“ನನ್ನ ತಾಯಿ ಹಾಡುತ್ತಿದ್ದಾಗ ಕೇಳಿಸಿಕೊಂಡಿದ್ದ ಎರಡು-ಮೂರು ಪದಗಳಷ್ಟೇ ನನಗೆ ನೆನಪಿದೆ” ಎಂದು ಹೌಸಾಬಾಯಿ ದಿಘೆ ಹೇಳಿದರು. ಅದು 1995ನೇ ಇಸವಿ. ಅವರು ಅಂದು ಹೇಮಾ ರಾಯ್ಕರ್ ಮತ್ತು ಗಯ್ ಪೊಯಿಟೆವಿನ್ ಅವರೊಂದಿಗೆ ಮಾತನಾಡುತ್ತಿದ್ದರು. 1980ರ ದಶಕದ ಉತ್ತರಾರ್ಧದಲ್ಲಿ ಗ್ರೈಂಡ್ ಮಿಲ್ ಸಾಂಗ್ಸ್ ಯೋಜನೆ ಆರಂಭಿಸಿದ್ದ ಪುಣೆಯ ಸಾಮಾಜಿಕ ವಿಜ್ಞಾನಿಗಳು ಮತ್ತು ಕಾರ್ಯಕರ್ತರು ಅದರ ಭಾಗವಾಗಿ ತಮ್ಮ ತಂಡದೊಂದಿಗೆ ಮುಲ್ಶಿ ತಾಲ್ಲೂಕಿನ ಭಂಬಾರ್ಡೆ ಗ್ರಾಮದಲ್ಲಿನ ಬೀಸುಕಲ್ಲಿನ ಪದಗಳನ್ನು ಹಾಡುವ ಮಹಿಳೆಯರನ್ನು ಮಾತನಾಡಿಸಲು ಬಂದಿದ್ದರು.
ಮುಂದುವರೆದು ಮಾತನಾಡಿದ ಹೌಸಾಬಾಯಿ, “ನಾನು ಹೊಲದ ಕೆಲಸ ಮುಗಿಸಿ ಬಂದು ಹಿಟ್ಟು ಇಲ್ಲದಿದ್ದರೆ ಬೀಸುಕಲ್ಲಿನೆದುರು ಕುಳಿತು ಹಿಟ್ಟು ಬೀಸುತ್ತಾ ಒಂದಷ್ಟು ಹಾಡು ಹಾಡುತ್ತೇನೆ. ಹಾಡು ಇಲ್ಲದ ದಿನ ನನ್ನ ಪಾಲಿಗೆ ಅಪೂರ್ಣವೆನ್ನಿಸುತ್ತದೆ. ಹಾಡಲು ಆರಂಭಿಸುತ್ತಿದ್ದಂತೆ ಪದಗಳು ತಾನಾಗಿಯೇ ನೆನಪಾಗತೊಡಗುತ್ತವೆ. ಈ ಹಾಡುವಿಕೆ ನಿಲ್ಲುವುದು ನನ್ನ ಉಸಿರು ನಿಂತಾಗಲೇ. ಅಲ್ಲಿಯವರೆಗೂ ಅವು ನನ್ನ ನೆನಪಿನ ಕೋಶದಲ್ಲೇ ಇರುತ್ತವೆ.” ಅವರ ಮಾತುಗಳು ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಕುಂಬಾರರು ಮತ್ತು ತೋಟಗಾರ ಸಮುದಾಯಗಳಿಗೆ ಸೇರಿದ ಹಲವು ಗ್ರಾಮೀಣ ಮಹಿಳಾ ಗಾಯಕರನ್ನು ಪ್ರತಿನಿಧಿಸುತ್ತವೆ. ಅವರು ಬೆಳಗಿನ ಜಾವದಲ್ಲೇ ಎದ್ದು ಮನೆಗೆಲಸಗಳನ್ನು ಮುಗಿಸಿ ಹೊಲಗಳಲ್ಲೂ ದುಡಿಯುತ್ತಾರೆ. ಅವರ ದಿನದ ಬಹುಪಾಲು ಸಮಯ ದುಡಿಮೆಯಲ್ಲೇ ಕಳೆಯುತ್ತದೆ.
ಈ ಮಹಿಳೆಯರ ದಿನದ ಮೊದಲ ಕೆಲಸವೆಂದರೆ ಬೀಸುಕಲ್ಲಿನೆದುರು ಕುಳಿತು ಧಾನ್ಯ ಬೀಸುವುದು. ಅವರು ಧಾನ್ಯ ಬೀಸುತ್ತಲೇ ಹಾಡುತ್ತಾರೆ. ಅಡುಗೆಮನೆ ಅಥವಾ ಜಗಲಿಯ ಮೂಲೆಯೆನ್ನುವುದು ಅವರ ಪಾಲಿನ ಆರಾಮ ವಲಯ. ಅದು ಅವರು ತಮ್ಮ ಬದುಕಿನ ಸಂಕಷ್ಟಗಳು, ನೋವು, ನಲಿವು ಮತ್ತು ಸಾಧನೆಗಳನ್ನು ತಮ್ಮ ಆಪ್ತ ವಲಯದೊಡನೆ ಹಂಚಿಕೊಳ್ಳಲು ಇರುವ ತಾಣ.
ಈ ಸಮಯದಲ್ಲಿ ಅವರು ಪ್ರಪಂಚ, ತಮ್ಮ ಹಳ್ಳಿ ಮತ್ತು ಸಮುದಾಯದ ಜೀವನ, ಕುಟುಂಬ ಸಂಬಂಧಗಳು, ಧರ್ಮ ಮತ್ತು ತೀರ್ಥಯಾತ್ರೆಗಳು, ಜಾತಿ ಮತ್ತು ಪಿತೃಪ್ರಭುತ್ವದ ದಬ್ಬಾಳಿಕೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೆಲಸ ಇತ್ಯಾದಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ವೀಡಿಯೊದಲ್ಲಿ, ಪುಣೆಯ ಮುಲ್ಶಿ ತಾಲ್ಲೂಕಿನ ಖಡಕ್ವಾಡಿ ಕುಗ್ರಾಮದ ತಾರಾಬಾಯಿ ಉಬೆ ಈ ಸಂಗತಿಗಳ ಕುರಿತು ಮಾತನಾಡಿದ್ದಾರೆ.





