ಕಿರಣ್ ಅಡುಗೆ, ಮನೆ ಸ್ವಚ್ಛಗೊಳಿಸುವುದು ಮತ್ತು ಮನೆ ನಡೆಸುವುದನ್ನು ಮಾಡುತ್ತಾಳೆ. ಅಲ್ಲದೆ ಅವಳು ಉರುವಲು ಹಾಗೂ ನೀರನ್ನು ಸಹ ಸಂಗ್ರಹಿಸಿ ಮನೆಗೆ ತರುತ್ತಾಳೆ. ಬೇಸಗೆ ತೀವ್ರವಾದಂತೆ ಅವಳು ನೀರು ತರಲು ಹೋಗಬೇಕಾದ ದೂರವೂ ಹೆಚ್ಚಾಗತೊಡುತ್ತದೆ.
ಕೇವಲ 11 ವರ್ಷದ ಬಾಲಕಿಯಾದ ಅವಳಿಗೆ ಇವುಗಳನ್ನೆಲ್ಲ ಮಾಡದೆ ಬೇರೆ ಆಯ್ಕೆಯೇ ಇಲ್ಲ. ಅವಳ ಪೋಷಕರು ಬಾನ್ಸವಾಡಾ ಜಿಲ್ಲೆಯ ಅವಳ ಹಳ್ಳಿಯಲ್ಲಿನ (ಊರಿನ ಹೆಸರನ್ನು ಮರೆಮಾಚಲಾಗಿದೆ) ಮನೆಯಲ್ಲಿ ಮತ್ಯಾರೂ ಇಲ್ಲ. ಅವಳ 18 ವರ್ಷದ ಅಣ್ಣ ವಿಕಾಸ್ ಕೂಡಾ ಯಾವುದೇ ಸಮಯದಲ್ಲಿ ವಲಸೆ ಹೋಗಬಹುದು. ಅವನು ಈ ಹಿಂದೆಯೂ ವಲಸೆ ಹೋಗಿದ್ದಾನೆ. ಅವಳ 13 ವರ್ಷದೊಳಗಿನ ಇತರ ಮೂವರು ಒಡಹುಟ್ಟಿದವರು ಗುಜರಾತಿನ ವಡೋದರಾದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುವ ಪೋಷಕರೊಂದಿಗೆ ಇರುತ್ತಾರೆ. ಅವರ್ಯಾರೂ ಶಾಲೆಗೆ ಹೋಗುವುದಿಲ್ಲ, ಆದರೆ ಕಿರಣ್ ಶಾಲೆಗೆ ಹೋಗುತ್ತಾಳೆ.
“ನಾನು ಬೆಳಗ್ಗೆ ಏನಾದರೂ ಅಡುಗೆ ಮಾಡಿಕೊಳ್ಳುತ್ತೇನೆ” ಎಂದು ಕಿರಣ್ (ಹೆಸರು ಬದಲಾಯಿಸಲಾಗಿದೆ) ಈ ವರದಿಗಾರರಿಗೆ ತನ್ನ ದಿನಚರಿಯನ್ನು ವಿವರಿಸುತ್ತಾ ಹೇಳುತ್ತಾಳೆ. ಒಂದು ಕೋಣೆಯ ಅರ್ಧ ಭಾಗವನ್ನು ಅಡುಗೆ ಮನೆಯೆಂದು ಕರೆಯಲಾಗುತ್ತದೆ. ಮಾಡಿಗೆ ನೇತು ಹಾಕಿದ ಫ್ಲಾಷ್ ಬೆಳಕೊಂದು ಸೂರ್ಯ ಮುಳುಗಿದ ನಂತರ ಆ ಮನೆಗೆ ಬೆಳಕಾಗುತ್ತದೆ.
ಕೋಣೆಯ ಒಂದು ಮೂಲೆಯಲ್ಲಿ ಕಟ್ಟಿಗೆ ಒಲೆಯಿದೆ. ಅದರ ಪಕ್ಕದಲ್ಲಿ ಉಳಿದ ಸೌದೆ ಮತ್ತು ಹಳೆಯ ಇಂದನವನ್ನು ಇಡಲಾಗಿತ್ತು. ತರಕಾರಿ, ಮಸಾಲೆ ಮತ್ತು ಇತ್ಯಾದಿ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರುಗಳಲ್ಲಿ ಅಲ್ಲೇ ಕಟ್ಟಿ ಇಡಲಾಗಿತ್ತು. ಕೆಲವನ್ನು ಗೋಡೆಗೆ ನೇತು ಹಾಕಲಾಗಿತ್ತು. ಎಲ್ಲವನ್ನೂ ಅವಳ ಪುಟ್ಟ ತೋಳುಗಳಿಗೆ ಎಟುಕುವಂತೆ ಜೋಡಿಸಿಡಲಾಗಿದೆ. “ಸಂಜೆ ಶಾಲೆಯಿಂದ ಬಂದು ರಾತ್ರಿಗೆ ಅಡುಗೆ ಮಾಡುತ್ತೇನೆ. ಫಿರ್ ಮುರ್ಗಿ ಕೋ ಧೇಖನಾ [ನಂತರ ಕೋಳಿ ನೋಡಿಕೊಳ್ಳುತ್ತೇನೆ] ಅದರ ನಂತರ ನಾವು ಮಲಗುತ್ತೇವೆ” ಎನ್ನುತ್ತಾಳೆ ಕಿರಣ್.
ಅವಳು ನಾಚಿಕೆಯಿಂದ ನಿರೂಪಿಸಿದ ಅವಳ ಕತೆಯಿಂದ ಇನ್ನೂ ಹಲವು ವಿವರಗಳು ತಪ್ಪಿ ಹೋಗಿವೆ. ಅವುಗಳಲ್ಲಿ ಸ್ಥಳೀಯವಾಗಿ ದಾವ್ದಾ ಅಥವಾ ಬಿಜ್ಲಿಯಾ ಎಂದು ಕರೆಯಲ್ಪಡುವ ಹತ್ತಿರದ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡುಗಳಿಂದ ಉರುವಲು ಸಂಗ್ರಹಿಸುವುದು ಮತ್ತು ಸಾಗಿಸುವುದು ಸೇರಿವೆ. ಕಿರಣ್ ಆ ಕಾಡಿಗೆ ತಲುಪಲು ಒಂದು ಗಂಟೆ ತೆಗೆದುಕೊಳ್ಳುತ್ತಾಳೆ. ಅಲ್ಲಿ ಕಟ್ಟಿಗೆಯನ್ನು ಒಟ್ಟು ಮಾಡಿ, ಕತ್ತರಿಸಿ, ಹೊರೆ ಮಾಡಲು ಮತ್ತೊಂದು ಗಂಟೆ ಬೇಕಾದರೆ, ಕಾಡಿನಿಂದ ಮನೆಗೆ ಮರಳಲು ಇನ್ನೊಂದು ಗಂಟೆ ಹಿಡಿಯುತ್ತದೆ. ಕಿಲೋಗಟ್ಟಲೆ ಭಾರವಿರುವ ಈ ಸೌದೆಯ ಹೊರೆ ಸಾಕಷ್ಟು ದೊಡ್ಡದಿದ್ದು ಬೆಳೆದ ಮಕ್ಕಳ ತೂಕದಷ್ಟು ಇರುತ್ತದೆ.












