2022 ರಲ್ಲಿ ಖರೀದಿಸಿದ ಕೆಂಪು ಟ್ರ್ಯಾಕ್ಟರ್ ಗಣೇಶ್ ಶಿಂಧೆಯವರ ಅತ್ಯಂತ ಅಮೂಲ್ಯ ಆಸ್ತಿ. ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಖಲಿ ಗ್ರಾಮದ ರೈತ ಶಿಂಧೆ ತನ್ನ ಎರಡು ಎಕರೆ ಭೂಮಿಯಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹತ್ತಿ ಬೆಲೆಗಳಲ್ಲಿನ ತೀವ್ರ ಕುಸಿತವು ಶಿಂಧೆಯವರನ್ನು ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕುವಂತೆ ಒತ್ತಾಯಿಸಿದೆ. ಈ ಕಾರಣಕ್ಕಾಗಿ, ಅವರು ಸಾರ್ವಜನಿಕ ವಲಯದ ಬ್ಯಾಂಕಿನಿಂದ ಸಾಲ ಪಡೆದು 8 ಲಕ್ಷ ರೂ.ಗೆ ಟ್ರ್ಯಾಕ್ಟರ್ ಖರೀದಿಸಿದರು.
"ನಾನು ನನ್ನ ಟ್ರಾಕ್ಟರನ್ನು ಮನೆಯಿಂದ 10 ಕಿಲೋಮೀಟರ್ ದೂರದಲ್ಲಿರುವ ಗಂಗಾಖೇಡ್ ಪಟ್ಟಣಕ್ಕೆ ತೆಗೆದುಕೊಂಡು ಜಂಕ್ಷನ್ನಿನಲ್ಲಿ ಕಾಯುತ್ತೇನೆ" ಎಂದು 44 ವರ್ಷದ ರೈತ ಹೇಳುತ್ತಾರೆ. “ಹತ್ತಿರದಲ್ಲಿ ಯಾವುದಾದರೂ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ ಮರಳಿನಂಹ ಕಚ್ಚಾ ವಸ್ತುಗಳನ್ನು ಸಾಗಿಸಲು ನನ್ನ ಟ್ರಾಕ್ಟರನ್ನು ಬಾಡಿಗೆಗೆ ಪಡೆಯುತ್ತಾರೆ. ಈ ಮೂಲಕ ನಾನು ದಿನಕ್ಕೆ 500-800 ರೂಪಾಯಿಗಳಷ್ಟು ಸಂಪಾದಿಸುತ್ತೇನೆ.” ಅವರು ಗಂಗಾಖೇಡ್ ಪಟ್ಟಣಕ್ಕೆ ಹೊರಡುವ ಮೊದಲು ಕೆಲವು ಗಂಟೆಗಳನ್ನು ಬೇಸಾಯದ ಕೆಲಸದಲ್ಲಿ ಕಳೆಯುತ್ತಾರೆ.
ಅವರು ಈ ಬಾರಿಯ ಕೇಂದ್ರದ ಬಜೆಟ್ಟನ್ನು ಬಹಳ ಗಮನವಿಟ್ಟು ಆಲಿಸಿದ್ದಾರೆ. ಇದರರ್ಥ ಅವರಿಗೆ ಬಜೆಟ್ಟಿನಿಂದ ಬಹಳ ನಿರೀಕ್ಷೆಯಿದೆ ಎಂದು ಅರ್ಥವಲ್ಲ. ಟ್ರ್ಯಾಕ್ಟರ್ ನಿಲ್ಲಿಸಿಕೊಂಡು ಬಾಡಿಗೆಗೆ ಕಾಯುವಾಗ ಹೊತ್ತು ಕಳೆಯಲು ತಾನು ಬಜೆಟ್ ನೋಡಿದ್ದಾಗಿ ಶಿಂಧೆ ಹೇಳುತ್ತಾರೆ. “ಮನರೇಗಾ ಕೆಲಸದ ದಿನಗಳನ್ನು ಹೆಚ್ಚಿಸಲಾಗಿಲ್ಲ” ಎಂದು ಅವರು ಹೇಳುತ್ತಾರೆ. ಖಲಿ ಗ್ರಾಮದ ಮಾಜಿ ಸರಂಪಚ್ ಆಗಿರುವ ಅವರು ಮನರೇಗಾ ಕೂಡಾ ಊರಿನಲ್ಲಿ ಅಂತಹ ವ್ಯತ್ಯಾಸವನ್ನು ತಂದಿಲ್ಲ ಎಂದು ಹೇಳುತ್ತಾರೆ. “ಹಣವನ್ನು ಉದ್ಯೋಗ ಸೃಷ್ಟಿಗೆ ಬಳಸುವುದಿಲ್ಲ. ಯೋಜನೆಗಳೆಲ್ಲ ಕೇವಲ ಕಾಗದದ ಮೇಲಿರುತ್ತವೆಯಷ್ಟೇ.”



