವೆಯನ್ನು ಆಯೋಜಿಸಿದ್ದ 35 ವರ್ಷದ ಸಂಜಯ್‌ ಅವರಿಗೆ ತನ್ನ ತಪ್ಪಿನ ಅರಿವಾಗಿತ್ತು. “ನಾನೊಬ್ಬ ಬಡ ಕಬ್ಬು ಕಾರ್ಮಿಕ. ನನಗೆ ಬೇರೇನೂ ಯೋಚಿಸಲು ತಿಳಿದಿರಲಿಲ್ಲ” ಎಂದು ಅವರು ಹೇಳುತ್ತಾರೆ.

ಪೂಜಾ ಮತ್ತು ಅವಳ ಅಕ್ಕ ಊರ್ಜಾ ಚಿಕ್ಕವರಿರುವಾಗಲೇ ಅವರ ತಂದೆ ಅಪಘಾತದಲ್ಲಿ ನಿಧನರಾದರು ಮತ್ತು ಅವರ ತಾಯಿ ನಂತರ ಮರುಮದುವೆಯಾದರು. ಈ ಮಕ್ಕಳ ಅಮ್ಮ ಮತ್ತು ಆಕೆಯ ಹೊಸ ಗಂಡ ಅವರನ್ನು ಸ್ವೀಕರಿಸಲಿಲ್ಲ. ಹೀಗಾಗಿ ಅವರನ್ನು ಕಾರಣ ಸಂಜಯ್ ಮತ್ತು ರಾಜಶ್ರೀ ಸೇರಿ ಬೆಳೆಸಿದರು.

ಪ್ರಾಥಮಿಕ ಶಾಲೆಯ ನಂತರ, ಸಂಜಯ್ ಈ ಮಕ್ಕಳನ್ನು ಬೀಡ್ ಪ್ರದೇಶದಿಂದ 250 ಕಿಲೋಮೀಟರ್ ದೂರದಲ್ಲಿರುವ ಪುಣೆ ನಗರದ ಬೋರ್ಡಿಂಗ್ ಶಾಲೆಗೆ ದಾಖಲಿಸಿದರು.

ಆದರೆ ಊರ್ಜಾ ಪದವೀಧರೆಯಾಗುವ ಹೊತ್ತಿಗೆ ಶಾಲೆಯ ಮಕ್ಕಳು ಪೂಜಾಳ ಮೇಲೆ ದಬ್ಬಾಳಿಕೆ ನಡೆಸಲಾರಂಭಿಸಿದರು. “ನಾನು ಹಳ್ಳಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕಾರಣ ಅವರು ನನ್ನನ್ನು ಗೇಲಿ ಮಾಡುತ್ತಿದ್ದರು. ಅಲ್ಲಿ ಅಕ್ಕ ಜೊತೆಗಿದ್ದ ಸಮಯದಲ್ಲಿ ಅವರಿಂದ ನನ್ನನ್ನು ಕಾಪಾಡುತ್ತಿದ್ದಳು. ಆದರೆ ಅವಳು ಅಲ್ಲಿಂದ ಬಂದ ನಂತರ ನನಗೆ ಅಲ್ಲಿರುವುದು ಕಷ್ಟವಾಗತೊಡಗಿತು. ಅಲ್ಲಿನ ಹಿಂಸೆ ತಡೆಯಲಾರದೆ ನಾನು ಮನೆಗೆ ಓಡಿ ಬಂದೆ” ಎಂದು ಪೂಜಾ ಹೇಳುತ್ತಾಳೆ.

'Most of the [sugarcane-cutting] families are forced into it [child marriage] out of desperation. It isn’t black or white...it opens up an extra source of income. For the bride’s family, there is one less stomach to feed,'  says Tangde
PHOTO • Parth M.N.


ʼಹೆಚ್ಚಿನ [ಕಬ್ಬು ಕಟಾವು ಮಾಡುವ] ಕುಟುಂಬಗಳು ಬದುಕು ನಡೆಸುವ ಹತಾಶ ಪ್ರಯತ್ನದ ಭಾಗವಾಗಿ ಅದನ್ನು [ಬಾಲ್ಯ ವಿವಾಹ] ಮಾಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತವೆ. ಈ ಸಮಸ್ಯೆ ಅಷ್ಟು ಸರಳವಾಗಿಲ್ಲ… ಈ ಮದುವೆಯು ವರನ ಕುಟುಂಬಕ್ಕೆ ಹೆಚ್ಚುವರಿ ಆದಾಯ ಮೂಲವೊಂದನ್ನು ತೆರೆದರೆ, ವಧುವಿನ ಕುಟುಂಬಕ್ಕೆ ಒಂದು ತಿನ್ನುವ ಕೈ ಕಡಿಮೆಯಾಗಿಸುತ್ತದೆʼ ಎನ್ನುತ್ತಾರೆ ತಾಂಗ್ಡೆ

ಅವಳು ಶಾಲೆಯಿಂದ ನಂತರ, ಸಂಜಯ್‌ ಮತ್ತು ರಾಜಶ್ರೀ 2022ರ ನವೆಂಬರ್‌ ತಿಂಗಳಿನಲ್ಲಿ ಆರು ತಿಂಗಳ ಕಾಲ ಕಬ್ಬು ಕತ್ತರಿಸುವ ಕೆಲಸಕ್ಕಾಗಿ 500 ಕಿಲೋಮೀಟರ್ ದೂರದ ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಗೆ ಪ್ರಯಾಣಿಸಿದರು. ಅವರು ಹಾಗೆ ಹೋಗುವಾಗ ಪೂಜಾಳನ್ನೂ ಕರೆದುಕೊಂಡು ಹೋಗಿದ್ದರು. ಅವಳನ್ನು ಇಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗುವುದು ಸುರಕ್ಷಿತವಾಗಿರಲಿಲ್ಲ. ಹಾಗೆಂದೂ ಕೆಲಸದ ಸ್ಥಳದಲ್ಲಿನ ಜೀವನ ಪರಿಸ್ಥಿತಿಯೂ ಉತ್ತಮವೇನಿಲ್ಲ ಎನ್ನುತ್ತಾರೆ ದಂಪತಿಗಳು.

