ಶ್ಯಾಮಲಾಲ್ ಕಶ್ಯಪ್ ಅವರ ಶವವನ್ನು ಮುಂದಿಟ್ಟುಕೊಂಡು ಅವರ ಕುಟುಂಬವನ್ನು ಅಕ್ಷರಶಃ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು.
2023ರ ಮೇ ತಿಂಗಳಲ್ಲಿ ಅರಕೋಟ್‌ನ 20 ವರ್ಷದ ಈ ಕೂಲಿ ಕಾರ್ಮಿಕ ತನ್ನ 20 ವರ್ಷದ ಗರ್ಭಿಣಿ ಪತ್ನಿ ಮಾರ್ಥಾಳನ್ನು ಅನಾಥೆಯನ್ನಾಗಿಸಿ ತನ್ನ ಜೀವವನ್ನು ತಾನೇ ಬಲಿ ತೆಗೆದುಕೊಂಡಿದ್ದರು.
“ಇದು ಆತ್ಮಹತ್ಯೆ. ಇಲ್ಲಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋದೆವು” ಎಂದು ಅವರ ಅತ್ತಿಗೆ ಸುಕ್ಮಿತಿ ಕಶ್ಯಪ್ (30) ಹೇಳುತ್ತಾರೆ. ಅರಕೋಟ್ ಗ್ರಾಮದ ಬಂಜರು ಭೂಮಿಯ ಅಂಚಿನಲ್ಲಿರುವ ಮಂದಬೆಳಕಿನ ಗುಡಿಸಲಿನ ಹೊರಗೆ ಅವರು ಕುಳಿತುಕೊಂಡು, "ಪೋಸ್ಟ್ ಮಾರ್ಟಮ್ ವರದಿಯಲ್ಲಿ ಯಾವುದೇ ಅನುಮಾನಗಳು ಕಂಡು ಬಂದಿಲ್ಲ,” ಎಂದು ಹೇಳುತ್ತಾರೆ.
ಸರ್ಕಾರಿ ಆಸ್ಪತ್ರೆಯಿಂದ ಶ್ಯಾಮಲಾಲ್ ಅವರ ಶವವನ್ನು ತೆಗೆದುಕೊಂಡು, ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಅವರ ಕೆಲವು ಸಂಬಂಧಿಕರು ಕಾಯುತ್ತಿದ್ದರು. ಗ್ರಾಮದಲ್ಲಿ ಸಾವಿನ ನೋವಿನಿಂದ ದಿಕ್ಕೆಟ್ಟ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುತ್ತಿದ್ದರು. ಇಡೀ ಕುಟುಂಬ ಆಘಾತಕ್ಕೊಳಗಾಗಿತ್ತು. ಅವರು ಇನ್ನೂ ಆ ದುರಂತದಿಂದ ಹೊರಬರಲು ಸಾಧ್ಯವಾಗಿಲ್ಲ.
ಆ ಹೊತ್ತಿನಲ್ಲೇ ಕೆಲವು ಸ್ಥಳೀಯರು ಈ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವುದಾಗಿ ಕುಟುಂಬಕ್ಕೆ ತಿಳಿಸಿದ್ದರು.
ಈ ಕುಟುಂಬವು ಛತ್ತೀಸ್‌ಗಢದ ಬಸ್ತಾರ್‌ನ ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡಿ, ಮೂರು ಎಕರೆ ಹೊಲದಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದೆ. ಇಲ್ಲಿ ಅವರು ಮನೆ ಬಳಕೆಗಾಗಿ ಭತ್ತವನ್ನು ಬೆಳೆಯುತ್ತಾರೆ. ಅವರ ಏಕೈಕ ಆದಾಯವೆಂದರೆ ಶ್ಯಾಮಲಾಲ್ ಅವರು ಕಷ್ಟಪಟ್ಟು ದುಡಿದು ತಿಂಗಳಿಗೆ ಗಳಿಸುವ 3,000 ರುಪಾಯಿ.
ಈಗ ಈ ಕಡು ಬಡತನದ ನಡುವೆ ಮಗುವನ್ನು ಸಾಕುವ ಹೊರೆ ಕೂಡ ತನ್ನ ಮೇಲೆ ಬಿದ್ದಿದೆ ಎಂದು ಸುಕ್ಮಿತಿ ವ್ಯಥೆ ಪಡುತ್ತಾರೆ. "ಅವನು ಆತ್ಯಹತ್ಯೆ ಮಾಡಿಕೊಳ್ಳುವ ಮೊದಲು ಒಂದು ಚೀಟಿ ಕೂಡ ಬರೆದಿಡಲಿಲ್ಲ," ಎಂದು ಅವರು ಹೇಳುತ್ತಾರೆ.








