ಏಪ್ರಿಲ್ 19, 2024ರಂದು ಮನೋಹರ್ ಎಲವರ್ತಿಯವರು ಬೆಂಗಳೂರಿನ ಅತಿದೊಡ್ಡ ಕೊಳೆಗೇರಿಯಾದ ದೇವರ ಜೀವನಹಳ್ಳಿಯಲ್ಲಿ ಕ್ವೀರ್ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಸಜ್ಜಾಗಿದ್ದರು. ಎಲವರ್ತಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಹೋರಾಡುವ ಗುಂಪಾದ ಸಂಗಮದ ಸ್ಥಾಪಕರಲ್ಲಿ ಒಬ್ಬರು. ಇವರು ಬೆಲೆಯೇರಿಕೆ, ನಿರುದ್ಯೋಗ ಮತ್ತು ಜಾತ್ಯತೀತತೆಯಂತಹ ವಿಶಾಲ ಸಾಮಾಜಿಕ ಕಾಳಜಿಗಳ ಜೊತೆಗೆ ಎಲ್ಜಿಬಿಟಿಕ್ಯೂಐಎ + (ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‌ಜೆಂಡರ್, ಕ್ವೀರ್, ಇಂಟರ್ಸೆಕ್ಸ್ ಮತ್ತು ಅಸೆಕ್ಷುವಲ್ "+" ಎಂದರೆ ಸಂಕ್ಷಿಪ್ತಾಕ್ಷರಗಳಲ್ಲಿ ಇಲ್ಲದ ಇತರ ಎಲ್ಲಾ ಗುರುತುಗಳು) ಸಮುದಾಯಗಳ ಸಮಸ್ಯೆಗಳನ್ನು ಚರ್ಚಿಸಲು ಅವರು ಯೋಜಿಸಿದ್ದರು. ಅವರು ಸಂವಾದವನ್ನು ಮುನ್ನಡೆಸಲು ಜೆಂಡರ್‌ ಎಂಡ್‌ ಸೆಕ್ಷುವಲ್‌ ಮೈನಾರಿಟಿ ಫಾರ್‌ ಸೆಕ್ಯುಲರ್‌ ಎಂಡ್‌ ಕಾನ್ಸ್ಟಿಟ್ಯೂಷನಲ್‌ ಡೆಮಾಕ್ರಸಿ  (ಜಿಎಸ್‌ಎಮ್‌) ಸಂಘಟನೆಯೊಂದಿಗೆ ಸೇರಿಕೊಂಡರು.

ಕಾಕತಾಳೀಯವೆನ್ನುವಂತೆ ಅಂದೇ ಭಾರತದ ಕೆಲವು ಪ್ರದೇಶಗಳು 2024ರ ಸಾರ್ವತ್ರಿಕ ಚುನಾವಣೆಗೆ ಮತ ಚಲಾಯಿಸುತ್ತಿದ್ದವು, ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಚುನಾವಣೆಗೆ ಒಂದು ವಾರ ಬಾಕಿಯಿತ್ತು.

ಎಲವರ್ತಿ ಪ್ರಚಾರ ಆರಂಭಿಸುತ್ತಿದ್ದಂತೆಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) 10 ಜನರು ಕೇಸರಿ ಶಾಲು ಮತ್ತು ಪಕ್ಷದ ಚಿಹ್ನೆಯನ್ನು ಧರಿಸಿ ಡಿಜೆ ಹಳ್ಳಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದೇವರ ಜೀವನಹಳ್ಳಿಯ ಕಿರಿದಾದ ಗಲ್ಲಿಗಳಲ್ಲಿ ಅವರನ್ನು ಮತ್ತು ನನ್ನನ್ನು (ಉದ್ದೇಶಿತ ಪ್ರಚಾರವನ್ನು ವರದಿ ಮಾಡುವ ಪತ್ರಕರ್ತರು) ಸುತ್ತುವರೆದರು. ಇಲ್ಲಿನ ಹೆಚ್ಚಿನ ಮತದಾರರು ಗ್ರಾಮೀಣ ವಲಸಿಗರು. ಮತ್ತು ಅವರಲ್ಲಿ ಅನೇಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ಅಲ್ಲಿದ್ದ ಬಿಜೆಪಿ ಸದಸ್ಯರಲ್ಲೊಬ್ಬರು “ನೀವೆಲ್ಲ ಕಾಂಗ್ರೆಸ್‌ ಏಜೆಂಟರು” ಎಂದು ಕೂಗಿದರು. ನಂತರ ಅಲ್ಲಿ ಜಿಎಸ್‌ಎಮ್‌ ಪ್ರಚಾರ ಆಂದೋಲನವನ್ನು ವಿರೋಧಿಸಲೆಂದು ಸೇರಿದವರೂ ಇದರಿಂದ ಪ್ರಚೋದಿತರಾದರು. ನಂತರ ಬಿಜೆಪಿಯವರು ಜಿಎಸ್‌ಎಮ್‌ ಕರಪತ್ರಗಳನ್ನು ಪ್ರದರ್ಶಿಸುತ್ತಾ “ಇವು ಕಾನೂನು ಬಾಹಿರ”ಘೋಷಿಸಿದರು.

PHOTO • Sweta Daga
PHOTO • Sweta Daga

ಎಡ: ಸ್ಥಳೀಯ ಬಿಜೆಪಿ ಪಕ್ಷದ ಕಚೇರಿಯ ಉಪಾಧ್ಯಕ್ಷ ಮಣಿಮಾರನ್ ರಾಜು (ಎಡ) ಮತ್ತು ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಗುಂಪು (ಬಲ) ಸಂಗಮ ಸಂಘಟನೆಯ ಸಂಸ್ಥಾಪಕರಾದ ಮನೋಹರ್ ಎಲವರ್ತಿ (ಬಲ). ಬಲ: ಮನೋಹರ್ (ಗಡ್ಡವಿರುವ ನೀಲಿ ಶರ್ಟ್ ಧರಿಸಿದ ವ್ಯಕ್ತಿ) ಇತರ ಜಿಎಸ್ಎಂ ಸ್ವಯಂಸೇವಕರನ್ನು ಕರೆಯಲು ಪ್ರಯತ್ನಿಸುವಾಗ ಮಣಿಮಾರನ್ ರಾಜು (ಕೆಂಪು ಮತ್ತು ಬಿಳಿ ಚೆಕ್ ಶರ್ಟ್ ಧರಿಸಿರುವವರು) ನೇತೃತ್ವದ ಬಿಜೆಪಿ ಪಕ್ಷದ ಕಾರ್ಯಕರ್ತರು ಅವರನ್ನು ಗುರಾಯಿಸಿ ನೋಡುತ್ತಿರುವುದು

ಯಾವುದೇ ನಾಗರಿಕ ಸಂಘಟನೆಗಳು ಆಡಳಿತ ಪಕ್ಷವನ್ನು ಟೀಕಿಸುವ ಕರಪತ್ರಗಳನ್ನು ಕಾನೂನುಬದ್ಧವಾಗಿ ವಿತರಿಸಬಹುದು. ಆದರೆ ಒಂದು ರಾಜಕೀಯ ಪಕ್ಷವು ಮತ್ತೊಂದು ಪಕ್ಷದ ಬಗ್ಗೆ ನಿರ್ಣಾಯಕ ವಿಷಯಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗದ ನಿಯಮಗಳು ಹೇಳುತ್ತವೆ .

ಮನೋಹರ್‌ ಈ ವಿಷಯವನ್ನು ಉದ್ವಿಗ್ನರಾಗಿದ್ದ ಪಕ್ಷದ ಸದಸ್ಯರಿಗೆ ವಿವರಿಸಲು ಪ್ರಯತ್ನಿಸಿದರು. ಆಗ ಇದ್ದಕ್ಕಿದ್ದಂತೆ, ಅವರ ಗಮನವು ನನ್ನ ಕಡೆಗೆ ತಿರುಗಿತು. ನಂತರ ಅವರು ನಾನ್ಯಾಕೆ ಅಲ್ಲಿದ್ದೇನೆ ಎಂದು ಪ್ರಶ್ನಿಸತೊಡಗಿದರು, ಜೊತೆಗೆ ನನ್ನ ಬಳಿಯಿದ್ದ ಕೆಮೆರಾ ಆಪ್‌ ಮಾಡುವಂತೆ ಒತ್ತಾಯಿಸಿದರು.

ನಾನು ಪತ್ರಕರ್ತೆ ಎನ್ನುವುದು ತಿಳಿಯುತ್ತಿದ್ದಂತೆ ಅವರು ನನ್ನ ಕುರಿತು ಒಂದಷ್ಟು ಮೃದು ಧೋರಣೆ ತಾಳತೊಡಗಿದರು. ಮತ್ತು ಗುಂಪು ನನಗೆ ಅಲ್ಲಿದ್ದ ಇತರ ಸ್ವಯಂಸೇವಕರನ್ನು ಭೇಟಿಯಾಗುವ ಸಲುವಾಗಿ ಮುಂದಕ್ಕೆ ನಡೆಯಲು ಅನುವು ಮಾಡಿಕೊಟ್ಟಿತು. ಗುಂಪಿನಲ್ಲಿದ್ದ ವ್ಯಕ್ತಿಗಳಲ್ಲಿ ಒಬ್ಬರಾದ ಸ್ಥಳೀಯ ಬಿಜೆಪಿ ಪಕ್ಷದ ಕಚೇರಿಯ ಉಪಾಧ್ಯಕ್ಷ ಮಣಿಮಾರನ್ ರಾಜು ನಮಗೆ ಮುಂದುವರಿಯಲು ಅವಕಾಶ ನೀಡಲು ನಿರ್ಧರಿಸಿದರು.

ಆದರೆ ಅದಾದ ಕೆಲವೇ ಕ್ಷಣಗಳಲ್ಲಿ ಅಲ್ಲಿ ಮತ್ತೆ ಪರಿಸ್ಥಿತಿ ಬದಲಾಯಿತು. ಕ್ಷಣಾರ್ಧದಲ್ಲಿ ಅಲ್ಲಿದ್ದ ಪಕ್ಷದ ಕಾರ್ಯಕರ್ತ ಎರಡರಷ್ಟು ಸಂಖ್ಯೆಯ ಜನರು ನಮ್ಮನ್ನು ಸುತ್ತುವರೆದರು. ಅದರ ಜೊತೆಗೆ ಘಟನಾ ಸ್ಥಳದಲ್ಲಿ ಚುನಾವಣಾಧಿಕಾರಿ ಹಾಗೂ ಪೊಲೀಸರನ್ನು ಹೊಂದಿದ್ದ ಒಂದು ಅಧಿಕೃತ ಕಾರು ಸಹ ಕಾಣಿಸಿಕೊಂಡಿತು.

ಕೆಲವೇ ಕ್ಷಣಗಳಲ್ಲಿ – ಪ್ರಚಾರ ಆರಂಭಿಸುವ ಮೊದಲೇ - ಮನೋಹರ್, ಜಿಎಸ್ಎಂ ಸ್ವಯಂಸೇವಕರು ಮತ್ತು ನನ್ನನ್ನು ದೇವರ ಜೀವನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಹೇಳಲಾಯಿತು.

PHOTO • Sweta Daga

ಫ್ಲೈಯಿಂಗ್ ಸ್ಕ್ವಾಡ್ ತಂಡದ ಸದಸ್ಯ ಚುನಾವಣಾ ಆಯೋಗದ ಅಧಿಕಾರಿ ಎಂ.ಎಸ್.ಉಮೇಶ್ (ಹಳದಿ ಶರ್ಟ್) ಅವರೊಂದಿಗೆ ಮನೋಹರ್. ಜಿಎಸ್ಎಂ ಸ್ವಯಂಸೇವಕರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸುವ ಬಿಜೆಪಿ ಪಕ್ಷದ ಕಾರ್ಯಕರ್ತರು, ಚುನಾವಣಾ ಆಯೋಗದ ಇತರ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳು ಸಹ ಸ್ಥಳದಲ್ಲಿ ಉಪಸ್ಥಿತರಿದ್ದರು

*****

2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮತ್ತು ಈಗ 2024ರಲ್ಲಿ ಮೂರನೇ ಅವಧಿಗೆ ಮತ್ತೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಪಕ್ಷದಿಂದ ಪ್ರೊ.ಎಂ.ವಿ.ರಾಜೀವ್ ಗೌಡ ಚುನಾವಣಾ ಕಣದಲ್ಲಿದ್ದಾರೆ.

ಜಿಎಸ್‌ಎಮ್‌ ಕರಪತ್ರದಲ್ಲಿ ಗ್ಯಾಸ್‌ ಸಿಲಿಂಡರ್‌ ಬೆಲೆಯೇರಿಕೆ, ಯುವಜನರ ನಿರುದ್ಯೋಗ, ಮತ್ತು ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯ ಕುರಿತಾದ ಟೀಕೆಗಳಿದ್ದವು.

“ಪಕ್ಷದ ಪ್ರತಿನಿಧಿಗಳು ನಿರಂತರವಾಗಿ ಧರ್ಮ, ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಭಾಷಣಗಳನ್ನು ಮಾಡುತ್ತಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯ ನೆಲವಾದ ನಮ್ಮ ಕರ್ನಾಟಕದಲ್ಲಿ ದ್ವೇಷವನ್ನು ಹರಡಲು ನಾವು ಅವರಿಗೆ ಅವಕಾಶ ನೀಡುವುದು ಸರಿಯೇ?" ಎಂದು ಕರಪತ್ರದಲ್ಲಿ ಪ್ರಶ್ನಿಸಲಾಗಿದೆ.

"ಪ್ರಜಾಪ್ರಭುತ್ವವೇ ಅಪಾಯದಲ್ಲಿರುವಾಗ, ಕೇವಲ ಒಂದು ಸಮುದಾಯವನ್ನು ರಕ್ಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಇಂತಹ ಸಂದರ್ಭದಲ್ಲಿ ನಾವು ಇಡೀ ಪ್ರಜಾಪ್ರಭುತ್ವವೆನ್ನುವ ಪರಿಕಲ್ಪಯನ್ನೇ ರಕ್ಷಿಸಿಕೊಳ್ಳಬೇಕಾದ ಅಗತ್ಯವಿರುತ್ತದೆ” ಎಂದು ಮನೋಹರ್ ಹೇಳುತ್ತಾರೆ. “ಜಿಎಸ್‌ಎಮ್‌ ಎಂದಿಗೂ ಕಾಂಗ್ರೆಸ್‌ ಅತ್ಯುತ್ತಮ ಪಕ್ಷವೆಂದು ಹೇಳುವುದಿಲ್ಲ. ಆದರೆ ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ನಮ್ಮ ಸಂವಿಧಾನ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರಜಾಪ್ರಭುತ್ವ ನಾಶವಾದರೆ ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಸಹ ನಾಶವಾಗುತ್ತವೆ” ಎಂದು ಅವರು ಕೊಳಗೇರಿಯ ಇಕ್ಕಟ್ಟಾದ ದಾರಿಯಲ್ಲಿ ನಡೆಯುತ್ತಾ ತಿಳಿಸಿದರು.

"ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಜಿಬಿಟಿಕ್ಯೂಐಎ+ ಜನರ ಇಷ್ಟು ದೊಡ್ಡ ಒಕ್ಕೂಟ ಚುನಾವಣೆಯ ಸಮಯದಲ್ಲಿ ಒಗ್ಗೂಡಿದೆ" ಎಂದು ಕ್ವೀರ್ ವಿದ್ವಾಂಸರಾದ ಸಿದ್ಧಾರ್ಥ್ ಗಣೇಶ್ ಹೇಳಿದರು. ಜಿಎಸ್ಎಂ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಿಜಾಪುರ, ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಕ್ವೀರ್ ಸಮುದಾಯದ ಸದಸ್ಯರು ಮತ್ತು ಮಿತ್ರರನ್ನು ಹೊಂದಿದೆ.

“ಕ್ವೀರ್‌ ಸಮುದಾಯವು ಜಿಎಸ್‌ಎಮ್‌ ಎನ್ನುವ ಒಂದೇ ಕೊಡೆಯಡಿ ಒಗ್ಗೂಡಿ ಹೋರಾಡುತ್ತಿರುವುದು    ಎಲ್ಲಾ ಬಗೆಯ ಅಲ್ಪಸಂಖ್ಯಾತರಿಗೆ ನ್ಯಾಯ ಮತ್ತು ಸಮಾನತೆಯುಳ್ಳ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ” ಎಂದು ಜಿಎಸ್ಎಂ ಎನ್ನುವ ದೊಡ್ಡ ಸಂಘಟನೆಯ ಸದಸ್ಯರಲ್ಲಿ ಒಬ್ಬರಾದ ಲೈಂಗಿಕ ಅಲ್ಪಸಂಖ್ಯಾತ ಮತ್ತು ಲೈಂಗಿಕ ಕಾರ್ಮಿಕರ ಹಕ್ಕುಗಳ ಒಕ್ಕೂಟದ (ಸಿಎಸ್ಎಂಆರ್) ಭಾಗವಾಗಿರುವ ಸಿದ್ಧಾರ್ಥ್ ಹೇಳುತ್ತಾರೆ.

*****

PHOTO • Sweta Daga
PHOTO • Sweta Daga

ಎಡ: ಮನೋಹರ್ ಅವರನ್ನು ಸುತ್ತುವರೆದಿರುವ ಬಿಜೆಪಿ ಕಾರ್ಯಕರ್ತರು. ಬಲ: ಪೊಲೀಸ್ ಅಧಿಕಾರಿ ಸೈಯದ್ ಮುನಿಯಾಜ್ ಮತ್ತು ಚುನಾವಣಾ ಆಯೋಗದ ಅಧಿಕಾರಿ ಎಂ.ಎಸ್.ಉಮೇಶ್ (ಹಳದಿ ಶರ್ಟ್) ಮನೋಹರ್ (ನೀಲಿ ಶರ್ಟ್, ಬ್ಯಾಗ್‌ ಪ್ಯಾಕ್) ಅವರೊಂದಿಗೆ ಮಾತನಾಡುತ್ತಿದ್ದಾರೆ

ಪಕ್ಷದ ಕಾರ್ಯಕರ್ತರಿಂದ ಸುತ್ತುವರೆಯಲ್ಪಟ್ಟಿದ್ದ ನಮ್ಮ ಕಾರ್ಯಕರ್ತರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಚುನಾವಣಾ ಆಯೋಗದ ಅಧಿಕಾರಿ ಸೈಯದ್ ಮುನಿಯಾಜ್, “ಕಾನೂನು ಉಲ್ಲಂಘಿಸಲಾಗಿದೆ”ಎಂದು ಬಿಜೆಪಿ ಸಲ್ಲಿಸಿದ ದೂರಿನ ಕುರಿತು ನಮಗೆ ತಿಳಿಸಿದರು. ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಭಾಗವಾಗಿರುವ ಮುನಿಯಾಜ್‌ ಅವರ ಬಳಿ ದೂರಿನ ಪ್ರತಿ ತೋರಿಸುವಂತೆ ಕೇಳಿದಾಗ ಅವರು ಕೇವಲ ಮೌಖಿಕ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

“ಸ್ವಯಂ ಸೇವಕರ ವಿರುದ್ಧ ದಾಖಲಾಗಿರುವ ದೂರಾದರೂ ಏನು” ಎಂದು ನಾನು ಕೇಳಿದೆ. “ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಠಾಣೆಗೆ ಹೋಗಬೇಕಿದೆ” ಎಂದು ಕರಪತ್ರಗಳ ವಿತರಣೆಯನ್ನು ಉಲ್ಲೇಖಿಸಿ ಮುನಿಯಾಜ್ ಹೇಳಿದರು. ನಂತರ ಜಿಎಸ್‌ಎಮ್‌ ಕಾರ್ಯಕರ್ತರು ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಠಾಣೆಗೆ ಹೋಗಲು ನಿರ್ಧರಿಸಿದರು.

ನಾವು ಠಾಣೆಗೆ ನಡೆಯತೊಡಗಿದಂತೆ, ಕೇಸರಿ ಶಾಲು ಹೊದ್ದಿದ್ದ ಕಾರ್ಯಕರ್ತರನ್ನು ಹೊತ್ತಿದ್ದ ಬೈಕಯಗಳು ನಮ್ಮ ಮುಂದೆ ಸಾಗಿದವು. ಸಣ್ಣ ಓಣಿಯಲ್ಲಿ ನಮಗೆ ಬಹುತೇಕ ಸೋಕಿಕೊಂಡೇ ಸಾಗಿದ ಅವರು, “ನೀವು ಸಾಯಿರಿ”, “ಪಾಕಿಸ್ಥಾನಕ್ಕೆ ಹೋಗಿ”, “ನೀವು ಭಾರತೀಯರಲ್ಲ”ಎನ್ನುವ ಭಯಾನಕ ಘೋಷಣೆಗಳನ್ನು ಕೂಗುತ್ತಾ ಮುಂದೆ ಸಾಗಿದರು.

ಠಾಣೆಯಲ್ಲಿ ನಮಗಾಗಿ ಇನ್ನೂ 20 ಜನರು ಕಾಯುತ್ತಿದ್ದರು. ಜಿಎಸ್ಎಂ ಸ್ವಯಂಸೇವಕರು ಮತ್ತು ನಾನು ಒಳಗೆ ಹೋಗುತ್ತಿದ್ದಂತೆ ಅವರು ನಮ್ಮನ್ನು ಸುತ್ತುವರೆದರು. ಅಲ್ಲಿದ್ದವರು, (ಎಲ್ಲರೂ ಪಕ್ಷದ ಕಾರ್ಯಕರ್ತರು) ನನ್ನ ಫೋನ್ ಮತ್ತು ಕ್ಯಾಮೆರಾವನ್ನು ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದರು. ಅವರಲ್ಲಿ ಕೆಲವರು ನನ್ನೆಡೆಗೆ ನುಗ್ಗಿ ಬಂದರಾದರೂ ಪೊಲೀಸರು ಅವರನ್ನು ತಡೆದರು. ನಂತರ ಪೊಲೀಸ್ ಇನ್ಸ್ಪೆಕ್ಟರ್ ಸ್ವಯಂಸೇವಕರೊಂದಿಗೆ ಮಾತನಾಡುತ್ತಿದ್ದಾಗ ಅವರು ನನ್ನನ್ನು ಕೋಣೆಯಿಂದ ಹೊರಹಾಕಲು ಬಯಸಿದ್ದರು.

ಪೊಲೀಸ್‌ ಠಾಣೆಯಲ್ಲಿ ಒಂದೂವರೆ ಗಂಟೆಗಳಷ್ಟು ಹೊತ್ತು ಬಂಧನದಲ್ಲಿರಿಸಿಕೊಂಡ ನಂತರ ಗುಂಪನ್ನು ಬಿಡುಗಡೆ ಮಾಡಲಾಯಿತು. ತಮ್ಮ ಕಾರ್ಯಗಳು ಕಾನೂನುಬದ್ಧವಾಗಿದ್ದರೂ, ಜೊತೆಗೆ ಲಿಖಿತ ದೂರೂ ಇಲ್ಲದಿರುವಾಗ ಇದೆಲ್ಲ ಏಕೆ ನಡೆಯಿತು ಎನ್ನುವ ಪ್ರಶ್ನೆಗಳಿಗೆ ಅವಕಾಶವಿಲ್ಲದ ಕಾರಣ ಜಿಎಸ್‌ಎಮ್‌ ಸದಸ್ಯರನ್ನು ಹೊರಗೆ ಕಳುಹಿಸಲಾಯಿತು. ಆ ದಿನವೂ ಅವರನ್ನು ಪ್ರಚಾರ ಮಾಡದಂತೆ ತಡೆಯಲಾಯಿತು.

PHOTO • Sweta Daga
PHOTO • Sweta Daga

ಎಡಕ್ಕೆ: ಈ ಹಿಂದೆ ಜಿಎಸ್ಎಂ ಸ್ವಯಂಸೇವಕರ ಮೇಲೆ ಕೂಗಾಡುತ್ತ ಬೈಕಿನಲ್ಲಿ ಬಂದ ಇಬ್ಬರು ಕಾರ್ಯಕರ್ತರೊಂದಿಗೆ ಮುನಿಯಾಜ್ ಮಾತನಾಡುತ್ತಿರುವುದು. ಬಲ: ಮುನಿಯಾಜ್ ಜಿಎಸ್ಎಂ ಸ್ವಯಂಸೇವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದು

PHOTO • Sweta Daga
PHOTO • Sweta Daga

ಎಡ: ಜಿಎಸ್ಎಂ ಸ್ವಯಂಸೇವಕರಿಗಾಗಿ ಪೊಲೀಸ್ ಠಾಣೆಯಲ್ಲಿ ಕಾಯುತ್ತಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು.  ಬಲ: ಜಿಎಸ್ಎಂ ಸ್ವಯಂಸೇವಕರು ತಮ್ಮ ಕರಪತ್ರಗಳು ಮತ್ತು ಉದ್ದೇಶಿತ ಪ್ರಚಾರ ಕಾನೂನುಬದ್ಧ ಎಂದು ಪೊಲೀಸರಿಗೆ ವಿವರಿಸುತ್ತಿರುವುದು

“ಶತಮಾನಗಳ ಆಡಳಿತಗಳಿಂದ ಅಪರಾಧಿಗಳಂತೆ ಕಾಣಲ್ಪಟ್ಟ ಕ್ವೀರ್‌ ಸಮುದಾಯವು ಪ್ರಸ್ತುತ ಆಡಳಿತದ ನಿರ್ಲಕ್ಷ್ಯ, ಉದಾಸೀನತೆ ಹಾಗೂ ತಮ್ಮ ಮೇಲಿನ ಹಿಂಸಾಚಾರವನ್ನು ತೊಡೆದು ಹಾಕುವ ಪ್ರಯತ್ನವಾಗಿ ಸಂಘಟಿತವಾಗಿದೆ. ಕ್ವೀರ್‌ ಸಮುದಾಯ ರಾಜಕೀಯದಲ್ಲಿ ತನ್ನ ಪ್ರಾತಿನಿಧ್ಯವನ್ನು ಹೆಚ್ಚಿಸುವತ್ತ ಈ ಅಭಿಯಾನದ ಮೂಲಕ ಕೆಲಸ ಮಾಡುತ್ತಿದೆ" ಎಂದು ಬೆಂಗಳೂರಿನಲ್ಲಿ ಕ್ವೀರ್ ಕ್ರಿಯಾಶೀಲತೆಯನ್ನು ಅಧ್ಯಯನ ಮಾಡುತ್ತಿರುವ ವಿದ್ವಾಂಸರಾದ ಸಿದ್ಧಾರ್ಥ್ ಹೇಳುತ್ತಾರೆ.

ನನಗೂ ನಾನು ಮಾಡಬೇಕಿದ್ದ ಸ್ಟೋರಿಯನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ನನಗೆ ಈ ಘಟನೆಯನ್ನು ವರದಿ ಮಾಡುವುದು ಬಹಳ ಮುಖ್ಯವಾಗಿತ್ತು.

ಎಂದು ಬಿಜೆಪಿಯ ಮಣಿಮಾರನ್ ರಾಜು ಅವರ ಬಳಿ ಅವರ ಕಾರ್ಯಕರ್ತರ ವರ್ತನೆಯ ಕುರಿತು ಕೇಳಿದಾಗ ಅವರು “ನಾನು ಏನು ಹೇಳಲಿ” ಎಂದು ಕೇಳಿದರು. “ನನಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಇದೆಲ್ಲ ಮುಗಿದ ಮೇಲೆ ಅವರೊಂದಿಗೆ ಮಾತನಾಡುತ್ತೇನೆ. ಅವರು ಆ ರೀತಿ ವರ್ತಿಸಬಾರದಿತ್ತು(ಕ್ಯಾಮೆರಾವನ್ನು ಕಸಿದುಕೊಳ್ಳಲು ದೈಹಿಕವಾಗಿ ಪ್ರಯತ್ನಿಸುವುದು)” ಎಂದರು.

ಚುನಾವಣೆ ಮುಗಿಯಲು ಒಂದು ತಿಂಗಳಿರುವ ಹೊತ್ತಿನಲ್ಲಿ ಚುನಾವಣಾ ಆಯೋಗಕ್ಕೆ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಈಗಾಗಲೇ ದೇಶಾದ್ಯಂತ ದೂರುಗಳು ಬರುತ್ತಿವೆ. ಅಲ್ಲದೆ ಮತದಾನ ಪ್ರಕ್ರಿಯೆಯ ಸಮಯದಲ್ಲೂ ಅನೇಕ ಇತರ ನಾಗರಿಕರು ಕಿರುಕುಳ ಹಾಗೂ ಬೆದರಿಕೆಯನ್ನು ಎದುರಿಸಿದ್ದಾರೆ.

ಈ ಪ್ರಕರಣದಲ್ಲಿ ನಾನು ಹಾಗೂ ಸ್ವಯಂಸೇವಕರು ಯಾವುದೇ ದೈಹಿಕ ಹಾನಿಗೊಳಗಾಗದೆ ಹೊರಬರಲು ಸಾಧ್ಯವಾಯಿತು. ಆದರೆ ಪ್ರಶ್ನೆಯೊಂದು ಉಳಿದೇ ಹೋಗುತ್ತದೆ: ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಹೀಗೆ ಇನ್ನೂ ಎಷ್ಟು ಜನರನ್ನು ಸುಮ್ಮನಾಗಿಸಲಾಗುತ್ತದೆ?

ಅನುವಾದ: ಶಂಕರ. ಎನ್. ಕೆಂಚನೂರು

Sweta Daga

ଶ୍ୱେତା ଡାଗା ବାଙ୍ଗାଲୋରର ଜଣେ ଲେଖିକା ଓ ଫଟୋଗ୍ରାଫର ଏବଂ ୨୦୧୫ର PARI ଫେଲୋ । ସେ ବିଭିନ୍ନ ମଲ୍‌ଟି ମିଡିଆ ପ୍ରକଳ୍ପରେ କାର୍ଯ୍ୟରତ ଏବଂ ଜଳବାୟୁ ପରିବର୍ତ୍ତନ, ଲିଙ୍ଗଗତ ସମସ୍ୟା ଏବଂ ସାମାଜିକ ଅସମାନତା ବିଷୟରେ ଲେଖନ୍ତି ।

ଏହାଙ୍କ ଲିଖିତ ଅନ୍ୟ ବିଷୟଗୁଡିକ ସ୍ୱେତା ଦାଗା
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru