5ನೇ ತರಗತಿಯ ತನಕ ಹುಡುಗನಾಗಿಯೇ ಬೆಳೆದ ರಮ್ಯಾ, ನಂತರ ಹುಡುಗಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು.

“[ಮಾಧ್ಯಮಿಕ] ಶಾಲೆಯಲ್ಲಿದ್ದ ಸಂದರ್ಭದಲ್ಲಿ ನಾನು ಶಾರ್ಟ್ಸ್‌ ತೊಡುತ್ತಿದ್ದ ಕಾರಣ ತೊಡೆಗಳು ಕಾಣುತ್ತಿದ್ದವು. ಇದರಿಂದಾಗಿ ಹುಡುಗರ ನಡುವೆ ನನಗೆ ಮುಜುಗರವೆನ್ನಿಸುತ್ತಿತ್ತು” ಎಂದು ಹೇಳುವ ಅವರು, ಈಗ ತನ್ನ ಮೂವತ್ತನೇ ವಯಸ್ಸಿನಲ್ಲಿ ಕೆಂಪು ಸೀರೆ ಮತ್ತು ಉದ್ದನೆಯ ಕಪ್ಪು ಕೂದಲಿನೊಂದಿಗೆ ತನ್ನ ಹೆಣ್ತನವನ್ನು ಆನಂದಿಸುತ್ತಿದ್ದಾರೆ.

ರಮ್ಯಾ ಚೆಂಗಲ್ಪಟ್ಟು ಜಿಲ್ಲೆಯ ತಿರುಪೊರೂರ್ ಪಟ್ಟಣದಲ್ಲಿ ಸಣ್ಣ ಅಮ್ಮನ್ (ದೇವತೆ) ದೇವಾಲಯವೊಂದನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ತಾಯಿ ವೆಂಗಮ್ಮ ಅವರ ಪಕ್ಕದಲ್ಲಿ ನೆಲದ ಮೇಲೆ ಕುಳಿತಿದ್ದರು. "ಬೆಳೆಯುತ್ತಿರುವಾಗ ಅವಳು [ರಮ್ಯಾ ಅವರತ್ತ ತೋರಿಸುತ್ತಾ] ಚೂಡಿದಾರ್, ದಾವಣಿ, ಮತ್ತು ಕಮ್ಮಲ್ [ಕಿವಿಯೋಲೆ] ಧರಿಸುವದನ್ನು ಇಷ್ಟಪಡುತ್ತಿದ್ದಳು. ಹುಡುಗನಂತೆ ವರ್ತಿಸು ಎಂದು ನಾವು ಹೇಳಲು ಪ್ರಯತ್ನಿಸಿದೆವು. ಆದರೆ ಅವಳ ಆಯ್ಕೆ ಹೀಗಿರುವುದಾಗಿತ್ತು" ಎಂದು ರಮ್ಯಾ ಅವರ 56 ವರ್ಷದ ತಾಯಿ ಹೇಳುತ್ತಾರೆ.

ಆ ಹೊತ್ತಿಗೆ ಕನ್ನಿಯಮ್ಮ ದೇವಸ್ಥಾನ ಮುಚ್ಚಿದ್ದ ಕಾರಣ ಅಲ್ಲೊಂದು ಮೌನವಿತ್ತು. ಇದು ನಮ್ಮ ಮಾತುಕತೆಗೆ ಅಗತ್ಯವಿದ್ದ ಮುಕ್ತತೆಯನ್ನು ಒದಗಿಸಿಕೊಟ್ಟಿತ್ತು. ಈ ತಾಯಿ ಮಗಳ ಜೋಡಿ ಈ ಕನ್ನಿಯಮ್ಮ ದೇವಸ್ಥಾನದ ಪೂಜೆಗಾಗಿ ಒಟ್ಟಿಗೆ ಬರುತ್ತಾರೆ.

ರಮ್ಯಾ ತನ್ನ ಪೋಷಕರ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರು ಇದೇ ಇರುಳರ್‌ ವಾತಾವರಣದಲ್ಲಿ ಬೆಳೆದರು. ತಮಿಳುನಾಡಿನ ಆರು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಡಿಯಲ್ಲಿ (ಪಿವಿಟಿಜಿ) ಇರುಳರನ್ನು ಸಹ ಪಟ್ಟಿ ಮಾಡಲಾಗಿದೆ. ಅವರ ಪೋಷಕರು, ತಮ್ಮ ಸಮುದಾಯದ ಇತರರಂತೆ, ಹೊಲಗಳಲ್ಲಿ, ನಿರ್ಮಾಣ ಸ್ಥಳಗಳಲ್ಲಿ ಮತ್ತು ಎಂಜಿಎನ್ಆರ್‌ಇಜಿಎ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಸೈಟುಗಳಲ್ಲಿ ಕೆಲಸ ಮಾಡುವ ದಿನಕ್ಕೆ 250ರಿಂದ 300 ರೂಪಾಯಿಗಳವರೆಗೆ ಕೆಲಸವಿದ್ದಾಗ ದುಡಿಯುತ್ತಿದ್ದರು.

"ಆ ದಿನಗಳಲ್ಲಿ ಜನರಿಗೆ ತಿರುನಂಗೈಯರ (ಟ್ರಾನ್ಸ್ ಮಹಿಳೆಯರಿಗೆ ಬಳಸಲಾಗುವ ತಮಿಳು ಹೆಸರು) ಬಗ್ಗೆ ತಿಳಿದಿರಲಿಲ್ಲ. ಮನೆಯಿಂದ ಹೊರಬಿದ್ದರೆ ಪಟ್ಟಣದ ಜನರು ನನ್ನ ಬೆನ್ನ ಹಿಂದೆ ಮಾತನಾಡುತ್ತಿದ್ದರು” ಎಂದು ರಮ್ಯಾ ಹೇಳುತ್ತಾರೆ, "ಅವರು 'ಅವನು ಹುಡುಗನಂತೆ ಬಟ್ಟೆ ಹಾಕಿದ್ದಾನೆ ಆದರೆ ಹುಡುಗಿಯಂತೆ ಆಡುತ್ತಾನೆ, ಅದು ಗಂಡೋ ಅಥವಾ ಹೆಣ್ಣೋ?' ಎಂದು ಕೇಳುತ್ತಿದ್ದರು ಮತ್ತು ಇದು ನನಗೆ ನೋವುಂಟು ಮಾಡುತ್ತಿತ್ತು.”

PHOTO • Smitha Tumuluru
PHOTO • Smitha Tumuluru

ಎಡ: ತಿರುಪೊರೂರ್ ಪಟ್ಟಣದಲ್ಲಿ ತಾನು ನಿರ್ವಹಿಸುವ ದೇವಾಲಯದಲ್ಲಿ ರಮ್ಯಾ. ಬಲ: ವಿದ್ಯುತ್ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಲು ಹೋಗುವಾಗ ತನ್ನ ತಾಯಿ (ಕಪ್ಪು ಸೀರೆ) ಮತ್ತು ನೆರೆಮನೆಯವರೊಂದಿಗೆ

PHOTO • Smitha Tumuluru
PHOTO • Smitha Tumuluru

ಎಡ: ರಮ್ಯಾ ತನ್ನ ಹಿರಿಯ ಸೋದರಸಂಬಂಧಿ ದೀಪಾ ಅವರೊಂದಿಗೆ. ಬಲ: ಹಣ್ಣಿನ ತೋಟದಲ್ಲಿ ಮನರೇಗಾ ಕೆಲಸದ ಭಾಗವಾಗಿ ರಮ್ಯಾ ಇತರ ಮಹಿಳೆಯರೊಂದಿಗೆ ಕೆಲಸ ಮಾಡುತ್ತಾರೆ

9ನೇ ತರಗತಿಗೆ ಶಾಲೆಯನ್ನು ಬಿಟ್ಟ ಅವರು ತನ್ನ ಹೆತ್ತವರಂತೆ ತಾನೂ ಕೂಲಿ ಕೆಲಸ ಮಾಡಲು ಆರಂಭಿಸಿದರು. ರಮ್ಯಾ ತನ್ನ ಹೆಣ್ಣಿನ ವರ್ತನೆಯನ್ನು ತೋರುತ್ತಲೇ ಇದ್ದರು. ಅವರ ತಾಯಿ ಆಗಾಗ “ಹುಡುಗನಂತೆ ವರ್ತಿಸು” ಎಂದು ಬೇಡಿಕೊಳ್ಳುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನು ತಮ್ಮ ಸಮುದಾಯದ ಉಳಿದ ಜನರು ಏನೆನ್ನಬಹುದು ಎನ್ನುವ ಚಿಂತೆ ಕಾಡುತ್ತಿತ್ತು.

ರಮ್ಯಾಗೆ ಇಪ್ಪತ್ತು ವರ್ಷ ತುಂಬುವ ಹೊತ್ತಿಗೆ ಮನೆಯಿಂದ ಹೊರಗಿದ್ದು ನಿನಗೆ ಬೇಕಿರುವಂತೆ ಬದುಕಿಕೋ ಎಂದು ಸಲಹೆ ನೀಡಲಾಯಿತು. ಅಂದಿನಿಂದ ಆಗ ಆಕೆಯ ತಾಯಿ ಮತ್ತು ದಿವಂಗತ ತಂದೆ ರಾಮಚಂದ್ರನ್ ಅವರ ಮಾತನ್ನು ಕೇಳಲು ಪ್ರಾರಂಭಿಸಿದರು. “ನಮಗೆ ನಾಲ್ಕೂ ಜನ ಗಂಡು ಮಕ್ಕಳೇ ಇದ್ದರು. ಕೊನೆಗೆ ನಾವು ಬಯಸಿದ್ದ ಹೆಣ್ಣು ಮಗು ಇದೇ ಆಗಲಿ ಬಿಡು ಎಂದುಕೊಂಡೆವು” ಎಂದು ವೆಂಗಮ್ಮ ಹೇಳುತ್ತಾರೆ, “ಗಂಡಾಗಲಿ, ಹೆಣ್ಣಾಗಲೀ ಅದು ನಮ್ಮ ಮಗು ನಾವು ಅವನನ್ನು ರಸ್ತೆಯ ಮೇಲೆ ಬಿಡಲು ಸಾಧ್ಯ?”

ಹೀಗೆ ರಮ್ಯಾರಿಗೆ ತಮ್ಮ ಮನೆಯೊಳಗೆ ಮಹಿಳೆಯರ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಲಾಯಿತು. ಆದರೂ ವೆಂಗಮ್ಮ ಟ್ರಾನ್ಸ್ ಮಹಿಳೆಯರ ಕುರಿತಾಗಿ ಇದ್ದ ಸಾಮಾನ್ಯ ಸ್ಟೀರಿಯೊಟೈಪ್ ಯೋಚನೆಗಳಿಗೆ ಹೆದರಿದ್ದರು. ಇದೇ ಭಯದಲ್ಲಿ ಅವರು ತಮ್ಮ ಮಗಳಿಗೆ "ನೀ ಕಡೈ ಎರಕೂಡದು" ಎಂದು ಹೇಳಿದ್ದರು, ಇದರರ್ಥ ರಮ್ಯಾ ತನ್ನ ಹೊಟ್ಟೆಪಾಡಿಗಾಗಿ ಭಿಕ್ಷೆ ಕೇಳಿಕೊಂಡು ಅಂಗಡಿಯಿಂದ ಅಂಗಡಿಗೆ ಅಲೆಯಬಾರದು.

“ನಾನು ಒಳಗಿನಿಂದ ಹೆಣ್ತನವನ್ನು ಅನುಭವಿಸುತ್ತಿದ್ದರೂ, ಹೊರ ನೋಟಕ್ಕೆ ಗಂಡಿನಂತೆಯೇ ಕಾಣುತ್ತಿದ್ದೆ. ಗಡ್ಡ, ಮೀಸೆಗಳೊಂದಿಗೆ ಗಂಡಸಿನಂತೆ ಕಾಣುತ್ತಿದ್ದೆ” ಎನ್ನುತ್ತಾರೆ ರಮ್ಯಾ. 2015ರಲ್ಲಿ ರಮ್ಯಾ ತನ್ನೆಲ್ಲಾ ಉಳಿತಾಯಗಳನ್ನು ಒಟ್ಟುಗೂಡಿಸಿ ಒಂದು ಲಕ್ಷ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿ ಜೆಂಡ್‌ ಅಫರ್ಮೇಷನ್‌ ಆಪರೇಷನ್‌ (gender affirmation surgery) ಮತ್ತು ಲೇಸರ್‌ ತಂತ್ರಜ್ಞಾನದಿಂದ ಕೂದಲು ತೆಗೆಸುವ ಚಿಕಿತ್ಸೆಗೆ ಒಳಗಾದರು.

ತಿರುಪೊರೂರಿನಿಂದ 120 ಕಿಲೋಮೀಟರ್ ದೂರದಲ್ಲಿರುವ ಪುದುಚೇರಿಯ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಲಿಂಗ ಪರಿವರ್ತನೆಗೆ 50,000 ರೂ. ಖರ್ಚಾಯಿತು. ಇಲ್ಲಿ ಚಿಕಿತ್ಸೆ ಉಚಿತವಿರಲಿಲ್ಲ ಮತ್ತು ಆಸ್ಪತ್ರೆ ಹತ್ತಿರದಲ್ಲೂ ಇದ್ದಿರಲಿಲ್ಲ. ಆದರೂ ಅವರು ಈ ಆಸ್ಪತ್ರೆಗೆ ಆದ್ಯತೆ ನೀಡಲು ಒಂದು ಕಾರಣವಿತ್ತು. ಅವರ ಸ್ನೇಹಿತರೊಬ್ಬರು ಇಲ್ಲಿನ ಜೆಂಡರ್‌ ಕೇರ್‌ ವಿಭಾಗಕ್ಕೆ ರಮ್ಯಾರನ್ನು ಪರಿಚಯಿಸಿದ್ದರು. ರಾಜ್ಯದಾದ್ಯಂತ ಆಯ್ದ ತಮಿಳುನಾಡು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅವರ ಊರಿನಿಂದ ಸುಮಾರು 50 ಕಿಲೋಮೀಟರ್‌ ದೂರದದಲ್ಲಿರುವ ಚೆನ್ನೈ ನಗರದ ಕ್ಲಿನಿಕ್‌ ಒಂದರಲ್ಲಿ ಮುಖದ ಮೇಲಿನ ಕೂದಲುಗಳನ್ನು ತೆಗೆಸಲು ಅವರು ಮತ್ತೆ 30,000 ರೂಪಾಯಿಗಳನ್ನು ಖರ್ಚು ಮಾಡಿದರು.

ಇರುಳ ಸಮುದಾಯದವರೇ ಆದ ವಲರ್‌ ಮತಿ ಎನ್ನುವ ಇನ್ನೋರ್ವ ತಿರುನಂಗೈ ಜೊತೆ ಅವರು ಆಸ್ಪತ್ರೆಗೆ ಹೋದರು. ಆಸ್ಪತ್ರೆಯ ಹಾಸಿಗೆ ಮೇಲೆ ಕೂರುತ್ತಿದ್ದ ಹಾಗೆ ಅವರು ತಾನು ಇಡುತ್ತಿರುವ ಹೆಜ್ಜೆಯ ಭಾರವನ್ನು ಅರಿತುಕೊಂಡರು. ಅವರ ಜೊತೆಗಾತಿಯರ ಅನುಭವದ ಪ್ರಕಾರ ಈ ಸರ್ಜರಿ ಅವರಿಗೆ ಅಷ್ಟೇನೂ ಉತ್ತಮ ಫಲಿತಾಂಶವನ್ನು ನೀಡಿರಲಿಲ್ಲ. ಅವರಿಗೆ  “ಒಂದೋ ಆ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಲಾಗಿರಲಿಲ್ಲ. ಅಥವಾ ಮೂತ್ರ ವಿಸರ್ಜನೆಗೆ ತೊಂದರೆ ಕಾಣುತ್ತಿತ್ತು.”

PHOTO • Smitha Tumuluru
PHOTO • Smitha Tumuluru

ಎಡ : ರಮ್ಯಾ ತನ್ನ ತಾಯಿ ವೆಂಗಮ್ಮ ಅವರೊಂದಿಗೆ . ಬಲ : ವಲ ರ್‌ ಮ ತಿ ತನ್ನ ಮನೆಯಲ್ಲಿ

ಅವರ ಸರ್ಜರಿ ಯಶಸ್ವಿಯಾಯಿತು. “ಇನ್ನೊಂದು ಜನ್ಮ ಎತ್ತಿದಂತೆ ಭಾಸವಾಗಿತ್ತು” "ನಾನು ಈ ಶಸ್ತ್ರಚಿಕಿತ್ಸೆ ಮಾಡಿದ ನಂತರವೇ ನನ್ನ ಪೋಷಕರು ನನ್ನನ್ನು ರಮ್ಯಾ ಎಂದು ಕರೆಯಲು ಪ್ರಾರಂಭಿಸಿದರು. ಅಲ್ಲಿಯವರೆಗೆ ಅವರು ನನ್ನನ್ನು ನನ್ನ ಪಂಥಿ [ಮೃತ] ಎನ್ನುವ ಹೆಸರಿನಿಂದ ಕರೆಯುತ್ತಿದ್ದರು."

ಈ ಸರ್ಜರಿಯಿಂದಾಗಿ ತನ್ನನ್ನು ಸುತ್ತಮುತ್ತಲಿನ ಮಹಿಳೆಯರು ನೋಡುವ ರೀತಿ ಬದಲಾಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ. ಈಗ ಆ ಮಹಿಳೆಯರು ಅವರನ್ನು ತಮ್ಮಲ್ಲಿ ಒಬ್ಬಳು ಎಂದು ಭಾವಿಸುತ್ತಾರೆ. “ನಾವು ಹೊರಗೆ ಹೋದರೆ ಅವರು ನನ್ನೊಂದಿಗೆ ಶೌಚಾಲಯಕ್ಕೆ ಹೋಗುತ್ತಾರೆ" ಎಂದು ಅವರು ನಗುತ್ತಾ ಹೇಳುತ್ತಾರೆ. ಪ್ರಸ್ತುತ ರಮ್ಯಾ14 ಸದಸ್ಯರನ್ನು ಹೊಂದಿರುವ ಕಟ್ಟು ಮಲ್ಲಿ ಇರುಳರ್ ಪೆಣ್ಗಳ್ ಕುಳು ಎಂಬ ಮಹಿಳಾ ಸ್ವಸಹಾಯ ಗುಂಪಿನ ಮುಖ್ಯಸ್ಥರು.

ಪರವಾನಗಿ ಸಹಿತ ವೃತ್ತಿಪರ ಹಾವು ಹಿಡಿಯುವ  ಕೆಲಸವನ್ನು ಮಾಡುವ ಅವರು ಮತ್ತು ಅವರ ಸಹೋದರ ಪ್ರತಿ-ವಿಷ ತಯಾರಿಕೆಗಾಗಿ ಇರುಳೂರು ಹಾವು ಹಿಡಿಯುವವರ ಕೈಗಾರಿಕಾ ಸಹಕಾರ ಸಂಘಕ್ಕೆ ಹಾವುಗಳನ್ನು ಪೂರೈಸುತ್ತಾರೆ, ಈ ಮೂಲಕ ಅವರು ವರ್ಷದ ಆರು ತಿಂಗಳ (ಮಳೆಯಿಲ್ಲದ ತಿಂಗಳುಗಳು) ಕಾಲ ತಿಂಗಳಿಗೆ ಸುಮಾರು 3,000 ರೂಪಾಯಿಗಳನ್ನು ಗಳಿಸುತ್ತಾರೆ. ಜೊತೆಗೆ ಅವರು ದಿನಗೂಲಿ ಕೆಲಸವನ್ನೂ ಮುಂದುವರಿಸಿದ್ದಾರೆ.

ಕಳೆದ ವರ್ಷ, ಅವರ 56 ಕುಟುಂಬಗಳ ಇರುಳರ್ ಸಮುದಾಯವು ತಿರುಪೊರೂರ್ ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿರುವ ಹೊಸ ಸರ್ಕಾರಿ ವಸತಿ ಲೇಔಟ್ ಸೆಂಬಕ್ಕಂ ಸುಣ್ಣಾಂಬು ಕಾಳವೈಗೆ ಸ್ಥಳಾಂತರಗೊಂಡಿತು. ಈ ಸಂದರ್ಭದಲ್ಲಿ ರಮ್ಯಾ ಅವರು ತನ್ನ ಜನರಿಗೆ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಿ ಹೊಸ ವಿದ್ಯುತ್ ಸಂಪರ್ಕಗಳನ್ನು ಪಡೆಯಲು ಮತ್ತು ಗುರುತಿನ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಲು ಸಹಾಯ ಮಾಡಿದರು.

ಅವರ ನಾಗರಿಕ ಮತ್ತು ರಾಜಕೀಯ ಕ್ಷೇತ್ರದ ಪಾತ್ರ ಹಿಗ್ಗುತ್ತಿದೆ. 2022 ರಲ್ಲಿ ನಡೆದ ಕೊನೆಯ ಪಂಚಾಯತ್ ಚುನಾವಣೆಯ ಸಮಯದಲ್ಲಿ, ಅವರು ತಮ್ಮ ಸಮುದಾಯಕ್ಕೆ ಮತದಾನದ ಹಕ್ಕುಗಳನ್ನು ಕೊಡಿಸುವ ಸಲುವಾಗಿ ಹೋರಾಟಗಳನ್ನು ನಡೆಸಿದರು. ಆದರೆ ಇತರ ಸಮುದಾಯಗಳ ಜನರು ಇರುಳ ಸಮುದಾಯಕ್ಕೆ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿದರು. ಈಗ ನಾನು ನಮ್ಮ ಊರಿಗೆ ವಿಶೇಷ ವಾರ್ಡ್ ಸ್ಥಾನಮಾನವನ್ನು ಪಡೆಯಲು ಯೋಚಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ ಮತ್ತು ತಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಒಂದು ದಿನ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಭರವಸೆಯನ್ನೂ ಅವರು ಹೊಂದಿದ್ದಾರೆ. “ಪ್ರತಿಯೊಬ್ಬರೂ ಅವರು ಬಯಸಿದಂತೆ ಬದುಕಬೇಕು. ನನಗೆ ಬದುಕುತ್ತಿರುವಂತೆ ನಟಿಸಲು ಇಷ್ಟವಿಲ್ಲ.”

PHOTO • Smitha Tumuluru
PHOTO • Smitha Tumuluru

ಬಲ: ವಿದ್ಯುತ್‌ ಸಂಪರ್ಕವನ್ನು ಫೋನ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲು ಅಗತ್ಯವಿರುವ ವಿದ್ಯುತ್ ಮೀಟರ್ ರೀಡಿಂಗ್ ಮತ್ತು ಇತರ ವಿವರಗಳನ್ನು ರಮ್ಯಾ ಬರೆಯುತ್ತಿದ್ದಾರೆ. ಬಲ: ತಮ್ಮ ಹೊಸ ಮನೆಗಳ ವಿದ್ಯುತ್ ಸಂಪರ್ಕಗಳನ್ನು ಆಯಾ ಫೋನ್ ಸಂಖ್ಯೆಗಳಿಗೆ ಲಿಂಕ್ ಮಾಡಲಾಗಿದೆ ಎನ್ನುವುದನ್ನು ವಿದ್ಯುತ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಖಚಿತಪಡಿಸಿಕೊಳ್ಳುತ್ತಿರುವುದು

PHOTO • Smitha Tumuluru
PHOTO • Smitha Tumuluru

ಎಡ: ರಮ್ಯಾ ತನ್ನ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ. (ಎಡಭಾಗದಲ್ಲಿ ಮಲರ್ ಮತ್ತು ಬಲಭಾಗದಲ್ಲಿ ಲಕ್ಷ್ಮಿ) ಬಲ: ಸೆಂಬಕ್ಕಂ ಸುಣ್ಣಾಂಬು ಕಾಳವೈಯಲ್ಲಿರುವ ತನ್ನ ಹೊಸ ಮನೆಯ ಮುಂದೆ

ತಮಿಳುನಾಡಿನಲ್ಲಿ ಸುಮಾರು ಎರಡು ಲಕ್ಷ ಜನರು ಇರುಳ ಸಮುದಾಯದ ಭಾಗವಾಗಿದ್ದಾರೆ (ಜನಗಣತಿ 2011). "ಗಂಡು, ಹೆಣ್ಣು ಅಥವಾ ತಿರುನಂಗೈ ಎಂದು ಬೇದ ಮಾಡದೆ ನಾವು ನಮ್ಮ ಮಗುವನ್ನು ಸ್ವೀಕರಿಸುತ್ತೇವೆ ಮತ್ತು ಅದನ್ನು ಸಾಕುತ್ತೇವೆ. ಆದರೆ ಇದು ಕುಟುಂಬವನ್ನು ಅವಲಂಬಿಸಿ ಬದಲಾಗಬಹುದು" ಎಂದು ಅವರು ಹೇಳುತ್ತಾರೆ. ಅವರ ಸ್ನೇಹಿತರಾದ ಸತ್ಯವಾಣಿ ಮತ್ತು ಸುರೇಶ್ ಇಬ್ಬರೂ ಇರುಳ ಸಮುದಾಯದವರಾಗಿದ್ದು, ಮದುವೆಯಾಗಿ 10 ವರ್ಷಗಳಾಗಿವೆ. 2013ರಿಂದ, ಅವರು ತಿರುಪೊರೂರ್ ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಕುನ್ನಪಟ್ಟುವಿನ ಇರುಳರ್ ಕೇರಿಯಲ್ಲಿರುವ ಸಣ್ಣ ಟಾರ್ಪಾಲಿನ್ ಹೊದೆಸಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ತನ್ನ ಈ ಪರಿವರ್ತನೆಯ ಸಮಯವನ್ನು ಸಹನೀಯವಾಗಿಸಿದ್ದು ವಲರ್‌ ಮತಿಯವರಂತಹ ಸ್ನೇಹಿತರು ಮತ್ತು ಸಮುದಾಯದ ಜನರು ಎನ್ನುತ್ತಾರೆ ರಮ್ಯಾ. ಮನೆಯ ಹೊರಗೆ ಕುಳಿತಿದ್ದ ಅವರಿಬ್ಬರೂ ತಮಿಳು ಆಡಿ ತಿಂಗಳಿನಲ್ಲಿ ಆಚರಿಸಲಾಗುವ ಆಡಿ ತಿರುವಿಳಾ ಮಾಮಲ್ಲಪುರಂ (ಮಹಾಬಲಿಪುರ) ಕರಾವಳಿ ತೀರದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಮಾಸಿ ಮಾಗಮ್‌ ರೀತಿಯ ಹಬ್ಬಗಳಲ್ಲಿ ತಮ್ಮ ನಡುವೆ ಮೂಡಿದ ಆಪ್ತತೆಯ ಭಾವವನ್ನು ನೆನಪಿಸಿಕೊಂಡರು.

“ಹೆಣ್ಣು ಮಕ್ಕಳಂತೆ ಉಡುಪು ಧರಿಸುವ ಸಲುವಾಗಿಯೇ” ತಾವಿಬ್ಬರು ಈ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು ಎಂದು ವಲರ್‌ ಮತಿ ಹೇಳುತ್ತಾರೆ. ಆಡಿ ಹಬ್ಬಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ಅವರು ಪ್ರತಿ ದಿನವೂ ಹೀಗೆ ಬಟ್ಟೆ ಧರಿಸಲು ಅವಕಾಶ ಇದ್ದಿದ್ದರೆ ಎಷ್ಟು ಚಂದವಿರುತ್ತಿತ್ತು ಎಂದು ಯೋಚಿಸುತ್ತಿದ್ದರು.

"ನಮ್ಮ ಪ್ಯಾಂಟ್ ಶರ್ಟ್ ದಿನಗಳಿಂದಲೂ ನಾವು ಸ್ನೇಹಿತರು" ಎಂದು ರಮ್ಯಾ ಹೇಳುತ್ತಾರೆ. ವಲರ್‌ ಮತಿ ತನ್ನ ತಾಯಿಯನ್ನು ಕಳೆದುಕೊಂಡು ಕಾಂಚೀಪುರಂ ಪಟ್ಟಣದಿಂದ ತಿರುಪೊರೂರ್ ಪಟ್ಟಣದ ಬಳಿಯ ಇರುಳರ್ ಕೇರಿಯಾದ ಎಡಯಂಕುಪ್ಪಂಗೆ ತನ್ನ ತಂದೆ ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ತೆರಳಿದಾಗ ಅವರು 6ನೇ ತರಗತಿಯಲ್ಲಿ ಜೊತೆಯಲ್ಲಿ ಓದುತ್ತಿದ್ದರು. ಅಲ್ಲಿಯೇ ಅವರಿಬ್ಬರೂ ಜೊತೆಯಾದರು. ಅಂದಿನಿಂದ ಇಬ್ಬರೂ ತಮ್ಮ ಭಾವನೆಗಳನ್ನು ಮತ್ತು ಚಿಂತೆಗಳನ್ನು ಪರಸ್ಪರ ಹಂಚಿಕೊಳ್ಳುದ್ದರು. ಸಣ್ಣ ವಯಸ್ಸಿನಿಂದಲೂ ತಾವು ಇಂತಹದ್ದೇ ಭಾವನೆಗಳನ್ನು ಹೊಂದಿದ್ದೆವು ಎನ್ನುವುದನ್ನೂ ತಿಳಿದುಕೊಂಡರು.

PHOTO • Smitha Tumuluru
PHOTO • Smitha Tumuluru

ಎಡ: ರಮ್ಯಾ ಮತ್ತು ವರಲ್‌ ಮತಿ. ಬಲ: ತನ್ನ ಹದಿಹರೆಯದ ದಿನಗಳಲ್ಲಿ ತಾನು ʼದಾವಣಿʼ ತೊಟ್ಟಿದ್ದ ಫೋಟೊ ಒಂದನ್ನು ತೋರಿಸುತ್ತಿರುವ ವಲರ್‌ ಮತಿ. ಸಮುದಾಯದ ಜಾತ್ರೆಯಲ್ಲಿ ಮಾತ್ರವೇ ಅವರಿಗೆ ಈ ರೀತಿಯಾಗಿ ಬಟ್ಟೆ ತೊಡಲು ಅವಕಾಶವಿತ್ತು

PHOTO • Smitha Tumuluru
PHOTO • Smitha Tumuluru

ಎಡ : ಸತ್ಯವಾಣಿ ಮತ್ತು ವಲ ರ್‌ ಮ ತಿ . ಬಲ : ತಿರು ಪೊ ರೂರ್ ಪಟ್ಟಣದ ಬಳಿಯ ಇರುಳ ಕುನ್ನಪಟ್ಟು ಎಂಬ ಊರಿನಲ್ಲಿರುವ ತಮ್ಮ ಗುಡಿಸಲಿನಲ್ಲಿ ಸತ್ಯವಾಣಿ ಮತ್ತು ಸುರೇಶ್ . ಇರುಳ ಸಂಸ್ಕೃತಿಯಲ್ಲಿ ಮದುವೆಯಾಗುವ ಉದ್ದೇಶ ತೋರಿಸಲು ದಂಪತಿಗಳು ಪರಸ್ಪರ ರ ಮೇಲೆ ಅರಿಶಿನ ನೀರನ್ನು ಸುರಿ ಯುತ್ತಾರೆ

*****

ಮೊದಲ ʼಮಗನಾಗಿʼ ಜನಿಸಿದ ವಲರ್‌ ಮತಿ ತಾನು ಹೆಣ್ಣಾಗಲು ಬಯಸಿದ್ದು ಅವರ ತಂದೆಗೆ ಇಷ್ಟವಿರಲಿಲ್ಲ. ಇದು ಅವರ ಸಂಬಂಧದಲ್ಲಿ ಬಿರುಕನ್ನು ತಂದಿತ್ತು. ಅವರು ತನ್ನ ಹದಿಹರೆಯದಲ್ಲಿ ಶಾಲೆಯನ್ನು ತೊರೆದು ಊರಿನಿಂದ ಸುಮಾರು 35 ಕಿ ಮೀ ದೂರದಲ್ಲಿದ್ದ ತಿರುನಂಗೈ ಕುಟುಂಬವನ್ನು ಸೇರಲು ಮನೆ ಬಿಟ್ಟು ಓಡಿಹೋದರು. “ನಾನು ಅಲ್ಲಿ ಇತರ ತಿರುನಂಗೈ ಮಹಿಳೆಯರೊಂದಿಗೆ ಇರುತ್ತಿದ್ದೆ. ನಮ್ಮನ್ನು ಗುರು ಅಥವಾ ಅಮ್ಮ ಎಂದು ಕರೆಯಲ್ಪಡುವ ಹಿರಿಯ ಟ್ರಾನ್ಸ್‌ ಮಹಿಳೆಯೊಬ್ಬರು ದತ್ತು ಪಡೆದಿದ್ದರು.”

ಮುಂದಿನ ಮೂರು ವರ್ಷಗಳ ಕಾಲ ವಲರ್‌ ಮತಿ ಅಂಗಡಿಗಳಿಗೆ ಹೋಗಿ ಅವರನ್ನು ಆಶೀರ್ವದಿಸಿ ಕಾಸು ತೆಗೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. “ನಾನು ಪ್ರತಿದಿನ ಹೋಗುತ್ತಿದ್ದೆ. ಅದೂ ಒಂದು ಬಗೆಯ ಶಾಲೆಯ ಹೋದ ಅನುಭದಂತೆ ಇತ್ತು. ಎಂದು ಅವರು ಹೇಳುತ್ತಾರೆ. ಅವರು ಹೇಳುವಂತೆ ತಾನು ಹಾಗೆ ತಂದ ಹಣವನ್ನೆಲ್ಲ ಗುರುವಿಗೆ ಒಪ್ಪಿಸಬೇಕಿತ್ತು. ಆ ಮೊತ್ತ ಕೆಲವು ಲಕ್ಷಗಳಲ್ಲಿತ್ತು ಎಂದು ಅವರು ಹೇಳುತ್ತಾರೆ. ಇದೇ ಸಮಯದಲ್ಲಿ ಅವರು ತನ್ನ ಲಿಂಗ ಪರಿವರ್ತನೆ ಚಿಕಿತ್ಸೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳಿಗೆ ಒಂದು ಲಕ್ಷ ಖರ್ಚು ಮಾಡಿದ್ದರು. ಈ ಹಣವನ್ನು ಸಹ ಅವರು ತಮ್ಮ ಗುರುವಿನ ಬಳಿ ಸಾಲವಾಗಿ ಪಡೆದು ನಂತರ ಅದನ್ನು ತೀರಿಸಿದ್ದರು.

ಹೆತ್ತವರ ಬಳಿ ಹೋಗಲು, ಮನೆಗೆ ಹಣ ಕಳುಹಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿಅವರು ಇನ್ನೊಂದು ಗುರುವಿನ ಸಹಾಯ ಪಡೆದು ಆ ಮನೆಯನ್ನು ಬಿಡಬೇಕಾಯಿತು. ನಂತರ ಅವರು 50,000 ಸಾವಿರ ದಂಡ ಕಟ್ಟಿ ಆ ಮನೆಯನ್ನು ತೊರೆದು ಚೆನ್ನೈಯಲ್ಲಿದ್ದ ಇನ್ನೊಂದು ತಿರುನಂಗೈ ಕುಟುಂಬವನ್ನು ಸೇರಿಕೊಂಡರು.

“ಮನೆಗೆ ಹಣ ಕಳುಹಿಸುವುದಾಗಿ ಹಾಗೂ ನನ್ನ ಒಡಹುಟ್ಟಿದವರಿಗೆ ಸಹಾಯ ಮಾಡುವುದಾಗಿ ಅಪ್ಪನಿಗೆ ಮಾತು ಕೊಟ್ಟಿದ್ದೆ” ಟ್ರಾನ್ಸ್ ವ್ಯಕ್ತಿಗಳಿಗೆ, ವಿಶೇಷವಾಗಿ ಹದಿಹರೆಯದ ಕೊನೆಯಲ್ಲಿ ಸೀಮಿತ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಲಭ್ಯವಿರುವುದರಿಂದ, ಅವರು ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯತೊಡಗಿದರು. ಇದರೊಂದಿಗೆ ಉಪನಗರಗಳ ರೈಲುಗಳಲ್ಲಿ ಸಂಚರಿಸಿ ಜನರನ್ನು ಆಶೀರ್ವದಿಸಿ ಬದಲಿಗೆ ಹಣ ಪಡೆಯುವ ಕೆಲಸವನ್ನೂ ಮಾಡುತ್ತಿದ್ದರು. ಈ ಸಮಯದಲ್ಲೇ ಅವರು ತನ್ನ ಬದುಕಿನ ಎರಡನೇ ದಶಕದ ಉತ್ತರಾರ್ಧದಲ್ಲಿದ್ದ ಮತ್ತು ಶಿಪ್‌ ಯಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್‌ ಅವರನ್ನು ಭೇಟಿಯಾದರು.

PHOTO • Smitha Tumuluru

ಮೊದಲ ʼಮಗನಾಗಿʼ ಜನಿಸಿದ ವಲರ್‌ ಮತಿ ತಾನು ಹೆಣ್ಣಾಗಲು ಬಯಸಿದ್ದು ಅವರ ತಂದೆಗೆ ಇಷ್ಟವಿರಲಿಲ್ಲ. ಇದು ಅವರ ಸಂಬಂಧದಲ್ಲಿ ಬಿರುಕನ್ನು ತಂದಿತ್ತು. ಈ ಕಾರಣ್ಕಕಾಗಿ ಊರಿನಿಂದ ಸುಮಾರು 35 ಕಿ ಮೀ ದೂರದಲ್ಲಿ ದ್ದ ತಿರುನಂಗೈ ಕುಟುಂಬ ವೊಂದ ನ್ನು ಸೇರಲು ಮನೆ ಬಿಟ್ಟು ಓಡಿಹೋದ ರು

PHOTO • Smitha Tumuluru
PHOTO • Smitha Tumuluru

ಎಡ: ಹಾವಿನ ಹಚ್ಚೆ ಹೊಂದಿರುವ ಇರುಳ ಸಮುದಾಯಕ್ಕೆ ಸೇರಿದ ವಲರ್‌ ಮತಿ. ತಿರುಪೊರೂರಿನ ಸುತ್ತಮುತ್ತಲಿನ ಇರುಳರ್ ಸಮುದಾಯಗಳು ಹಾವು ಹಿಡಿಯುವ ಕೌಶಲಕ್ಕೆ ಹೆಸರುವಾಸಿಯಾಗಿವೆ. ವಲರ್‌ ಮತಿ ತನಗೆ ಹಾವುಗಳೆಂದರೆ ಪ್ರೀತಿ ಎನ್ನುತ್ತಾರೆ. ಬಲ: ರಾಕೇಶ್ ಅವರ ಎದೆಯ ಮೇಲೆ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ

ಪ್ರೇಮದಲ್ಲಿ ಬಿದ್ದ ಈ ಜೋಡಿ ಮದುವೆ ಮಾಡಿಕೊಂಡಿದ್ದರು. ನಂತರ 2021ರಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದರು. ತಿರುಪೊರೂರ್ ಪಟ್ಟಣದಲ್ಲಿ ಸೂಕ್ತವಾದ ಮನೆ ಅಥವಾ ಅವರನ್ನು ಗೌರವದಿಂದ ನಡೆಸಿಕೊಳ್ಳುವ ಮನೆ ಮಾಲಿಕರು ಸಿಗದ ಕಾರಣ ಅವರಿಬ್ಬರು ಎಡಯಂಕುಪ್ಪಂನಲ್ಲಿರುವ ವಲರ್‌ ಮತಿಯವರ ತಂದೆ ತಂದೆ ನಾಗಪ್ಪನ್ ಅವರ ಮನೆಗೆ ತೆರಳಿದರು. ಆದರೆ ನಾಗಪ್ಪನ್‌ ಪೂರ್ಣ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿರಲಿಲ್ಲ. ಕೊನೆಗೆ ಅವರಿಬ್ಬರು ಆ ಮನೆಯಿಂದಲೂ ಹೊರಬಂದು ಪಕ್ಕದಲ್ಲೇ ಗುಡಿಸಲೊಂದನ್ನು ಬಾಡಿಗೆಗೆ ಪಡೆದರು.

“ನಾನು ವಸೂಲಿಗೆ [ಅಂಗಡಿಗಳಿಗೆ ಬೇಡಲು ಹೋಗುವುದು] ಹೋಗುವುದನ್ನು ನಿಲ್ಲಿಸಿದೆ. ಚಪ್ಪಾಳೆ ತಟ್ಟಿ ಕೆಲವು ಸಾವಿರ ರೂಪಾಯಿಗಳನ್ನು ಸಂಪಾದಿಸುವುದು ಆಸೆ ಹುಟ್ಟಿಸುವಂತಿತ್ತು. ಆದರೆ ಅದು ರಾಕೇಶನಿಗೆ ಇಷ್ಟವಿರಲಿಲ್ಲ” ಎಂದು ವಲರ್‌ ಮತಿ ಹೇಳುತ್ತಾರೆ. ಮುಂದೆ ಅವರು ತನ್ನ ತಂದೆಯೊಂದಿಗೆ ಹತ್ತಿರದ ಕಲ್ಯಾಣ ಮಂಟಪದಲ್ಲಿ ಪಾತ್ರೆ ತೊಳೆಯುವುದು ಮತ್ತು ಅದರ ಆವರಣ ಸ್ವಚ್ಛಗೊಳಿಸುವ ಕೆಲಸ ಮಾಡತೊಡಗಿದರಲು. ಈ ಕೆಲಸಕ್ಕೆ ಅವರಿಗೆ ದಿನಕ್ಕೆ 300 ರೂಪಾಯಿ ಕೂಲಿ ದೊರೆಯುತ್ತಿತ್ತು.

“ಅವಳು ತನ್ನ ಕುರಿತಾಗಿ ಎಲ್ಲವನ್ನೂ ಹೇಳಿಕೊಂಡಿದ್ದಳು. ಇದೇ ನನಗೆ ಅವಳಲ್ಲಿ ಇಷ್ಟವಾದ ಅಂಶ” ಎಂದು ರಾಕೇಶ್ ಡಿಸೆಂಬರ್ 2022ರಲ್ಲಿ ಭೇಟಿಯಾದಾಗ ಈ ವರದಿಗಾರರಿಗೆ ತಿಳಿಸಿದರು. ವಲರ್‌ ಮತಿ ತನ್ನ ಲಿಂಗ ಪರಿವರ್ತನೆ ಸರ್ಜರಿಯ ನಂತರ ಸ್ತನವನ್ನು ಬೆಳೆಸಿಕೊಳ್ಳುವ ಸರ್ಜರಿಗೆ ಒಳಗಾಗಲು ತೀರ್ಮಾನಿಸಿದರು. ಆ ಸಮಯದಲ್ಲಿ ಅವರಿಗೆ ರಾಕೇಶ್‌ ಆರ್ಥಿಕ ಮತ್ತು ಭಾವನಾತ್ಮಕ ಬೆಂಬಲ ನೀಡಿದರು. ಶಸ್ತ್ರಚಿಕಿತ್ಸೆ ಮತ್ತು ನಂತರದ ಚೇತರಿಕೆಯ ಒಟ್ಟು ವೆಚ್ಚವು ಒಂದು ಲಕ್ಷ ರೂಪಾಯಿಗಳನ್ನು ಮೀರಿತ್ತು. “ಈ ಎಲ್ಲ ಸರ್ಜರಿಯ ಕುರಿತಂತೆ ಎಲ್ಲಾ ತೀರ್ಮಾನಗಳನ್ನು ನಾನೇ ತೆಗೆದುಕೊಂಡಿದ್ದು. ಇನ್ಯಾವುದೋ ಕಾರಣಕ್ಕಾಗಿ ನಾನು ಇದನ್ನೆಲ್ಲ ಮಾಡಿಲ್ಲ. ನಾನು ನನ್ನ ಕುರಿತಾಗಿಯಷ್ಟೇ ಯೋಚಿಸಿದೆ ಮತ್ತು ನಾನು ಹೇಗಿರಬೇಕೆಂದು ಬಯಸಿದ್ದೆನೋ ಹಾಗಿರತೊಡಗಿದೆ” ಎನ್ನುತ್ತಾರೆ ವಲರ್‌ ಮತಿ.

ಮದುವೆಯ ನಂತರ ವಲರ್‌ ಮತಿಯ ಮೊದಲ ಹುಟ್ಟುಹಬ್ಬದ ಸಮಯದಲ್ಲಿ, ಅವರು ಮತ್ತು ರಾಕೇಶ್ ಕೇಕ್ ಖರೀದಿಸಲು ಹೋದರು. ವಲರ್‌ ಮತಿಯನ್ನು ನೋಡಿದ ಅಂಗಡಿಯವನು ವಸೂಲಿಗಾಗಿ ಬಂದಿದ್ದಾರೆಂದು ಭಾವಿಸಿ ಅವರ ಮುಂದೆ ಕೆಲವು ನಾಣ್ಯಗಳನ್ನು ಇಟ್ಟ. ಮುಜುಗರಕ್ಕೊಳಗಾದ ಅವರು ತಮ್ಮ ಉದ್ದೇಶವನ್ನು ವಿವರಿಸಿದರು. ಕಡೆಗೆ ಅಂಗಡಿಯವರು ಕ್ಷಮೆಯಾಚಿಸಿದರು. ಆ ರಾತ್ರಿ ವಲರ್‌ ಮತಿ ತನ್ನ ಪತಿ ಮತ್ತು ಒಡಹುಟ್ಟಿದವರೊಂದಿಗೆ ಸ್ಮರಣೀಯ ಜನ್ಮದಿನವನ್ನು ಆಚರಿಸಿದರು. ಆ ದಿನ ಕೇಕ್‌ ಹಾಗೂ ಇತರ ತಿನಿಸಿನ ಜೊತೆ ನಗೆಯೂ ಬೆರೆತು ಸಂಭ್ರಮ ಅಲ್ಲಿ ಮನೆಮಾಡಿತ್ತು. ದಂಪತಿಗಳು ಅಂದು ತಮ್ಮ ಅಜ್ಜ, ಅಜ್ಜಿಯನ್ನೂ ಭೇಟಿಯಾಗಿ ಆಶೀರ್ವಾದ ಪಡೆದರು.

ಮತ್ತೊಂದು ಬಾರಿ , ತಡ ರಾತ್ರಿ ಅವರು ಬೈಕಿನಲ್ಲಿ ಬರು ತ್ತಿದ್ದಾಗ ಪೊಲೀಸರು ಅವರನ್ನು ತಡೆ ದಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ . ಅವ ರು ಪೊಲೀಸರಿ ಗೆ ತನ್ನ ಕುತ್ತಿಗೆಯಲ್ಲಿದ್ದ ತಾಳಿಯನ್ನು ತೆಗೆದು ತೋರಿಸಿದರು. ಆಗ ಬೆದರಿದ ದಂಪತಿಗಳಿಗೆ ಆಶ್ಚರ್ಯವಾಗುವಂತೆ ಪೊಲೀಸರು ಇಬ್ಬರಿಗೂ ಶುಭ ಹಾರೈಸಿ ಅವರನ್ನು ಬಿಟ್ಟು ಕಳಿಸಿದರು.

PHOTO • Smitha Tumuluru
PHOTO • Smitha Tumuluru

ಎಡ: ತಿರುನಂಗೈ ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾದ 48 ದಿನಗಳ ನಂತರ ನಡೆಸಲಾಗುವ ಹಲವಾರು ಆಚರಣೆಗಳನ್ನು ಒಳಗೊಂಡ ವಿಸ್ತಾರವಾದ ಸಮಾರಂಭದಂದು ತನ್ನ ಸ್ನೇಹಿತ ಸಮಾರಂಭದಲ್ಲಿ ತೆಗೆದ ಫೋಟೊಗಳ ಆಲ್ಬಂ ತೋರಿಸುತ್ತಿದ್ದಾರೆ. ಬಲ: ತಮಿಳುನಾಡಿನಲ್ಲಿ ಟ್ರಾನ್ಸ್ ವ್ಯಕ್ತಿಗಳಿಗೆ ನೀಡಲಾಗುವ ಟಿಜಿ ಕಾರ್ಡ್ ಎಂದು ಕರೆಯಲ್ಪಡುವ ಟ್ರಾನ್ಸ್‌ ವ್ಯಕ್ತಿಗಳ ಗುರುತಿನ ಚೀಟಿಯನ್ನು ಅವರು ಹೊಂದಿದ್ದಾರೆ. ಈ ಕಾರ್ಡ್ ಅವರಿಗೆ ಸರ್ಕಾರದಿಂದ ಯೋಜನೆಗಳ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ

PHOTO • Smitha Tumuluru
PHOTO • Smitha Tumuluru

ಎಡಕ್ಕೆ: ವಲರ್‌ ಮತಿ ಅಂಗಡಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು. ಬಲ: ತಿರುಪೊರೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಗುಡುವಾಂಚೇರಿ ಪಟ್ಟಣದಲ್ಲಿ ತರಕಾರಿ ಅಂಗಡಿ ನಡೆಸುತ್ತಿರುವ ದಂಪತಿಯನ್ನು ಆಶೀರ್ವದಿಸುತ್ತಿರುವುದು. ಈ ಪ್ರದೇಶದ ಅಂಗಡಿಯವರು ಅವರ ಮಾಸಿಕ ಭೇಟಿಗಾಗಿ ಕಾಯುತ್ತಿರುತ್ತಾರೆ. ತಿರುನಂಗೈ ನೀಡುವ ಆಶೀರ್ವಾದವು ದುಷ್ಟಶಕ್ತಿಯನ್ನು ಓಡಿಸುತ್ತದೆ ಎಂದು ಅವರು ನಂಬುತ್ತಾರೆ

ಆಗಸ್ಟ್ 2024ರಲ್ಲಿ, ರಾಕೇಶ್ ಅವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿತು. ಅನಂತರ ಅವರು ಚೆನ್ನೈಗೆ ತೆರಳಿದರು. "ಅವರು ನನ್ನ ಫೋನ್‌ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದರು. ಮತ್ತೆ ಹಿಂತಿರುಗಿ ಬರಲೇ ಇಲ್ಲ" ಎಂದು ವಲರ್‌ ಮತಿ ಹೇಳುತ್ತಾರೆ, ಅವರ ತಂದೆ ರಾಕೇಶ್‌ ಅವರನ್ನು ಹುಡುಕುವುಂತೆ ಹೇಳಿದ ಕಾರಣ ವಲರ್‌ ಮತಿ ನಗರಕ್ಕೆ ಪ್ರಯಾಣಿಸಿದರು.

ಆದರೆ “ರಾಕೇಶ್‌ ಅವರ ಪೋಷಕರು ತಮ್ಮ ಮಗನನ್ನು ಬಿಟುಕೊಡುವಂತೆ ವಿನಯದಿಂದ ಕೇಳಿಕೊಂಡರು. ʼನೀನು ಬಿಟ್ಟುಕೊಟ್ಟರೆ ಅವನು ಮಕ್ಕಳಾಗಬಹುದಾದ ಯಾರನ್ನಾದರೂ ಮದುವೆಯಾಗುತ್ತಾನೆʼ ಎಂದು ಅವರು ಬೇಡಿಕೊಂಡರು. ನನಗೆ ಎಂದೂ ನನ್ನ ಮದುವೆಯನ್ನು ರಿಜಿಸ್ಟರ್‌ ಮಾಡಿಸಬೇಕು ಎನ್ನಿಸಿರಲಿಲ್ಲ. ಅವನು ನನ್ನನ್ನು ಬಿಟ್ಟು ಹೋಗಬಹುದೆಂದು ನಾನು ಭಾವಿಸಿರಲಿಲ್ಲ. ಅವನನ್ನು ಪೂರ್ತಿಯಾಗಿ ನಂಬಿದ್ದೆ” ಎಂದು ಅವರು ಹೇಳುತ್ತಾರೆ. ಇನ್ನು ಮುಂದೆ ರಾಕೇಶ್‌ ಹಿಂದೆ ಹೋಗದಿರಲಿ ವಲರ್‌ ಮತಿ ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ಚೆನ್ನೈ ನಗರದ ತಿರುನಂಗೈ ಕುಟುಂಬದ ಮನೆಯೊಂದಕ್ಕೆ ಹಿಂದಿರುಗಿದ್ದಾರೆ.

ಈ ಹಿನ್ನಡೆಗಳ ಹೊರತಾಗಿಯೂ, ಕಡಿಮೆ ಆದಾಯದ ಹಿನ್ನೆಲೆಯ ಸಮುದಾಯಗಳಿಂದ ಬಂದ ಇಬ್ಬರು ಯುವ ಟ್ರಾನ್ಸ್ ಹೆಣ್ಣು ಮಕ್ಕಳಿಗೆ ಮಾರ್ಗದರ್ಶನ ನೀಡಲು ಅವರು ಎದುರು ನೋಡುತ್ತಿದ್ದಾರೆ, ಅವರನ್ನು ಅವರು ತಮ್ಮ ತಿರುನಂಗೈ ಕುಟುಂಬಕ್ಕೆ ದತ್ತು ಪಡೆದಿದ್ದಾರೆ. ಅವರಲ್ಲಿ ಒಬ್ಬರು ಪೊಲೀಸ್ ಅಧಿಕಾರಿಯಾಗಲು ಬಯಸುತ್ತಾರೆ ಮತ್ತು ವಲರ್‌ ಮತಿ ಆಕೆಯ ಈ ಕನಸನ್ನು ನನಸಾಗಿಸಲು ಸಹಾಯ ಮಾಡಲು ಸಾಧ್ಯವಾಗುತ್ತದೆ ಎನ್ನುವ ಭರವಸೆಯನ್ನು ಹೊಂದಿದ್ದಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Smitha Tumuluru

ସ୍ମିତା ଟୁମୁଲୁରୁ ବେଙ୍ଗାଲୁରରେ ରହୁଥିବା ଜଣେ ପ୍ରାମାଣିକ ଫଟୋଗ୍ରାଫର। ସେ ଗ୍ରାମୀଣ ଜୀବନକୁ ନେଇ ରିପୋର୍ଟିଂ ଓ ଦସ୍ତାବିଜ ପ୍ରସ୍ତୁତ କରିଥାନ୍ତି ଯାହା ତାମିଲନାଡ଼ୁରେ ତାଙ୍କର ବିକାଶମୂଳକ ପ୍ରକଳ୍ପ ଉପରେ କାମରୁ ସୂଚନା ମିଳିଥାଏ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Smitha Tumuluru
Editor : Riya Behl

ରିୟା ବେହ୍‌ଲ ପିପୁଲ୍‌ସ ଆର୍କାଇଭ୍‌ ଅଫ୍‌ ରୁରାଲ ଇଣ୍ଡିଆ (PARI)ର ବରିଷ୍ଠ ସହକାରୀ ସଂପାଦକ । ଜଣେ ମଲ୍‌ଟିମିଡିଆ ସାମ୍ବାଦିକ ହିସାବରେ ସେ ଲିଙ୍ଗଗତ ଏବଂ ଶିକ୍ଷା ସମ୍ବନ୍ଧୀୟ ବିଷୟରେ ଲେଖାଲେଖି କରନ୍ତି । PARI ପାଇଁ ରିପୋର୍ଟଂ କରୁଥିବା ଛାତ୍ରଛାତ୍ରୀ ଏବଂ PARIର ଲେଖାକୁ ଶ୍ରେଣୀଗୃହରେ ପହଞ୍ଚାଇବା ଲକ୍ଷ୍ୟରେ ଶିକ୍ଷକମାନଙ୍କ ସହିତ ମଧ୍ୟ ରିୟା କାର୍ଯ୍ୟ କରନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru