“ನೀರು ಏರಿದಂತೆ ನಮ್ಮ ಎದೆಯಲ್ಲಿ ಭತ್ತ ಕುಟ್ಟಿದ ಅನುಭವವಾಗುತ್ತದೆ” ಎನ್ನುತ್ತಾರೆ ಹರೇಶ್ವರ ದಾಸ್. ಮಳೆಗಾಲ ಬಂತೆಂದರೆ ಊರು ಯಾವ ಕ್ಷಣದಲ್ಲದಾರೂ ಬರಬಹುದಾದದ ನೆರೆಗೆ ಸಿದ್ಧವಾಗಿರಬೇಕಾಗುತ್ತದೆ ಬಗರೀಬಾರಿ ನಿವಾಸಿಯಾದ ಅವರು. ಈ ಊರಿನಲ್ಲಿ ಹರಿಯುವ ಪುಠಿಮಾರಿ ನದಿ ಮಳೆಗಾಲದಲ್ಲಿ ಊರಿನ ಜನರನ್ನು ದುಃಸ್ವಪ್ನವಾಗಿ ಕಾಡುತ್ತದೆ.
“ಮಳೆ ಹನಿಯಲು ಶುರುವಾದ ಕೂಡಲೇ ನಾವು ನಮ್ಮ ಬಟ್ಟೆಬರೆಗಳನ್ನು ಕಟ್ಟಿಕೊಂಡು ಹೊರಡಲು ತಯಾರಿರಬೇಕು. ಕಳೆದ ಸಲದ ನೆರೆ ಎರಡೂ ಕಚ್ಚಾ ಮನೆಗಳನ್ನು ನೆಲಸಮಗೊಳಿಸಿತು. ಮತ್ತೆ ಬಿದಿರು ಮಣ್ಣು ಒಟ್ಟುಗೂಡಿಸಿ ಹೊಸ ಗೋಡೆ ಕಟ್ಟಬೇಕಾಯಿತು” ಎನ್ನುತ್ತಾರೆ ಅವರ ಪತ್ನಿ ಸಾಬಿತ್ರಿ ದಾಸ್.
“ನಾನು [ಈಗ ಹಾಳಾಗಿರುವ] ಟಿವಿಯನ್ನು ಚೀಲದಲ್ಲಿ ತುಂಬಿ ಮನೆಯ ಮಾಡಿನ ಮೇಲಿಟ್ಟಿದ್ದೆ” ಎನ್ನುತ್ತಾರೆ ನೀರದಾ ದಾಸ್. ಕಳೆದ ವರ್ಷದ ನೆರೆಯಲ್ಲೂ ಅವರು ಒಂದು ಟಿವಿ ಕಳೆದುಕೊಂಡಿದ್ದರು.
ಅದು ಜೂನ್ 16, 2023 ರ ರಾತ್ರಿ, ಅಂದು ಮಳೆ ಎಡೆಬಿಡದೆ ಸುರಿಯಿತು. ಕಳೆದ ವರ್ಷ ಕುಸಿದ ಅಣೆಕಟ್ಟಿನ ಒಂದು ಭಾಗವನ್ನು ದುರಸ್ತಿ ಮಾಡಲು ನಿವಾಸಿಗಳು ಮರಳು ಚೀಲಗಳನ್ನು ಬಳಸಿದರು. ಎರಡು ದಿನಗಳು ಕಳೆದರೂ ಮಳೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಲಿಲ್ಲ. ಬಗರೀಬಾರಿ ಮತ್ತು ಅದರ ನೆರೆಯ ಗ್ರಾಮಗಳಾದ ಧೇಪರ್ಗಾಂವ್, ಮಡೋಯಿಕಟಾ, ನಿಜ್ ಕೌರ್ಬಹಾ, ಖಾಂಡಿಕರ್, ಬಿಹಾಪಾರಾ ಮತ್ತು ಲಹಾಪಾರಾದ ಜನರು ಯಾವ ಕ್ಷಣದಲ್ಲಾದರೂ ಬಿರುಕು ಬಿಡಬಹುದಾದ ಕಟ್ಟೆಯ ಕಡೆ ಭಯದಿಂದ ಕಣ್ಣಾಗಿ ಕುಳಿತಿದ್ದರು.
ಅದೃಷ್ಟವೆಂಬಂತೆ ನಾಲ್ಕು ದಿನಗಳ ನಂತರ ಮಳೆ ಕಡಿಮೆಯಾಯಿತು, ಜೊತೆಗೆ ನೀರಿನ ಮಟ್ಟವೂ ಇಳಿಯಿತು.
"ಒಡ್ಡು ಕುಸಿದಾಗ ನೀರಿನ ಬಾಂಬ್ ಸಿಡಿದಂತೆ ಕಾಣುತ್ತದೆ" ಎಂದು ಸ್ಥಳೀಯ ಶಿಕ್ಷಕ ಹರೇಶ್ವರ ದಾಸ್ ಹೇಳುತ್ತಾರೆ. 85 ವರ್ಷ ಪ್ರಾಯದ ಅವರು ಕೆ.ಬಿ. ದೆಲ್ಕುಚಿ ಹೈಸ್ಕೂಲಿನ ನಿವೃತ್ತ ಶಿಕ್ಷಕ.
1965ರಲ್ಲಿ ನಿರ್ಮಿಸಲಾದ ಒಡ್ಡು ಊರಿಗೆ ಒಳಿತು ಮಾಡುವುದಕ್ಕಿಂತಲೂ ಹೆಚ್ಚು ಹಾನಿಯನ್ನೇ ಮಾಡಿದೆ ಎನ್ನುವುದು ಅವರ ಅಭಿಪ್ರಾಯ. “ಮೊದಲು ಗದ್ದೆಗೆ ಮೆಕ್ಕಲು ಮಣ್ಣು ಹರಿದು ಬರುತ್ತಿತ್ತು, ಆದರೆ ಒಡ್ಡು ಕಟ್ಟಿದ ಮೇಲೆ ಗದ್ದೆಗಳು ಕೇವಲ ನೀರಿನಲ್ಲಿ ಮುಳುಗಿರುತ್ತವೆ” ಎನ್ನುತ್ತಾರವರು.




















