ಮಲಿಯಾಮಾದಲ್ಲಿರುವ ಬೌದ್ಧರ ಈ ಕೇರಿಯಲ್ಲಿ ಶಾಂತವಾದ ಮಧ್ಯಾಹ್ನದ ಹೊತ್ತಿನಲ್ಲಿ ಖುಷಿಯಿಂದ ಜೋರಾಗಿ ಕೇಕೆ ಹಾಕುತ್ತಾ, ಬೊಬ್ಬೆ ಹೊಡೆಯುತ್ತಾ ‘ಮೆರವಣಿಗೆಯೊಂದು’ ಬರುತ್ತದೆ. ಹೌದು, ಇದು ಅಕ್ಟೋಬರ್ ತಿಂಗಳು, ಯಾವುದೇ ಪೂಜೆಗಳಿಲ್ಲ, ಪೆಂಡಾಲ್‌ಗಳೂ ಇಲ್ಲ. ದುರ್ಗಾ ಪೂಜೆಗೆ ಶಾಲೆಗಳಿಗೆ ರಜೆ ಇದ್ದರಿಂದ, ಮನೆಯಲ್ಲಿಯೇ ಇರುವ ಎರಡರಿಂದ ಹನ್ನೊಂದು ವರ್ಷದ ವರೆಗಿನ ಎಂಟು-ಹತ್ತು ಮೊನ್ಪಾ ಮಕ್ಕಳು ಮೆರವಣಿಗೆ ಬರುತ್ತಿದ್ದಾರೆ.
ಇಲ್ಲಿಂದ ಸುಮಾರು 7- 10 ಕಿಲೋಮೀಟರ್ ದೂರದ ದಿರಾಂಗ್‌ನಲ್ಲಿ ಎರಡು ಖಾಸಗಿ ಶಾಲೆಗಳೂ, ಒಂದು ಸರ್ಕಾರಿ ಶಾಲೆಯೂ ಇದೆ. ಮಕ್ಕಳು ನಡೆದುಕೊಂಡೇ ಈ ಶಾಲೆಗಳಿಗೆ ಹೋಗುತ್ತಾರೆ. ಎಲ್ಲಾ ಶಾಲೆಗಳಿಗೆ ಹತ್ತು ದಿನಗಳ ವರೆಗೆ ರಜೆ ನೀಡಲಾಗಿದೆ. ಆದರೆ, ಮನೆಯಲ್ಲಿ ಆರಾಮಾಗಿ ದಿನ ಕಳೆಯುವ ಮಕ್ಕಳು ತಮ್ಮ ಆಟದ ಸಮಯವನ್ನು ಮಾತ್ರ ಮರೆತಿಲ್ಲ. ಮಧ್ಯಾಹ್ನದ ಊಟದ ನಂತರ 2 ಗಂಟೆಗೆ ಇವರು ಆಟಕ್ಕೆ ಹೋಗುತ್ತಾರೆ. ಸಮುದ್ರ ಮಟ್ಟದಿಂದ 1,800 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಈ ಹಳ್ಳಿಯಲ್ಲಿ ಇಂಟರ್ನೆಟ್ ಸಂಪರ್ಕ ತೀರ ಕೆಡುತ್ತದೆ. ಆ ಸಮಯದಲ್ಲಿ ಮಕ್ಕಳು ಮೊಬೈಲ್ ಫೋನ್‌ಗಳನ್ನು ತಮ್ಮ ಹೆತ್ತವರ ಕೈಗೆ ವಾಪಾಸು ಕೊಟ್ಟು, ಮಂಖಾ ಲಾಯ್ದಾ (ಅಕ್ರೋಟಿನ ಆಟ) ಆಡಲು ಬೀದಿಯಲ್ಲಿ ಸೇರುತ್ತಾರೆ.
ಈ ಹಳ್ಳಿಯ ಸುತ್ತಮುತ್ತಲಿನ ಕಾಡುಗಳಲ್ಲಿ ಹೇರಳವಾದ ಅಕ್ರೋಟುಗಳು (ವಾಲ್‌ನಟ್) ಬೆಳೆಯುತ್ತವೆ. ಅರುಣಾಚಲ ಪ್ರದೇಶವು ಭಾರತದಲ್ಲಿ ಈ ಒಣ ಹಣ್ಣನ್ನು ಉತ್ಪಾದಿಸುವ ನಾಲ್ಕನೇ ಅತಿದೊಡ್ಡ ರಾಜ್ಯ. ಪಶ್ಚಿಮ ಕಾಮೆಂಗ್ ಜಿಲ್ಲೆಯ ಈ ಅಕ್ರೋಟುಗಳು ವಿಶೇಷವಾಗಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ.ಆದರೆ ಈ ಹಳ್ಳಿಯಲ್ಲಿ ಯಾರೂ ಅವುಗಳನ್ನು ಬೆಳೆಸುವುದಿಲ್ಲ. ಮಕ್ಕಳಿಗೆ ಅಕ್ರೋಟುಗಳು ಕಾಡಿನಲ್ಲಿ ಸಿಗುತ್ತವೆ. ಸಾಂಪ್ರದಾಯಿಕವಾಗಿ ಮಾಲಿಯಾಮಾದಲ್ಲಿರುವ ಟಿಬೆಟ್ ಮೂಲದ ಪಶುಪಾಲಕ ಮತ್ತು ಬೇಟೆಗಾರ ಸಮುದಾಯದ 17 ರಿಂದ 20 ಮೊನ್ಪಾ ಕುಟುಂಬಗಳು ತಮ್ಮ ಮನೆಯ ಬಳಕೆಗಾಗಿ ಕಾಡು ಉತ್ಪನ್ನಗಳನ್ನು ಸಂಗ್ರಹಿಸುತ್ತವೆ. "ಊರಿನವರು ಪ್ರತಿ ವಾರ ಗುಂಪು ಗುಂಪಾಗಿ ಕಾಡಿಗೆ ಹೋಗಿ ಅಣಬೆಗಳು, ಬೀಜಗಳು, ಹಣ್ಣುಗಳು, ಕಟ್ಟಿಗೆ ಮತ್ತು ಇತರ ಕಾಡು ಉತ್ಪನ್ನಗಳನ್ನು ತರುತ್ತಾರೆ," ಎಂದು 53 ವರ್ಷ ಪ್ರಾಯದ ರಿಂಚಿನ್ ಜೊಂಬಾ ಹೇಳುತ್ತಾರೆ. ಮಕ್ಕಳು ಪ್ರತಿದಿನ ಮಧ್ಯಾಹ್ನ ಬೀದಿಗಳಿಗೆ ಆಟವಾಡಲು ಬರುವ ಮೊದಲು ಜೇಬುಗಳ ಮತ್ತು ಕೈಗಳ ತುಂಬಾ ಅಕ್ರೋಟುಗಳನ್ನು ತುಂಬಿಕೊಂಡು ಬರುತ್ತಾರೆ.