“ಅಲ್ಲಿ ನಾವು ಹುಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತೇವೆ. ಅಲ್ಲಿ ಶೌಚಾಲಯಗಳಿಲ್ಲ. ಬಯಲಿನಲ್ಲೇ ಎಲ್ಲವನ್ನು ಮುಗಿಸಬೇಕು. ದಿನದ 18 ಗಂಟೆಗಳ ಕಾಲ ದುಡಿಯುವ ನಾವು ಅಡುಗೆಯನ್ನು ಸಹ ತೆರೆದ ಸ್ಥಳದಲ್ಲೇ ಮಾಡುತ್ತೇವೆ. ಹಲವು ವರ್ಷಗಳಿಂದ ಹೀಗೆ ಬದುಕಿ ನಮಗೆ ಅಭ್ಯಾಸವಾಗಿ ಹೋಗಿದೆ. ಆದರೆ ಪೂಜಾಳಿಗೆ ಇದೆಲ್ಲ ಕಷ್ಟವಾಯಿತು” ಎನ್ನುತ್ತಾರೆ ಸಂಜಯ್.‌

ಸತಾರದಿಂದ ಮರಳಿದ ನಂತರ ಸಂಜಯ್‌ ಪೂಜಾಳಿಗಾಗಿ ಸಂಬಂಧಿಕರಲ್ಲೇ ಒಬ್ಬ ಹುಡುಗನನ್ನು ನೋಡಿದರು. ಮತ್ತು ಪೂಜಾ ಅಪ್ರಾಪ್ತಳಾದರೂ ಅವನೊಂದಿಗೆ ಅವಳಿಗೆ ಮದುವೆ ಮಾಡಿಸಲು ನಿರ್ಧರಿಸಿದರು. ದಂಪತಿಗೂ ಮನೆಯಲ್ಲೇ ಇದ್ದು ಹತ್ತಿರದಲ್ಲಿ ಹುಡುಕಬಹುದಾದ ಆಯ್ಕೆಯೂ ಇದ್ದಿರಲಿಲ್ಲ.

“ಇಲ್ಲಿನ ಹವಾಗುಣ ಬಹಳ ಅನಿಶ್ಚಿತವಾಗಿರುತ್ತದೆ. ಹೀಗಾಗಿ ಇಲ್ಲಿ ಕೃಷಿ ಮಾಡುವುದು ಕಷ್ಟ” ಎನ್ನುತ್ತಾರೆ ಸಂಜಯ್.‌ “ನಮ್ಮ ಎರಡು ಎಕರೆ ಭೂಮಿಯಲ್ಲಿ ಮನೆ ಬಳಕೆಗೆ ಬೇಕಾಗುವ ಧಾನ್ಯಗಳನ್ನಷ್ಟೇ ಬೆಳೆಯಲು ಸಾಧ್ಯ. ಮುಂದಿನ ಸಲ ವಲಸೆ ಹೋಗುವಾಗ ಅವಳನ್ನು ನಮ್ಮೊಂದಿಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಹಾಗೆಂದು ಅವಳನ್ನು ಬಿಟ್ಟು ಹೋಗೋಣವೆಂದರೆ ನಮಗೆ ಅವಳ ಸುರಕ್ಷತೆಯ ಕುರಿತು ಭಯವಾಗುತ್ತಿತ್ತು.”

*****

ಸುಮಾರು 15 ವರ್ಷಗಳ ಹಿಂದೆ ಅಶೋಕ್ ತಾಂಗ್ಡೆಯವರು ತಮ್ಮ ಪತ್ನಿ ಮತ್ತು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಮನೀಷಾ ಟೋಕ್ಲೆ ಅವರೊಂದಿಗೆ ಜಿಲ್ಲೆಯಾದ್ಯಂತ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಬೀಡ್ ಪ್ರದೇಶದಲ್ಲಿ ಕಬ್ಬು ಕಟಾವು ಮಾಡುವ ಕುಟುಂಬಗಳಲ್ಲಿನ ಬಾಲ್ಯ ವಿವಾಹದ ಈ ವಿದ್ಯಮಾನವನ್ನು ಮೊದಲು ನೋಡಿದರು.

“ಮನಿಷಾ ಅವರೊಂದಿಗಿನ ಪ್ರಯಾಣದಲ್ಲಿ ಅವರಲ್ಲಿನ ಕೆಲವರನ್ನು ಭೇಟಿಯಾದ ಸಂದರ್ಭದಲ್ಲಿ ಅವರೆಲ್ಲರಿಗೂ ಹದಿ ಹರೆಯದ ಆರಂಭದಲ್ಲಿ ಅಥವಾ ಅದಕ್ಕೂ ಮೊದಲೇ ಮದುವೆಯಾಗಿರುವುದು ತಿಳಿದುಬಂತು. ಆಗ ಈ ವಿಷಯದಲ್ಲಿ ನಾವು ಪ್ರತ್ಯೇಕವಾಗಿ ಕೆಲಸ ಮಾಡಬೇಕಿದೆಯೆನ್ನುವುದು ನನ್ನ ಮನಸ್ಸಿನಲ್ಲಿ ಬಂದಿತು.”

ನಂತರ ಅವರು ಬೀಡ್‌ ಪ್ರದೇಶದಲ್ಲಿ ಅಭಿವೃದ್ಧಿ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಕಾಂಬ್ಳೆಯವರನ್ನು ಭೇಟಿಯಾದರು. ಅನಂತರ ಇಬ್ಬರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು.

ಸುಮಾರು 10-12 ವರ್ಷಗಳ ಹಿಂದೆ ಮೊದಲ ಬಾರಿ ಅವರು ಬಾಲ್ಯ ವಿವಾಹವನ್ನು ತಡೆದ ಸಂದರ್ಭದಲ್ಲಿ, ಅದೊಂದು ಬೀಡ್‌ ಪ್ರದೇಶದಲ್ಲಿ ಕಂಡು ಕೇಳಿರದ ದೃಶ್ಯವಾಗಿತ್ತು.

According to the latest report of National Family Health Survey 2019-21, a fifth of women between the age of 20-24 were married before they turned 18. In Beed, a district with a population of roughly 3 million, the number is almost double the national average
PHOTO • Parth M.N.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್ಎಫ್ಎಚ್ಎಸ್ 5) ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ 20-24 ವರ್ಷದೊಳಗಿನ ಶೇಕಡಾ 23.3ರಷ್ಟು ಮಹಿಳೆಯರು 18 ವರ್ಷ ತುಂಬುವ ಮೊದಲು ಮದುವೆಯಾಗಿದ್ದಾರೆ. ಸರಿಸುಮಾರು 3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಬೀಡ್ ಜಿಲ್ಲೆಯಲ್ಲಿ, ಈ ಸಂಖ್ಯೆಯು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ

“ಜನರು ನಮ್ಮ ಕೆಲಸವನ್ನು ನೋಡಿ ಆಶ್ಚರ್ಯಗೊಂಡಿದ್ದಲ್ಲದೆ ನಮ್ಮ ವಿಶ್ವಾರ್ಹತೆಯ ಕುರಿತಾಗಿಯೂ ಪ್ರಶ್ನೆಗಳನ್ನು ಎತ್ತಿದರು. ಅಲ್ಲಿದ್ದ ವಯಸ್ಕರಿಗೆ ಇಂತಹದ್ದೊಂದು ಘಟನೆ ನಡೆಯಬಹುದೆನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆಗ ಬಾಲ್ಯ ವಿವಾಹಕ್ಕೆ ಸಾಮಾಜಿಕ ನ್ಯಾಯಸಮ್ಮತತೆಯಿತ್ತು. ಕೆಲವೊಮ್ಮೆ ಗುತ್ತಿಗೆದಾರರೇ ಈ ಮದುವೆಗಳಿಗೆ ಹಣ ನೀಡುತ್ತಿದ್ದರು. ನಂತರ ಅವರೇ ಆ ಗಂಡ ಹೆಂಡತಿಯನ್ನು ತಮ್ಮೊಂದಿಗೆ ಕೆಲಸಕ್ಕೆ ಕರೆದೊಯ್ಯುತ್ತಿದ್ದರು” ಎನ್ನುತ್ತಾರೆ ತಾಂಗ್ಡೆ.

ಇದರ ನಂತರ ಅವರಿಬ್ಬರು ಬೀಡ್‌ ಜಿಲ್ಲೆಯ ಹಳ್ಳಿ ಹಳ್ಳಿಗೂ ದ್ವಿಚಕ್ರ ವಾಹನದಲ್ಲಿ ಓಡಾಡತೊಡಗಿದರು. ಅಲ್ಲಿ ಮೊದಲಿಗೆ ಅವರು ಜನಸಂಪರ್ಕವನ್ನು ಸಾಧಿಸಿದರು. ನಂತರ ಅವರೇ ಇವರ ಪಾಲಿನ ಮಾಹಿತಿದಾರರಾದರು. ಈ ವಿಷಯದಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಜನರಿಗೆ ತಮ್ಮನ್ನು ಪರಿಚಯಿಸುವಲ್ಲಿ ಸ್ಥಳೀಯ ಪತ್ರಿಕೆಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಎನ್ನುತ್ತಾರೆ ಕಾಂಬ್ಳೆ.

ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 4,500ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಮದುವೆಯನ್ನು ನಿಲ್ಲಿಸಿದ ನಂತರ, ಭಾಗಿಯಾಗಿರುವ ವಯಸ್ಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006ರ ಅಡಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಲಾಗುತ್ತದೆ. ಮದುವೆ ಪೂರ್ಣಗೊಂಡರೆ, ಗಂಡಿನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ( ಪೋಕ್ಸೊ ) ಅಡಿಯಲ್ಲಿ ಆರೋಪ ಹೊರಿಸಲಾಗುತ್ತದೆ ಮತ್ತು ಸಿಡಬ್ಲ್ಯೂಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆಗಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ.

“ನಾವು ಹುಡುಗಿಗೆ ಕೌನ್ಸೆಲಿಂಗ್ ನಡೆಸುತ್ತೇವೆ.‌ ಜೊತೆಗೆ ಪೋಷಕರಿಗೆ ಬಾಲ್ಯ ವಿವಾಹದ ಕಾನೂನು ಪರಿಣಾಮಗಳನ್ನು ವಿವರಿಸುವುದರ ಜೊತೆಗೆ ಪೊಷಕರಿಗೂ ಕೌನ್ಸೆಲಿಂಗ್‌ ನಡೆಸುತ್ತೇವೆ” ಎನ್ನುತ್ತಾರೆ ತಾಂಗ್ಡೆ. "ನಂತರ ಸಿಡಬ್ಲ್ಯೂಸಿ ಪ್ರತಿ ತಿಂಗಳು ಹುಡುಗಿಯನ್ನು ಮರುಮದುವೆಯಾಗದಂತೆ ನೋಡಿಕೊಳ್ಳಲು ಕುಟುಂಬದ ಜೊತೆ ಸಂಪರ್ಕದಲ್ಲಿರುತ್ತದೆ. ಇಂತಹ ವಿವಾಹ ಪ್ರಕರಣಗಳಲ್ಲಿ ಸಿಲುಕುವ ಪೋಷಕರಲ್ಲಿ ಹೆಚ್ಚಿನವರು ಕಬ್ಬು ಕಾರ್ಮಿಕರು.”

*****

2023ರ ಜೂನ್‌ ತಿಂಗಳಿನ ಮೊದಲ ವಾರದಲ್ಲಿ ಬೀಡ್‌ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದರಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಕುರಿತು ತಾಂಗ್ಡೆಯವರಿಗೆ ಮಾಹಿತಿ ದೊರೆಯಿತು. “ನಾನು ಆ ಮದುವೆಯ ದಾಖಲೆಗಳನ್ನು ನನ್ನ ಸಂಪರ್ಕದಲ್ಲಿದ್ದ ಅಲ್ಲಿನವರೊಬ್ಬರಿಗೆ ಕಳುಹಿಸಿದೆ. ನಾನು ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪುವುದು ಕಷ್ಟವಿತ್ತು” ಎಂದು ಅವರು ಹೇಳುತ್ತಾರೆ, “ನಂತರ ಅವರು ಮಾಡಬೇಕಿರುವುದನ್ನು ಮಾಡಿದರು. ಈಗ ಜನರಿಗೆ ಈ ಪ್ರಕ್ರಿಯೆಯ ಕುರಿತು ಅರಿವಿದೆ.”

ಸ್ಥಳಕ್ಕೆ ತಲುಪಿದ ಅಧಿಕಾರಿಗಳಿಗೆ ತಿಳಿದಿದ್ದೇನೆಂದರೆ. ಅದು ಆ ಹುಡುಗಿಯ ಮೂರನೇ ಮದುವೆಯಾಗಿತ್ತು. ಅವಳ ಈ ಹಿಂದಿನ ಎರಡು ಮದುವೆಗಳು ಕೋವಿಡ್‌ -19 ಪಿಡುಗಿನ ಎರಡು ವರ್ಷಗಳಲ್ಲಿ ನಡೆದಿತ್ತು. ಹೀಗೆ ಮೂರು ಮದುವೆಗಳಿಗೆ ಸಾಕ್ಷಿಯಾದ ಈ ಲಕ್ಷ್ಮಿಯೆನ್ನುವ ಹುಡುಗಿದೆ ವಯಸ್ಸು ಕೇವಲ 17.

2020ರ ಮಾರ್ಚ್‌ ತಿಂಗಳಿನಲ್ಲಿ ಏಕಾಏಕಿ ಎರಗಿದ ಕೊವಿಡ್‌ - 19 ಪಿಡುಗು ತಾಂಗ್ಡೆ ಮತ್ತು ಕಾಂಬ್ಳೆಯವರ ಹಲವು ವರ್ಷಗಳ ಶ್ರಮಕ್ಕೆ ದೊಡ್ಡ ಹಿನ್ನಡೆಯಾಯಿತು. ಸರ್ಕಾರ ಹೇರಿದ ಲಾಕ್‌ಡೌನ್‌, ದೀರ್ಘಕಾಲದವರೆಗೆ ಮುಚ್ಚಿದ್ದ ಶಾಲಾ – ಕಾಲೇಜುಗಳು ಮಕ್ಕಳನ್ನು ಮನೆಯಲ್ಲೇ ಉಳಿಯುವಂತೆ ಮಾಡಿತು. 2021ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾದ ಯುನಿಸೆಫ್ ವರದಿಯು ಶಾಲೆಗಳ ಮುಚ್ಚುವಿಕೆ, ಹೆಚ್ಚುತ್ತಿರುವ ಬಡತನ, ಪೋಷಕರ ಸಾವು ಮತ್ತು ಕೋವಿಡ್ -19ನಿಂದ ಎದುರಾದ ಇತರ ಪರಿಣಾಮಗಳು "ಈಗಾಗಲೇ ಕಷ್ಟದಲ್ಲಿದ್ದ ಲಕ್ಷಾಂತರ ಹುಡುಗಿಯರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ" ಎಂದು ಹೇಳಿದೆ.

ತಾಂಗ್ಡೆ ಇದನ್ನು ತಮ್ಮ ಬೀಡ್‌ ಜಿಲ್ಲೆಯಲ್ಲೇ ನೋಡಿದ್ದಾರೆ. ಇಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವ್ಯಾಪಕವಾಗಿ ಮದುವೆ ಮಾಡಿ ಕೊಡಲಾಗುತ್ತಿತ್ತು (ಓದಿ: ಬೀಡ್: ಕಬ್ಬು ಕತ್ತರಿಸುತ್ತಾ ಬದುಕಿನ ಭರವಸೆಯಿಲ್ಲದೆ ಬದುಕುತ್ತಿರುವ ಬಾಲ ವಧುಗಳು )

An underage Lakshmi had already been married twice before Tangde and Kamble prevented her third marriage from taking place in June 2023
PHOTO • Parth M.N.

2023ರ ಜೂನ್ ತಿಂಗಳಿನಲ್ಲಿ ತಾಂಗ್ಡೆ ಮತ್ತು ಕಾಂಬ್ಳೆ ತನ್ನ ಮೂರನೇ ಮದುವೆಯನ್ನು ತಡೆಯುವ ಮೊದಲು ಅಪ್ರಾಪ್ತ ವಯಸ್ಸಿನ ಲಕ್ಷ್ಮಿಗೆ ಈಗಾಗಲೇ ಎರಡು ಬಾರಿ ಮದುವೆಯಾಗಿತ್ತು

ಮಹಾರಾಷ್ಟ್ರದಲ್ಲಿ ಎರಡನೇ ಸುತ್ತಿನ ಲಾಕ್‌ಡೌನ್‌ ಹೇರಿದ್ದ ಸಂದರ್ಭದಲ್ಲಿ (2021ರಲ್ಲಿ) ಲಕ್ಷ್ಮಿಯ ತಾಯಿ ವಿಜಯಮಾಲ ಬೀಡ್‌ ಜಿಲ್ಲೆಯಿಂದ ಒಬ್ಬ ಹುಡುಗನನ್ನು ತನ್ನ ಮಗಳಿಗಾಗಿ ಹುಡುಕಿದ್ದರು. ಆಗ ಲಕ್ಷ್ಮಿಗೆ 15 ವರ್ಷ.‌

“ನನ್ನ ಗಂಡ ಕುಡುಕ. ನಾವು ಆರು ತಿಂಗಳ ಕಾಲ ಕಬ್ಬು ಕತ್ತರಿಸಲು ಹೋಗುವ ಸಮಯವನ್ನು ಹೊರತುಪಡಿಸಿ ಅವರು ಉಳಿದ ಸಮಯದಲ್ಲಿ ಅಷ್ಟಾಗಿ ಕೆಲಸಕ್ಕೆ ಹೋಗುವುದಿಲ್ಲ. ಅವರು ಕುತ್ತಿಗೆಮಟ್ಟ ಕುಡಿದು ಬಂದು ನನಗೆ ಹೊಡೆಯುತ್ತಾರೆ. ನನ್ನ ಮಗಳು ಅದಕ್ಕೆ ಅಡ್ಡ ಬಂದರೆ ಅವಳನ್ನೂ ಹೊಡೆಯುತ್ತಿದ್ದರು. ನನಗೆ ನನ್ನ ಮಗಳನ್ನು ಅವರಿಂದ ದೂ ಕಳುಹಿಸಿದರೆ ಸಾಕಾಗಿತ್ತು” ಎಂದು 30 ವರ್ಷದ ಈ ಮಹಿಳೆ ಹೇಳುತ್ತಾರೆ.

ಆದರೆ ಲಕ್ಷ್ಮಿಯ ಗಂಡನ ಮನೆಯಲ್ಲೂ ಆಕೆಯ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಮದುವೆಯಾದ ಒಂದು ತಿಂಗಳಲ್ಲೇ ಅವಳು ತನ್ನ ಗಂಡ ಮತ್ತು ಅವನ ಮನೆಯವರಿಂದ ತಪ್ಪಿಸಿಕೊಳ್ಳಲು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಳು. ಆ ಘಟನೆಯ ನಂತರ ಆಕೆಯ ಅತ್ತೆ ಮನೆಯವರು ಅವಳನ್ನು ತವರಿಗೆ ತಂದು ಬಿಟ್ಟುಹೋದರು. ಮತ್ತೆ ಅವರು ಆಕೆಯನ್ನು ಕರೆಯುವ ಗೋಜಿಗೆ ಹೋಗಲಿಲ್ಲ.

ಇದಾಗಿ ಆರು ತಿಂಗಳ ನಂತರ ಮತ್ತೆ ವಿಜಯಮಾಲಾ ಮತ್ತು ಅವರ ಪತಿ 33 ವರ್ಷದ ಪುರುಷೋತ್ತಮ್ ಕಬ್ಬು ಕತ್ತರಿಸುವ ಕೆಲಸವನ್ನು ಹುಡುಕಿಕೊಂಡು ಪಶ್ಚಿಮ ಮಹಾರಾಷ್ಟ್ರದೆಡೆಗೆ ವಲಸೆ ಹೋಗುವ ಸಮಯ ಬಂದಿತು. ಹೊಲದಲ್ಲಿನ ಶ್ರಮದಾಯಕ ಕೆಲಸ ಅವಳಿಗೂ ಅಭ್ಯಾಸವಾಗಲಿ ಎನ್ನುವ ಕಾರಣಕ್ಕೆ ಅವರು ತಮ್ಮ ಜೊತೆಯಲ್ಲಿ ಲಕ್ಷ್ಮಿಯನ್ನೂ ಕರೆದುಕೊಂಡು ಹೋದರು. ಲಕ್ಷ್ಮಿಗೆ ಕೆಲಸದ ಸ್ಥಳ ಸ್ಥಿತಿಯ ಬಗ್ಗೆ ಸಾಕಷ್ಟು ತಿಳಿದಿತ್ತು ಆದರೆ ಮುಂದಿನ ಬದುಕಿನಲ್ಲಿ ಏನು ಬರಬಹುದೆನ್ನುವ ಕುರಿತು ತಿಳಿದಿರಲಿಲ್ಲ.

ಕಬ್ಬಿನ ಗದ್ದೆಯ ಕೆಲಸದ ನಡುವೆ ಪುರುಷೋತ್ತಮ್‌ ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿರುವ ವ್ಯಕ್ತಿಯೊಬ್ಬನನ್ನು ಅಲ್ಲೇ ಭೇಟಿಯಾದರು. ಹಾಗೆ ಅವರು ತನ್ನ ಮಗಳು ಲಕ್ಷ್ಮಿಯನ್ನು ಮದುವೆಯಾಗುವಂತೆ ಕೇಳಿಕೊಂಡಾಗ ಆತನೂ ಒಪ್ಪಿದ. ಹಾಗೆ ಒಪ್ಪಿಕೊಂಡವನ ವಯಸ್ಸು 45. ಲಕ್ಷ್ಮಿ ಮತ್ತು ವಿಜಯಮಾಲಾರ ವಿರೋಧದ ನಡುವೆಯೂ ಲಕ್ಷ್ಮಿಯ ವಯಸ್ಸಿನ ಮೂರು ಪಟ್ಟು ವಯಸ್ಸಾದ ವ್ಯಕ್ತಿಯೊಂದಿಗೆ ಆಕೆಯ ಮದುವೆಯನ್ನು ನೆರವೇರಿಸಲಾಯಿತು.

“ನಾನು ನನ್ನ ಗಂಡನ ಬಳಿ ಮದುವೆ ಮಾಡದಿರುವಂತೆ ಪರಿಪರಿಯಾಗಿ ಬೇಡಿಕೊಂಡೆ. ಆದರೆ ಆತ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ನನಗೆ ಬಾಯಿ ಮುಚ್ಚಿಕೊಂಡಿರುವಂತೆ ಹೇಳಿದರು. ಕೊನೆಗೂ ನನ್ನ ಮಗಳನ್ನು ಆ ಮದುವೆಯಿಂದ ಕಾಪಾಡಲು ನನಗೆ ಸಾಧ್ಯವಾಗಲಿಲ್ಲ. ಅಂದಿನಿಂದ ನಾನು ನನ್ನ ಗಂಡನೊಡನೆ ಮಾತನಾಡುವುದನ್ನು ನಿಲ್ಲಿಸಿದೆ” ಎನ್ನುತ್ತಾರೆ ವಿಜಯಮಾಲಾ.

ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಹಳೆಯ ಕತೆ ಪುನಾರವರ್ತನೆಯಾಯಿತು. ಲಕ್ಷ್ಮಿ ತನ್ನ ಗಂಡನ ದೌರ್ಜನ್ಯ ತಡೆಯಲಾಗದೆ ತವರಿಗೆ ಮರಳಿದಳು. “ಅಲ್ಲೂ ಅದೇ ಕತೆ ಮುಂದುವರೆಯಿತು. ಆ ವ್ಯಕ್ತಿಗೆ ಬೇಕಿದ್ದಿದ್ದು ಒಬ್ಬ ಸೇವಕಿ ಮಾತ್ರ. ಅವನಿಗೆ ಹೆಂಡತಿ ಬೇಕಿರಲಿಲ್ಲ” ಎನ್ನುತ್ತಾಳೆ ಲಕ್ಷ್ಮಿ.

Laxmi's mother Vijaymala says, 'my husband is a drunkard [...] I just wanted her to be away from him.' But Laxmi's husband and in-laws turned out to be abusive and she returned home. Six months later, her father found another groom, three times her age, who was also abusive
PHOTO • Parth M.N.
Laxmi's mother Vijaymala says, 'my husband is a drunkard [...] I just wanted her to be away from him.' But Laxmi's husband and in-laws turned out to be abusive and she returned home. Six months later, her father found another groom, three times her age, who was also abusive
PHOTO • Parth M.N.

ಲಕ್ಷ್ಮಿಯ ತಾಯಿ ವಿಜಯಮಾಲಾ, 'ನನ್ನ ಪತಿ ಕುಡುಕ [...] ಅವಳು ಅವನಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ.' ಆದರೆ ಲಕ್ಷ್ಮಿಯ ಪತಿ ಮತ್ತು ಅತ್ತೆ ಮಾವಂದಿರು ದೌರ್ಜನ್ಯ ಎಸಗುತ್ತಿದ್ದರು. ಇದರಿಂದಾಗಿ ಅವಳು ಮನೆಗೆ ಹಿಂದಿರುಗಿದಳು. ಆರು ತಿಂಗಳ ನಂತರ, ಅವಳ ತಂದೆ ಅವಳಿಗಿಂತ ಮೂರು ಪಟ್ಟು ಹೆಚ್ಚು ವಯಸ್ಸಿನ ಇನ್ನೊಬ್ಬ ವರನನ್ನು ಹುಡುಕಿದ, ಅವನು ದೌರ್ಜನ್ಯ ಎಸಗುತ್ತಿದ್ದ

ಅದರ ನಂತರ ಲಕ್ಷ್ಮಿ ತನ್ನ ಹೆತ್ತವರೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಉಳಿದಿದ್ದಳು. ವಿಜಯಮಾಲಾ ತಮ್ಮ ಸಣ್ಣ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬವು ಈ ಭೂಮಿಯಲ್ಲಿ ಸ್ವಯಂ ಬಳಕೆಗಾಗಿ ಸಜ್ಜೆ ಬೆಳೆಯುತ್ತದೆ. "ನಾನು ಹೆಚ್ಚುವರಿ ಸಂಪಾದನೆಗಾಗಿ ಇತರರ ಹೊಲಗಳಲ್ಲಿಯೂ ಕೂಲಿ ಕೆಲಸ ಮಾಡುತ್ತೇನೆ" ಎಂದು ವಿಜಯಮಾಲಾ ಹೇಳುತ್ತಾರೆ. ಅವರ ಮಾಸಿಕ ಆದಾಯ ಸುಮಾರು 2,500 ರೂ. "ನನ್ನ ಬಡತನವೇ ನನ್ನ ದುರಾದೃಷ್ಟ. ಅದನ್ನು ನಾನೇ ನಿಭಾಯಿಸಬೇಕಾಗಿದೆ" ಎಂದು ಅವರು ಹೇಳುತ್ತಾರೆ.

2023ರ ಮೇಯಲ್ಲಿ, ಕುಟುಂಬದ ಸದಸ್ಯರೊಬ್ಬರು ಮದುವೆ ಪ್ರಸ್ತಾಪದೊಂದಿಗೆ ವಿಜಯಮಾಲಾ ಅವರನ್ನು ಸಂಪರ್ಕಿಸಿದರು. "ಹುಡುಗ ಒಳ್ಳೆಯ ಕುಟುಂಬದಿಂದ ಬಂದವನು" ಎಂದು ಅವರು ಹೇಳಿದರು. "ಆರ್ಥಿಕವಾಗಿ, ಅವರು ನಮಗಿಂತ ಉತ್ತಮವಾಗಿದ್ದರು. ಇದು ಅವಳಿಗೆ ಒಳ್ಳೆಯ ಸಂಬಂಧ ಎಂದು ನನಗೆ ಅನ್ನಿಸಿತು. ನಾನು ಅನಕ್ಷರಸ್ಥ ಮಹಿಳೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಂಡಿದ್ದೆ.” ತಾಂಗ್ಡೆ ಮತ್ತು ಕಾಂಬ್ಳೆಗೆ ಇದೇ ಮದುವೆಯ ಬಗ್ಗೆ ಸುಳಿವು ಸಿಕ್ಕಿತ್ತು.

ಇಂದು, ವಿಜಯಮಾಲಾ ನಾನು ಮದುವೆ ಮಾಡಿಸಲು ಹೊರಟಿದ್ದು ತಪ್ಪಾಗಿತ್ತು ಎನ್ನುತ್ತಾರೆ.

"ನನ್ನ ತಂದೆ ಕುಡುಕರಾಗಿದ್ದರು. ಅವರು 12ನೇ ವಯಸ್ಸಿಗೆ ನನಗೆ ಮದುವೆ ಮಾಡಿಸಿದರು" ಎಂದು ಅವರು ಹೇಳುತ್ತಾರೆ. "ಅಂದಿನಿಂದ, ನಾನು ನನ್ನ ಗಂಡನೊಂದಿಗೆ ಕಬ್ಬು ಕತ್ತರಿಸುವ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದೇನೆ. ನಾನು ಹದಿಹರೆಯದವಳಿದ್ದಾಗ ನನಗೆ ಲಕ್ಷ್ಮಿ ಹುಟ್ಟಿದ್ದಳು. ತಿಳಿಯದೆ, ನನ್ನ ತಂದೆ ಮಾಡಿದ ತಪ್ಪನ್ನೇ ನಾನು ಮಾಡಿದ್ದೇನೆ. ಸಮಸ್ಯೆಯೆಂದರೆ ಯಾವುದು ಸರಿ ಅಥವಾ ಯಾವುದು ತಪ್ಪು ಎಂದು ತಿಳಿಸಿ ಹೇಳಲು ನನಗೆ ಯಾರೂ ಇಲ್ಲ. ನಾನು ಒಬ್ಬಂಟಿ."

ಕಳೆದ ಮೂರು ವರ್ಷಗಳಿಂದ ಶಾಲೆಯಿಂದ ಹೊರಗುಳಿದಿರುವ ಲಕ್ಷ್ಮಿ, ಮತ್ತೆ ಶಿಕ್ಷಣ ಮುಂದುವರೆಸುವ ಕುರಿತು ಆಸಕ್ತಿಯನ್ನು ಹೊಂದಿಲ್ಲ. "ನಾನು ಯಾವಾಗಲೂ ಮನೆ ನೋಡಿಕೊಳ್ಳುತ್ತಿದ್ದ ಮತ್ತು ಮನೆಕೆಲಸಗಳನ್ನು ಮಾಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ನಾನು ಶಾಲೆಗೆ ಮತ್ತೆ ಹೋಗಬಹುದೇ ಎನ್ನುವುದರ ಕುರಿತು ನನಗೆ ಗೊತ್ತಿಲ್ಲ. ಆ ಕುರಿತೂ ಆತ್ಮವಿಶ್ವಾಸವೂ ಇಲ್ಲ.”

*****

ಲಕ್ಷ್ಮಿಗೆ 18 ವರ್ಷ ತುಂಬಿದ ತಕ್ಷಣ, ಅವಳ ತಾಯಿ ಮತ್ತೆ ಅವಳ ಮದುವೆ ವ್ಯವಸ್ಥೆ ಮಾಡಲು ಪ್ರಯತ್ನಿಸಬಹುದು ಎಂದು ತಾಂಗ್ಡೆ ಅನುಮಾನಿಸುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ.

"ನಮ್ಮ ಸಮಾಜದ ಸಮಸ್ಯೆಯೆಂದರೆ, ಒಬ್ಬ ಹುಡುಗಿಗೆ ಎರಡು ಮದುವೆಗಳು ವಿಫಲವಾಗಿದ್ದು, ಒಂದು ಮದುವೆ ನಡೆಯದೆ ನಿಂತಿದ್ದರೆ, ಜನರು ಅವಳಲ್ಲಿಯೇ ಏನೋ ತಪ್ಪಿದೆ ಎಂದು ಭಾವಿಸುತ್ತಾರೆ" ಎಂದು ತಾಂಗ್ಡೆ ಹೇಳುತ್ತಾರೆ. "ಅವಳನ್ನು ಮದುವೆಯಾದ ಗಂಡಸರನ್ನು ಯಾರೂ ಪ್ರಶ್ನಿಸುವುದಿಲ್ಲ. ಅದಕ್ಕಾಗಿಯೇ ನಾವು ಇಂದಿಗೂ ವ್ಯಕ್ತಿತ್ವದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದೇವೆ. ಜನರು ನಮ್ಮನ್ನು ಮದುವೆಗೆ ಅಡ್ಡಿಪಡಿಸುವ ಮತ್ತು ಹುಡುಗಿಯ ಮರ್ಯಾದೆಯನ್ನು ಹಾಳು ಮಾಡುವವರಂತೆ ಕಾಣುತ್ತಾರೆ.

While Tangde and Kamble have cultivated a network of informants across the district and work closely with locals, their help is not always appreciated. 'We have been assaulted, insulted and threatened,' says Kamble
PHOTO • Parth M.N.

ತಾಂಗ್ಡೆ ಮತ್ತು ಕಾಂಬ್ಳೆ ಜಿಲ್ಲೆಯಾದ್ಯಂತ ಮಾಹಿತಿದಾರರ ಜಾಲವನ್ನು ಬೆಳೆಸಿದ್ದಾರೆ ಮತ್ತು ಸ್ಥಳೀಯರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವರ ಸಹಾಯಕ್ಕೆ ಯಾವಾಗಲೂ ಪ್ರಶಂಸೆಯೇ ಸಿಗುವುದಿಲ್ಲ. 'ನಮ್ಮ ಮೇಲೆ ಹಲ್ಲೆ ನಡೆಸುವುದು, ಅವಮಾನಿಸುವುದು ಮತ್ತು ಬೆದರಿಕೆ ಹಾಕುವುದನ್ನೆಲ್ಲ ಮಾಡಲಾಗಿದೆ' ಎಂದು ಕಾಂಬ್ಳೆ ಹೇಳುತ್ತಾರೆ

ತಮ್ಮ ಸೊಸೆಯ ಮದುವೆಯನ್ನು ನಿಲ್ಲಿಸಿದರೆನ್ನುವ ಕಾರಣಕ್ಕಾಗಿ ಸಂಜಯ್ ಮತ್ತು ರಾಜಶ್ರೀ ಈ ಇಬ್ಬರು ಕಾರ್ಯಕರ್ತರನ್ನು ಮೇಲೆ ಹೇಳಿದ ರೀತಿಯಲ್ಲೇ ನೋಡುತ್ತಾರೆ.

“ಅವರು ಮದುವೆ ನಡೆಯಲು ಬಿಡಬೇಕಿತ್ತು” ಎಂದು 33 ವರ್ಷದ ರಾಜಶ್ರೀ ಹೇಳುತ್ತಾರೆ. "ಅದೊಂದು ಒಳ್ಳೆಯ ಕುಟುಂಬ. ಅವರು ಅವಳನ್ನು ನೋಡಿಕೊಳ್ಳುತ್ತಿದ್ದರು. ಆಕೆಗೆ 18 ವರ್ಷ ತುಂಬಲು ಇನ್ನೂ ಒಂದು ವರ್ಷವಿದೆ, ಆದರೆ ಅವರು ಅಲ್ಲಿಯವರೆಗೆ ಕಾಯಲು ಸಿದ್ಧರಿಲ್ಲ. ಮದುವೆಗಾಗಿ ನಾವು 2 ಲಕ್ಷ ರೂಪಾಯಿ ಸಾಲ ಮಾಡಿದ್ದೆವು. ಈಗ ನಾವು ನಷ್ಟವನ್ನು ಅನುಭವಿಸಬೇಕಾಗಿದೆ."

ಸಂಜಯ್ ಮತ್ತು ರಾಜಶ್ರೀ ಬದಲಿಗೆ ಅವರ ಜಾಗದಲ್ಲಿ ಹಳ್ಳಿಯಲ್ಲಿನ ಪ್ರಭಾವಶಾಲಿ ಕುಟುಂಬವಿದ್ದಿದ್ದರೆ, ತಾವು ಗಮನಾರ್ಹ ಹಗೆತನವನ್ನು ಎದುರಿಸುಬೇಕಾಗಿತ್ತು ಎಂದು ತಾಂಗ್ಡೆ ಹೇಳುತ್ತಾರೆ. "ನಮ್ಮ ಕೆಲಸದಿಂದಾಗಿ ನಾವು ಹಲವಾರು ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದೇವೆ" ಎಂದು ಅವರು ಹೇಳುತ್ತಾರೆ. "ಪ್ರತಿ ಬಾರಿ ನಮಗೆ ಸುಳಿವು ಸಿಕ್ಕಾಗ, ನಾವು ಭಾಗಿಯಾಗಿರುವ ಕುಟುಂಬಗಳ ಬಗ್ಗೆ ನಮ್ಮ ಹಿನ್ನೆಲೆ ಪರಿಶೀಲನೆ ನಡೆಸುತ್ತೇವೆ."

ಇದು ಸ್ಥಳೀಯ ರಾಜಕಾರಣಿಗಳೊಂದಿಗೆ ಸಂಬಂಧ ಹೊಂದಿರುವ ಕುಟುಂಬವಾಗಿದ್ದರೆ, ಇಬ್ಬರೂ ಆಡಳಿತಕ್ಕೆ ಮುಂಚಿತವಾಗಿ ಫೋನ್ ಮಾಡಿ ಸ್ಥಳೀಯ ಪೊಲೀಸ್ ಠಾಣೆಯಿಂದ ಹೆಚ್ಚುವರಿ ಭದ್ರತಾ ಸಹಾಯವನ್ನು ಪಡೆಯುತ್ತಾರೆ.

"ನಮಗೆ ಹಲ್ಲೆ, ಅವಮಾನ ಮತ್ತು ಬೆದರಿಕೆ ಎದುರಾಗುತ್ತಿರುತ್ತದೆ" ಎಂದು ಕಾಂಬ್ಳೆ ಹೇಳುತ್ತಾರೆ. "ಎಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ."

ಒಮ್ಮೆ, ವರನೊಬ್ಬನ ತಾಯಿ ನಮ್ಮ ಕಾರ್ಯವನ್ನು ಪ್ರತಿಭಟಿಸಿ ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಂಡರು, ಆಕೆಯ ಹಣೆಯಿಂದ ರಕ್ತ ಸೋರುತ್ತಿತ್ತು ಎಂದು ತಾಂಗ್ಡೆ ನೆನಪಿಸಿಕೊಳ್ಳುತ್ತಾರೆ. ಇದು ಅಧಿಕಾರಿಗಳನ್ನು ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡುವ ಪ್ರಯತ್ನವಾಗಿತ್ತು. "ಅಂದು ಅಲ್ಲಿದ್ದ ಕೆಲವು ಅತಿಥಿಗಳು ನಾಚುತ್ತಲೇ ಊಟ ಮಾಡಲು ಆರಂಭಿಸಿದ್ದರು" ಎಂದು ತಾಂಗ್ಡೆ ನಗುತ್ತಾರೆ. "ಆದರೆ ಆ ಕುಟುಂಬವನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗಿತ್ತು. ಕೆಲವೊಮ್ಮೆ, ಬಾಲ್ಯ ವಿವಾಹವನ್ನು ತಡೆದಿದ್ದಕ್ಕಾಗಿ ನಮ್ಮನ್ನು ಅಪರಾಧಿಗಳಂತೆ ಕಂಡಾಗ, ನಮಗೇ ಈ ಮದುವೆ ನಡೆಯುತ್ತಿರುವುದು ಸರಿಯೇನೋ ಎನ್ನುವ ಭಾವನೆ ಮೂಡುವುದು ಸುಳ್ಳಲ್ಲ" ಎಂದು ಅವರು ಹೇಳುತ್ತಾರೆ.

In May 2023, three years after they stopped the wedding of a 17-year-old girl, her father walked into the duo's office with a box of sweets. Tangde and Kamble were finally invited to a wedding
PHOTO • Parth M.N.

2023ರ ಮೇ ತಿಂಗಳಿನಲ್ಲಿ, 17 ವರ್ಷದ ಹುಡುಗಿಯ ಮದುವೆಯನ್ನು ನಿಲ್ಲಿಸಿದ ಮೂರು ವರ್ಷಗಳ ನಂತರ, ಆಕೆಯ ತಂದೆ ಸಿಹಿತಿಂಡಿಗಳ ಪೆಟ್ಟಿಗೆಯೊಂದಿಗೆ ಇವರಿಬ್ಬರ ಕಚೇರಿಗೆ ಬಂದರು. ತಾಂಗ್ಡೆ ಮತ್ತು ಕಾಂಬ್ಳೆ ಅವರನ್ನು ಕೊನೆಗೂ ಆ ಹುಡುಗಿಯ ಮದುವೆಗೆ ಆಹ್ವಾನಿಸಲಾಯಿತು

ಇದರ ಜೊತೆಗೆ ಬದುಕು ಸಾರ್ಥಕ ಎನ್ನಿಸುವ ಗಳಿಗೆಗಳೂ ಅವರ ಅನುಭವದ ಬುಟ್ಟಿಯಲ್ಲಿವೆ.

2020ರ ಆರಂಭದಲ್ಲಿ, ತಾಂಗ್ಡೆ ಮತ್ತು ಕಾಂಬ್ಳೆ 17 ವರ್ಷದ ಹುಡುಗಿಯೊಬ್ಬಳ ಮದುವೆಯನ್ನು ನಿಲ್ಲಿಸಿದ್ದರು. ಅವಳು ತನ್ನ 12 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದಳು. ಆದರೆ ಆಕೆಯ ತಂದೆ ಬಡವ - ಕಬ್ಬು ಕತ್ತರಿಸುವ ಕೆಲಸದವರು – ಅವರು ತಮ್ಮ ಮಗಳಿಗೆ ಮದುವೆ ಮಾಡಿಸಲು ನಿರ್ಧರಿಸಿದರು. ಆದರೆ ಈ ಇಬ್ಬರು ಕಾರ್ಯಕರ್ತರಿಗೆ ಮದುವೆಯ ಬಗ್ಗೆ ತಿಳಿಯಿತು. ಅವರು ಅದನ್ನು ನಿಲ್ಲಿಸಲು ಮಾಡಬೇಕಿರುವ ವ್ಯವಸ್ಥೆಗಳನ್ನೂ ಮಾಡಿದರು. ಕೋವಿಡ್ -19 ಹರಡಿದಾಗಿನಿಂದ ಅವರು ತಡೆಯುವಲ್ಲಿ ಯಶಸ್ವಿಯಾದ ಕೆಲವೇ ಮದುವೆಗಳಲ್ಲಿ ಇದು ಒಂದಾಗಿತ್ತು.

"ನಾವು ಸಾಮಾನ್ಯವಾಗಿ ಅನುಸರಿಸುವ ಅಭ್ಯಾಸವನ್ನೇ ಅನುಸರಿಸಿದ್ದೆವು" ಎಂದು ತಾಂಗ್ಡೆ ನೆನಪಿಸಿಕೊಳ್ಳುತ್ತಾರೆ. "ನಾವು ಮೊದಲಿಗೆ ಪೊಲೀಸ್‌ ಪ್ರಕರಣ ದಾಖಲಿಸಿದೆವು. ಕಾಗದ ಪತ್ರಗಳ ಕೆಲಸವನ್ನೂ ಮುಗಿಸಿದೆವು. ನಂತರ ಹುಡುಗಿಯ ತಂದೆಗೆ ಬುದ್ಧಿ ಹೇಳುವ ಕೆಲಸವನ್ನೂ ಮಾಡಿದೆವು. ಆದರೆ ಇದೆಲ್ಲ ಆದ ಮೇಲೂ ಮತ್ತೆ ಆ ಹುಡುಗಿಗೆ ಮದುವೆ ಮಾಡಿಸಲು ಪ್ರಯತ್ನಿಸುವ ಸಾಧ್ಯತೆಯೂ ಇರುತ್ತದೆ.”

2023ರ ಮೇ ತಿಂಗಳ ಒಂದು ದಿನದಂದು, ಆ ಬಾಲಕಿಯ ತಂದೆ ಬೀಡ್‌ ನಗರದಲ್ಲಿರುವ ತಾಂಗ್ಡೆಯವರ ಕಚೇರಿಗೆ ಕಾಲಿಟ್ಟರು. ಒಂದು ನಿಮಿಷ, ತಾಂಗ್ಡೆಗೆ ಆ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಇಬ್ಬರೂ ಭೇಟಿಯಾಗಿ ಸ್ವಲ್ಪ ಸಮಯವಾಗಿತ್ತು. ತಂದೆ ಮತ್ತೆ ತನ್ನನ್ನು ಪರಿಚಯಿಸಿಕೊಂಡ ಮತ್ತು ಮಗಳು ಪದವಿ ಮುಗಿಸಲಿ ಎಂದು ಕಾಯ್ದು ಈಗ ಅವಳ ಮದುವೆ ಮಾಡಿಸುತ್ತಿದ್ದೇನೆ ಎಂದು ಹೇಳಿಕೊಂಡರು. ಅವಳು ಒಪ್ಪಿದ ನಂತರವೇ ಹುಡುಗನನ್ನು ನಿಕ್ಕಿ ಮಾಡಲಾಗಿತ್ತು. ನಂತರ ಅವರು ತಾಂಗ್ಡೆ ಅವರ ಸೇವೆಗೆ ಧನ್ಯವಾದ ತಿಳಿಸಿ ಉಡುಗೊರೆಯಿದ್ದ ಪೆಟ್ಟಿಗೆಯೊಂದನ್ನು ಸಹ ಹಸ್ತಾಂತರಿಸಿದರು.

ಕೊನೆಗೂ ತಾಂಗ್ಡೆಯವರ ಕೈಯಲ್ಲಿ ಒಂದು ಮದುವೆ ಕಾಗದವಿತ್ತು. ಮತ್ತು ಅದನ್ನು ಅವರನ್ನು ಬರುವಂತೆ ಆಹ್ವಾನಿಸಿ ನೀಡಲಾಗಿತ್ತು.

ಈ ವರದಿಯಲ್ಲಿ ಮಕ್ಕಳು ಮತ್ತು ಅವರ ಸಂಬಂಧಿಕರ ಗುರುತನ್ನು ಕಾಪಾಡುವ ಕಾರಣಕ್ಕಾಗಿ ಅವರ ಹೆಸರುಗಳನ್ನು ಬದಲಾಯಿಸಲಾಗಿದೆ.

ಈ ವರದಿಯನ್ನು ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಸಹಾಯದಿಂದ ತಯಾರಿಸಲಾಗಿದೆ. ವರದಿಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಜವಾಬ್ದಾರಿಗಳು ಲೇಖಕ ಮತ್ತು ಪ್ರಕಾಶಕರದು ಮಾತ್ರವೇ ಆಗಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

ପାର୍ଥ ଏମ୍.ଏନ୍. ୨୦୧୭ର ଜଣେ PARI ଫେଲୋ ଏବଂ ବିଭିନ୍ନ ୱେବ୍ସାଇଟ୍ପାଇଁ ଖବର ଦେଉଥିବା ଜଣେ ସ୍ୱାଧୀନ ସାମ୍ବାଦିକ। ସେ କ୍ରିକେଟ୍ ଏବଂ ଭ୍ରମଣକୁ ଭଲ ପାଆନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Parth M.N.
Editor : Sarbajaya Bhattacharya

ସର୍ବଜୟା ଭଟ୍ଟାଚାର୍ଯ୍ୟ ପରୀର ଜଣେ ବରିଷ୍ଠ ସହାୟିକା ସମ୍ପାଦିକା । ସେ ମଧ୍ୟ ଜଣେ ଅଭିଜ୍ଞ ବଙ୍ଗଳା ଅନୁବାଦିକା। କୋଲକାତାରେ ରହୁଥିବା ସର୍ବଜୟା, ସହରର ଇତିହାସ ଓ ଭ୍ରମଣ ସାହିତ୍ୟ ପ୍ରତି ଆଗ୍ରହୀ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Sarbajaya Bhattacharya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru