ಅವರ ಜನಪ್ರಿಯ ಹೆಸರು 'ವಿರಾಟ್ ಕೊಹ್ಲಿ'. ಈ ಭಾರತದ ಕ್ರಿಕೆಟ್ ಐಕಾನ್ ಡುಂಗ್ರಾ ಛೋಟಾದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.
ಅದು ಚಳಿಗಾಲದ ಬೆಳಿಗ್ಗೆ 10 ಗಂಟೆಯ ಹೊತ್ತು. ಅಲ್ಲಿ ಸುಮಾರು ಹನ್ನೆರಡು ಅಥವಾ ಅದಕ್ಕಿಂತಲೂ ಹೆಚ್ಚು ಪುಟ್ಟ ಮಕ್ಕಳು ಆಟದಲ್ಲಿ ಮುಳುಗಿದ್ದರು. ಸುತ್ತಲೂ ಹಚ್ಚ ಹಸಿರು ಜೋಳದ ಹೊಲದಿಂದ ಸುತ್ತುವರೆದ ಮೈದಾನವು ನಿಮಗೆ ಕ್ರಿಕೆಟ್ ಮೈದಾನದಂತೆ ಕಾಣದಿರಬಹುದು. ಆದರೆ ಬಾಣಸ್ವಾಡ ಜಿಲ್ಲೆಯ ಈ ಹಳ್ಳಿಯ ಕ್ರಿಕೆಟ್ ಉತ್ಸಾಹಿಗಳಿಗೆ ಅದರ ಪ್ರತಿ ಇಂಚೂ ಚಿರಪರಿಚಿತ.
ಯಾವುದೇ ಕ್ರಿಕೆಟ್ ಅಭಿಮಾನಿಯೊಂದಿಗೆ ಮಾತು ಆರಂಭಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅವರ ಬಳಿ ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಕೇಳುವುದು ಎನ್ನುವುದು ಎಲ್ಲರಿಗೂ ಗೊತ್ತು. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಹೆಸರುಗಳು ಅಲ್ಲಿ ಕೇಳಿಬಂದವು.
ಕೊನೆಯದಾಗಿ 18 ವರ್ಷದ ಶಿವಂ ಲಬಾನಾ, “ನನಗೆ ಸ್ಮೃತಿ ಮಂದಾನ ಎಂದರೆ ಇಷ್ಟ” ಎಂದು ಹೇಳಿದರು. ಎಡಗೈ ಬ್ಯಾಟರ್ ಮತ್ತು ಭಾರತ ಮಹಿಳಾ ಟಿ 20 ತಂಡದ ಮಾಜಿ ನಾಯಕರಾದ ಸ್ಮೃತಿ ದೇಶದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು.
ಆದರೆ ನಮಗೆ ನಂತರ ತಿಳಿದುಬಂದ ವಿಷಯವೆಂದರೆ ಈ ಮೈದಾನದಲ್ಲಿ ಫೇವರೀಟ್ ಎಡಗೈ ಬ್ಯಾಟರ್ ಆಗಿರುವವರು ಅವರು ಮಾತ್ರವಲ್ಲ ಎನ್ನುವುದು.
ಅಲ್ಲಿ ಆಡುತ್ತಿದ್ದ ಮಹತ್ವಾಕಾಂಕ್ಷೆಯ ಬೌಲರುಗಳು ಮತ್ತು ಬ್ಯಾಟರ್‌ಗಳ ನಡುವೆ ಇದ್ದ ಏಕೈಕ ಬಾಲಕಿ ಎದ್ದು ಕಾಣುತ್ತಿದ್ದಳು. ಕೇವಲ ಒಂಬತ್ತು ವರ್ಷದ ಅವಳ ಹೆಸರು ಹಿತಾಕ್ಷಿ ರಾಹುಲ್ ಹರ್ಕಿಶಿ. ಬಿಳಿ ಬೂಟು ಮತ್ತು ಬ್ಯಾಟಿಂಗ್ ಪ್ಯಾಡ್ ಧರಿಸಿದ್ದ ಅವಳು ತೊಡೆ ಮತ್ತು ಮೊಣಕೈಗಳಿಗೂ ಗಾರ್ಡ್‌ಗಳನ್ನು ಕಟ್ಟಿಕೊಂಡಿದ್ದಳು.










