“ಕೂದಲು! ಕೂದಲು! ಪಾತ್ರೆ ಕೂದಲು”
ಸಾಕೇ ಸರಸ್ವತಿ ಮತ್ತಿಕೆರೆಯ ಬೀದಿಗಳಲ್ಲಿ ಮೇಲಿನಂತೆ ಕೂಗುತ್ತಾ ಅಲ್ಲಿನ ಮನೆಗಳಿಂದ ಕೂದಲು ಸಂಗ್ರಹಿಸುತ್ತಾರೆ. ಅವರು ಕೂದಲಿನ ಬದಲಿಗೆ ಸಣ್ಣ-ಹಗುರ ಅಲುಮಿನಿಯಮ್ ಪಾತ್ರಗಳನ್ನು ನೀಡುತ್ತಾರೆ. ಇವುಗಳಲ್ಲಿ ಸಣ್ಣ ನೀರಿನ ಪಾತ್ರೆಗಳು, ಮಡಕೆಗಳು ಮತ್ತು ಪಾತ್ರೆಗಳು, ಅಡುಗೆ ಚಮಚಗಳು, ದೊಡ್ಡ ಜರಡಿಗಳು ಸೇರಿವೆ.
“ನಾನು ಈ ಕೆಲಸವನ್ನು ನನ್ನ ಅತ್ತಿಗೆಯಿಂದ ಕಲಿತೆ. ಜೊತೆಗೆ ಅವರೇ ನನಗೆ ಗಿರಾಕಿಗಳನ್ನು ಸೆಳೆಯಲು ದನಿಯನ್ನು ಎತ್ತರಿಸಿ ಕೂಗುವುದನ್ನು ಸಹ ಹೇಳಿಕೊಟ್ಟರು” ಎನ್ನುತ್ತಾರೆ ಬೆಂಗಳೂರಿನ 23 ವರ್ಷದ ವ್ಯಾಪಾರಸ್ಥ ಮಹಿಳೆ.
"ನನ್ನಮ್ಮ ಗಂಗಮ್ಮ ಮದುವೆಗೆ ಮೊದಲಿನಿಂದಲೂ ಈ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ಬೆನ್ನು ಮತ್ತು ಮೊಣಕಾಲಿನ ತೀವ್ರ ಸಮಸ್ಯೆಗಳಿಂದಾಗಿ ಅವರು ತಮ್ಮ ಕೆಲಸವನ್ನು ಕಡಿಮೆ ಮಾಡಿದ್ದಾರೆ" ಎಂದು ಸರಸ್ವತಿ ಹೇಳುತ್ತಾರೆ. ತಂದೆ ಪುಲ್ಲನ್ನ ಮತ್ತು ತಾಯಿ ಗಂಗಮ್ಮ 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ವಲಸೆ ಬಂದರು.
ಈ ಕುಟುಂಬವು ಕೊರಚ ಸಮುದಾಯಕ್ಕೆ ಸೇರಿದ್ದು, ಅವರನ್ನು ಆಂಧ್ರಪ್ರದೇಶದಲ್ಲಿ ಇತರ ಹಿಂದುಳಿದ ವರ್ಗದಡಿ (ಒಬಿಸಿ) ಪಟ್ಟಿ ಮಾಡಲಾಗಿದೆ. ಈಗ 80 ವರ್ಷದ ಪುಲ್ಲನ್ನ ಒಣಗಿದ ಈಚಲು ಎಲೆಗಳಿಂದ ಜಾಡುಗಳನ್ನು (ಪೊರಕೆ) ತಯಾರಿಸುತ್ತಾರೆ ಮತ್ತು ತಲಾ 20-50 ರೂ.ಗಳಿಗೆ ಮಾರಾಟ ಮಾಡುತ್ತಾರೆ.










